IIFA Awards 2024: 'ಕಾಟೇರ' ಹಾಗೂ 'SSE- side- A'ಗೆ ಸಿಂಹಪಾಲು
ಮತ್ತೊಮ್ಮೆ ಐಫಾ(IIFA) ಉತ್ಸವ ರಂಗೇರಿದೆ. ದೂರದ ದುಬೈನಲ್ಲಿ ಅದ್ಧೂರಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದೆ. 3 ದಿನಗಳ ಕಾಲ ಅಬುದಾಬಿಯಲ್ಲಿ IIFA ಅವಾರ್ಡ್ಸ್ ಸೆರಮನಿ ನಡೆಯುತ್ತಿದೆ. ಮೊದಲ ದಿನವೇ ಕನ್ನಡ ಸಿನಿಮಾಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಹಲವು ವರ್ಷಗಳಿಂದ ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್(IIFA ) ಕಾರ್ಯಕ್ರಮ ನಡೆಯುತ್ತಾ ಬರುತ್ತಿದೆ. ಬಾಲಿವುಡ್ ಸೇರಿ ದಕ್ಷಿಣದ 4 ಭಾಷೆಗಳಲ್ಲಿ ಸಿನಿಮಾಗಳಿಗೆ ಆಯಾ ವರ್ಷ ಅತ್ಯುತ್ತಮ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. 2023ರ ವರ್ಷದಲ್ಲಿ ಬಿಡುಗಡೆಯಾಗಿದ್ದ ಸಿನಿಮಾಗಳನ್ನು IIFA Awards 2024ಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಕಳೆದ ವರ್ಷ ತಕ್ಕಮಟ್ಟಿಗೆ ಕನ್ನಡ ಸಿನಿಮಾಗಳು ಸದ್ದು ಮಾಡಿದ್ದವು. ವರ್ಷದ ಕೊನೆಗೆ ಬಂದಿದ್ದ 'ಕಾಟೇರ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಇನ್ನು ರಕ್ಷಿತ್ ಶೆಟ್ಟಿ ನಟನೆಯ 'ಸಪ್ತಸಾಗರದಾಚೆ ಎಲ್ಲೋ- A' ಸಿನಿಮಾ ಕೂಡ ಪ್ರೇಕ್ಷಕರ ಮನಗೆದ್ದಿತ್ತು. ಈ ಎರಡೂ ಸಿನಿಮಾಗಳು ಈ ಬಾರಿ ಐಫಾ ಉತ್ಸವದಲ್ಲಿ ಸದ್ದು ಮಾಡಿವೆ.
ತರುಣ್ ಸುಧೀರ್ ನಿರ್ದೇನದ 'ಕಾಟೇರ' ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದರು. ದರ್ಶನ್ ಜೊತೆ ಆರಾಧನಾ ನಾಯಕಿಯಾಗಿ ನಟಿಸಿದ್ದರು. ಚಿತ್ರ ಅಂದಾಜು 100 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿದೆ. ಚಿತ್ರದ ನಿರ್ದೇಶನಕ್ಕಾಗಿ ತರುಣ್ ಸುಧೀರ್ ಐಫಾ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಪತ್ನಿ ಸೋನಲ್ ಜೊತೆ ತರುನ್ ಹೆಜ್ಜೆ ಹಾಕಿದ್ದಾರೆ. ಬೆಸ್ಟ್ ಡೆಬ್ಯೂ ಪ್ರಶಸ್ತಿ ಆರಾಧನಾಗೆ ಸಿಕ್ಕಿದೆ.
'ಕಾಟೇರ' ಚಿತ್ರದಲ್ಲಿ ತೆಲುಗು ನಟ ಜಗಪತಿ ಬಾಬು ವಿಲನ್ ಆಗಿ ಅಬ್ಬರಿಸಿದ್ದರು. ಅತ್ಯುತ್ತಮ ಖಳನಟ ಐಫಾ ಪ್ರಶಸ್ತಿ ಅವರಿಗೆ ಧಕ್ಕಿದೆ. ಸುಮಲತಾ ಅಂಬರೀಶ್ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ವಿ. ಹರಿಕೃಷ್ಣ ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದ್ದಾರೆ. ಇದೇ ಚಿತ್ರಕ್ಕಾಗಿ ಶ್ರುತಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸಿಕ್ಕಿದೆ.
ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಟಿ ವಿಭಾಗಗಳಲ್ಲಿ 'ಸಪ್ತಸಾಗರದಾಚೆ ಎಲ್ಲೋ- A' ಚಿತ್ರಕ್ಕಾಗಿ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಪ್ರಶಸ್ತಿ ಪಡೆದಿದ್ದಾರೆ. ಹೇಮಂತ್ ರಾವ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಎರಡು ಭಾಗಗಳಾಗಿ ಈ ಸಿನಿಮಾ ತೆರೆಗೆ ಬಂದಿತ್ತು.
'ಸಪ್ತಸಾಗರದಾಚೆ ಎಲ್ಲೋ- A' ಚಿತ್ರದ ನಟನೆಗಾಗಿ ಗೋಪಾಲಕೃಷ್ಣ ದೇಶಪಾಂಡೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ಗೀತ ಸಾಹಿತ್ಯಕ್ಕಾಗಿ ಧನಂಜಯ ರಾಜನ್ ಪ್ರಶಸ್ತಿ ಪಡೆದು ಖುಷಿಪಟ್ಟಿದ್ದಾರೆ. ಇದೇ ಚಿತ್ರದ 'ಕಡಲನು' ಹಾಡು ಹಾಡಿದ ಶ್ರೀಲಕ್ಷ್ಮಿ ಬೆಲ್ಮಣು ಅವರಿಗೆ ಅತ್ಯುತ್ತಮ ಗಾಯಕಿ ಪ್ರಶಸ್ತಿ ಲಭಿಸಿದೆ.
ಇನ್ನ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ 'ಔಟ್ ಸ್ಟ್ಯಾಂಡಿಂಗ್ ಎಕ್ಸಲೆನ್ಸ್ ಇನ್ ಕನ್ನಡ ಸಿನಿಮಾ' ಗೌರವ ಸಿಕ್ಕಿದೆ.


Click it and Unblock the Notifications











