ಉಪೇಂದ್ರ ಅವರನ್ನು ಹುಡುಕಿಕೊಂಡು ಮಂಗಳೂರಿಗೆ ಹೋಗಿದ್ದರು ಬಾಲಿವುಡ್‌ನ ಈ ಖ್ಯಾತ ನಿರ್ದೇಶಕ..!
ಚಿತ್ರರಂಗದ ಯಾವ ಹಿನ್ನೆಲೆ ಇಲ್ಲದೇ ಕಾಶೀನಾಥ್ ಎಂಬ ಅಪ್ರತಿಮ ಪ್ರತಿಭಾವಂತನ ಮನವೊಲಿಸಿ ಅವಕಾಶ ಪಡೆದು, ಬರಹಗಾರನಾಗಿ ಕೆಲಸ ಆರಂಭ ಮಾಡಿದವರು ಉಪೇಂದ್ರ. ಆ ನಂತರ ಸಹ ನಿರ್ದೇಶಕರಾಗಿ ಬಡ್ತಿಯನ್ನು ಪಡೆದು 'ತರ್ಲೆ ನನ್ ಮಗ' ಚಿತ್ರದ ಮೂಲಕ ಡೈರೆಕ್ಟರ್ ಆಗಿ ಹೊರ ಹೊಮ್ಮಿದ ಉಪ್ಪಿ ಓಂ ಚಿತ್ರದ ಮೂಲಕ ಆ ಕಾಲದಲ್ಲಿಯೇ ಕನ್ನಡ ಚಿತ್ರರಂಗದತ್ತ ಎಲ್ಲರೂ ತಿರುಗಿ ನೋಡುವಂತೆ ಮಾಡಿದ್ದರು. ಎ, ಉಪೇಂದ್ರ, ಚಿತ್ರಗಳ ಮೂಲಕ ಟ್ರೆಂಡ್ ಸೆಟ್ ಮಾಡಿ ಕನ್ನಡ ಚಿತ್ರರಂಗದ ದಿಕ್ಕು ದೆಸೆಯನ್ನೇ ಬದಲಿಸಿದರು. ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಸ್ಥಾನವನ್ನು ಕೂಡ ಅಲಂಕರಿಸಿದರು.
ಇನ್ನು, ಉಪೇಂದ್ರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಳ್ಳುವ ಪ್ರಯತ್ನವನ್ನು ಯುಐ ಚಿತ್ರದ ಮೂಲಕ ಇಂದು ಮತ್ತೊಮ್ಮೆ ಮಾಡುತ್ತಿರಬಹುದು. ಆದರೆ, ಆ ಕಾಲದಲ್ಲಿಯೇ ಉಪೇಂದ್ರ ಪ್ಯಾನ್ ಇಂಡಿಯಾ ಡೈರೆಕ್ಟರ್ ಆಗಿ ಮಿಂಚಿದವರು. ಮೆರೆದವರು. ಕೇವಲ ಜನಸಾಮಾನ್ಯರು ಮಾತ್ರವಲ್ಲ ಉಪೇಂದ್ರ ಅವರ ನಿರ್ದೇಶನಕ್ಕೆ ಬೇರೆ ಭಾಷೆಯ ಚಿತ್ರರಂಗದಲ್ಲಿ ಕೂಡ ಅಭಿಮಾನಿಗಳಿದ್ದಾರೆ. ಕೇವಲ ಜನಸಾಮಾನ್ಯರು ಮಾತ್ರವಲ್ಲ ಕಾಲಿವುಡ್ ಡೈರೆಕ್ಟರ್ ಶಂಕರ್, ಪ್ರಶಾಂತ್ ನೀಲ್, ಸೇರಿ ಅನೇಕರು ಉಪೇಂದ್ರ ಅವರ ನಿರ್ದೇಶನಕ್ಕೆ ಮನ ಸೋತಿದ್ದಾರೆ. ನಾನು ಉಪೇಂದ್ರ ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಆ ಪೈಕಿ ಅನುರಾಗ್ ಕಶ್ಯಪ್ ಕೂಡ ಒಬ್ಬರು ಎನ್ನುವುದು ಈಗ ಜಗಜ್ಜಾಹೀರಾಗಿದೆ. ಖುದ್ದು ಅನುರಾಗ್ ಕಶ್ಯಪ್ ಈ ಮಾತನ್ನು ಹೇಳಿದ್ದಾರೆ.

ಹೌದು, ಪಾಂಚ್, ಬ್ಲ್ಯಾಕ್ ಫ್ರೈಡೇ, ಗುಲಾಲ್, ದೇವ್ ಡಿ, ಗ್ಯಾಂಗ್ಸ್ ಆಫ್ ವಸೈಪುರ್, ಹೀಗೆ ಒಂದಕ್ಕಿಂತೊಂದು ಭಿನ್ನ-ವಿಭಿನ್ನ ಚಿತ್ರಗಳನ್ನು ಮಾಡಿ ಪ್ರೇಕ್ಷಕರನ್ನು ಸೆಳೆದ ಅನುರಾಗ್ ಕಶ್ಯಪ್ ನನಗೆ ನೆನಪಿರುವಂತೆ ನಾನು ನೋಡಿದ ದಕ್ಷಿಣ ಭಾರತದ ಮೊದಲ ಚಿತ್ರಗಳು ಅಂದರೆ ಅವು ಉಪೇಂದ್ರ ಅವರ ಚಿತ್ರಗಳು ಎಂದಿದ್ದಾರೆ.
ದಿ ಹಾಲಿವುಡ್ ರಿಪೋರ್ಟರ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅನುರಾಗ್ ಕಶ್ಯಪ್ ರಜಿನಿಕಾಂತ್, ಚಿರಂಜೀವಿ ಮತ್ತು ವೆಂಕಟೇಶ್ ಅವರ ಚಿತ್ರಗಳು ಆಗೆಲ್ಲ ಹಿಂದಿಗೆ ಡಬ್ ಆಗುತ್ತಿದ್ದವು ಈ ಕಾರಣಕ್ಕೆ ಇವರೆಲ್ಲರ ಕೆಲ ಸಿನಿಮಾಗಳನ್ನು ನಾನು ನೋಡಿದ್ದೇನೆ ಆದರೆ ಸಬ್ ಟೈಟಲ್ ಇಲ್ಲದ, ಡಬ್ ಆಗದ ದಕ್ಷಿಣ ಭಾರತದ ಚಿತ್ರವನ್ನು ನಾನು ಮೊದಲು ನೋಡಿದ್ದು ಅಂದರೆ ಅದು ಉಪೇಂದ್ರ ಅವರ ಎ ಮತ್ತು ಓಂ ಚಿತ್ರ ಎಂದಿದ್ದಾರೆ. ಎ ಮತ್ತು ಓಂ ಚಿತ್ರವನ್ನು ನನಗೆ ನೋಡುವಂತೆ ಹೇಳಿದ್ದು ರಾಮ್ ಗೋಪಾಲ್ ವರ್ಮಾ ಎಂದಿದ್ದಾರೆ.
ಎ ಚಿತ್ರವನ್ನು ನೋಡಿ ರಾಮ್ ಗೋಪಾಲ್ ವರ್ಮಾ ತುಂಬಾ ಪ್ರಭಾವಕ್ಕೊಳಗಾಗಿದ್ದರು ಎಂದಿರುವ ಅನುರಾಗ್ ಕಶ್ಯಪ್ ಎ ಚಿತ್ರವನ್ನು ನನಗೆ ಅವರೇ ಕರೆದುಕೊಂಡಿ ಹೋಗಿ ತೋರಿಸಿದ್ದರು ಎಂದು ಹೇಳಿದ್ದಾರೆ. ಆ ನಂತರ ನಾನು ಓಂ ಚಿತ್ರವನ್ನು ನೋಡಿ ಉಪೇಂದ್ರ ಅವರ ಅಭಿಮಾನಿಯಾದೆ ಎಂದಿರುವ ಅನುರಾಗ್ ಕಶ್ಯಪ್, ಮಂಗಳೂರಿಗೆ ನಾನು ಉಪೇಂದ್ರ ಅವರನ್ನು ಹುಡುಕಿಕೊಂಡು ಹೋಗಿದ್ದೇ ಆಗ ಅಲ್ಲಿ ಅವರ ನಿರ್ದೇಶನದ ಉಪೇಂದ್ರ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು ಎಂದು ಹೇಳಿದ್ದಾರೆ.
ಇನ್ನು ಓಂ ಚಿತ್ರಕ್ಕೆ ರಾಮ್ ಗೋಪಾಲ್ ವರ್ಮಾ ಸತ್ಯ ಚಿತ್ರ ಪ್ರೇರಣೆ ಎನ್ನುವ ವಾದ ಅನೇಕರದ್ದು. ಆದರೆ ಅನುರಾಗ್ ಕಶ್ಯಪ್ ಈ ವಾದವನ್ನು ತಳ್ಳಿ ಹಾಕಿದ್ದಾರೆ. ಸತ್ಯ ಚಿತ್ರ ತೆರೆಗೆ ಬರುವ ಮುನ್ನ ಓಂ ಚಿತ್ರ ತೆರೆಗೆ ಬಂದಿದ್ದು ಹೀಗಾಗಿ ಸತ್ಯ ಮತ್ತು ಓಂ ಚಿತ್ರಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಸದ್ಯಕ್ಕೆ ಉಪೇಂದ್ರ ಅವರ ಬಗ್ಗೆ ಅನುರಾಗ್ ಕಶ್ಯಪ್ ಆಡಿದ ಈ ಮಾತು ಕನ್ನಡ ಕಲಾಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದೆ. ಉಪೇಂದ್ರ ಬಗ್ಗೆ ಅನುರಾಗ್ ಕಶ್ಯಪ್ ಮಾತನಾಡಿರುವ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


Click it and Unblock the Notifications











