'ಅಪ್ಪು ಸರ್‌ಗೆ ಆಕ್ಷನ್ ಕಟ್ ಹೇಳುವ ಅದೃಷ್ಟ ನನಗೆ ಇರಲಿಲ್ಲ'- ದಿನಕರ್ ತೂಗುದೀಪ...!
ಪುನೀತ್ ವ್ಯಕ್ತಿತ್ವವನ್ನ ಕೇವಲ ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ.ಯಾಕಂದರೆ .. ಪುನೀತ್ ಅವ್ರದ್ದು ನಿಲುಕದ ವ್ಯಕ್ತಿತ್ವ. ಬದುಕಿದ್ದಷ್ಟು ದಿನ ಪ್ರೀತಿಯನ್ನೇ ಹಂಚಿ.. ಅಭಿಮಾನದ ಹೂಗಳನ್ನೆಲ್ಲ ತನ್ನ ಹೃದಯದಲ್ಲಿ ತುಂಬಿಸಿಕೊಂಡು ಬಾರದ ಲೋಕಕ್ಕೆ ಹೋದ ಪರಮಾತ್ಮ ಪುನೀತ್ ರಾಜ್‌ಕುಮಾರ್, ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶನದ ಚಿತ್ರವೊಂದರಲ್ಲಿ ನಟಿಸಬೇಕಿತ್ತು. ಇದಕ್ಕೆ ತಯಾರಿಯನ್ನು ಕೂಡ ಮಾಡಿಕೊಳ್ಳಲಾಗುತ್ತಿತ್ತು.
ಇನ್ನು ಅಭಿಮಾನಿಗಳು ಕೂಡ ಈ ಚಿತ್ರಕ್ಕೆ ಕಾತುರದಿಂದ ಕಾಯುತ್ತಿದ್ದರು. ಯಾಕೆಂದರೆ ದಿನಕರ್ ತೂಗುದೀಪ ಚಿತ್ರವನ್ನು ನಿರ್ದೇಶಿಸುತ್ತಾರೆ ಅಂದರೆ ಆ ಚಿತ್ರಕ್ಕೆ ಅದರದ್ದೇ ಆದ ತೂಕ ಇರುತ್ತೆ, ಜೊತೆ ಜೊತೆಯಲಿ, ನವಗ್ರಹ, ಸಾರಥಿ ಚಿತ್ರಗಳಂತ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿರುವ ಈ ನಿರ್ದೇಶಕನ ಚಿತ್ರಗಳ ಕುರಿತು ಸಹಜವಾಗಿಯೇ ಎಕ್ಸ್‌ಪೆಕ್ಟೇಷನ್‌ಗಳಿದ್ದೇ ಇರುತ್ತವೆ. ಇಂಥಾ ನಿರ್ದೇಶಕ ದೊಡ್ಮನೆ ಹುಡುಗನ ಜೊತೆ ಚಿತ್ರ ಮಾಡ್ತಾರೆ ಅಂದಾಗ ಮಾಮೂಲಾಗಿಯೇ ನಿರೀಕ್ಷೆಗಳು ಗರಿಗೆದರಿದ್ದವು. ಇಬ್ಬರ ಕಾಂಬಿನೇಷನ್‌ನಲ್ಲಿ ಬರಲಿರುವ ಈ ಚಿತ್ರ ಮತ್ತೊಂದು ಲೆವಲ್ ಚಿತ್ರವಾಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ. ವಿಧಿ ಲಿಖಿತ .. ಅದು ಆಗಲಿಲ್ಲ.

ಇನ್ನು ಅಪ್ಪು ಅಗಲಿದ ನಂತರ ಸಹಜವಾಗಿ ಈ ಚಿತ್ರ ನೆನೆಗುದಿಗೆ ಬಿತ್ತು ಎಂದೇ ಎಲ್ಲರು ಅಂದುಕೊಂಡಿದ್ದರು. ಆದರೆ, ಅಪ್ಪು ಬಹುವಾಗಿ ಮೆಚ್ಚಿದ್ದ ಈ ಚಿತ್ರ ನಿಂತಿಲ್ಲ. ದಿನಕರ್ ತೂಗುದೀಪ ಕೂಡ ಈ ಚಿತ್ರವನ್ನು ಮರೆತಿಲ್ಲ. ಕಥೆಯನ್ನು ಕೈ ಬಿಟ್ಟಿಲ್ಲ. ಇಂದಲ್ಲ ನಾಳೆ ಈ ಚಿತ್ರವನ್ನು ತೆರೆಗೆ ತರುವ ಸಂಕಲ್ಪವನ್ನು ದಿನಕರ್ ತೂಗುದೀಪ ಮಾಡಿದ್ದಾರೆ. ಖುದ್ದು ಈ ವಿಚಾರವನ್ನು ದಿನಕರ್ ತೂಗುದೀಪ್ ಹಂಚಿಕೊಂಡಿದ್ದಾರೆ.
ಹೌದು, ಸದ್ಯ ದಿನಕರ್ ತೂಗುದೀಪ ತಮ್ಮ ರಾಯಲ್ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಚಿತ್ರದ ಕುರಿತು ಪ್ರಚಾರವನ್ನು ಮಾಡುತ್ತಿದ್ದಾರೆ. ಸಂದರ್ಶನಗಳಲ್ಲಿ ಚಿತ್ರದ ಕುರಿತು ಹತ್ತು ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆ ಪೈಕಿ 'ನ್ಯೂಸ್ ಫಸ್ಟ್'ಗೆ ನೀಡಿದ ಸಂದರ್ಶನದಲ್ಲಿ ಪುನೀತ್ ರಾಜ್ ಕುಮಾರ್ ಅವರ ಜೊತೆ ಮಾಡಬೇಕಿದ್ದ ಚಿತ್ರದ ಕುರಿತು ಮಾತನಾಡಿದ್ದಾರೆ. ಈ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ದಿನಕರ್ ತೂಗುದೀಪ ಆ ಚಿತ್ರದ ಎಲ್ಲ ಕೆಲಸಗಳು ಕೂಡ ಮುಗಿದಿದ್ದವು, ಸಂಭಾಷಣೆಗಳ ಸಮೇತ ಬೌಂಡ್ ಸ್ಕ್ರಿಪ್ಟ್ ಕೂಡ ರೆಡಿಯಾಗಿತ್ತು ಎಂದು ಹೇಳಿದ್ದಾರೆ.
2022ರ ಜನವರಿ ಅಥವಾ ಫೆಬ್ರವರಿಯಲ್ಲಿ ಚಿತ್ರಕ್ಕೆ ಸೆಟ್ ನಿರ್ಮಾಣ ಮಾಡಲು ಪ್ಲ್ಯಾನ್ ಕೂಡ ಮಾಡಿದ್ವಿ ಎಂದು ಹೇಳಿರುವ ದಿನಕರ್ ಮಾರ್ಚ್‌ನಲ್ಲಿ ನಾನು ಬಂದು ಚಿತ್ರತಂಡವನ್ನು ಸೇರಿಕೊಳ್ಳುವುದಾಗಿ ಅಪ್ಪು ಹೇಳಿದ್ದರು ಎಂದು ಹೇಳಿದ್ಧಾರೆ. ಮುಂದುವರೆದು ಆ ಚಿತ್ರಕ್ಕೆ ಸಂಪೂರ್ಣ ಹಳ್ಳಿಯ ವಾತಾವರಣವನ್ನೇ ಮರುನಿರ್ಮಾಣ ಮಾಡಬೇಕಿತ್ತು. ಈ ಕಾರಣಕ್ಕೆ ಲೊಕೇಶನ್ ಕೂಡ ನಾನು ತಂಡದ ಜೊತೆ ಹೋಗಿ ನೋಡಿಕೊಂಡು ಬಂದಿದ್ದೆ ಚಿತ್ರದ ಕಲಾ ವಿಭಾಗದವರ ಬಳಿ ಚಿತ್ರದ ಕಾಸ್ಟೂಮ್ ಹೇಗಿರಬೇಕು ಹಳ್ಳಿಯ ವಾತಾವರಣ ಹೇಗಿರಬೇಕು ಎಂಬ ಎಲ್ಲ ವಿಚಾರವನ್ನು ಕೂಡ ಚರ್ಚೆ ಮಾಡಿದ್ದೆ ಎಂದು ಹೇಳಿರುವ ದಿನಕರ್, ಅಪ್ಪು ಸರ್ ಜೊತೆ ಚಿತ್ರ ಮಾಡುವ ಅದೃಷ್ಟ ನನಗೆ ಇರಲಿಲ್ಲ ಎಂದು ಹೇಳಿದ್ದಾರೆ.
ಚಿತ್ರದ ಕಥೆ ಸಂಪೂರ್ಣ ಕಮರ್ಷಿಯಲ್ ಆಗಿತ್ತು, ಚಿತ್ರದ ಕಥೆಯನ್ನು ಕೇಳಿ ಅಪ್ಪು ಸರ್ ತುಂಬಾನೇ ಮೆಚ್ಚಿಕೊಂಡಿದ್ದರು ಇದುವರೆಗೆ ನಾನು ಮಾಡಿರುವ ಯಾವ ಚಿತ್ರ ಕೂಡ ಈ ಸಾಲಿನಲ್ಲಿ ಇಲ್ಲ, ಕಂಪ್ಲೀಟಾಗಿ ಇದು ನನ್ನ ಬಾಕ್ಸ್‌ದಿಂದ ಹೊರ ಇರುವ ಸಿನಿಮಾ ಹೀಗಾಗಿ ನಿಮ್ಮ ಕಮರ್ಷಿಯಲ್ ಸ್ಟೋರಿ ಟೆಲ್ಲಿಂಗ್‌ನಲ್ಲಿ ನಾನು ಇರಬೇಕೆನ್ನುವುದು ನನ್ನ ಆಸೆ ಹೀಗಾಗಿ ನಾನು ಒಪ್ಪಿಕೊಳ್ತಿದ್ದೀನಿ ಎಂದು ಪುನೀತ್ ಸರ್ ಹೇಳಿದ್ದರು ಎಂದು ಆ ದಿನವನ್ನು ದಿನಕರ್ ತೂಗುದೀಪ ಈ ಸಂದರ್ಶನದಲ್ಲಿ ನೆನಪು ಮಾಡಿಕೊಂಡಿದ್ದಾರೆ.
ಇನ್ನು ಆ ಕಥೆ ಏನಾದರೂ ಮುಂದೆ ಸಿನಿಮಾ ಆಗುತ್ತಾ ಎಂದು ಕೇಳಲಾದ ಪ್ರಶ್ನೆಗೆ 100 % ಆಗುತ್ತೆ ಅಪ್ಪು ಸರ್ ಆ ಕಥೆಯನ್ನು ತುಂಬಾ ಇಷ್ಟ ಪಟ್ಟಿದ್ದರು ಹೀಗಾಗಿ ಆ ಕಥೆಯನ್ನು ಚಿತ್ರವನ್ನಾಗಿ ಮಾಡಿಯೇ ಮಾಡ್ತೇನೆ ಎಂದಿರುವ ದಿನಕರ್ ಆ ಚಿತ್ರ ಮಾಡುವಾಗ ಇದು ಅಪ್ಪು ಸರ್‌ಗೆ ಮಾಡಿದ್ದ ಕಥೆಯೆಂದು ಅವರ ಅಭಿಮಾನಿಗಳೆದುರು ಎಲ್ಲರೆದುರು ಹೇಳಿಯೇ ಶುರು ಮಾಡುವುದಾಗಿ ಹೇಳಿದ್ದಾರೆ. ಒಂದಿಲ್ಲೊಂದು ದಿನ ಮಾಡ್ತೀನಿ ಆದರೆ ಯಾವಾಗ ಎನ್ನುವುದು ನನಗೂ ಗೊತ್ತಿಲ್ಲ ಎಂದು ಹೇಳಿದ್ದಾರೆ.


Click it and Unblock the Notifications











