ದರ್ಶನ್ ತಮ್ಮನ ಪಾತ್ರ ಅಂತ 20 ದಿನ ಶೂಟಿಂಗ್ ಮಾಡಿದ್ರು, ಥಿಯೇಟರ್‌ಗೆ ಹೋದ್ರೆ ಬರೀ ಒಂದು ಡೈಲಾಗ್ ಇತ್ತು: ದಿಗಂತ್!
ದಿಗಂತ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇದೇ ಜೂನ್ 2ಕ್ಕೆ 17 ವರ್ಷಗಳು ಕಳೆಯಲಿವೆ. 2006ರ ಜೂನ್ 2 ರಂದು ಬಿಡುಗಡೆಗೊಂಡಿದ್ದ 'ಮಿಸ್ ಕ್ಯಾಲಿಫೊರ್ನಿಯಾ' ಎಂಬ ಚಿತ್ರದಲ್ಲಿ ದಿಗಂತ್ ಎಂಬ ಪಾತ್ರವನ್ನು ನಿರ್ವಹಿಸಿದ್ದ ದಿಗಂತ್ ನಟನಾಗಿ ಕನ್ನಡ ಚಲನಚಿತ್ರರಂಗಕ್ಕೆ ಕಾಲಿಟ್ಟಿದ್ದರು.
ಹೀಗೆ ಸಣ್ಣದೊಂದು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ದಿಗಂತ್ ನಟನಾಗಿ ಕನ್ನಡ ಸಿನಿ ರಸಿಕರ ಪ್ರೇಕ್ಷಕರ ಮನದಲ್ಲಿ ನೆಲೆಸಿದ್ದು ಗಾಳಿಪಟ ಚಿತ್ರದ ಮೂಲಕ. ಹೌದು, 2008ರಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರದಲ್ಲಿ ದಿಗಂತ್ ಎಂಬ ನಾಯಕನ ಗೆಳೆಯನ ಪಾತ್ರ ಹಾಗೂ ಸಹ ನಾಯಕನ ಪಾತ್ರವೂ ಆಗಿದ್ದ ರೋಲ್‌ನಲ್ಲಿ ಕಾಣಿಸಿಕೊಂಡಿದ್ದ ದಿಗಂತ್ ತಮ್ಮ ಅಭಿನಯದಿಂದ ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟರು. ಅಂದು ಖ್ಯಾತಿಯನ್ನು ಗಳಿಸಿದ ದಿಗಂತ್ ಪಾಲಿಗೆ ಹಲವು ಚಿತ್ರಗಳ ಆಫರ್ ಹರಿದುಬಂದವು.

ನಾಯಕನಾಗಿ ದಿಗಂತ್ ಹಲವಾರು ಚಿತ್ರಗಳಲ್ಲಿ ನಟಿಸಿ ಗೆದ್ದರು. ಹೀಗೆ ಗಾಳಿಪಟ ಚಿತ್ರದ ಮೂಲಕ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದ ದಿಗಂತ್ ಇದಕ್ಕೂ ಮುನ್ನ ಹಲವು ಚಿತ್ರಗಳಲ್ಲಿ ಪುಟ್ಟ ಪಾತ್ರಗಳನ್ನು ನಿರ್ವಹಿಸಿದ್ದರು. ಮೊದಲ ಚಿತ್ರ್ ಮಿಸ್ ಕ್ಯಾಲಿಫೋರ್ನಿಯಾ ಬಳಿಕ ಎಸ್ ಎಂ ಎಸ್ 6260 ಎಂಬ ಚಿತ್ರದಲ್ಲಿ ರೋಶನ್ ಎಂಬ ಪಾತ್ರ ನಿರ್ವಹಿಸಿದ್ದ ದಿಗಂತ್ ನಂತರ ದರ್ಶನ್ ನಟನೆಯ ಮಂಡ್ಯ ಹಾಗೂ ಮುಂಗಾರು ಮಳೆ ಚಿತ್ರಗಳಲ್ಲಿಯೂ ಸಹ ಸೈಡ್ ರೋಲ್ ಮಾಡಿದ್ದರು.
ಮುಂಗಾರು ಮಳೆ ಚಿತ್ರದಲ್ಲಿನ ದಿಗಂತ್ ಅವರನ್ನು ಆಗ ದಿಗಂತ್ ಎಂದು ಗುರುತಿಸದವರು ಗಾಳಿಪಟ ಬಿಡುಗಡೆಯ ಬಳಿಕ 'ಅರೇ ಇದು ನಮ್ ದೂದ್ ಪೇಡ ಅಲ್ವಾ' ಎಂದು ಗುರುತಿಸಿದ್ದರು. ಆದರೆ ಮಂಡ್ಯ ಚಿತ್ರದಲ್ಲಿ ದಿಗಂತ್ ನಟಿಸಿದ್ದರು ಎಂಬುದನ್ನು ಮಾತ್ರ ಗುರುತಿಸಿದವರು ತೀರ ವಿರಳ.
ಹೌದು, ದಿಗಂತ್ ಮಂಡ್ಯ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಮ್ಮನ ಪಾತ್ರದಲ್ಲಿ ನಟಿಸಿದ್ದರು. 'ನಮ್ಮ ಕೆಎಫ್ಐ' ನಡೆಸಿದ ಸಂದರ್ಶನದಲ್ಲಿ ತಮ್ಮ ಮುಂದಿನ ಚಿತ್ರ 'ಯದಾ ಯದಾ ಹಿ' ಬಗ್ಗೆ ಪ್ರಚಾರ ಮಾಡಿದ ದಿಗಂತ್ ಈ ವೇಳೆ ಮಂಡ್ಯ ಚಿತ್ರದಲ್ಲಿ ದರ್ಶನ್ ತಮ್ಮನಾಗಿ ನಟಿಸಿದ್ದರ ಬಗ್ಗೆಯೂ ಮಾತನಾಡಿದ್ದಾರೆ.

"ಮಂಡ್ಯ ಅಂತ ದರ್ಶನ್ ಅವರೊಟ್ಟಿಗೆ ಒಂದು ಸಿನಿಮಾ ಮಾಡಿದ್ದೆ. ನನಗೆ ಅವರನ್ನು ಕಂಡರೆ ತುಂಬಾ ಇಷ್ಟ. ಆಕ್ಷನ್ ಸಿನಿಮಾ ಎಲ್ಲಾ ಮುಂಚೆ ಇಂದಾನೂ ತುಂಬಾ ಇಷ್ಟ. ಓಂ ಪ್ರಕಾಶ್ ಸರ್ ಅವರು ಹೇಳಿದ್ರು. ತುಂಬಾ ದೊಡ್ಡ ಪಾತ್ರ ಇದೆ. ದರ್ಶನ್ ಅವರ ತಮ್ಮನ ಪಾತ್ರ. ನಿಮ್ಮಿಂದಾನೇ ಈ ಚಿತ್ರದಲ್ಲಿ ಟ್ವಿಸ್ಟ್ ಅದು, ಇದು ಬರೋದು ಅಂತೆಲ್ಲಾ ಹೇಳಿದ್ರು. ನಾನು ತುಂಬಾ ಖುಷಿಯಾದೆ. 20 ದಿವಸ ರೋಲ್ ಇದೆಯಪ್ಪ. ಒಂದಿನ ಎರಡು ದಿನ ಅಲ್ಲ. 20 ದಿನನೂ ಬರಬೇಕು. ಸರಿ ಸರ್ ಓಕೆ ಅಂತೆಲ್ಲಾ ಹೋದೆ. ದಿನಾ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ, ಕಾಫಿ, ಟೀ ಎಲ್ಲಾ ಟೈಮ್ ಟು ಟೈಮ್ ಆಗ್ತಾ ಇತ್ತು. ಆಮೇಲೆ ಸುಮಾರು ಸೀನ್‌ಗಳೂ ಆಯ್ತು" ಎಂದು ಹೇಳಿಕೊಂಡ ದಿಗಂತ್ ದರ್ಶನ್ ಅವರ ಸಿನಿಮಾದಲ್ಲಿ ತಮ್ಮ ಪಾತ್ರ ದೊಡ್ಡದು ಎಂದು ನಿರ್ದೇಶಕ ಓಂ ಪ್ರಕಾಶ್ ರಾವ್ ಹೇಳಿದ್ದನ್ನು ನೆನಪಿಸಿಕೊಂಡರು.
ಮುಂದುವರಿದು ಮಾತನಾಡಿದ ದಿಗಂತ್ "ನಾನು ನನ್ನ ಫ್ರೆಂಡ್ಸ್‌ನೆಲ್ಲಾ ಕರೆದುಕೊಂಡು ಹೋಗಿ, ಬನ್ರೋ ನಾನು ಡಿ ಬಾಸ್ ಅಂತ ಹೇಳಿ ಥಿಯೇಟರ್‌ನಲ್ಲಿ ಹೋಗಿ ನೋಡಿದ್ರೆ ಒಂದೇ ಒಂದು ಡೈಲಾಗು. ಅಣ್ಣಾ ಟೀ ಬೇಕಾ ಅಂತ.. ಬೇರೆ ಎಲ್ಲಾ ಕಟ್ ಮಾಡಿಬಿಟ್ಟಿದ್ದಾರೆ. ಆಕ್ಷನ್ ಸೀನ್ ಇತ್ತು, ನನ್ನ ಕಾಪಾಡೋಕೆ ಅವರು ಬಂದು ಫೈಟ್ ಎಲ್ಲಾ ಮಾಡ್ತಾರೆ, ಆ ಥರದ್ದೆಲ್ಲಾ ಇತ್ತು. ಆದರೆ ನೋಡಿದ್ರೆ ಸಿನಿಮಾದಲ್ಲಿ ಇಲ್ಲವೇ ಇಲ್ಲ" ಎಂದು ನಗುತ್ತಾ ನಡೆದಿದ್ದನ್ನು ಹಂಚಿಕೊಂಡರು. ಈ ಚಿತ್ರ ಮಾತ್ರವಲ್ಲದೇ ಅನೇಕ ಬಾರಿ ಈ ರೀತಿಯ ಅನುಭವ ಆಗಿತ್ತು ಎಂಬುದನ್ನೂ ದಿಗಂತ್ ಹೇಳಿಕೊಂಡರು.


Click it and Unblock the Notifications











