»   » ಅಂ.ರಾ. ಚಿತ್ರೋತ್ಸವ ನಡೆಸಿ, ಮುಖ್ಯಮಂತ್ರಿಗೆ ಮಂಡಳಿ ಮನವಿ

ಅಂ.ರಾ. ಚಿತ್ರೋತ್ಸವ ನಡೆಸಿ, ಮುಖ್ಯಮಂತ್ರಿಗೆ ಮಂಡಳಿ ಮನವಿ

Posted By: Staff
Subscribe to Filmibeat Kannada

ಬೆಂಗಳೂರು : ಬರದ ಹಿನ್ನೆಲೆಯಲ್ಲಿ ಮುಂದೂಡಲಾಗಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ನಿಗದಿತ ವೇಳಾಪಟ್ಟಿಯಂತೆ ಅಕ್ಟೋಬರ್‌ 10ರಿಂದ 20ರವರೆಗೆ ನಡೆಸುವಂತೆ, ಕರ್ನಾಟಕ ಚಲನಚಿತ್ರವಾಣಿಜ್ಯ ಮಂಡಳಿಯ ನಿಯೋಗ ಮುಖ್ಯಮಂತ್ರಿಗಳನ್ನು ಕೋರಿದೆ.

ರಾಜ್ಯ ಸರಕಾರದ ಮುಂದೂಡಿಕೆ ನಿರ್ಧಾರವನ್ನು ಪುನರ್‌ ಪರಿಶೀಲಿಸುವಂತೆ ನಿಯೋಗ ಮನವಿ ಮಾಡಿದೆ. ಸೋಮವಾರ ಬೆಳಗ್ಗೆ ಮಂಡಳಿ ಅಧ್ಯಕ್ಷ ಕೆ.ಸಿ.ಎನ್‌. ಚಂದ್ರಶೇಖರ್‌ ನೇತೃತ್ವದಲ್ಲಿ ತೆರಳಿದ ನಿಯೋಗವು ಕೃಷ್ಣ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿ, ಚರ್ಚೆ ನಡೆಸಿತು.

ನಿಯೋಗದಲ್ಲಿದ್ದ ಡಾ. ವಿಜಯಾ, ಟಿ.ಎಸ್‌. ನಾಗಾಭರಣ, ಗಿರೀಶ್‌ ಕಾಸರವಳ್ಳಿ, ಸಾ.ರಾ. ಗೋವಿಂದು, ಥಾಮಸ್‌ ಡಿಸೋಜಾ, ಮಾರುತಿ, ಕೆ.ವಿ. ಗುಪ್ತಾ, ಶಿವರಾಂ ಮೊದಲಾದವರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ನಿಗದಿತ ವೇಳಾಪಟ್ಟಿಯಂತೆ ಬೆಂಗಳೂರಿನಲ್ಲೇ ನಡೆಸಬೇಕೆಂದು ಒತ್ತಾಯಿಸಿದರು.

ಚಿತ್ರೋತ್ಸವವು ಹೊರಗಿನವರಿಗೆ ಒಂದು ಮನರಂಜನಾ ಉತ್ಸವವಾಗಿ ಕಾಣಬಹುದು. ಆದರೆ, ವಾಸ್ತವವಾಗಿ ಅದು ಚಿತ್ರೋದ್ಯಮಿಗಳಿಗೆ ಒಂದು ಶಿಕ್ಷಣ - ಅಧ್ಯಯನವಾಗಿದೆ. ಈಗಾಗಲೇ ಬಹುತೇಕ ಪೂರ್ವ ಸಿದ್ಧತೆ ಕಾರ್ಯ ಮುಗಿದಿರುವ ಕಾರಣ ಚಿತ್ರೋತ್ಸವ ರದ್ದು ಮಾಡಬೇಡಿ ಎಂದು ಕೋರಿದರು.

ನಿಯೋಗದ ಮನವಿಯನ್ನು ಆಲಿಸಿದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು, ಪ್ರಸಕ್ತ ಪರಿಸ್ತಿತಿ ಅವಲೋಕಿಸಿ, ಕೇಂದ್ರ ಸರಕಾರದೊಂದಿಗೂ ಸಮಾಲೋಚಿಸಿ, ಅಂತಿಮ ನಿರ್ಧಾರ ಕೈಗೊಳ್ಳುವ ಭರವಸೆಯನ್ನು ನೀಡಿದರು.

(ಇನ್‌ಫೋ ವಾರ್ತೆ)

English summary
Film Festival is not entertainment but it is education for film industry : KCN chandru

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada