''ದರ್ಶನ್''ಗೋಸ್ಕರ ಪೂಜೆ ಅಂದಿದ್ದರೆ ನಾನೇ ಬರುತ್ತಿರಲಿಲ್ಲ - ಜಗ್ಗೇಶ್...!
ನಿಜಾ .. ಮೊನ್ನೆ .. ಮೊನ್ನೆ ಬಂದ 'ಭೀಮ' ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ನೀಡಿದೆ. ಆದರೆ, ವಾಸ್ತವದಲ್ಲಿ ಈ ವರ್ಷದ ಲಾಭ-ನಷ್ಟದ ಲೆಕ್ಕಾಚಾರ ಹಾಕಿದರೆ, ಕನ್ನಡ ಚಿತ್ರರಂಗದ ಕಥೆ ನಿಜಕ್ಕೂ ಕರುಣಾಜನಕವಾಗಿದೆ. ಇದನ್ನು ಅರಿತು ಚಿತ್ರರಂಗದ ಪುನಶ್ಚೇತನಕ್ಕೆ ರೂಪರೇಶೆ ಸಿದ್ಧ ಪಡಿಸಬೇಕಿದ್ದ ಕಲಾವಿದರ ಸಂಘ ಇಂದು ಪೂಜೆ-ಪುನಸ್ಕಾರ ಮಾಡಿದೆ.
ಈ ಹೋಮ ಹವನದಿಂದ ಕನ್ನಡ ಚಿತ್ರರಂಗದಲ್ಲಿ ಮುಂದೆ ಯಾವ ರೀತಿಯ ಕ್ರಾಂತಿಯಾಗಲಿದೆ ಅನ್ನುವುದು ಮುಂದೆ ಗೊತ್ತಾಗಲಿದೆಯಾದರೂ, ಇಂಥಹದ್ದೊಂದು ಪೂಜೆಗೆ ರಾಕ್ ಲೈನ್ ವೆಂಕಟೇಶ್ ಮತ್ತು ದೊಡ್ಡಣ್ಣ ಪ್ಲ್ಯಾನ್ ಮಾಡಿದಾಗ ಚಿತ್ರರಂಗದಲ್ಲಿಯೇ ಅಪಸ್ವರ ಕೇಳಿ ಬಂದಿತ್ತು. ಯಾಕೆಂದರೆ.. ಈ ಹೋಮ ಚಿತ್ರರಂಗದ ಒಳಿತಿಗಾಗಿ ಅಲ್ಲ ಬದಲಿಗೆ ದರ್ಶನ್ ಅವರ ಬಿಡುಗಡೆಗೆ ಎನ್ನುವ ಮಾತು ಅಷ್ಟರಲ್ಲಿ ಇಡೀ ಗಾಂಧಿನಗರದಲ್ಲಿ ಪಸರ್ ಆಗಿತ್ತು. ಹೀಗಾಗಿಯೇ ದಿಢೀರ್ ಪತ್ರಿಕಾಗೋಷ್ಠಿ ನಡೆಸಿದ್ದ ರಾಕ್ ಲೈನ್ ವೆಂಕಟೇಶ್ ಮತ್ತು ದೊಡ್ಡಣ್ಣ ಸ್ಪಷ್ಟೀಕರಣ ನೀಡಿದರು. ದರ್ಶನ್ ಗೋಸ್ಕರ ಪೂಜೆ ಮಾಡಬೇಕು ಎಂದರೆ 100 ದೇವಸ್ಥಾನಗಳಲ್ಲಿ ಮಾಡಿಸುತ್ತಿದ್ದೇವು ಎಂದು ಹೇಳಿದರು.

ಆದರೂ ಕೂಡ ಈ ವಿಚಾರದಲ್ಲಿ ಅನೇಕರಲ್ಲಿ ಇನ್ನೂ ಅನುಮಾನ ಇದ್ದೇ ಇದೆ. ಈ ಅನುಮಾನವನ್ನು ಇಂದು ಕನ್ನಡ ಚಿತ್ರರಂಗದ ನವರಸನಾಯಕ ಜಗ್ಗೇಶ್ ದೂರ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ.
ಹೌದು, ಇಂದು ನಡೆದ ಪೂಜೆಯಲ್ಲಿ ಭಾಗಿಯಾಗಿದ್ದ ಜಗ್ಗೇಶ್ ಆರಂಭದಲ್ಲಿ ನನಗೆ ಸಿಕ್ಕ ಮಾಹಿತಿ ಇದೇ ಆಗಿತ್ತು ಎಂದಿದ್ದಾರೆ. ಬೇರೆ ಬೇರೆ ವಲಯಗಳಿಂದ ನನಗೆ ಕರೆ ಮಾಡಿ ಈ ವಿಚಾರದ ಕುರಿತು ಕೇಳಿದಾಗ ನನಗೂ ಕೂಡ ಅನುಮಾನ ಬಂತು ಎಂದಿರುವ ಜಗ್ಗೇಶ್ ಆ ನಂತರ ನಾನು ವಿಚಾರಿಸಿದಾಗ ಸತ್ಯ ಗೊತ್ತಾಯಿತು ಎಂದಿದ್ದಾರೆ. ಒಂದು ವೇಳೆ ನಿಜವಾಗಿಯೂ ದರ್ಶನ್‌ಗಾಗಿ ಪೂಜೆಯನ್ನು ಹಮ್ಮಿಕೊಂಡಿದ್ದರೆ ನಾನೇ ಬರುತ್ತಿರಲಿಲ್ಲ ಯಾಕೆಂದರೆ ಅದು ಬೇರೆ ಆಯಾಮ ಪಡೆಯುತ್ತಿತ್ತು ಎಂದಿದ್ಧಾರೆ. ಈ ಪೂಜೆ ಮಾಡಿದ್ದು ಕನ್ನಡ ಚಿತ್ರರಂಗ ಮತ್ತು ಕನ್ನಡ ಕಲಾವಿದ ಶ್ರೇಯೋಭಿವೃದ್ದಿಗಾಗಿ ಅಷ್ಟೇ ಎಂದಿರುವ ಜಗ್ಗೇಶ್ ಕೆಲವರಿಗೆ ಮಾಹಿತಿ ಕೊರತೆ ಆಗಿ ಅಪಾರ್ಥ ಮಾಡಿಕೊಂಡಿದ್ಧಾರೆ ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿರುವ ಜಗ್ಗೇಶ್, ರಾಕ್ ಲೈನ್ ಜೊತೆ ಫೋನ್‌ನಲ್ಲಿ ಮಾತನಾಡುವಾಗ ಈ ವಿಚಾರ ಬಂತು. ಮುಂದಿನ ಪೀಳಿಗೆಗಾಗಿ ನಾವು ಏನಾದರೂ ಬಿಟ್ಟು ಕೊಡಬೇಕು, ಆ ಕಾರ್ಯಕ್ಕೆ ಇಂದು ಚಾಲನೆ ಸಿಕ್ಕಿದೆ ಎಂದಿದ್ದಾರೆ. ಬೇರೆ ರಾಜ್ಯಗಳಲ್ಲಿರುವಂತೆ ನಮ್ಮ ಕಲಾವಿದರಿಗೆ ಇದು ಮಾತೃ ಸಂಸ್ಥೆಯಾಗಬೇಕು, ಎಲ್ಲ ಕಲಾವಿದರ ಸದಸ್ಯತ್ವ ನೊಂದಣಿ ಮಾಡಿಸುವ ಕೆಲಸ ಆಗಬೇಕು, ಹೀಗೆ ಆದಾಗ ಹಬ್ಬದ ವಾತಾವರಣ ಸೃಷ್ಟಿಯಾಗುತ್ತೆ ಎಂದಿದ್ದಾರೆ.
ಇನ್ನೂ.. ನಾನು ಆಧ್ಮಾತ್ಮಿಕವಾಗಿ ಇರುವವನು. ಹೀಗಾಗಿ ನಿರ್ಮಾಪಕರ ಸಂಘಕ್ಕೆ ಸಲಹೆ ನೀಡಿದ್ದೆ ಎಂದಿರುವ ಜಗ್ಗೇಶ್, ಕೆಲವರಿಗೆ ದೇವರು ಅಂದರೆ ಆಗಲ್ಲ, ಅಂಥವರಿಗೆ ನಾವೂ ಏನೂ ಹೇಳಲು ಆಗಲ್ಲ ಎಂದಿದ್ಧಾರೆ. ದೇವರನ್ನು ನಂಬುವವರ ಮತ್ತು ನಂಬದವರ ಬೆಳವಣಿಗೆ ಹೇಗಿದೆ ಅಂತ ನೀವೆ ನೋಡಿ ಎಂದಿದ್ದಾರೆ ನವರಸನಾಯಕ ಜಗ್ಗೇಶ್


Click it and Unblock the Notifications











