ಐಸಿಸಿ ವಿಶ್ವಕಪ್ 2023: ಗೋಲ್ಡನ್ ಟಿಕೆಟ್ ಪಡೆದ 'ಗೌರವಾನ್ವಿತ ಅತಿಥಿ' ನಟ ರಜನಿಕಾಂತ್
ಸೂಪರ್‌ಸ್ಟಾರ್ ರಜನಿಕಾಂತ್ ಅವರು ಮುಂದಿನ ತಿಂಗಳು ನಡೆಯಲಿರುವ ಐಸಿಸಿ ವಿಶ್ವಕಪ್‌ಗೆ "ಗೌರವಾನ್ವಿತ ಅತಿಥಿ" ಎಂದು ಬಿಸಿಸಿಐ ತಿಳಿಸಿದೆ. ಅಮಿತಾಬ್ ಬಚ್ಚನ್ ಮತ್ತು ಸಚಿನ್ ತೆಂಡೂಲ್ಕರ್ ನಂತರ, ರಜನಿಕಾಂತ್ ಅವರಿಗೆ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಗಾಗಿ 'ಗೋಲ್ಡನ್ ಟಿಕೆಟ್' ನೀಡಲಾಗಿದೆ.
ಕ್ರಿಕೆಟ್ ಪಂದ್ಯಾವಳಿಯ ಸಮಯದಲ್ಲಿ ರಜನಿಕಾಂತ್ ಅವರಿಗೆ ಯಾವುದೇ ಅಡೆತಡೆಯಿಲ್ಲದೆ ಪ್ರವೇಶಕ್ಕೆ ಅನುಮತಿಸುವ ಗೋಲ್ಡನ್ ಟಿಕೆಟ್ ಅನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೀಡಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ತಲೈವಾಗೆ ಗೋಲ್ಡನ್ ಟಿಕೆಟ್ ಹಸ್ತಾಂತರಿಸಿದ್ದಾರೆ.

ರಜಿನಿಕಾಂತ್ ಗೋಲ್ಡನ್ ಟಿಕೆಟ್
ರಜನಿಕಾಂತ್ ಅವರನ್ನು ಕ್ರಿಕೆಟ್ ಪಂದ್ಯಾವಳಿಗೆ ಈ ಬಾರಿಯ ಗೌರವಾನ್ವಿತ ಅತಿಥಿ ಎಂದಿರುವ ಬಿಸಿಸಿಐ, ಜಯ್ ಶಾ ಅವರು ಸೂಪರ್ ಸ್ಟಾರ್‌ಗೆ ಗೋಲ್ಡನ್ ಟಿಕೆಟ್ ನೀಡಿರುವ ಪೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. ಈ ಘಟನೆಯನ್ನು ಸಿನಿಮಾದ ಆಚೆಗಿನ ವಿದ್ಯಮಾನ! ಎಂದು ಶ್ಲಾಘಿಸಿದೆ.
"ಸಿನಿಮಾದ ಆಚೆಗಿನ ವಿದ್ಯಮಾನ!. ಚಿತ್ರರಂಗದ ತೇಜಸ್ಸಿನ ನಿಜವಾದ ಸಾಕಾರವಾದ ರಜನಿಕಾಂತ್ ಅವರಿಗೆ ಬಿಸಿಸಿಐ ಗೌರವ ಕಾರ್ಯದರ್ಶಿ ಜಯ್ ಶಾ ಅವರು ಗೋಲ್ಡನ್ ಟಿಕೆಟ್ ನೀಡಿದರು. ಈ ದಿಗ್ಗಜ ನಟ ಭಾಷೆ ಮತ್ತು ಸಂಸ್ಕೃತಿಯನ್ನು ಮೀರಿ ಲಕ್ಷಾಂತರ ಜನರ ಹೃದಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ತಲೈವಾ ಅವರು ನಮ್ಮ ಗೌರವಾನ್ವಿತ ಅತಿಥಿಯಾಗಿ 2023 ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಅಲ್ಲಿ ಕಾಣಿಸಿಕೊಳ್ಳುತ್ತಾರೆ" ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ಈ ಗೋಲ್ಡನ್ ಟಿಕೆಟ್‌ಗಳು ಬಿಸಿಸಿಐ ತಾನು ಆಯೋಜಿಸುತ್ತಿರುವ ಈವೆಂಟ್‌ಗಾಗಿ ಬಳಸುವ ಪ್ರಚಾರ ತಂತ್ರವಾಗಿದ್ದು, ವಿಶ್ವಕಪ್ ಪಂದ್ಯಗಳಲ್ಲಿ ಇವುಗಳನ್ನು ಸ್ವೀಕರಿಸುವವರಿಗೆ ವಿಐಪಿ ಸೌಕರ್ಯ ನೀಡಲಾಗುತ್ತದೆ. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮತ್ತು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಗೆ ಇದೇ ಗೌರವ ನೀಡಲಾಗಿತ್ತು.
2023 ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಅನ್ನು ಭಾರತವು ಅಕ್ಟೋಬರ್ 5 ರಿಂದ ನವೆಂಬರ್ 19, 2023 ರವರೆಗೆ ಆಯೋಜಿಸಲಿದೆ. ಪಂದ್ಯಾವಳಿಯು ಅಕ್ಟೋಬರ್ 5 ರಂದು ಅಹಮದಾಬಾದ್‌ನಲ್ಲಿ ಪ್ರಾರಂಭವಾಗಲಿದ್ದು, 2019 ರ ಆವೃತ್ತಿಯ ಫೈನಲಿಸ್ಟ್‌ಗಳು-ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್- ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ, ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ಸೇರಿದಂತೆ ಹತ್ತು ತಂಡಗಳನ್ನು ಒಳಗೊಂಡಿರುತ್ತದೆ. ಚೆನ್ನೈ, ಮುಂಬೈ, ಕೋಲ್ಕತ್ತಾ, ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ ದೇಶದ 10 ನಗರಗಳಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
'ಜೈಲರ್'
ನಟ ರಜನಿಕಾಂತ್ ಸದ್ಯ ಜೈಲರ್ ಯಶಸ್ಸಿನಲ್ಲಿದ್ದಾರೆ. ಈ ಚಿತ್ರವು ವಿಶ್ವಾದ್ಯಂತ 650 ಕೋಟಿ ರೂಪಾಯಿಗಳನ್ನು ಗಳಿಸಿದೆ. ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ನಟನೆಯ 2.0 ಸಿನಿಮಾ ಬಳಿಕ 600 ಕೋಟಿ ಕ್ಲಬ್‌ಗೆ ಸೇರಿದ ಎರಡನೇ ತಮಿಳು ಚಲನಚಿತ್ರವಾಗಿದೆ. ನೆಲ್ಸನ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ವಸಂತ ರವಿ, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ವಿನಾಯಕನ್, ಶಿವ ರಾಜಕುಮಾರ್, ಮೋಹನ್ ಲಾಲ್ ಮತ್ತು ಜಾಕಿ ಶ್ರಾಫ್ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತವಿರುವ ಜೈಲರ್‌ಗೆ ಸನ್ ಪಿಕ್ಚರ್ಸ್ ಬಂಡವಾಳ ಹೂಡಿದೆ.


Click it and Unblock the Notifications










