ದರ್ಶನ್, ಸುದೀಪ್, ಯಶ್, ಡಾಲಿ; ನನ್ನ ಗಂಡ ಈ ನಟನ ಹಾಗೆ ಇರಬೇಕು ಎಂದ ಆಶಿಕಾ ರಂಗನಾಥ್!

ಆಶಿಕಾ ರಂಗನಾಥ್.. 2016ರಲ್ಲಿ ತೆರೆಗೆ ಬಂದಿದ್ದ ಜಾಲಿ ಬಾಯ್ ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಬೆಡಗಿ.
ಆ ಬಳಿಕ ಶಿವರಾಜ್ ಕುಮಾರ್ ನಟನೆಯ ಮಾಸ್ ಲೀಡರ್ ಚಿತ್ರದಲ್ಲಿ ನಟಿಸಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಮುಗುಳುನಗೆ ಚಿತ್ರದಲ್ಲಿ ನಾಯಕಿಯಾಗಿದ್ದ ಆಶಿಕಾ ರಂಗನಾಥ್ ಈ ಚಿತ್ರದ ಮೂಲಕ ಕನ್ನಡ ಸಿನಿ ರಸಿಕರ ಮನ ಗೆದ್ದಿದ್ದರು.
ಬಳಿಕ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ ಆಶಿಕಾ ರಂಗನಾಥ್ ಸದ್ಯ ತಮಿಳು ಹಾಗೂ ತೆಲುಗು ಚಿತ್ರರಂಗಗಳಿಗೂ ಕಾಲಿಟ್ಟಿದ್ದಾರೆ. ಕಳೆದ ವರ್ಷ ತೆರೆಕಂಡ ಅಥರ್ವ ನಟನೆಯ ಪಟ್ಟದು ಅರಸನ್ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಆಶಿಕಾ ರಂಗನಾಥ್ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಚಿತ್ರ ಹೇಳಿಕೊಳ್ಳುವಂತಹ ಹಿಟ್ ಏನೂ ಆಗಲಿಲ್ಲ. ನಟಿ ಆಶಿಕಾಗೆ ಕನ್ನಡದಲ್ಲಿ ಸಿಕ್ಕಂತಹ ಗುರುತಿಸುವಿಕೆ ತಮಿಳಿನಲ್ಲಿ ಸಿಗಲಿಲ್ಲ ಎಂದು ಹೇಳಬಹುದಾಗಿದೆ.
ಬಳಿಕ ಈ ವರ್ಷ ನಂದಮೂರಿ ಕಲ್ಯಾಣ್ ರಾಮ್ ನಟನೆಯ ಅಮಿಗೋಸ್ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಆಶಿಕಾ ರಂಗನಾಥ್ ತೆಲುಗು ಚಿತ್ರರಂಗಕ್ಕೂ ಸಹ ಕಾಲಿಟ್ಟರು. ಈ ಚಿತ್ರದ ಮೂಲಕ ತೆಲುಗು ಸಿನಿ ರಸಿಕರ ಮನ ಗೆದ್ದಿರುವ ಆಶಿಕಾ ರಂಗನಾಥ್ ತೆಲುಗಿನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಹೀಗೆ ಸದ್ದು ಮಾಡುತ್ತಿರುವ ಆಶಿಕಾ ರಂಗನಾಥ್ ಇತ್ತೀಚೆಗೆ ನಡೆದ ಚಿತ್ತಾರ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಯೂತ್ ಐಕಾನ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಈ ಕಾರ್ಯಕ್ರಮ ಕಲರ್ಸ್ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗಲಿದ್ದು, ಸದ್ಯ ಈ ಚಾನೆಲ್ ಕಾರ್ಯಕ್ರಮದ ವಿಶೇಷ ಪ್ರೋಮೊಗಳನ್ನು ಹಂಚಿಕೊಳ್ಳುತ್ತಿದೆ. ಹೀಗೆ ಹಂಚಿಕೊಂಡಿರುವ ಪ್ರೋಮೊಗಳ ಪೈಕಿ ನಟಿ ಆಶಿಕಾ ರಂಗನಾಥ್ ಯೂತ್ ಐಕಾನ್ ಪ್ರಶಸ್ತಿ ಪಡೆದ ಪ್ರೋಮೊ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲಿಯೂ ಆಶಿಕಾ ರಂಗನಾಥ್ ನೀಡಿರುವ ಹೇಳಿಕೆ ವಿಡಿಯೊ ವೈರಲ್ ಆಗಲು ಕಾರಣವಾಗಿದೆ.
ಕಾರ್ಯಕ್ರಮದ ನಿರೂಪಣೆಯನ್ನು ನಿರಂಜನ್ ದೇಶಪಾಂಡೆ ನಿರ್ವಹಿಸಿದ್ದು, ಆಶಿಕಾ ರಂಗನಾಥ್‌ಗೆ ಬಾಯ್‌ಫ್ರೆಂಡ್ ಹಾಗೂ ಗಂಡ ಹೇಗಿರಬೇಕು ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರಿಸಿದ ಆಶಿಕಾ ರಂಗನಾಥ್ "ತುಂಬಾ ಅರ್ಥ ಮಾಡಿಕೊಳ್ಳುವಂಥ ಬಾಯ್‌ಫ್ರೆಂಡ್ ಇರಬೇಕು. ಪ್ರೀತಿ ತೋರಿಸಬೇಕು" ಎಂದು ಹೇಳಿಕೆ ನೀಡಿದ್ದಾರೆ.
ಇನ್ನು ಕನ್ನಡದ ನಟರಾದ ಧೃವ ಸರ್ಜಾ, ಡಾಲಿ ಧನಂಜಯ್, ಅಭಿಷೇಕ್ ಅಂಬರೀಶ್, ದರ್ಶನ್, ಯಶ್, ಶ್ರೀ ಮುರಳಿ, ಶರಣ್ ಹಾಗೂ ಸುದೀಪ್ ಅವರ ಫೋಟೊಗಳನ್ನು ಪರದೆ ಮೇಲೆ ಪ್ರದರ್ಶಿಸಿ ಇವರಲ್ಲಿ 'ಹಸ್ಬೆಂಡ್ ಮೆಟೀರಿಯಲ್' ಯಾರು ಎಂಬ ಪ್ರಶ್ನೆಯನ್ನು ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಆಶಿಕಾ ರಂಗನಾಥ್ "ಯಶ್ ಸರ್ ಥರ ಗಂಡ ಇರಬೇಕು ಅನಿಸುತ್ತೆ" ಎಂಬ ಉತ್ತರ ನೀಡಿದರು. ಬಳಿಕ ಈ ಪೈಕಿ ಯಾರಿಗೆ ಪ್ರಪೋಸ್ ಮಾಡ್ತೀರ ಅಂದರೆ ಯಾರನ್ನು ಆರಿಸಿಕೊಳ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ಆಶಿಕಾ ಧೃವ ಸರ್ಜಾ ಅವರ ಹೆಸರನ್ನು ತೆಗೆದುಕೊಂಡರು.


Click it and Unblock the Notifications











