16ನೇ ವಯಸ್ಸಿಗೇ ಇಂಡಸ್ಟ್ರಿಗೆ ಬಂದೆ, ಫಸ್ಟ್ ಕಿಸ್ ಮಾಡುವಾಗ ಕಂಫರ್ಟ್ ಇರಲಿಲ್ಲ; ಸೀಕ್ರೆಟ್ ಬಿಚ್ಚಿಟ್ಟ ಹರಿಪ್ರಿಯಾ!
ನಟಿ ಹರಿಪ್ರಿಯಾ ನಟನೆಯ ಯಾವ ಚಿತ್ರಗಳು ಬಿಡುಗಡೆಯಾಗದಿದ್ದರೂ ಸಹ ನಟಿ ಮಾತ್ರ ಸಾಮಾಜಿಕ ಜಾಲತಾಣದ ಟ್ರೆಂಡಿಂಗ್ ಪಟ್ಟಿಯಲ್ಲಿ ಕಾಣ ಸಿಗುತ್ತಲೇ ಇರುತ್ತಾರೆ. ಹೌದು, ನಟಿ ಹರಿಪ್ರಿಯಾ ವಸಿಷ್ಟ ಸಿಂಹ ಜತೆಗಿನ ಪ್ರೀತಿ ಹಾಗೂ ವಿವಾಹದ ಕಾರಣಗಳಿಂದಾಗಿ ಸಾಕಷ್ಟು ಸುದ್ದಿಗೀಡಾಗಿದ್ದಾರೆ. ಮೊದಲಿಗೆ ಈ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿಗೀಡಾಗಿದ್ದ ಈ ಜೋಡಿ ಬಳಿಕ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಆ ಸುದ್ದಿಗಳು ನಿಜ ಎಂಬುದನ್ನು ತಿಳಿಸಿದ್ದವು.
ಪ್ರೀತಿ ವಿಚಾರ ಬಹಿರಂಗವಾದ ಕೆಲವೇ ದಿನಗಳಲ್ಲಿ ನಿಶ್ಚಿತಾರ್ಥವನ್ನೂ ಸಹ ಮಾಡಿಕೊಂಡ ಈ ಜೋಡಿ ಜನವರಿ 26ರಂದು ಮೈಸೂರಿನಲ್ಲಿ ಸರಳವಾಗಿ ವಿವಾಹವನ್ನೂ ಸಹ ಮಾಡಿಕೊಂಡು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಹೀಗೆ ಸಿಂಗಲ್ ಆಗಿದ್ದ ಹರಿಪ್ರಿಯಾ ವಿವಾಹವಾದ ಎರಡೇ ತಿಂಗಳಿಗೆ ಸಿಹಿ ಸುದ್ದಿ ಕೊಡಲಿದ್ದಾರೆ ಎಂದೂ ಸಹ ಸುದ್ದಿಗೀಡಾಗಿದ್ದರು. ಹರಿಪ್ರಿಯಾ ಗರ್ಭಿಣಿಯಂತೆ ಎಂದೆಲ್ಲಾ ಸುದ್ದಿಗಳು ಹರಿದಾಡಿದ್ದವು.

ಈ ರೀತಿಯ ಸುದ್ದಿಗಳು ಹರಿದಾಡುತ್ತಿದ್ದ ವೇಳೆಯೇ ನಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಲಿದೆ ಎಂಬುದನ್ನು ಪ್ರಕಟಿಸಿದ್ದ ಹರಿಪ್ರಿಯಾ ಮತ್ತಷ್ಟು ಕುತೂಹಲವನ್ನು ಕೆರಳಿಸಿದ್ದರು. ಆದರೆ ಹರಿಪ್ರಿಯಾ ಹೇಳಿದ್ದ ಹೊಸ ಸದಸ್ಯ ಮಗು ಆಗಿರಲಿಲ್ಲ, ಬದಲಾಗಿ ತಮ್ಮ ಹೊಸ ಯುಟ್ಯೂಬ್ ಚಾನೆಲ್ ಆಗಿತ್ತು. ಹೌದು, ಹರಿಪ್ರಿಯಾ ಸಿಂಹ ಎಂಬ ಹೆಸರಿನಡಿಯಲ್ಲಿ ನಟಿ ಹರಿಪ್ರಿಯಾ ತಮ್ಮದೇ ಆದ ಹೊಸ ಯುಟ್ಯೂಬ್ ಚಾನೆಲ್ ಆರಂಭಿಸಿದ್ದರು.
ಈ ಯುಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಚಾನೆಲ್‌ನ ಟ್ರೈಲರ್ ಹಾಗೂ ತಮ್ಮ ನಿಶ್ಚಿತಾರ್ಥದ ವಿಡಿಯೊಗಳನ್ನು ಹರಿಪ್ರಿಯಾ ಹಂಚಿಕೊಂಡಿದ್ದು, ಇದೀಗ ಮತ್ತೊಂದು ಹೊಸ ವಿಡಿಯೊವನ್ನು ಹಂಚಿಕೊಳ್ಳಲು ಮುಂದಾಗಿದ್ದಾರೆ. ಈ ಬಾರಿ ತನ್ನ ಬಗ್ಗೆ ಯಾರಿಗೂ ತಿಳಿಯದ ಹತ್ತು ವಿಷಯಗಳ ಬಗ್ಗೆ ಹರಿಪ್ರಿಯಾ ಮಾತನಾಡಿದ್ದು, ಈ ವಿಡಿಯೊ ಆದಷ್ಟು ಬೇಗ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ ಎಂಬುದನ್ನು ತಿಳಿಸಿದ್ದಾರೆ.
ಈ ಕುರಿತಾಗಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹರಿಪ್ರಿಯಾ ಪುಟ್ಟ ಪ್ರಚಾರದ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. "ನಿಮಗೆ ನನ್ನ ಬಗ್ಗೆ ತಿಳಿಯದ ಹತ್ತು ವಿಷಯಗಳು. ಈ ವಿಷಯಗಳ ಬಗ್ಗೆ ನನ್ನ ಆಪ್ತ ಸ್ನೇಹಿತರಿಗೂ ಸಹ ತಿಳಿದಿಲ್ಲ. ಚಿತ್ರರಂಗಕ್ಕೆ ನಾನು 16 ವರ್ಷ ವಯಸ್ಸಿನಲ್ಲಿಯೇ ಕಾಲಿಟ್ಟಿದ್ದೆ. ಪ್ರಯತ್ನಪಡೋಣ ಎಂದು ಚಿತ್ರರಂಗಕ್ಕೆ ಬಂದಿದ್ದೆ. ನನ್ನ ಫಸ್ಟ್ ಕಿಸ್ ಅಂತೆ. ನನ್ನ ಫಸ್ಟ್ ಕಿಸ್ ಬಗ್ಗೆ ಇಷ್ಟೊಂದು ಕುತೂಹಲನಾ? ನಾನು ತುಂಬಾ ಕಂಫರ್ಟಬಲ್ ಇರಲಿಲ್ಲ..." ಎಂದು ಹೇಳಿರುವ ಕಟ್ ಮಾಡಲಾದ ವಿಡಿಯೊ ಇದಾಗಿದೆ.
ಹೀಗೆ ಪ್ರೊಮೊ ಕಟ್ ಮೂಲಕ ತನ್ನ ಬಗೆಗಿನ ಹತ್ತು ವಿಷಯಗಳ ಬಗ್ಗೆ ಕುತೂಹಲ ಹುಟ್ಟಿಸಿರುವ ಹರಿಪ್ರಿಯಾ ಆ ವಿಡಿಯೊವನ್ನು ಅತಿ ಶೀಘ್ರದಲ್ಲಿ ಬಿಡುಗಡೆ ಮಾಡಲಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಹೀಗೆ ತನ್ನ ಫಸ್ಟ್ ಕಿಸ್ ಕಂಫರ್ಟಬಲ್ ಆಗಿ ಇರಲಿಲ್ಲ ಎಂದು ಹೇಳಿಕೆ ನೀಡುವುದರ ಮೂಲಕ ಹರಿಪ್ರಿಯಾ ಕುತೂಹಲ ಕೆರಳಿಸಿದ್ದು, ಹರಿಪ್ರಿಯಾ ಫಸ್ಟ್ ಕಿಸ್ ಯಾವ ಚಿತ್ರದ್ದಿರಬಹುದು ಎಂದು ಸಿನಿ ರಸಿಕರು ಚರ್ಚಿಸಲು ಆರಂಭಿಸಿದ್ದಾರೆ. ಅಲ್ಲದೇ ಯಾರಿಗೂ ತಿಳಿಯದ ತನ್ನ ಬಗೆಗಿನ ಹತ್ತು ವಿಷಯಗಳನ್ನು ತಿಳಿಸುತ್ತೇನೆ ಎಂದಿರುವ ಹರಿಪ್ರಿಯಾ ಇನ್ನೂ ಯಾವ ಯಾವ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆಯೋ ಕಾದು ನೋಡಬೇಕಿದೆ.


Click it and Unblock the Notifications











