ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್‌ಗೆ ಕಾರಣ ನಾನು ಅಂತ ಆಯ್ತು-ಸಂಜನಾ ಆನಂದ್..!
ಸಾಮಾಜಿಕ ಜಾಲತಾಣ ಎಷ್ಟು ಉಪಯುಕ್ತ ಮತ್ತು ಜನ ಸ್ನೇಹಿಯೋ ಅಷ್ಟೇ ಪ್ರಮಾಣದಲ್ಲಿ ವಿಲನ್ ಕೂಡ. ಅದರಲ್ಲಿಯೂ ಸೆಲೆಬ್ರಿಟಿಗಳ ಪಾಲಿಗೆ ಸೋಶಿಯಲ್ ಮೀಡಿಯಾ ಮಗ್ಗಲ ಮುಳ್ಳು. ಇಲ್ಲಿ ಚೂರೇ ಚೂರು ಯಾಮಾರಿದರೂ ಸುಳ್ಳು ಸುದ್ದಿಗಳಿಗೆ ತಾರೆಯರು ಆಹಾರವಾಗಬೇಕಾಗುತ್ತೆ. ಸಾರ್ವಜನಿಕವಾಗಿ ಕಸಿವಿಸಿ ಅನುಭವಿಸಬೇಕಾದ ಸಂಕಷ್ಟ ಹೆಚ್ಚಾಗುತ್ತೆ. ಇದಕ್ಕೆ ಸಂಜನಾ ಆನಂದ್ ಸದ್ಯದ ಉದಾಹರಣೆ.
ಹೌದು, ಹೆಚ್ಚೇನ್ ಇಲ್ಲ. ಕಳೆದ ವರ್ಷ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ದಾಂಪತ್ಯ ಜೀವನ ಮುರಿದು ಬಿದ್ದಾಗ ಕೆಲ ಕಿಡಿಗೇಡಿಗಳು ನಿವೇದಿತಾ ಗೌಡ ಅವರಿಂದ ದೂರವಾದ ನಂತರ ಸಂಜನಾ ಆನಂದ್ ಜೊತೆ ಚಂದನ್ ಶೆಟ್ಟಿ ಸಪ್ತಪದಿಯನ್ನು ತುಳಿಯಲಿದ್ದಾರೆ ಎಂದು ಪುಕಾರು ಹಬ್ಬಿಸಿದ್ದರು. ದುರಂತ ಅಂದರೆ ಹೀಗೆ ಹಬ್ಬಿಸಲಾದ ಸುಳ್ಳು ಸುದ್ದಿಯನ್ನು ಅನೇಕರು ನಿಜಾ ಎಂದುಕೊಂಡಿದ್ದರು. ನಿವೇದಿತಾ ಗೌಡ ಅವರಿಂದ ದೂರವಾದ ಚಂದನ್ ಶೆಟ್ಟಿ ಮತ್ತು ಕನ್ನಡ ಚಿತ್ರರಂಗದಲ್ಲಿ ನೆಲೆಯೂರುತ್ತಿರುವ ಸಂಜನಾ ಆನಂದ್‌ಗೆ ಶುಭಾಶಯವನ್ನೂ ಕೋರಿದ್ದರು.

ಯಾರೇ ಆಗಿರಲಿ ಈ ತರಹದ ಊಹಾಪೋಹದ ಸುದ್ದಿಗಳನ್ನು ಕೇಳಿದಾಗ ವಿಚಲಿತರಾಗುತ್ತಾರೆ. ಗಾಬರಿಯಾಗುತ್ತಾರೆ.ಇನ್ನೂ ಹೆತ್ತವರಿಗೆ ಮದುವೆಯ ಚಿಂತೆ ಇರುತ್ತಾ ಇಲ್ವಾ ಗೊತ್ತಿಲ್ಲ. ಆದರೆ ಸಂಬಂಧಿಕರಿಗೆ ತುಂಬಾ ಚಿಂತೆ ಇರುತ್ತೆ. ಇನ್ನು ಒಮ್ಮೊಮ್ಮೆ ಈ ತರಹದ ನ್ಯೂಸ್‌ಗಳು ಕೆಲವರಿಗೆ ಆಹಾರವೂ ಆಗುತ್ತೆ. ಸಂಜನಾ ಆನಂದ್ ಅವರ ವಿಚಾರದಲ್ಲಿ ಕೂಡ ಇದೇ ಆಗಿದ್ದು.
ಈ ಕುರಿತು ಫಿಲ್ಮಿಬೀಟ್ ಕನ್ನಡಗೆ ಎಕ್ಸ್ ಕ್ಲೂಸಿವ್ ಆಗಿ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಂಜನಾ ಆನಂದ್ ನನಗೆ ಮತ್ತು ಚಂದನ್ ಶೆಟ್ಟಿ ಅವರಿಗೆ ಮದುವೆ ಫಿಕ್ಸ್ ಆಗಿದೆ ಎಂದೆಲ್ಲ ಸುಳ್ಳು ಸುದ್ದಿಯನ್ನು ಹಬ್ಬಿಸಿದರು. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಡಿವೋರ್ಸ್‌ಗೆ ನಾನೇ ಕಾರಣವೆಂದರು ಎಂದು ಬೇಸರವನ್ನು ಹೊರ ಹಾಕಿದ್ದಾರೆ.
ಇನ್ನು ಇಷ್ಟಕ್ಕೆ ಸುಮ್ಮನಾಗದೇ ಕೆಲವರು ಎಐ ತಂತ್ರಜ್ಞಾನದ ಸಹಾಯದಿಂದ ನಮ್ಮಿಬ್ಬರಿಗೆ ಮದುವೆಯ ಪೋಷಾಕನ್ನು ಕೂಡ ತೋಡಿಸಿದ್ದರು ಫೋಟೊಗಳನ್ನು ವೈರಲ್ ಮಾಡಿದ್ದರು ಎಂದಿರುವ ಸಂಜನಾ, ಮಂಗಳೂರಿನಲ್ಲಿ ನಮ್ಮಿಬ್ಬರ ಮದುವೆ ನಡೆಯಲಿದೆ ಎಂದು ಕೂಡ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು ಎಂದು ಹೇಳಿದ್ದಾರೆ.
ಮುಂದುವರೆದು ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿರುವ ಸಂಜನಾ ಹೀಗೆ ನನ್ನ ಬಗ್ಗೆ ಇಲ್ಲ ಸಲ್ಲದ ಸುದ್ದಿಗಳು ಬಂದಾಗ ನಾನು ತಲೆ ಕೆಡಿಸಿಕೊಂಡಿರಲಿಲ್ಲ ಆದರೆ ಅದ್ಯಾವಾಗ ಸಂಬಂಧಿಕರೆಲ್ಲ ನನಗೆ ಕರೆ ಮಾಡಲು ಶುರು ಮಾಡಿ ಚಂದನ್ ಶೆಟ್ಟಿ ಜೊತೆ ಮದುವೆಯಾಗ್ತಿದೀಯಾ ಅಂತೆ ನಮಗೆಲ್ಲ ಕರಿಲೇ ಇಲ್ಲ ಎಂದು ಕೇಳತೊಡಗಿದಾಗ ನನಗೆ ಚೂರು ಗಾಭರಿಯಾಯಿತು ಎಂದಿರುವ ಸಂಜನಾ ಈ ಕಾರಣಕ್ಕೆ ಸುಮ್ಮನೆ ಇದ್ದರೆ ಇದೆಲ್ಲ ಇನ್ನೂ ಹೆಚ್ಚಾಗುತ್ತೆ ಎಂದು ನಾನು ಸೋಶಿಯಲ್ ಮೀಡಿಯಾ ಮೂಲಕ ಸ್ಪಷ್ಟೀಕರಣವನ್ನು ನೀಡಿದೆ ಎಂದು ಹೇಳಿದ್ದಾರೆ.
ಅಂದ್ಹಾಗೇ ಸಂಜನಾ ಆನಂದ್ ಅಭಿನಯದ ರಾಯಲ್ ಚಿತ್ರ ಇದೇ ಜನವರಿ 24ರಂದು ಕರುನಾಡಿನೆಲ್ಲೆಡೆ ತೆರೆಗೆ ಬರುತ್ತಿದೆ. ದಿನಕರ್ ತೂಗುದೀಪ್ ನಿರ್ದೇಶನದ ಈ ಚಿತ್ರದಲ್ಲಿ ವಿರಾಟ್ ನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ಕುರಿತು ಪ್ರಚಾರವನ್ನು ಚಿತ್ರತಂಡ ಮಾಡುತ್ತಿದೆ. ಈ ಹಿನ್ನೆಲೆ ಚಿತ್ರದ ಕುರಿತು ಫಿಲ್ಮಿ ಬೀಟ್ ಕನ್ನಡ ಜೊತೆ ಮಾತನಾಡಿರುವ ಸಂಜನಾ ಆನಂದ್ ಇದೇ ಸಂದರ್ಭದಲ್ಲಿ ಚಂದನ್ ಶೆಟ್ಟಿ ಅವರ ಜೊತೆ ತಮ್ಮ ಹೆಸರು ಥಳುಕು ಹಾಕಿಕೊಂಡಿದ್ದಕ್ಕೆ ಉತ್ತರವನ್ನು ನೀಡಿದ್ದಾರೆ.


Click it and Unblock the Notifications











