»   » ಇಳಯರಾಜಾಗೆ ಏನಾಗಿದೆ?

ಇಳಯರಾಜಾಗೆ ಏನಾಗಿದೆ?

Posted By: Super
Subscribe to Filmibeat Kannada

ಒಂದು ಕಾಲದಲ್ಲಿ ನಿಂತ ನೀರಾಗಿದ್ದ ತಮಿಳು ಚಿತ್ರ ಸಂಗೀತಕ್ಕೆ ನವ ಚೈತನ್ಯ ನೀಡಿದವರು ಇಳಯರಾಜಾ. ಸಿನಿಮಾ ಸಂಗೀತದಲ್ಲಿ ಜನಪದವನ್ನು ಮೊದಲ ಬಾರಿಗೆ ಪರಿಚಯಿಸಿದವರು ಅವರೇ. ಆದರೆ ಈಗ ಇಳಯರಾಜಾಗೆ ಮಾರ್ಕೆಟ್‌ ಇಲ್ಲ ಅನ್ನುತ್ತಿವೆ ಕ್ಯಾಸೆಟ್‌ ಸಂಸ್ಥೆಗಳು. ಯಾಕೆಂದರೆ ತಮಿಳಿನಲ್ಲಿ ಈಗ ರೆಹಮಾನ್‌ ಯುಗ ನಡೆಯುತ್ತಿದೆ. ರೆಹಮಾನ್‌ಗೆ ಕೈಗೆ ಸಿಗದೇ ಇದ್ದರೆ ದೇವಾಗೆ ಮೊರೆ ಹೋಗುತ್ತಾರೆ ಅಲ್ಲಿನ ನಿರ್ಮಾಪಕರು. ಈ ಬೆಳವಣಿಗೆಯಿಂದಾಗಿ ಇಳೆಯರಾಜಾ ಕಂಗಾಲಾಗಿದ್ದಾರೆ, ಹತಾಶರಾಗಿದ್ದಾರೆ ಎನ್ನುತ್ತಿವೆ ತಮಿಳು ಪತ್ರಿಕೆಗಳು.

ಈ ಸುದ್ದಿಗೆ ಪೂರಕವಾಗಿಯೇ ಇತ್ತು ಮೊನ್ನೆ ಇಳೆಯರಾಜಾ ಅವರ ನಡೆನುಡಿ. ಉಸಿರೇ ಚಿತ್ರದ ಕ್ಯಾಸೆಟ್‌ ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತರ ಮುಂದೆ ಕುಳಿತ ಇಳೆಯರಾಜಾ ಮಾತಾಡಿದ್ದು ಬರೇ ಉಲ್ಟಾ . ಅದು ಕೆಲವರ ಕಿವಿಗೆ ಫಿಲಾಸಫಿಯಂತೆ ಕೇಳಿಸಿರಬಹುದು. ಆದರೆ ಇಳೆಯ ರಾಜಾ ವಿನಾಕಾರಣ ಅಪ್‌ಸೆಟ್‌ ಆಗಿದ್ದಂತೂ ಎದ್ದು ಕಾಣುತ್ತಿತ್ತು. ಪ್ರಶ್ನೋತ್ತರದ ಸ್ಯಾಂಪಲ್‌ ಇಲ್ಲಿದೆ.

ಪ್ರ: ಸಿನಿಮಾ ಸಂಗೀತದಲ್ಲಿ ಇತ್ತೀಚೆಗೆ ಬಂದಿರುವ ಟ್ರೆಂಡ್‌ ಬಗ್ಗೆ ನಿಮಗೇನನಿಸುತ್ತದೆ ?

ಉ: ಟ್ರೆಂಡ್‌... ಹಾಗೆಂದರೇನು ?

ಪ್ರ: ಎಂಟೀವಿ, ವೀಟಿವಿಯಲ್ಲಿ ಪ್ರಸಾರವಾಗುತ್ತಿರುವ ಹಾಡು ಕುಣಿತ...

ಉ: ನನಗೇನನಿಸುತ್ತದೆ ಅನ್ನೋದು ಮುಖ್ಯ ಅಲ್ಲ. ನಿಮಗೇನನಿಸುತ್ತದೆ ಅದನ್ನು ಹೇಳಿ.

ಪ್ರ: ಹಾಗಲ್ಲ ನೀವೊಬ್ಬ ಖ್ಯಾತ ಸಂಗೀತ ನಿರ್ದೇಶಕರು. ಹಾಗಾಗಿ ನಿಮ್ಮ ಮಾತಿಗೆ ಬೆಲೆಯಿರುತ್ತದೆ.

ಉ: ನಾನು ಖ್ಯಾತ ಅಂದವರ್ಯಾರು ? ಇಲ್ಲಿ ನಾನೇನೂ ಅಲ್ಲ . ತ್ಯಾಗರಾಜ, ಪುರಂದರ , ಮೊಜಾರ್ಟ್‌ ಇವರೆಲ್ಲ ದೊಡ್ಡವರು. ನಾನು ಸಣ್ಣ ಮನುಷ್ಯ.

ಪ್ರ: ಅದಿರಲಿ ನೀವು ಬದಲಾಗುತ್ತಿರುವ ಸಂಗೀತದ ಅಭಿರುಚಿಯ ಬಗ್ಗೆ ಏನೂ ಹೇಳೋದಕ್ಕೆ ಇಷ್ಟಪಡುವುದಿಲ್ಲವೇ ?

ಉ: ಆಗ್ಲೇ ಹೇಳಿದೆನಲ್ಲ. ನನ್ನ ಅಭಿಪ್ರಾಯವನ್ನು ಕಟ್ಟಿಕೊಂಡು ಏನಾಗಬೇಕು . ಸಂಗೀತ ಕೇಳೋರು ನೀವು. ನೀವು ಹೇಳಿ.

ಪ್ರ: ಆದರೆ ಯುವ ಜನಾಂಗಕ್ಕೆ ನಿಮ್ಮ ಅಭಿಪ್ರಾಯ ಮುಖ್ಯವಾಗುತ್ತದೆ.

ಉ: ನನ್ನ ಮಟ್ಟಿಗೆ ಸಂಗೀತದಲ್ಲಿ ಒಳ್ಳೆಯದು ಕೆಟ್ಟದು ಅಂತ ಯಾವುದೂ ಇಲ್ಲ. ಕಾಗೆ ಕೂಗುವುದು ನಿಮ್ಮ ಕಿವಿಗೆ ಸಂಗೀತದ ಹಾಗೆ ಕೇಳಿಸಿದರೆ ಫೈನ್‌. ಅದೇ ಥರ ಸಂಗೀತ ಸ್ವರಗಳು ಚೆನ್ನಾಗಿ ಕೇಳಿಸಿದರೆ ಅದೂ ಫೈನ್‌. ನಾನು ಒಬ್ಬ ಒಳಗಿನವನಾಗಿ ಮಾತಾಡಬೇಕು. ಹಾಗಾಗಿ ಕಾಮೆಂಟ್‌ ಪಾಸ್‌ ಮಾಡುವುದಿಲ್ಲ. ನನ್ನ ಮಟ್ಟಿಗೆ ಇದು ಜೀವನೋಪಾಯ. ನಾನು ಖ್ಯಾತ ಅಂದುಕೊಂಡರೆ ನಾಳೆ ಮನೆಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ.

ಪ್ರ : ರಿಮೇಕ್‌ ಚಿತ್ರ ಮಾಡುವ ಹೊತ್ತಿಗೆ ಮೂಲ ತಮಿಳು ಚಿತ್ರದ ಟ್ರಾಕನ್ನೆ ಕನ್ನಡದಲ್ಲೂ ಬಳಸುತ್ತಾರೆ ಅನ್ನುವ ಸುದ್ದಿಯಿದೆ. ಇದು ಒಳ್ಳೇ ಬೆಳವಣಿಗೆಯೇ ?

ಉ: ಅದನ್ನು ನಿರ್ಧಾರ ಮಾಡಬೇಕಾದವರು ನೀವು. ನನ್ನ ಕೆಲಸವೆಂದರೆ ಸಂಗೀತ ನೀಡುವುದು. ಅದಕ್ಕೆ ಭಾಷೆಯ ಗಡಿಯಿಲ್ಲ . ಅದನ್ನು ಕನ್ನಡಕ್ಕೆ ತಂದರೆ ನನಗೇನೂ ಸಂಬಂಧವಿಲ್ಲ . ನಾನೇ ಸಂಗೀತ. ಸಂಗೀತವೇ ನಾನು.

ಪ್ರ : ಆ ಕಾರಣಕ್ಕೆ ನಿಮ್ಮ ಮೇಲೊಂದು ಸಾಮಾಜಿಕ ಜವಾಬ್ದಾರಿ ಇದೆ ಎಂದು ಅನಿಸುವುದಿಲ್ಲವೇ ?

ಉ: ನನ್ನ ಮೇಲೆ ಯಾವ ಜವಾಬ್ದಾರಿಯೂ ಇಲ್ಲ . ನನಗೇನೂ ಗೊತ್ತಿಲ್ಲ. ಸಂಗೀತವೂ ಗೊತ್ತಿಲ್ಲ.

ಪ್ರ : ಇದನ್ನು ಜೋಕ್‌ ಎಂದು ಪರಿಗಣಿಸಬಹುದೇ ?

ಉ: ಜೋಕ್‌ ಅಲ್ಲ. ಸೀರಿಯಸ್‌ ಆಗಿ ಹೇಳುತ್ತಿದ್ದೇನೆ. ಸಂಗೀತವೂ ಗೊತ್ತಿಲ್ಲ.

ಪ್ರ: ಈಗಷ್ಟೇ ಹೇಳಿದಿರಿ. ನೀವೇ ಸಂಗೀತ ಅಂತ...

ಉ: ಅದೂ ಸರಿ, ಇದೂ ಸರಿ. ಇವೆರಡೂ ನೀವು ನೋಡುವ ದೃಷ್ಟಿಕೋನದ ಮೇಲೆ ನಿಂತಿದೆ.

ಪ್ರ: ನೀವು ಇಳಯರಾಜಾ ಹೌದಲ್ವೇ ?

ಉ: ಇದು ಒಳ್ಳೆ ಪ್ರಶ್ನೆ. ನಾನು ಇಳಯ ರಾಜಾ ಅಷ್ಟೇ...

ಇಳಯರಾಜಾ ಎದ್ದು ನಿಂತರು.

English summary
Music director Ileyaraja interview

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X