ತಪ್ಪು ವಿಜಯಲಕ್ಷ್ಮಿ ಅವ್ರ ಮೇಲೆ ಹಾಕೋದು ತಪ್ಪಾಗುತ್ತೆ; ಕಿಚ್ಚ ಸುದೀಪ್ ಫಸ್ಟ್ ರಿಯಾಕ್ಷನ್
ಹುಬ್ಬಳ್ಳಿಯಲ್ಲಿ ಕಿಚ್ಚ ಸುದೀಪ್ ಹೇಳಿಕೆಗೆ ದಾವಣಗೆರೆಯಲ್ಲಿ ವಿಜಯಲಕ್ಷ್ಮಿ ದರ್ಶನ್ ತಿರುಗೇಟು ನೀಡಿದ್ದಾರೆ ಎಂದು ಭಾರೀ ಚರ್ಚೆ ನಡೆಯುತ್ತಿದೆ. ಇದು ದರ್ಶನ್ ಹಾಗೂ ಸುದೀಪ್ ಫ್ಯಾನ್ಸ್ ವಾರ್‌ಗೆ ಕೂಡ ಕಾರಣವಾಗಿದೆ. ಕಳೆದೆರಡು ದಿನಗಳಿಂದ ಈ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ. ಇದೀಗ ಸ್ವತಃ ಸುದೀಪ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು ಪ್ರಮೋಷನ್ ಜೋರಾಗಿ ನಡೀತಿದೆ. ಸಾಕಷ್ಟು ಸಂದರ್ಶನಗಳಲ್ಲಿ ಸುದೀಪ್ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ಚೆನ್ನೈಗೆ ಹೋಗಿ ಪ್ರಮೋಷನ್ ಮಾಡಿ ಬಂದಿತ್ತು ಚಿತ್ರತಂಡ. 'ಮಾರ್ಕ್' ಸಿನಿಮಾ ಪೈರಸಿಗೆ ಕೆಲವರು ಯತ್ನಿಸುತ್ತಿದ್ದಾರೆ. ಅವರ ವಿರುದ್ಧ ನಾನು ಯುದ್ಧಕ್ಕೆ ಸಿದ್ಧ ಎಂದು ಹೇಳಿದ್ದಾಗಿ ಸುದೀಪ್ ಹೇಳಿದ್ದಾರೆ.

ಸುದೀಪ್ ಹೇಳಿಕೆಗೆ ವಿಜಯಲಕ್ಷ್ಮಿ ದರ್ಶನ್ ತಿರುಗೇಟು ಕೊಟ್ಟಿದ್ದಾರೆ ಎನ್ನುವ ವಿಚಾರಕ್ಕೆ ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ. ಜೀ-ನ್ಯೂಸ್ ವಾಹಿನಿ ಸಂದರ್ಶನದಲ್ಲಿ ನೇರನೇರ ಪ್ರಶ್ನೆಗೆ ಸುದೀಪ್ ಉತ್ತರಿಸಿದ್ದಾರೆ. "ವಿಜಯಲಕ್ಷ್ಮಿ ಅವ್ರು ಮಾತನಾಡಿರುವ ಆಡಿಯೋ ಅಥವಾ ವಿಡಿಯೋ ನಾನು ನೋಡಿಲ್ಲ. ಅವ್ರು ನನಗೆ ಹೇಳಿದ್ದಾರಾ? ಇಲ್ವಲ್ಲ, ತಪ್ಪು ವಿಜಯಲಕ್ಷ್ಮಿ ಅವ್ರ ಮೇಲೆ ಹಾಕುವುದು ತಪ್ಪಾಗುತ್ತೆ. ಅವ್ರು ನನಗೆ ಹೇಳಿದ್ದಾರೆ ಎಂದು ಗ್ಯಾರಂಟಿ ಇದ್ದರೆ ಉತ್ತರ ಕೊಡುತ್ತಿದ್ದೆ" ಎಂದು ಸುದೀಪ್ ಹೇಳಿದ್ದಾರೆ.
ವಿಜಯಲಕ್ಷ್ಮಿ ಅವ್ರು ಯಾರಿಗೆ ಹೇಳಿದ್ದಾರೆ ಎಂದು ಹೇಳಿದರೆ ಆಗ ಉತ್ತರ ಕೊಡಬಹುದು. ಅದು ಬಿಟ್ಟು ಅವ್ರು ಏನೋ ಹೇಳಿದ್ದಕ್ಕೆ ನಾನು ರಿಯಾಕ್ಷನ್ ಕೊಟ್ರೆ ತಪ್ಪಾಗುತ್ತೆ. "ಅವ್ರು ಯಾಕೆ ಆ ಮಾತು ಹೇಳಿದ್ರು ಗೊತ್ತಿಲ್ಲ. ವೇದಿಕೆ ಹತ್ತಿ ಮಾತನಾಡುವುದು, ಅಂದ್ರೆ ಬಹಳ ಜನ ವೇದಿಕೆ ಹತ್ತುತ್ತಾರೆ. ವೈಯಕ್ತಿಕವಾಗಿ ನನ್ನ ಹೆಸ್ರು ತಗೊಂಡು ಹೇಳಿದ್ರೆ, ನಾನು ಮಾತನಾಡುತ್ತಿದ್ದೆ. ಹುಬ್ಬಳ್ಳಿಯಲ್ಲಿ ಪೈರಸಿ ಬಗ್ಗೆ ನಾನು ಮಾತನಾಡಿದ್ದು. ಖಂಡಿತ ಪೈರಸಿ ವಿರುದ್ಧ ಯುದ್ಧ ಮಾಡ್ತೀವಿ. ಅದಕ್ಕೆ ಬೇಕಾದ ಕ್ರಮ ಕೈಗೊಳ್ಳುತ್ತೇನೆ. ನನ್ನ ಸಿನಿಮಾವನ್ನು ನಾನು ರಕ್ಷಿಸಿಕೊಳ್ಳಬಾರ್ದಾ? ನನ್ನ ಫ್ಯಾನ್ಸ್ ವಿರುದ್ಧ ಮಾತನಾಡಬಾರ್ದಾ?" ಎಂದು ಸುದೀಪ್ ಸ್ಪಷ್ಟನೆ ನೀಡಿದ್ದಾರೆ.
ನಮ್ಮ ಬಗ್ಗೆ ಹೇಳಿದ್ರೆ ಖಂಡಿತ ಸ್ಪಷ್ಟನೆ ಕೊಡೋಣ. ದರ್ಶನ್ ಅರೆಸ್ಟ್ ಆದಾಗ್ಲೆ ಕೆಟ್ಟದು ಮಾತನಾಡ್ಲಿಲ್ಲ. ಇವತ್ತು ಯಾಕೆ ಮಾತಾಡ್ಲಿ. ನನ್ನ ಸಿನಿಮಾ ಕಾಪಾಡಿಕೊಳ್ಳುವ ಕೆಲಸ ನಾನು ಮಾಡ್ತಿದ್ದೀನಿ. ಅವ್ರು ಹೇಳಿದ್ದು ಅವ್ರಿಗೆ ಅಂದುಕೊಳ್ಳೋದು ನಮ್ಮ ಮುಠ್ಠಾಳತನ ಆಗುತ್ತೆ ಎಂದು ಸುದೀಪ್ ವಿವರಿಸಿದ್ದಾರೆ. ಅವ್ರು ತಲೆಯಲ್ಲಿ ಏನೋ ಇಟ್ಕೊಂಡು ಏನೋ ಮಾತಾಡಿರ್ತಾರೆ. ಅವ್ರ ಮನಸ್ಸಿನಲ್ಲಿ ಸಾವಿರ ನಡೀತಿದೆ ಈಗ ಗೊತ್ತಲ್ವಾ? ಎಂದು ಸುದೀಪ್ ಪರೋಕ್ಷವಾಗಿ ವಿಜಯಲಕ್ಷ್ಮಿ ದರ್ಶನ್ ಬಗ್ಗೆ ಸುದೀಪ್ ಹೇಳಿದ್ದಾರೆ.
ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮಾರ್ಕ್' ಸಿನಿಮಾ ಡಿಸೆಂಬರ್ 25ರಂದು ತೆರೆಗೆ ಬರ್ತಿದೆ. ಸೂಪರ್ ಹಿಟ್ 'ಮ್ಯಾಕ್ಸ್' ಕಾಂಬಿನೇಷನ್‌ನಲ್ಲೇ ಈ ಸಿನಿಮಾ ಬರ್ತಿದೆ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಈಗಾಗಲೇ ಚಿತ್ರದ ಸಾಂಗ್ಸ್, ಟ್ರೈಲರ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಈ ವಾರವೇ ಶಿವರಾಜ್‌ಕುಮಾರ್, ಉಪೇಂದ್ರ ನಟನೆಯ '45' ಸಿನಿಮಾ ಕೂಡ ತೆರೆಗೆ ಬರ್ತಿದೆ.
ಪೈರಸಿ ಅನ್ನೋದು ಇಡೀ ಚಿತ್ರರಂಗಕ್ಕೆ ಭೂತವಾಗಿ ಕಾಡುತ್ತಿದೆ. ದೊಡ್ಡ ದೊಡ್ಡ ಸಿನಿಮಾಗಳು ಇದರಿಂದ ಪೆಟ್ಟು ತಿಂದಿವೆ. ಈ ಹಿಂದೆ ಸುದೀಪ್ ನಟನೆಯ 'ಪೈಲ್ವಾನ್' ಚಿತ್ರಕ್ಕೆ ಪೈರಸಿ ಬಲವಾದ ಪೆಟ್ಟು ಕೊಟ್ಟಿತ್ತು. 'ಡೆವಿಲ್' ಚಿತ್ರದ 10 ಸಾವಿರಕ್ಕೂ ಅಧಿಕ ಪೈರಸಿ ಲಿಂಕ್ ಡಿಲೀಟ್ ಮಾಡಿರುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ.


Click it and Unblock the Notifications











