»   » ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ

Posted By: Staff
Subscribe to Filmibeat Kannada

ಬೆಂಗಳೂರು : ಬರದ ಕಾರ್ಮೋಡ ಕವಿದಿರುವ ಕರ್ನಾಟಕ ರಾಜ್ಯದ ರಾಜಧಾನಿಯಲ್ಲಿ ಅಕ್ಟೋಬರ್‌ 10ರಿಂದ ನಡೆಯಬೇಕಿದ್ದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮುಂದೂಡಲಾಗಿದೆ. ಈ ಮುಂದೂಡಿಕೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆದೋರಿರುವ ಭಯೋತ್ಪಾದನೆಯೂ ಕಾರಣವಾಗಿದೆ.

ರಾಜ್ಯ ತೀವ್ರ ಬರ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಸುವುದು ಸೂಕ್ತವಲ್ಲ. ಹೀಗಾಗಿ ಉತ್ಸವವನ್ನು ಮುಂದೂಡಿ ಎಂದು ರಾಜ್ಯ ಸರಕಾರ ಕೇಂದ್ರಕ್ಕೆ ಮನವಿ ಮಾಡಿಕೊಂಡಿತ್ತು. ಆದರೆ, ಕೇಂದ್ರದ ವಾರ್ತಾ ಸಚಿವೆ ಸುಷ್ಮಾ ಸ್ವರಾಜ್‌ ಅವರು, ವಿದೇಶ ಪ್ರವಾಸದಲ್ಲಿರುವ ಕಾರಣ ಈ ಸಂಬಂಧ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಆದಾಗ್ಯೂ ರಾಜ್ಯ ಸರಕಾರ ಏಕಪಕ್ಷೀಯವಾಗಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡುವ ತೀರ್ಮಾನ ಕೈಗೊಂಡಿದೆ. ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ಚಿತ್ರೋತ್ಸವಕ್ಕೆ ನಿಯೋಜಿಸಲಾಗಿದ್ದ ಎಲ್ಲ ಸಿಬ್ಬಂದಿಯನ್ನೂ ಆ ಕಾರ್ಯದಿಂದ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ವಾರ್ತಾ ಇಲಾಖೆಯ ನಿರ್ದೇಶಕರು ಈ ಆದೇಶ ಹೊರಡಿಸಿದ್ದಾರೆ.

ಮುಂದೆ ಯಾವಾಗ ಈ ಚಿತ್ರೋತ್ಸವ ನಡೆಸಲಾಗುವುದು. ಎಲ್ಲಿ ನಡೆಸಲಾಗುವುದು ಎಂಬ ಯಾವುದೇ ಮಾಹಿತಿಯನ್ನೂ ರಾಜ್ಯ ಸರಕಾರ ಪ್ರಕಟಿಸಿಲ್ಲ. ಚಿತ್ರೋತ್ಸವ ಆರಂಭವಾಗಲು ಕೇವಲ 17 ದಿನ ಬಾಕಿ ಉಳಿದಿರುವಾಗ ಹಾಗೂ ಚಿತ್ರೋತ್ಸವದ ಪೂರ್ವ ಸಿದ್ಧತೆಗಳು ಅಂತಿಮ ಹಂತದಲ್ಲಿರುವಾಗ ರಾಜ್ಯ ಸರಕಾರ ಕೈಗೊಂಡ ನಿರ್ಧಾರ ಅಚ್ಚರಿ ಮೂಡಿಸಿದೆ. ವಿವಿಧ ಸಮಿತಿಗಳನ್ನು ರಚಿಸಿ, ಚಿತ್ರೋತ್ಸವಕ್ಕೆ ಮಾಡಿದ್ದ ಸಿದ್ಧತೆಗಳು ಬಹುತೇಕ ಶೇ.70ರಷ್ಟು ಪೂರ್ಣಗೊಂಡಿದ್ದವು.

ಸತ್ಯು ಟೀಕೆ : ಚಿತ್ರೋತ್ಸವ ಮುಂದೂಡಿರುವ ರಾಜ್ಯ ಸರಕಾರದ ಕ್ರಮವನ್ನು ಚಿತ್ರೋತ್ಸವ ಉದ್ಘಾಟನಾ ಸಮಾರಂಭದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎಂ.ಎಸ್‌. ಸತ್ಯು ಟೀಕಿಸಿದ್ದಾರೆ. ಮುಂದೂಡಿಕೆಗೆ ಬರ ಕೇವಲ ನೆಪ ಮಾತ್ರ. ಆದರೆ, ಕೇಂದ್ರ - ರಾಜ್ಯಗಳ ನಡುವಿನ ರಾಜಕೀಯ ಕಾರಣಗಳಿಗಾಗಿ ಚಿತ್ರೋತ್ಸವ ಮುಂದೂಡಲಾಗಿದೆ ಎಂದು ಅವರು ಹೇಳಿದ್ದಾರೆ.

ಚಿತ್ರೋತ್ಸವದ ಪೂರ್ವ ಸಿದ್ಧತೆಗಾಗಿ ಈಗಾಗಲೇ ಕೋಟ್ಯಂತರ ರುಪಾಯಿ ಖರ್ಚು ಮಾಡಿರುವಾಗ ಹಾಗೂ ಅದು ಅಂತಿಮ ಹಂತದಲ್ಲಿರುವಾಗ ಬರದ ನೆಪವೊಡ್ಡಿ ಮುಂದೂಡುವ ಕ್ರಮ ಸರಿಯಲ್ಲ ಎಂದೂ ಅವರು ಹೇಳಿದ್ದಾರೆ. ಚಿತ್ರೋತ್ಸವ ಬೆಂಗಳೂರಿನಲ್ಲಿ ಅಲ್ಲವಾದರೆ, ಮತ್ತೊಂದು ಊರಿನಲ್ಲಿ ಅದೇ ದಿನಾಂಕದಲ್ಲಿ ನಡೆಯುತ್ತದೆ ಎಂದು, ಪತ್ರಿಕೆಯಾಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

English summary
The international film festival of India, scheduled to be held between October 10 to 20 is postponed

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada