Ganesh: ಬಂಡೀಪುರ ಪರಿಸರ ಸೂಕ್ಷ್ಮ ವಲಯದಲ್ಲಿ ಕಟ್ಟಡ ಕಾಮಗಾರಿ: ಹೈಕೋರ್ಟ್‌ನಲ್ಲಿ ನಟ ಗಣೇಶ್‌ಗೆ ಹಿನ್ನಡೆ
ಪರಿಸರ ಸೂಕ್ಷ್ಮ ವಲಯದಲ್ಲಿ ಮನೆ ಕಟ್ಟುವ ವಿಚಾರದಲ್ಲಿ ನಟ ಗಣೇಶ್ ವಿವಾದ ಮಾಡಿಕೊಂಡಿದ್ದಾರೆ. ಬಂಡೀಪುರ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ವ್ಯಾಪ್ತಿಯಲ್ಲಿರುವ ತಮ್ಮ ಜಮೀನಿನಲ್ಲಿ ಗೋಲ್ಡನ್ ಸ್ಟಾರ್ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಿಯಮ ಉಲ್ಲಂಘಿಸಿ ಗಣೇಶ್ ಕಟ್ಟಡ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಇತ್ತೀಚೆಗೆ ಅರಣ್ಯ ಇಲಾಖೆ ಗಣೇಶ್‌ಗೆ ನೋಟಿಸ್ ನೀಡಿತ್ತು. ಈ ಸಂಬಂಧ ನಟ ಹೈಕೋರ್ಟ್ ಕದ ತಟ್ಟಿದ್ದರು.
ಪರಿಸರ ಸೂಕ್ಷ್ಮ ವಲಯದಲ್ಲಿ ತಾತ್ಕಾಲಿಕ ಮನೆ ನಿರ್ಮಾಣಕ್ಕೆ ಅನುಮತಿ ಪಡೆದು ಬೃಹತ್ ಕಟ್ಟಡ ಕಾಮಗಾರಿ ನಡೆಸುತ್ತಿರುವ ಆರೋಪವನ್ನು ಗಣೇಶ್ ಎದುರಿಸುತ್ತಿದ್ದಾರೆ. ಆದರೆ ಹೈಕೋರ್ಟ್ ಮೆಟ್ಟಿಲೇರಿದ್ದ ನಟನಿಗೆ ಹಿನ್ನಡೆಯಾಗಿದ್ದು ಕೋರ್ಟ್ ಗಣೇಶ್ ಮನವಿ ತಿರಸ್ಕರಿಸಿ ಪರಿಸರ ಸೂಕ್ಷ ವಲಯ ನಿರ್ವಹಣಾ ಸಮಿತಿ ಬಳಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ನಿರ್ದೇಶಿಸಿದೆ.

ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯಕ್ಕೆ ಒಳಪಡುವ ಜಕ್ಕಹಳ್ಳಿ ಗ್ರಾಮದ ಸರ್ವೇ ನಂ. 105ರಲ್ಲಿ 1.24 ಎಕರೆ ಜಮೀನು ಖರೀದಿಸಿರುವ ನಟ ಗಣೇಶ್ ಸ್ವಂತ ವಾಸಕ್ಕೆ ಮನೆ ಹಾಗೂ ಸುತ್ತಲೂ ಕಾಂಪೌಂಡ್ ನಿರ್ಮಿಸುವ ಕುರಿತು ಅನುಮತಿ ಕೇಳಿದ್ದರು.
ಬಂಡೀಪುರ ಪರಿಸರ ಸೂಕ್ಷ್ಮ ವಲಯ ನಿರ್ವಹಣಾ ಸಮಿತಿಯು ತಾತ್ಕಾಲಿಕ ವಾಸದ ಮನೆಗೆ ಅನುಮತಿ ನೀಡಿತ್ತು. ಆದರೆ, ಜೆಸಿಬಿ ಮೂಲಕ ದೊಡ್ಡ ಮಟ್ಟದ ಕೆಲಸ ನಡೆಯುತ್ತಿದ್ದರಿಂದ ಪರಿಸರವಾದಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ತಾತ್ಕಾಲಿಕ ಮನೆಗೆ ಅನುಮತಿ ಪಡೆದು ಬೃಹತ್ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದರು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆಯ ಅಧಿಕಾರಿಗಳು ಮುಚ್ಚಳಿಕೆ ಪತ್ರ, ಕಂದಾಯ ದಾಖಲಾತಿ ಸೇರಿದಂತೆ ಜಮೀನಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಏಳು ದಿನಗಳ ಒಳಗೆ ಸಲ್ಲಿಸುವಂತೆ ಕಳೆದ 14ರಂದು ಸೂಚಿಸಿದ್ದರು. ಅಲ್ಲಿವರೆಗೆ ಕೆಲಸ ನಿಲ್ಲಿಸುವಂತೆಯೂ ಹೇಳಿದ್ದರು.
ಅರಣ್ಯ ಇಲಾಖೆ ನೀಡಿದ್ದ ನೋಟಿಸ್ ಪ್ರಶ್ನಿಸಿ ಗಣೇಶ್ ಪರ ಹಿರಿಯ ವಕೀಲ ಸಿ.ಕೆ. ನಂದಕುಮಾರ್ ಅವರು ಹೈಕೋರ್ಟ್‌ನಲ್ಲಿ ತಮ್ಮ ವಾದ ಮಂಡಿಸಿದ್ದರು. "ನಟ ಗಣೇಶ್ ಅರಣ್ಯ ಪ್ರದೇಶದಲ್ಲಿ ಯಾವುದೇ ಕಟ್ಟಡ ನಿರ್ಮಿಸುತ್ತಿಲ್ಲ. 10 ಕಿಲೋ ಮೀಟರ್ ಪರಿಸರ ಸೂಕ್ಷ್ಮ ವಲಯದಲ್ಲಿ ಕಟ್ಟಡ ನಿರ್ಮಿಸಬಾರದು ಎನ್ನುವ ಸುಪ್ರೀಂ ಕೋರ್ಟ್‌ನ ಈ ಹಿಂದಿನ ತೀರ್ಪು ಈಗ ಮಾರ್ಪಾಟಾಗಿದೆ. ಭೂಮಿ ಸಮತಟ್ಟು ಮಾಡಿ ಸ್ಥಳಾಂತರ ಮಾಡಬಹುದಾದಾ ಸ್ಟೀಲ್ ಕಟ್ಟಡವನ್ನು ಅಲ್ಲಿ ನಿರ್ಮಿಸಲಾಗುತ್ತಿದೆ. ಹಾಗಾಗಿ ಅರಣ್ಯ ಇಲಾಖೆ ನೀಡಿರುವ ನೋಟಿಸ್‌ಗೆ ತಡೆಯಾಜ್ಞೆ ನೀಡಬೇಕು" ಎಂದು ಮನವಿ ಮಾಡಿದ್ದರು.
ವಕೀಲರಾದ ಸಿ.ಕೆ. ನಂದಕುಮಾರ್ ವಾದದ ಬಳಿಕ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠವು ಕಟ್ಟಡ ಕಾಮಗಾರಿಯ ಫೋಟೊಗಳನ್ನು ಪರಿಶೀಲಿಸಿದೆ. ಅರಣ್ಯ ಇಲಾಖೆಯ ನೋಟೀಸ್ಗೆ ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಗಣೇಶ್ ಅವರಿಗೆ ಸೂಚಿಸಿದೆ. ಅದೇ ರೀತಿ 4 ವಾರಗಳಲ್ಲಿ ವಿಚಾರಣೆ ಪ್ರಕ್ರಿಯೆ ಪೂರ್ಣಗೊಳಿಸಲು ಅರಣ್ಯ ಇಲಾಖೆಗೂ ಹೈಕೋರ್ಟ್ ಆದೇಶ ನೀಡಿದೆ. ಇದೀಗ ಚೆಂಡು ಅರಣ್ಯ ಇಲಾಖೆ ಅಂಗಳದಲ್ಲಿದೆ.


Click it and Unblock the Notifications











