ನಿಮ್ಮ ವಂಶ ಬಿಟ್ಟು ಬೇರೆಯವ್ರ ವಂಶ ಉದ್ಧಾರ ಆಗಬೇಕಂದ್ರೆ ಜೆಡಿಎಸ್‌ಗೆ ವೋಟ್ ಹಾಕಿ ಎಂದ ನಟಿ ಶೃತಿ!
ಮುಂದಿನ ತಿಂಗಳು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಕಾರಣ ಸದ್ಯ ರಾಜ್ಯದೆಲ್ಲೆಡೆ ಚುನಾವಣಾ ಕಾವು ಜೋರಾಗಿದೆ. ಈ ಬಾರಿ ಯಾವ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ಹಿಡಿಯುವ ಅವಕಾಶ ಲಭಿಸಲಿದೆ ಎಂಬ ಚರ್ಚೆಗಳು ಜೋರಾಗಿವೆ. ಇನ್ನು ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಎಲ್ಲಾ ಪಕ್ಷಗಳು ಪ್ರಚಾರದ ಕಾರ್ಯವನ್ನು ದೊಡ್ಡ ಮಟ್ಟದಲ್ಲಿ ನಡೆಸುತ್ತಿದ್ದು, ಮತದಾರನ ಗಮನ ಸೆಳೆಯಲು ಸರ್ಕಸ್ ಮಾಡುತ್ತಿವೆ.
ಇನ್ನು ಜನರ ಮನಸ್ಸಿಗೆ ಹತ್ತಿರವಾಗಿರುವ ಸಿನಿಮಾ ನಟ ಹಾಗೂ ನಟಿಯರನ್ನು ಪ್ರತೀ ಬಾರಿಯಂತೆ ಈ ಬಾರಿಯೂ ಸಹ ರಾಜಕೀಯ ಪಕ್ಷಗಳು ತಮ್ಮ ಪರ ಪ್ರಚಾರ ಮಾಡಲು ಬಳಸಿಕೊಳ್ಳುತ್ತಿವೆ. ಇತ್ತೀಚೆಗಷ್ಟೆ ನಟ ಕಿಚ್ಚ ಸುದೀಪ್ ರೀತಿಯ ಸ್ಟಾರ್ ನಟನೂ ಸಹ ಬಿಜೆಪಿ ಪಕ್ಷದ ಮುಖಂಡ ಹಾಗೂ ಪ್ರಸ್ತುತ ಮುಖ್ಯಮಂತ್ರಿಗಳಾಗಿರುವ ಬೊಮ್ಮಯಿ ಅವರಿಗೆ ಬೆಂಬಲ ಸೂಚಿಸಲಿದ್ದೇನೆ, ಅವರ ಪರ ನಿಲ್ಲಲಿದ್ದೇನೆ ಎಂಬುದನ್ನು ಪತ್ರಿಕಾಗೋಷ್ಠಿ ನಡೆಸುವುದರ ಮೂಲಕ ತಿಳಿಸಿದ್ದಾರೆ.

ಹೀಗೆ ಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು, ಪ್ರಚಾರದ ವೇಳೆ ಪಕ್ಷದ ನಾಯಕರು ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿ ಭಾಷಣ ಮಾಡುವುದು ಕಾಮನ್ ಆಗಿಬಿಟ್ಟಿದೆ. ಇನ್ನು ಕೆಲ ನಟ ಹಾಗೂ ನಟಿಯರು ಕೇವಲ ಪ್ರಚಾರದ ಸಲುವಾಗಿ ಮಾತ್ರವಲ್ಲದೇ ನಿಜವಾಗಿಯೂ ರಾಜಕೀಯಕ್ಕೆ ಧುಮುಕಿದ್ದು, ವಿವಿಧ ಪಕ್ಷಗಳನ್ನು ಸೇರಿಕೊಂಡಿದ್ದಾರೆ. ಸಾಧು ಕೋಕಿಲ ಕಾಂಗ್ರೆಸ್ ಸೇರಿದ್ದರೆ, ಶೃತಿ ಹಾಗೂ ಪ್ರೇಮ ರೀತಿಯ ನಟಿಯರು ಬಿಜೆಪಿ ಪಕ್ಷವನ್ನು ಸೇರಿಕೊಂಡಿದ್ದಾರೆ.
ಈ ಕಲಾವಿದರು ಸದ್ಯದ ಪ್ರಚಾರ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯಾವುದೇ ರಾಜಕೀಯ ನಾಯಕರಿಗೂ ಸಹ ಕಡಿಮೆಯಿಲ್ಲ ಎಂಬಂತೆ ಭಾಷಣ ಮಾಡಿ ಎದುರಾಳಿ ಪಕ್ಷಗಳಿಂದ ವಿರುದ್ಧ ಗುಡುಗುತ್ತಿದ್ದಾರೆ. ಇನ್ನು ಮೊನ್ನೆಯಷ್ಟೇ ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ನಟಿ ಶೃತಿ ಇದೇ ರೀತಿಯ ಭಾಷಣ ಮಾಡಿದ್ದಾರೆ. ಬಿಜೆಪಿ ನಾಯಕ ಬಿಸಿ ಪಾಟೀಲ್ ಪರ ಪ್ರಚಾರ ಮಾಡಿದ ಶೃತಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ವಿರುದ್ಧ ವ್ಯಂಗ್ಯವಾಡಿದ್ದಾರೆ.
"ಮೂರು ಪಕ್ಷ ಇವೆ, ಪ್ರಮುಖವಾಗಿ ಕಾಣುವಂತವು. ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಯಾಕೆಂದರೆ ಭಾರತೀಯ ಜನಪಾ ಪಾರ್ಟಿ ಒಂದು ಪಕ್ಷ ಇದೆಯಲ್ಲ, ಅದು ಈ ಭಾರತಕ್ಕೆ, ಈ ರಾಜ್ಯಕ್ಕೆ ಕೊಟ್ಟಿರೋ ಕೊಡುಗೆಗಳನ್ನು ಹೇಳ್ತಾ ಹೋದ್ರೇನೆ ಎರಡ್ಮೂರು ಗಂಟೆ ಸಾಕಾಗಲ್ಲ. ಇನ್ನು ಬೇರೆಯವರ ಬಗ್ಗೆ ನಾವ್ಯಾಕೆ ಮಾತಾಡೋಣ?" ಎಂದು ಶೃತಿ ಬಿಜೆಪಿ ಪಕ್ಷದ ಸಾಧನೆ ಹಾಗೂ ಅಪಾರ ಎಂದು ತಿಳಿಸದರು.

ಮುಂದುವರಿದು ಮಾತನಾಡಿದ ಶೃತಿ "ಇಷ್ಟು ಮಾತ್ರ ತಿಳಿದುಕೊಳ್ಳಿ. ನಿಮ್ಮ ವಂಶ ಬಿಟ್ಟು ರಾಜ್ಯದಲ್ಲಿ ಬೇರೆಯವರ ವಂಶ ಉದ್ಧಾರ ಆಗಬೇಕು ಅಂತ ಇದ್ರೆ ಜೆಡಿಎಸ್‌ಗೆ ವೋಟ್ ಹಾಕಿ. ದೇಶದಲ್ಲಿ ನಿಮ್ಮ ವಂಶ ಬಿಟ್ಟು ಬೇರೆ ದೇಶದವರ ವಂಶ ಉದ್ಧಾರ ಆಗಬೇಕು ಅನ್ನೋ ಹಾಗಿದ್ರೆ ಕಾಂಗ್ರೆಸ್‌ಗೆ ವೋಟ್ ಹಾಕಿ. ಭಾರತದಲ್ಲಿ ಭಾರತೀಯರ ವಂಶ ಉದ್ಧಾರ ಆಗಬೇಕು ಅಂದ್ರೆ ಭಾರತೀಯ ಜನತಾ ಪಾರ್ಟಿಗೆ ವೋಟ್ ಹಾಕಿ" ಎಂದು ಹೇಳಿಕೆ ನೀಡಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಮಹಿಳಾ ಸಮಾವೇಶಕ್ಕೆ ಬರುವುದು ಖುಷಿ ಏಕೆಂದರೆ ಇಲ್ಲಿ ಪುರುಷರು ಅಲ್ಪ ಸಂಖ್ಯಾತರು ಎಂದೂ ಸಹ ಕಾಲೆಳೆದ ಶೃತಿ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಮಾತ್ರವಲ್ಲದೇ ದೇಶದಲ್ಲಿರುವ ಎಲ್ಲಾ ಕ್ಷೇತ್ರಗಳಲ್ಲಿಯೂ ಬಹು ಸಂಖ್ಯಾತರಾಗಬೇಕು ಎನ್ನುವುದು ನನ್ನ ಆಸೆ ಹಾಗೂ ಭಾರತೀಯ ಜನತಾ ಪಾರ್ಟಿಯ ಕನಸು ಎಂದರು.


Click it and Unblock the Notifications











