»   » (ಶಂಕರ್ ನೆನಪು) 'ಆ್ಯಕ್ಸಿಡೆಂಟ್' ಚಿತ್ರಕ್ಕೆ ಇಳಯರಾಜಾ ಕೊಟ್ಟ ಗೌರವವಿದು!

(ಶಂಕರ್ ನೆನಪು) 'ಆ್ಯಕ್ಸಿಡೆಂಟ್' ಚಿತ್ರಕ್ಕೆ ಇಳಯರಾಜಾ ಕೊಟ್ಟ ಗೌರವವಿದು!

Posted By:
Subscribe to Filmibeat Kannada

ಕಳೆದ ವರ್ಷ ಸೆ. 30ರಂದು ಶಂಕರ್ ನಾಗ್ ನಮ್ಮನ್ನು ಅಗಲಿ ಭರ್ತಿ 25 ವರ್ಷ ತುಂಬುವ ಹೊತ್ತಿಗೆ ಅವರ ಸಂಸ್ಮರಣೆಗಾಗಿ ಅವರ ಅನೇಕ ಒಡನಾಡಿಗಳನ್ನು ಮಾತನಾಡಿಸಿದಾಗ ಈ ಒಂದು ಸ್ವಾರಸ್ಯಕರ ವಿಚಾರ ಹೊರಬಂದಿತ್ತು.

ಅದನ್ನು ಹೇಳಿದ್ದು ವರ್ಷಾನುಗಟ್ಟಲೆ ಶಂಕರ್ ಜತೆಗೆ ಆತ್ಮೀಯ ಒಡನಾಟ ಹೊಂದಿದ್ದ, ಅವರ 'ಆ್ಯಕ್ಸಿಡೆಂಟ್' ಚಿತ್ರಕ್ಕೆ ಅವರಿಗೆ ಸಹಾಯಕರಾಗಿ ದುಡಿದಿದ್ದ, ದಿವಂಗತ ಹಾಸ್ಯ ನಟ ಸಂಕೇತ್ ಕಾಶಿ. ಅವರು ಅಂದು ಹಂಚಿಕೊಂಡಿದ್ದ ಆ ಸ್ವಾರಸ್ಯಕರ ವಿಚಾರ ಈ ವರ್ಷದ ಶಂಕರ್ ಅವರ ಸ್ಮರಣೆಯ ವೇಳೆಯಲ್ಲಿ.. ನಿಮಗಾಗಿ.

Ilaiyaraaja's gratitude towards Shankar Nag durin 'Accident' cinema making

ಅದು 1984ರ ಕಾಲ. ಶಂಕರ್ ನಾಗ್ ಅವರಾಗ 'ಆ್ಯಕ್ಸಿಡೆಂಟ್' ಚಿತ್ರದ ತಯಾರಿಯಲ್ಲಿದ್ದರು. ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದು ಚಿತ್ರದ ಹಿನ್ನೆಲೆ ಸಂಗೀತದ ಕೆಲಸ ಬಾಕಿ ಉಳಿದಿತ್ತು. ಆ ಚಿತ್ರಕ್ಕೆ ಸಂಗೀತ ನೀಡಿದ್ದು ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ. ಹಾಗಾಗಿ, ಚೆನ್ನೈನಲ್ಲಿರುವ ಇಳಯ ರಾಜಾ ಅವರ ಸ್ಟುಡಿಯೋಗೆ ಚಿತ್ರ ರೀಲುಗಳನ್ನು ಶಂಕರ್ ಕೊಂಡೊಯ್ದರು.

ಆದರೆ, ಶಂಕರ್ ಅವರಿಗೆ ಅಲ್ಲೊಂದು ಸಮಸ್ಯೆ ಎದುರಾಗಿತ್ತು. ಆಗಿನ ಕಾಲದಲ್ಲಿ, ಇಳಯರಾಜಾ ಅವರಂತೂ ಬ್ಯುಸಿಯೋ ಬ್ಯುಸಿ. ಕೈ ತುಂಬಾ ಕೆಲಸ ಅವರಿಗೆ. ಸರಿಯಾಗಿ ಊಟ, ತಿಂಡಿ ಮಾಡಲೂ ಸಮಯವಿಲ್ಲ ಎನ್ನುವಂಥ ದಿನಗಳು ಅವರ ಪಾಲಿಗೆ. ತಮಿಳು, ತೆಲುಗು ಚಿತ್ರಗಳ ಸಾಲು ಸಾಲು ಚಿತ್ರಗಳು ಅವರ ರೀರೆಕಾರ್ಡಿಂಗ್, ಹಿನ್ನೆಲೆ ಸಂಗೀತಕ್ಕಾಗಿ ಕಾದಿದ್ದವು. ಹೀಗೆ, ಸಿಕ್ಕಾಪಟ್ಟೆ ಕಮಿಟ್ ಮೆಂಟ್ ಗಳು ಇದ್ದಿದ್ದರಿಂದ ದಿನಕ್ಕೆ ಮೂರು ಶಿಫ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದರು ಅವರು.

Ilaiyaraaja's gratitude towards Shankar Nag durin 'Accident' cinema making

ಅದರ ಮಧ್ಯೆ, ಶಂಕರ್ ಅವರ ಆ್ಯಕ್ಸಿಡೆಂಟ್ ಚಿತ್ರಕ್ಕೆ ಸಂಗೀತ ನೀಡಬೇಕೆಂದರೆ, ಸಾಧ್ಯವೇ ಇರುತ್ತಿರಲಿಲ್ಲ. ಅವರ ಸಂಗೀತ ಸ್ಪರ್ಶಕ್ಕಾಗಿ ಶಂಕರ್, ಕನಿಷ್ಟ ಒಂದೂವರೆ ತಿಂಗಳಾದರೂ ಕಾಯಬೇಕಿತ್ತು. ಆದರೆ, ಇಲ್ಲಿ ಕರ್ನಾಟಕದಲ್ಲಿ ಚಿತ್ರದ ಬಿಡುಗಡೆ ಡೇಟ್ಸ್ ಫಿಕ್ಸ್ ಆಗಿದ್ದರಿಂದ ಶಂಕರ್ ಅವರಿಗೆ ಚಿತ್ರದ ಹಿನ್ನೆಲೆ ಸಂಗೀತದ ಕೆಲಸವನ್ನು ಬೇಗನೇ ಮುಗಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದರು.

ಆದರೂ, ಶಂಕರ್ ಅವರು ಇಳಯರಾಜಾ ಅವರ ಬಳಿ ಚಿತ್ರವನ್ನು ನಿಮ್ಮ ಬಳಿ ಕೊಟ್ಟು ಹೋಗುತ್ತೇನೆ. ಹಿನ್ನೆಲೆ ಸಂಗೀತದ ಕೆಲಸವನ್ನು ಬೇಗನೇ ಮಾಡಿಕೊಡಿ ಎಂದು ಕೇಳಿಕೊಂಡರು. ಆದರೆ, ಶಂಕರ್ ಅವರ ಅನಿವಾರ್ಯತೆ ಅರ್ಥ ಮಾಡಿಕೊಂಡ ಇಳಯರಾಜಾ ಅವರು, ''ಒಂದು ರಾತ್ರಿ 9ರಿಂದ ಬೆಳಗ್ಗೆ 9ರವರೆಗೆ ಸತತವಾಗಿ ಕೆಲಸ ಮಾಡಿ 'ಆ್ಯಕ್ಸಿಡೆಂಟ್' ಚಿತ್ರದ ಕೆಲಸ ಮುಗಿಸೋಣ'' ಎಂದು ವಾಗ್ದಾನ ಮಾಡಿದರು.

Ilaiyaraaja's gratitude towards Shankar Nag durin 'Accident' cinema making

ಹಾಗೆ ಹೇಳಿದ ಮರುದಿನ ರಾತ್ರಿಯೇ ಚಿತ್ರದ ಸಂಗೀತ ಕಾರ್ಯ ಶುರುವಾಯಿತು. ಇಡೀ ಚಿತ್ರವನ್ನು ಒಮ್ಮೆ ವೀಕ್ಷಿಸಿದ ಇಳಯರಾಜಾ, ವಿವಿಧ ದೃಶ್ಯಗಳು, ಸನ್ನಿವೇಶಗಳು, ಭಾವಗಳಿಗೆ ತಕ್ಕಂತೆ ಸಂಗೀತ ಸಂಯೋಜಿಸಿ ತಮ್ಮ ಶಿಷ್ಯ ವೃಂದದ ಸಹಕಾರದಿಂದ ರಾತ್ರಿಯಿಡೀ ಕೆಲಸ ಮಾಡಿ ಹಿನ್ನೆಲೆ ಸಂಗೀತ ರೆಕಾರ್ಡಿಂಗ್ ಮುಗಿಸಿಕೊಟ್ಟರು.

ಈಗ, ಶಂಕರ್ ನಾಗ್ ಹೊಸ ಸಂಕಷ್ಟಕ್ಕೆ ಸಿಲುಕಿದರು. ಅದಕ್ಕೆ ಕಾರಣ, ಇಳಯರಾಜಾ ಅವರಿಗೆ ಎಷ್ಟು ಸಂಭಾವನೆ ಕೊಡಬೇಕೆಂಬ ದುಗುಡ! ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೇ ತಮ್ಮ ಮೇಲಿನ ಅಭಿಮಾನಕ್ಕೆ ತಮ್ಮ ಚಿತ್ರದ ಕೆಲಸ ಮಾಡಿಕೊಟ್ಟ ಅವರಿಗೆ ಚಿತ್ರಕ್ಕಾಗಿ ಅವರು ಮಾತಾಡಿದ್ದಕ್ಕಿಂತ ಹೆಚ್ಚಿನ ಸಂಭಾವನೆ ನೀಡುವ ಮೂಲಕವೇ ಅವರ ಋಣ ತೀರಿಸಬೇಕೆಂಬ ಅಭಿಲಾಷೆ ಹೆಚ್ಚಾಗಿ ಕಾಡತೊಡಗಿತು.

ಆದರೆ, ಎಷ್ಟು ಕೊಡುವುದು? ನಾವು ಕೊಡುವ ಮೊತ್ತ ಅವರಿಗೆ ಸರಿ ಅನ್ನಿಸುತ್ತೋ ಇಲ್ಲವೋ ? ಎಷ್ಟು ಕೊಡಬೇಕೆಂದು ಕೇಳಿದರೆ ಅವರು ಏನಂದುಕೊಳ್ಳುತ್ತಾರೋ? ಎಂಬಿತ್ಯಾದಿ ವಿಚಾರಗಳು ಶಂಕರ್ ಅವರನ್ನು ಕೊರೆಯಲಾರಂಭಿಸಿದವು.

Ilaiyaraaja's gratitude towards Shankar Nag durin 'Accident' cinema making

ಕೊನೆಗೊಂದು ನಿರ್ಧಾರಕ್ಕೆ ಬಂದ ಶಂಕರ್, ತಮ್ಮ ಸಹಿ ಮಾಡಿದ ಖಾಲಿ ಚೆಕ್ ಅನ್ನು ಒಂದು ಕವರ್ ನಲ್ಲಿ ಇರಿಸಿ, ಅದನ್ನು ಇಳಯರಾಜಾ ಅವರಿಗೆ ಕೊಟ್ಟು ಸುಮ್ಮನೇ ಬಂದುಬಿಟ್ಟರು.

ಹಾಗೆ, ಬೆಂಗಳೂರಿಗೆ ಬಂದ ನಂತರ 'ಆ್ಯಕ್ಸಿಡೆಂಟ್' ಚಿತ್ರದ ಬಿಡುಗಡೆಯ ಮುಳುಗಿ ಹೋದ ಶಂಕರ್ ಅವರಿಗೆ ಸುಮಾರು 10 ದಿನಗಳಲ್ಲೇ ಒಂದು ರಿಜಿಸ್ಟರ್ ಪೋಸ್ಟ್ ಬಂತು. ಆ ಪೋಸ್ಟ್ ಅನ್ನು ಗಮನಿಸಿದಾಗ ಅದು ಇಳಯರಾಜಾ ಅವರಿಂದ ಬಂದ ಪೋಸ್ಟ್. ಸರಿ, ಅದನ್ನು ಓಪ
ನ್ ಮಾಡಿದ ಶಂಕರ್ ನಾಗ್ ಅವರಿಗೆ ಅಚ್ಚರಿಯೊಂದು ಕಾದಿತ್ತು. ಅವರು ಹತ್ತು ದಿನಗಳ ಹಿಂದೆ ತಮಗೆ ಅವರಿಗೆ ನೀಡಿಲಾಗಿದ್ದ ಬ್ಲಾಂಕ್ ಚೆಕ್ ಅನ್ನು ವಾಪಸ್ ಕಳುಹಿಸಿದ್ದ ಇಳಯರಾಜಾ, ಒಂದು ಚಿಕ್ಕ ಸಂದೇಶವನ್ನು ಕೂಡಾ ಕಳುಹಿಸಿದ್ದರು.

ಅದರಲ್ಲಿ ಹೀಗೆ ಬರೆಯಲಾಗಿತ್ತು. 'Thanks for giving me a wonderful opportunity for giving music to such a beautiful movie' ಎಂದು ಬರೆಯಲಾಗಿತ್ತು. ಆ ಮೂಲಕ, ಅವರು ಚಿತ್ರಕ್ಕೆ ತಾವು ತೆಗೆದುಕೊಳ್ಳಬೇಕಾಗಿದ್ದ ಸಂಭಾವನೆಯನ್ನೂ ಕೈಬಿಟ್ಟಿದ್ದರು. ಅಷ್ಟರ ಮಟ್ಟಿಗೆ, ಆ್ಯಕ್ಸಿಡೆಂಟ್ ಚಿತ್ರದ ಸಂದೇಶ ಅವರ ಮೇಲೆ ಮೋಡಿ ಮಾಡಿತ್ತು.

ಇದಿಷ್ಟನ್ನೂ ಹೇಳಿದ್ದ ಕಾಶಿ, ಶಂಕರ್ ಕ್ರಿಯಾಶೀಲತೆಗೆ ಒಬ್ಬ ಸುಸಂಸ್ಕೃತ ತಂತ್ರಜ್ಞರೊಬ್ಬರು ಸಲ್ಲಿಸಿದ ಧನ್ಯತಾ ಭಾವ ಹೀಗಿತ್ತು ಎಂದಿದ್ದರು.

English summary
After watching Shankar Nag's 'Accident' movie, music maestro Ilaiyaraaja did not accepted the remuneration. He appreciated Shankar Nag's work in the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada