ಮದುವೆಗೆ ನಾನು ರೆಡಿ ಎಂದ ಡಾಲಿ ಧನಂಜಯ್, 'ಮಂಡಿಯೂರಿ ಬೇಡುವೆವು' ಯಾರು ಆ ಅದೃಷ್ಟವಂತೆ ಎಂದ ಫ್ಯಾನ್ಸ್..!
ಸಾಮಾನ್ಯಕ್ಕೆ ವಯಸ್ಸಿಗೆ ಬಂದ ಯುವಕ ಯುವತಿಯರು ಎಲ್ಲಿಯೇ ಹೋಗಲಿ ಅಲ್ಲಿ ಮೊದಲು ಎದುರಾಗುವುದು ಮದುವೆಯ ಕುರಿತ ಪ್ರಶ್ನೆಯೇ. ಇನ್ನು ಸೆಲೆಬ್ರೆಟಿಗಳ ಪಾಡಂತೂ ಇದಕ್ಕಿಂತ ಭಿನ್ನ. ಯಾವ ಸಿನಿಮಾ ಕಾರ್ಯಕ್ರಮಕ್ಕೆ ಹೋಗಲಿ, ಸಭೆ-ಸಮಾರಂಭಕ್ಕೆ ತೆರಳಲಿ, ಪಾರ್ಟಿಗೆ ಹೋಗಲಿ.. ಸಿಕ್ಕ-ಸಿಕ್ಕಲ್ಲಿ ಮದುವೆಯ ಪ್ರಶ್ನೆಯನ್ನ ಕೇಳಿ ಕೊಡಬಾರದ ಟಾರ್ಚರ್ ಕೊಡ್ತಾರೆ. ಹೀಗಾಗಿಯೇ ಮದುವೆ ಬೇಡ ಎಂದು ತೀರ್ಮಾನ ಮಾಡಿರುವವರು ಕೂಡ ಇವರ ಈ ಕಿರುಕುಳದಿಂದ ತಪ್ಪಿಸಿಕೊಳ್ಳಲಾದರೂ ಮದುವೆಗೆ ರೆಡಿಯಾಗಿ ಬಿಡುತ್ತಾರೆ. ಇದಕ್ಕೆ ಡಾಲಿ ಧನಂಜಯ್ ಸದ್ಯದ ಉದಾಹರಣೆ.
ಹೌದು, ಅಸಲಿಗೆ ವಿಕ್ಕಿಪೀಡಿಯಾ ಪ್ರಕಾರ ಡಾಲಿ ಧನಂಜಯ್ ಅವರಿಗೆ ಈಗ 38ರ ಹರೆಯ. ಆದರೂ ಡಾಲಿ ಇನ್ನೂ ಮದ್ವೆಯಾಗಿಲ್ಲ. ಹೀಗಾಗಿಯೇ ಇವರ ಮದುವೆಯ ಚಿಂತೆಯನ್ನು ಮಾಡುತ್ತಿರುವ ಅನೇಕರು ಈ ಹಿಂದೆ ಡಾಲಿ ಧನಂಜಯ್ ಮತ್ತು ಅಮೃತಾ ಐಯ್ಯಂಗಾರ್ ನಡುವೆ ಪ್ರೇಮಾಂಕುರವಾಗಿದೆ ಎಂದು ಪುಕಾರು ಹಬ್ಬಿಸಿದ್ದರು. ಇದಕ್ಕೆ ಪೂರಕವಾಗಿ ಗಣೇಶ್ ನಡೆಸಿಕೊಡ್ತಿದ್ದ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್, ಅಮೃತಾ ಐಯ್ಯಂಗಾರ್ ಅವರ ಮುಂದೆ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ''ಮಂಡಿಯೂರಿ ಬೇಡುವೆನು.. ಹೃದಯ ಕಾಲಡಿ ಇಡುವೆನು.. ತೆಗೆದು ಬಚ್ಚಿಟ್ಕೋ, ಇಲ್ಲ ತುಳಿದು ಕಾಲ್ ತೊಳೆದುಕೋ, ಬೇಡ ಈ ಮೌನ, ಮಾಡು ತೀರ್ಮಾನ'' ಎಂದೆಲ್ಲ ಕವಿತೆಯನ್ನು ಹೇಳಿದ್ದರು. ಧನಂಜಯ್ ನೀಡಿದ್ದ ಗುಲಾಬಿ ಹೂ ಪಡೆದು ಅಮೃತಾ ಐಯ್ಯಂಗಾರ್ ನಾಚಿ ನೀರಾಗಿದ್ದರು.
ಆದರೆ, ಆ ನಂತರ ಅದೆಲ್ಲ ಕೇವಲ ಕಾರ್ಯಕ್ರಮಕ್ಕಷ್ಟೇ ಸೀಮಿತ, ನಾನು ಮತ್ತು ಅಮೃತಾ ಐಯ್ಯಂಗಾರ್ ಕೇವಲ ಉತ್ತಮ ಸ್ನೇಹಿತರಷ್ಟೇ ಎಂದು ಡಾಲಿ ಧನಂಜಯ್ ಹೇಳುತ್ತಾ ಬಂದರು. ಅಮೃತಾ ಐಯ್ಯಂಗಾರ್ ಕೂಡ ಮಾಧ್ಯಮದವರು ಈ ಕುರಿತು ಕೇಳಿದಾಗೆಲ್ಲ ಡಾಲಿ ಧನಂಜಯ್ ಹೇಳಿದ್ದ ಪಾಠವನ್ನೇ ಒಪ್ಪಿಸಿದರು. ಮಾಧ್ಯಮದವರ ಈ ಕಪೋಲಕಲ್ಪಿತ ವರದಿಗಳಿಂದ ಡಾಲಿ ಧನಂಜಯ್ ಅವರಿಗೆ ಯಾರು ಹೆಣ್ಣೇ ಕೊಡ್ತಿಲ್ಲವಂತೆ ಎಂದು ತಮಾಷೆಯನ್ನು ಮಾಡಿದ್ದರು. ಆದರೂ ಕೂಡ ಡಾಲಿ ಧನಂಜಯ್ ಮತ್ತು ಅಮೃತಾ ಐಯ್ಯಂಗಾರ್ ಮೇಲೆ ಈ ಕ್ಷಣಕ್ಕೂ ಒಂದು ವರ್ಗಕ್ಕೆ ಅನುಮಾನ ಇದ್ದೇ ಇದೆ.
ಹೀಗಿರುವಾಗ ಡಾಲಿ ಧನಂಜಯ್ ಖುದ್ದು ಈ ಬಾರಿ ಮದುವೆಯ ಬಗ್ಗೆ ಮಾತನಾಡಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನದಂದೇ ಇಷ್ಟರಲ್ಲೇ ಮದುವೆ ಆಗುವುದಾಗಿ ಹೇಳಿದ್ದಾರೆ. ನನ್ನ ಮದುವೆ ನನ್ನ ಅಜ್ಜಿ ಮಲ್ಲವ್ವ ಅವರ ಕನಸು ಅವರ ಈ ಕನಸನ್ನು ನಾನು ಈಡೇರಿಸುತ್ತೇನೆ ಎಂದಿದ್ದಾರೆ.

ಸಹಜವಾಗಿ ಡಾಲಿ ಧನಂಜಯ್ ಮದುವೆಯ ಕುರಿತು ಮಾತನಾಡಿದ ಬೆನ್ನಲ್ಲಿಯೇ ಇವರ ಅಭಿಮಾನಿ ಬಳಗದಲ್ಲೊಂದು ಸಂಭ್ರಮ ಮನೆ ಮಾಡಿದೆ. ಇದೇ ವೇಳೆ ಡಾಲಿ ಧನಂಜಯ್ ಮದುವೆಯಾಗುವ ಹುಡುಗಿ ಯಾರು ಎನ್ನುವ ಪ್ರಶ್ನೆ ಕೂಡ ಅನೇಕರನ್ನು ಕಾಡುತ್ತಿದೆ. ಹಿಂದೆ ಕೇಳಿ ಬಂದ ಮಾತು.. ಮನೆ ಮಾಡಿರುವ ಅನುಮಾನ.. ಎಲ್ಲವೂ ನಿಜವಾಗುತ್ತಾ ಎನ್ನುವ ಪ್ರಶ್ನೆ ಕೂಡ ಅನೇಕರ ತಲೆಯಲ್ಲಿ ಗಿರಕಿ ಹೊಡೆಯುತ್ತಿದೆ.ಡಾಲಿ ಧನಂಜಯ್ ಅವರ ಸಾಮಾಜಿಕ ಜಾಲತಾಣದ ಮೇಲೀಗ ಅನೇಕರ ಕಣ್ಣಿದೆ.


Click it and Unblock the Notifications











