ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಸೋನು ಶ್ರೀನಿವಾಸ್ ಗೌಡ ಬಿಡುಗಡೆ
ಅಕ್ರಮವಾಗಿ ಮಗು ದತ್ತು ಪಡೆದ ಆರೋಪದಲ್ಲಿ ಬಂಧನವಾಗಿದ್ದ ಬಿಗ್‌ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಜೈಲಿನಿಂದ ಹೊರ ಬಂದಿದ್ದಾರೆ. 3 ದಿನಗಳ ಹಿಂದೆ ಇಬ್ಬರ ಶ್ಯೂರಿಟಿ ಹಾಗೂ 1 ಲಕ್ಷ ರೂಪಾಯಿ ಬಾಂಡ್ ಷರತ್ತಿನ ಆಧಾರದಲ್ಲಿ ಆಕೆಗೆ ಜಾಮೀನು ಸಿಕ್ಕಿತ್ತು. 11 ದಿನಗಳ ಬಳಿಕ ಇದೀಗ ಸೋನು ಶ್ರೀನಿವಾಸ್ ಗೌಡ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಆಗಿದ್ದಾರೆ.
ಮಾರ್ಚ್ 22ರಂದು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ ಅವರನ್ನು ವಶಕ್ಕೆ ಪಡೆದಿದ್ದರು. ವಿಚಾರಣೆಗಾಗಿ 3 ದಿನ ಪೊಲೀಸರ ವಶದಲ್ಲಿದ್ದ ಸೋನು ಗೌಡ ಅವರಿಗೆ ಬಳಿಕ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿತ್ತು. ಕಾನೂನಾತ್ಮಕವಾಗಿ ಮಗುವನ್ನು ದತ್ತು ಪಡೆಯದೇ ಈ ರೀತಿ ಮಾಡುವುದು ಅಪರಾಧ ಎಂದು ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ದೂರು ನೀಡಿದ್ದರು. ಆ ದೂರಿನ ಅನ್ವಯ ಸೋನು ವಾಸವಿದ್ದ ಅಪಾರ್ಟ್‌ಮೆಂಟ್‌ನಿಂದ ಆಕೆಯನ್ನು ಪೊಲೀಸರು ಬಂಧಿಸಿದ್ದರು.

ಸೋನು ಗೌಡ ಅಕ್ರಮವಾಗಿ ರಾಯಚೂರು ಮೂಲದ 8 ವರ್ಷದ ಮಗುವನ್ನು ತಮ್ಮೊಟ್ಟಿಗೆ ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದಾರೆ. ಪ್ರಚಾರಕ್ಕಾಗಿ ಆಕೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕೆಯನ್ನು ಬಳಸಿಕೊಂಡು ವೀಡಿಯೋಗಳನ್ನು ಮಾಡುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿತ್ತು. ಮಗು ದತ್ತು ಪಡೆದಿರುವುದಾಗಿ ಹೇಳಿಕೊಂಡಿದ್ದರು. ಆದರೆ ಕಾನೂನಾತ್ಮಕವಾಗಿ ಯಾವುದೇ ದತ್ತು ನಿಯಮ ಪಾಲಿಸಿರಲಿಲ್ಲ ಎಂದು ಆಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
3 ದಿನಗಳ ಹಿಂದೆಯೇ ಜಾಮೀನು ಸಿಕ್ಕರೂ ನಿನ್ನೆ ರಾತ್ರಿ 8.10ರ ಸುಮಾರಿಗೆ ಜಾಮೀನು ಅರ್ಜಿಯ ಷರತ್ತುಗಳನ್ನು ಪೂರೈಸಿ ಪೊಲೀಸರು ಸೋನು ಅವರನ್ನು ಬಿಡುಗಡೆ ಮಾಡಿದರು. ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಸೋನು ಶ್ರೀನಿವಾಸಗೌಡ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಹೊರಟರು. ಸದ್ಯ ಬಾಲಕಿಯನ್ನು ಪೋಷಕರಿಗೆ ಒಪ್ಪಿಸಲಾಗಿದೆ.
ಪೊಲೀಸರ ವಿಚಾರಣೆ ವೇಳೆ ನನಗೆ ಮಗು ದತ್ತು ಪಡೆಯುವ ಪ್ರಕ್ರಿಯೆ ಬಗ್ಗೆ ಸರಿಯಾಗಿ ಗೊತ್ತಿರಲಿಲ್ಲ. ಹಾಗಾಗಿ ತಪ್ಪಾಯಿತು ಎಂದು ಸೋನು ಶ್ರೀನಿವಾಸ್ ಗೌಡ ಹೇಳಿದ್ದಾಗೆ ವರದಿಯಾಗಿತ್ತು. "ನಮ್ಮ ಫ್ಲಾಟ್ ಬಳಿ ಕಟ್ಟಡ ನಿರ್ಮಾಣದ ಕೆಲಸಕ್ಕೆ ಬಂದಿದ್ದ ಕೂಲಿ ಕಾರ್ಮಿಕರ ಮಗಳು ಆಕೆ. ನಮ್ಮ ಮನೆಗೆ ಬಂದು ಆಟ ಆಡುತ್ತಾ ಬಹಳ ಆಪ್ತವಾಗಿಬಿಟ್ಟಿದ್ದಳು. ಆಕೆ ರಾಯಚೂರಿನ ತನ್ನ ಹುಟ್ಟೂರಿಗೆ ಹೋದಾಗಲೂ ನನ್ನ ಬಗ್ಗೆಯೇ ಮಾತನಾಡುತ್ತಿದ್ದಳಂತೆ. ಹುಷಾರಿಲ್ಲದಾಗ ಅಕ್ಕನಿಗೆ ಕರೆ ಮಾಡಿ ಹೇಳಿ ಎಂದು ಪೋಷಕರಿಗೆ ಹೇಳುತ್ತಿದ್ದಳಂತೆ. ಅದಕ್ಕೆ ಮಗುವನ್ನು ನಾನೇ ಸಾಕಿಕೊಳ್ಳುವುದಾಗಿ ಹೇಳಿ ಕರೆತಂದಿದ್ದೆ" ಎಂದಿದ್ದರು.
"ನಾನು ಆ ಹುಡುಗಿಯನ್ನು ದತ್ತು ತೆಗೆದುಕೊಳ್ಳಲು ಸಿದ್ಧತೆ ನಡೀತಿತ್ತು. ಮದುವೆಯಾಗದೇ ಮಗುವನ್ನು ನೋಡಿಕೊಂಡಿರಲು ಮನಸ್ಸು ಮಾಡಿದ್ದೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಬಂದ ಹಣವನ್ನು ಆಕೆಯ ಜೀವನ ರೂಪಿಸಲು ಬಳಸುತ್ತೀನಿ. ದತ್ತು ತೆಗೆದುಕೊಳ್ಳುವ ಪ್ರಕ್ರಿಯೆ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಗೊತ್ತಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಕಾನೂನಾತ್ಮಕವಾಗಿಯೇ ದತ್ತು ಪಡೆಯುತ್ತಿದ್ದೆ" ಎಂದು ಹೇಳಿದ್ದರು.

ಸೋನುಗೌಡ ಮಾತ್ರವಲ್ಲ ಬಾಲಕಿಯ ಪೋಷಕರನ್ನು ಕೂಡ ರಾಯಚೂರಿನಿಂದ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ "ಸೋನು ಶ್ರೀನಿವಾಸ್ ಗೌಡ ನಮಗೆ 50 ಸಾವಿರ ಆರ್ಥಿಕ ಸಹಾಯ ಮಾಡಿರುವುದು ನಿಜ. ಆದರೆ ಮಗು ದತ್ತು ಸಂಬಂಧ ಒಪ್ಪಂದ, ಮಾರಾಟ ಪ್ರಕ್ರಿಯೆಗಳು ಆಗಿಲ್ಲ. ಮಗಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುವುದಾಗಿ ಸೋನು ಹೇಳಿದ್ದರಿಂದ ಆಕೆ ಜೊತೆ ಕಳುಹಿಸಿಕೊಟ್ಟಿದ್ದೆವು, ಆಕೆ ಜೊತೆ ನಮ್ಮ ಮಗಳು ಸಂತೋಷದಿಂದ ಇದ್ದಳು. ಆಗಾಗ್ಗೆ ಮನೆಗೆ ಬಂದು ಮಗಳನ್ನು ನೋಡಿಕೊಂಡು ಹೋಗಲು ಸೋನು ಹೇಳಿದ್ದಳು. ಇದರ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ. ದತ್ತು ನೀಡುವ ಕಾನೂನು ಪ್ರಕ್ರಿಯೆ ಬಗ್ಗೆ ನಮಗೆ ತಿಳಿದಿರಲಿಲ್ಲ" ಎಂದು ತಿಳಿಸಿದ್ದರು.


Click it and Unblock the Notifications











