ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
2022ರಲ್ಲಿ ಕೆ.ಜಿ.ಎಫ್ ಮತ್ತು ಕಾಂತಾರದ ದಿವ್ಯ ಗೆಲುವನ್ನ ಅತ್ಯಂತ ಸಂಭ್ರಮದಿಂದ ಆಚರಿಸಿದ್ದ ಕನ್ನಡ ಚಿತ್ರರಂಗ, 2024ರ ಮೊದಲ ಮೂರು ತಿಂಗಳಿನಲ್ಲಿಯೇ ಕಂಗಾಲಾಗಿದೆ. ಎಷ್ಟರ ಮಟ್ಟಿಗೆ ಅಂದರೆ, 2024ರಲ್ಲಿನ ಆರಂಭದ ಮೂರು ತಿಂಗಳಿನಲ್ಲಿ ಕನ್ನಡ ಚಿತ್ರರಂಗ ಸಾಧಿಸಿದ್ದೇನು, ಎಂಬ ಪ್ರಶ್ನೆಯನ್ನ.. ಬೇರೆ ಚಿತ್ರರಂಗದವರು ಬಂದು, ಯಾರಲ್ಲಿ ಆದರೂ ಕೇಳಿದರೆ, ಉತ್ತರಿಸಲು ಹೆಣಗಾಡಬೇಕಾಗುತ್ತದೆ. ಆ ವಾತಾವರಣ ಸದ್ಯಕ್ಕೆ ಇದೆ.
ಹೌದು. ನಿಮಗೆ ಗೊತ್ತಿರಲಿ.. 2024ರ ಈ ಮೂರುವರೆ ತಿಂಗಳಿನಲ್ಲಿ, ಇಲ್ಲಿಯವರೆಗೆ ಹತ್ ಹತ್ರ 80 ಸಿನಿಮಾ ಬಂದಿವೆ. ಆದರೆ ಈ 80ರಲ್ಲಿ ಗೆದ್ದಿದ್ದು ಎಷ್ಟು..? ಕನ್ನಡ ಚಿತ್ರರಂಗದ ಮತ್ತು ಕನ್ನಡ ಕಲಾಭಿಮಾನಿಗಳ ಗರ್ವ ಹೆಚ್ಚಿಸಿರುವ ಸಿನಿಮಾ ಎಷ್ಟು..? ಉತ್ತರ ಯಾರ ಬಳಿಯೂ ಇಲ್ಲ.

ನಿಜಾ.. ಈ ಮೂರುವರೆ ತಿಂಗಳಿನಲ್ಲಿ, ಹತ್ತಾರು ಪ್ರಯೋಗಗಳಾಗಿವೆ. ಕೆರೆಬೇಟೆ.. ಸೋಮು ಸೌಂಡ್ ಇಂಜಿನಿಯರ್.. ಶಾಖಾಹಾರಿ.. ಬ್ಲಿಂಕ್.. ಸೇರಿ ವಿಭಿನ್ನ ಕಥಾಹಂದರ ಸಿನಿಮಾಗಳು ಬಂದಿವೆ. ಆದರೆ, ಆ ಸಿನಿಮಾಗಳಿಗೆ ಖರ್ಚಾಗಿದ್ದೆಷ್ಟು.. ಆ ಸಿನಿಮಾಗಳು ಗಳಿಸಿದ್ದೆಷ್ಟು.. ಗುಣಿತಾಕ್ಷರದ ಹಾಡು ಗಾಂಧಿನಗರದಲ್ಲಿ ಕೇಳಿ ಬಂದೇ ಇಲ್ಲ. ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ ಮತ್ತು ಯುವರಾಜ್ ಕುಮಾರ್ ಅಭಿನಯದ ಚೊಚ್ಚಲ ಚಿತ್ರ ಯುವ ಹೊರತು ಪಡಿಸಿದರೆ ಗಲ್ಲಾಪೆಟ್ಟಿಗೆಯಲ್ಲಿ ಕಾಂಚಾಣದ ಸದ್ದು ಕೇಳಿಸಿಲ್ಲ. ಇನ್ನೂ ಬಾಕ್ಸಾಫೀಸ್ ಲೆಕ್ಕಾಚಾರ ಮತ್ತು ಉಳಿದ ವ್ಯಾಪಾರ-ವ್ಯವಹಾರ ಪರಿಗಣಿಸಿದರೆ, ವಿನಯ್ ರಾಜ್ ಕುಮಾರ್ ಅವರ ಒಂದು ಸರಳ ಪ್ರೇಮಕಥೆ ಲಾಭ ಮಾಡಿದ ಸಿನಿಮಾ ಅನ್ನುವ ಮಾತು ಗಾಂಧಿನಗರದಲ್ಲಿದೆ. ಇದೇ ಕೆಟಗರಿಗೆ ಅವತಾರ ಪುರುಷ ಭಾಗ ಎರಡು ಸೇರುತ್ತೆ ಎಂದು ಖುದ್ದು ಚಿತ್ರದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಲೆಕ್ಕ ಪತ್ರವನ್ನ ನೀಡಿಯೂ ಆಗಿದೆ

ಮಿಕ್ಕಂತೆ ತೆರೆಗೆ ಬಂದ ಅನೇಕ ಸಿನಿಮಾ ತೆರೆಗೆ ಬಂದಿದ್ದು, ಹೋಗಿದ್ದು ಗೊತ್ತಾಗಲಿಲ್ಲ. ಎಷ್ಟು ಪ್ರದರ್ಶನವನ್ನ ಕಂಡಿವೆ ಎಂಬ ಲೆಕ್ಕವೂ ಇಲ್ಲ. ಆದರೆ, ಅಕ್ಕ-ಪಕ್ಕದ ರಾಜ್ಯದಲ್ಲಿ ಈ ಸನ್ನಿವೇಶ ಇಲ್ಲ. ಮಲಯಾಳಂ ಚಿತ್ರರಂಗ ಈ ಮೂರುವರೆ ತಿಂಗಳಿನಲ್ಲಿ 600 ಕೋಟಿ ಪ್ಲಸ್ ಹಣವನ್ನ ದೋಚಿದೆ. ಇನ್ನೂ ಎರಡು ವರ್ಷದ ಹಿಂದೆ, ಬಾಲಿವುಡ್ ಕಥೆ ಖತಂ ಎಂದು ಅನೇಕರು ಅಂದುಕೊಂಡಿದ್ದರು. ಆದರೆ ಇಂದು ಬಾಲಿವುಡ್ ಮೈ ಕೊಡವಿ ಎದ್ದು ನಿಲ್ಲುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಕೈಗನ್ನಡಿ ಅನ್ನುವಂತೆ ಫೈಟರ್, ಕ್ರ್ಯೂ, ಶೈತಾನ್ ಸಿನಿಮಾಗಳು ಗೆದ್ದು ಬೀಗಿವೆ. ಭಾರತದಲ್ಲಿ ಫೈಟರ್ 200 ಕೋಟಿಯನ್ನ ಗಳಿಸಿದ್ದರೆ, ಶೈತಾನ್ ಹತ್ ಹತ್ರ 150 ಕೋಟಿಯನ್ನ ಭಾರತದಲ್ಲಿ ಗಳಿಸಿದೆ. ಮಹಿಳಾ ಪ್ರಧಾನ ಸಿನಿಮಾ ''ಕ್ರ್ಯೂ'' 25 ದಿನ ಪೂರೈಸಿದೆ. 80 ಕೋಟಿ ಹಣವನ್ನ ಕೊಳ್ಳೆ ಹೊಡೆದಿದೆ.

ಇನ್ನೂ.. ತೆಲುಗುದಲ್ಲಿ ಹನುಮಾನ್ ಸಿನಿಮಾ ಒಂದೇ 300 ಕೋಟಿಯನ್ನ ಗಳಿಸಿದೆ. ಮಹೇಶ್ ಬಾಬು, ನಾಗಾರ್ಜುನ ಅವರಂತಹ ಸ್ಟಾರ್ ಕಲಾವಿದರ ಸಿನಿಮಾಗಳು ಈ ಮೂರುವರೆ ತಿಂಗಳಿನಲ್ಲಿ ತೆರೆಗೆ ಬಂದಿವೆ. ತಮಿಳಿನಲ್ಲಿ ಧನುಷ್ ಅಭಿನಯದ ಚಿತ್ರ ಕೂಡ ತೆರೆಗೆ ಬಂದಿದೆ. ಈ ಚಿತ್ರಗಳ ಲಾಭ-ನಷ್ಟದ ಲೆಕ್ಕ ಬೇರೆಯಾದರೂ, ಆಂಧ್ರ ಮತ್ತು ತಮಿಳುನಾಡಿನಲ್ಲಿ ಸ್ಟಾರ್ ಪಟ್ಟಕ್ಕೇರಿದವರು ಕೈ ಕಟ್ಟಿ ಕೂತಿಲ್ಲ, ಪ್ಯಾನ್ ಇಂಡಿಯಾ ಎಂಬ ಮಾಯೆಯ ಬೆನ್ನು ಹತ್ತಿಲ್ಲ ಅನ್ನುವುದು ಗಮನಿಸಬೇಕಾದ ಅಂಶ.
ಆದರೆ, ನಮ್ಮಲ್ಲಿ ಸಂಪೂರ್ಣ ತದ್ವಿರುದ್ದ. ಯಶ್.. ಸುದೀಪ್.. ಧ್ರುವಾ ಸರ್ಜಾ.. ಉಪೇಂದ್ರ.. ಪ್ಯಾನ್ ಇಂಡಿಯಾ ಮೋಹಕ್ಕೆ ಸಿಲುಕಿದ್ದಾರೆ. ಇನ್ನೂ ದರ್ಶನ್ ಮತ್ತು ಶಿವಣ್ಣ ಹೊರತು ಪಡಿಸಿದರೆ ಪ್ರಜ್ವಲ್ ದೇವರಾಜ್, ಅಜೇಯ್ ರಾವ್, ದುನಿಯಾ ವಿಜಯ್, ಗೋಲ್ಡನ್ ಸ್ಟಾರ್ ಗಣೇಶ್, ಶ್ರೀಮುರಳಿ, ಡಾಲಿ ಧನಂಜಯ್ ಅಭಿನಯದ ಸಿನಿಮಾ ಈ ವರ್ಷ ತೆರೆಗೆ ಬರಲಿವೆ. ಆದರೆ, ಯಾವತ್ತು.. ಉತ್ತರ ಆ ದೇವರೆ ಬಲ್ಲ.

ಇನ್ನೂ.. ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಚಿತ್ರಗಳನ್ನ ಬೆಳ್ಳಿ ಪರದೆಯ ಮೇಲೆ ಕಣ್ತುಂಬಿಕೊಳ್ಳುವ ಕಾಲ ಯಾವತ್ತು ಬರುತ್ತೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಕೂಡ ಉತ್ತರ ಇಲ್ಲ. ಈ ಎಲ್ಲ ಕಾರಣಗಳಿಂದ ಹೊಸಬರ ಮೇಲೆ ಹೊರೆ ಹೆಚ್ಚಿದೆ. ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನ ಕರೆತರುವ ಬಹುದೊಡ್ಡ ಸವಾಲು ಇವರ ಮುಂದೆ ಇದೆ. ಆದರೆ.. ಇವರೆಲ್ಲ ಎಷ್ಟೇ ಉತ್ತಮವಾದ ಚಿತ್ರ ಮಾಡಿದರು, ಆ ಚಿತ್ರಕ್ಕೆ ಎಷ್ಟೇ ಉತ್ತಮ ಪ್ರತಿಕ್ರಿಯೆ ಸಿಕ್ಕರು, ಸ್ಟಾರ್ ಗಳ ಚಿತ್ರಕ್ಕೆ ಸಿಗುವಂತಹ ಉತ್ತಮವಾದ ಓಪನಿಂಗ್ ಇವರ ಚಿತ್ರಕ್ಕೆ ಸಿಗಲ್ಲ. ಮೌತ್ ಪಬ್ಲಿಸಿಟಿಯಿಂದ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವಷ್ಟರಲ್ಲಿ ಆ ಚಿತ್ರ, ಚಿತ್ರಮಂದಿರದಲ್ಲಿಯೇ ಇರಲ್ಲ. ಆಗಲೇ ಹೇಳಿದಂತೆ ಈ ಮಾತುಗಳಿಗೆ ಈ ವರ್ಷ ಅನೇಕ ಉದಾಹರಣೆ ನಿಮಗೆ ಸಿಗುತ್ತೆ.

ಒಟ್ನಲ್ಲಿ ಲಾಭ-ನಷ್ಟ-ಸೋಲು-ಗೆಲುವು ಈ ಎಲ್ಲ ವಿಚಾರ ಪಕ್ಕಕ್ಕೆ ಇಟ್ಟು, ಬೇರೆ ಭಾಷೆಯಲ್ಲಿ ಹೀರೋಗಳೆಲ್ಲ ಚಿತ್ರ ಮಾಡುವ ವಿಚಾರದಲ್ಲಿ ಹಿಂದೇಟು ಹಾಕುತ್ತಿಲ್ಲ. ಒಂದೇ ಚಿತ್ರಕ್ಕೆ ವರ್ಷಾನು ವರ್ಷ ಸಮಯವನ್ನ ಮೀಸಲು ಇಡ್ತಿಲ್ಲ. ಮತ್ತೊಂದು ಬಾಹುಬಲಿಯನ್ನ ಮಾಡಲು ಅಲ್ಲಿನವರು ಮುಂದಾಗಿಲ್ಲ. Go With Flow ಎಂಬಂತೆ ಸಮಯದ ಜೊತೆ ಹೆಜ್ಜೆ ಹಾಕುತ್ತಿದ್ದಾರೆ. ನಿರಂತರವಾಗಿ ಸಿನಿಮಾ ಮಾಡ್ತಿದ್ದಾರೆ. ಇವರ ಜೊತೆ ಹೊಸಬರು ಕೈ ಜೋಡಿಸುತ್ತಿದ್ದಾರೆ. ಆದರೆ, ನಮ್ಮಲ್ಲಿ.. ಎಲ್ಲರಲ್ಲಿಯೂ ಕೆ.ಜಿ.ಎಫ್ ಮತ್ತು ಕಾಂತಾರ ಚಿತ್ರಗಳನ್ನ ಮೀರಿಸುವ ಸಿನಿಮಾ ಮಾಡುವ ಹಂಬಲ, ಆಸೆ. ಪ್ರತಿಫಲ ಕಣ್ಮುಂದೆಯೇ ಇದೆ.


Click it and Unblock the Notifications











