ನ್ಯಾಯಕ್ಕೆ ಗೆಲುವು ಸಿಗದಿದ್ದರೆ?; ನಟಿ ರಮ್ಯಾ ಪೋಸ್ಟ್
ರಾಜ್ಯದಲ್ಲಿ ಇತ್ತೀಚೆಗೆ ಹಲವು ಪ್ರಕರಣಗಳು ಭಾರೀ ಸದ್ದು ಮಾಡುತ್ತಿವೆ. ತಾರೆಯರು, ರಾಜಕೀಯ ಮುಖಂಡರು ಪ್ರಕರಣದಲ್ಲಿ ಆರೋಪಿಗಳಾಗಿ ಪೊಲೀಸ್ ತನಿಖೆ ಎದುರಿಸುವಂತಾಗಿದೆ. ನಟಿ, ಮಾಜಿ ಸಂಸದೆ ರಮ್ಯಾ ಈ ಬಗ್ಗೆ ಪದೇ ಪದೆ ದನಿ ಎತ್ತುತ್ತಾ ಬರುತ್ತಿದ್ದಾರೆ. ಮತ್ತೊಮ್ಮೆ ಈ ಕುರಿತು ಆಕೆ ಪೋಸ್ಟ್ ಮಾಡಿ ಗಮನ ಸೆಳೆದಿದ್ದಾರೆ.
"ಕಾನೂನು ಉಲ್ಲಂಘಿಸುವ ಧನವಂತರು, ಶಕ್ತಿವಂತರು ಸುದ್ದಿಯಲ್ಲಿದ್ದಾರೆ. ಅವರ ಹಿಂಸಾಚಾರದ ಕ್ರಿಯೆಗಳನ್ನು ಸ್ವೀಕರಿಸುವ ಅವರು ಬಡವರು, ಮಹಿಳೆಯರು ಮತ್ತು ಮಕ್ಕಳು. ಕರ್ನಾಟಕ ಸಾಮಾನ್ಯ ಜನರು. ಈ ಅಪರಾಧಗಳನ್ನು ಹೊರತಂದ ಪೊಲೀಸರು ಹಾಗೂ ಮಾಧ್ಯಮಗಳಿಗೆ ಹ್ಯಾಟ್ಸಾಫ್. ವಿಚಾರಣೆಯನ್ನು ಚುರುಕುಗೊಳಿಸಿ, ಪ್ರಕರಣಗಳನ್ನು ತಾರ್ಕಿಕ ಮುಕ್ತಾಯಕ್ಕೆ ತೆಗೆದುಕೊಂಡಾಗ ನಿಜವಾಗಿಯೂ ನ್ಯಾಯ ಸಿಗುತ್ತದೆ. ನ್ಯಾಯ ಸಿಗದಿದ್ದರೆ ಏನು ಸಂದೇಶವನ್ನು ನೀಡಿದಂತಾಗುತ್ತದೆ" ಎಂದು ನಟಿ ರಮ್ಯಾ ಇನ್‌ಸ್ಟಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್, ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳಾದ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಹಾಗೂ ಪೋಕ್ಸೋ ಪ್ರಕರಣದಲ್ಲಿ ಸಂಕಷ್ಟ ಎದುರಿಸುತ್ತಿರುವ ಮಾಜಿ ಸಿಎಂ ಯಡಿಯೂರಪ್ಪ ಹೆಸರನ್ನು ಟ್ಯಾಗ್ ಮಾಡಿದ್ದಾರೆ. ಇನ್ನು ರಮ್ಯಾ ಪೋಸ್ಟ್ ನೋಡಿ ಕೆಲವರು ಆಕೆಯನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಆಕೆಯ ಹಳೆಯ ಸಿನಿಮಾ ವಿಡಿಯೋಗಳನ್ನು ವೈರಲ್ ಮಾಡುತ್ತಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ & ಗ್ಯಾಂಗ್ ಬಗ್ಗೆ ನಟಿ ರಮ್ಯಾ ವಾಗ್ದಾಳಿ ನಡೆಸುತ್ತಾ ಬರ್ತಿದ್ದಾರೆ. ಪ್ರಕರಣದ ಬಗ್ಗೆ ಈ ಹಿಂದೆ ಸುದೀರ್ಘವಾಗಿ ಬರೆದುಕೊಂಡಿದ್ದರು. "ಬ್ಲಾಕ್ ಎನ್ನುವ ಆಯ್ಕೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಕೊಟ್ಟಿರುತ್ತಾರೆ. ಟ್ರೋಲ್ ಮಾಡುವವರು ಹೆಚ್ಚಾದಲ್ಲಿ ನೀವು ದೂರು ನೀಡಬಹುದು. ಟ್ರೋಲಿಗರು ನಿರಂತರವಾಗಿ ಕೆಟ್ಟ ಭಾಷೆಯಲ್ಲಿ ನನ್ನನ್ನು ಟ್ರೋಲ್ ಮಾಡಿದ್ದರು. ಕೇವಲ ನನ್ನನ್ನಷ್ಟೇ ಅಲ್ಲ, ಬೇರೆ ಕಲಾವಿದರನ್ನು ಟ್ರೋಲ್ ಮಾಡಿದ್ದಾರೆ. ಅಷ್ಟೇ ಯಾಕೆ ಟ್ರೋಲಿಗರು ಹೆಂಡತಿ, ಮಕ್ಕಳನ್ನೂ ಸಹ ಬಿಟ್ಟಿಲ್ಲ. ಎಂತಹ ಕೆಟ್ಟ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ" ಎಂದಿದ್ದರು.
"ಯಾವುದೇ ಒಬ್ಬ ಕಾನೂನು ಪಾಲಿಸುವ ನಾಗರೀಕ ಪ್ರಕರಣ ದಾಖಲಿಸುವಂತೆ ನಾನೂ ಮಾಡಿದ್ದೇನೆ. ಕೆಲವೊಮ್ಮೆ ಪೊಲೀಸರು ಟ್ರೋಲರ್‌ಗಳಿಗೆ ಎಚ್ಚರಿಕೆ ಕೊಟ್ಟಾಗಲೂ ನಾನು ದೂರನ್ನು ಹಿಂಪಡೆದಿದ್ದೇನೆ. ಟ್ರೋಲ್ ಮಾಡುವವರು ಬಹುತೇಕ ಯುವಕರು. ಅವರಿಗೂ ಭವಿಷ್ಯವಿದೆ. ಆದರೆ ಅನಾಮಿಕನ ಹೆಸರಿನಲ್ಲಿ ಖಾತೆಯನ್ನು ಓಪನ್ ಮಾಡಿ ಟ್ರೋಲ್ ಮಾಡುತ್ತಾ ತನ್ನ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸತ್ಯವನ್ನು ಅರಿತಿದ್ದೇನೆ"

"ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ. ನೀವು ಹೋಗಿ ಜನರಿಗೆ ಹೊಡೆದು ಅವನನ್ನು ಸಾಯಿಸುವುದಕ್ಕೆ ಆಗುವುದಿಲ್ಲ. ನ್ಯಾಯ ನಿಮಗೆ ಸಿಗುತ್ತೋ ಇಲ್ಲವೋ ಅನ್ನೋದು ನೀವು ಒಂದು ಚಿಕ್ಕ ದೂರನ್ನು ಕೊಟ್ಟರೂ ಸಾಕು ತಿಳಿಯುತ್ತೆ"
"ತಮ್ಮ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಗೌರವ ಸೂಚಿಸುತ್ತೇನೆ. ಅವರದ್ದು ನಿಸ್ವಾರ್ಥದ ಕೆಲಸ. ಅವರು ತಮ್ಮ ಕೆಲಸವನ್ನು ಉತ್ತಮ ರೀತಿಯಲ್ಲಿ ಮಾಡುತ್ತಿದ್ದಾರೆ. ಅವರು ಯಾವುದೇ ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿಯದೆ ಕೆಲಸ ಮಾಡುತ್ತಾರೆ. ಹಾಗೇ ಜನರು ಕಾನೂನಿನ ಮೇಲೆ ಇಟ್ಟಿರುವ ನಂಬಿಕೆ ಉಳಿಸುತ್ತಾರೆ ಎನ್ನುವ ವಿಶ್ವಾಸವಿದೆ" ಎಂದು ಪೋಸ್ಟ್ ಮಾಡಿದ್ದರು.


Click it and Unblock the Notifications











