ವಿಶಿಷ್ಟವಾಗಿ ನಡೆದ ನಟ ಚೇತನ್-ಮೇಘ ಆರತಕ್ಷತೆಯಲ್ಲಿ ನಟರು, ರಾಜಕಾರಣಿಗಳು ಭಾಗಿ.!
ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಮದುವೆ ಸಂಭ್ರಮ ಮನೆ ಮಾಡಿದೆ. 'ಆ ದಿನಗಳು' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಜನಪ್ರಿಯತೆ ಪಡೆದ ನಟ ಚೇತನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮೊನ್ನೆ ಶನಿವಾರ (ಫೆಬ್ರವರಿ 1) ರಿಜಿಸ್ಟರ್ ಮದುವೆ ಮಾಡಿಕೊಂಡು ಗೆಳತಿ ಮೇಘ ರನ್ನ ಬಾಳಸಂಗಾತಿಯನ್ನಾಗಿ ಸ್ವೀಕರಿಸಿದ ನಟ ಚೇತನ್ ನಿನ್ನೆ (ಫೆಬ್ರವರಿ 2) ಕುಟುಂಬಸ್ಥರು, ಸ್ನೇಹಿತರು, ಚಲನಚಿತ್ರ ಮತ್ತು ರಾಜಕೀಯ ಗಣ್ಯರಿಗಾಗಿ ಆರತಕ್ಷತೆ ಮತ್ತು ಸಂತೋಷ ಕೂಟ ಆಯೋಜಿಸಿದ್ದರು.
ವಿಶಿಷ್ಟವಾಗಿ ನಡೆದ ಚೇತನ್ ಮತ್ತು ಮೇಘ ಆರತಕ್ಷತೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಜಕಾರಣಿ ದಿನೇಶ್ ಗುಂಡೂರಾವ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಫೋಟೋಗಳು ಇಲ್ಲಿವೆ, ನೋಡಿ...

ಆಶ್ರಮದಲ್ಲಿ ನಡೆದ ಚೇತನ್-ಮೇಘ ಆರತಕ್ಷತೆ
ಬೆಂಗಳೂರಿನ ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದಲ್ಲಿ ನಿನ್ನೆ ಸಂಜೆ (ಫೆಬ್ರವರಿ 2) ಚೇತನ್ ಮತ್ತು ಮೇಘ ರವರ ಆರತಕ್ಷತೆ ನಡೆಯಿತು. ನವಿಲುಗಳ ಚಿತ್ತಾರದಿಂದ ಸಿಂಗಾರಗೊಂಡಿದ್ದ ವೇದಿಕೆ ಮೇಲೆ ನವ ವಧು ವರರಾದ ಮೇಘ ಮತ್ತು ಚೇತನ್ ಕಂಗೊಳಿಸಿದರು.

ಪವರ್ ಸ್ಟಾರ್ ಪುನೀತ್ ಭಾಗಿ
ಚೇತನ್ ಮತ್ತು ಮೇಘ ಆರತಕ್ಷತೆ ಮತ್ತು ಸಂತೋಷ ಕೂಟದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಪತ್ನಿ ಅಶ್ವಿನಿ ಕೂಡ ಭಾಗವಹಿಸಿ, ನವ ಜೋಡಿಗೆ ಶುಭ ಹಾರೈಸಿದರು.

ಅಪ್ಪು ಹೇಳಿದ್ದೇನು.?
''ನನಗೆ ಚೇತನ್ 10-12 ವರ್ಷದ ಪರಿಚಯ. ನಾನು ಚೇತನ್ ಅವರನ್ನ ಭೇಟಿ ಆಗಿದ್ದಾಗ ಸಂಪೂರ್ಣ ಕನ್ನಡದಲ್ಲೇ ಮಾತನಾಡುತ್ತಿದ್ದರು. ನಾನೇ ಇನ್ನೂ ಹೆಚ್ಚು ಇಂಗ್ಲೀಷ್ ಬಳಸುತ್ತಿದ್ದೆ. ಆಗ ನಾನು ''ನಿಮ್ಮದು ಯಾವ ಊರು'' ಅಂತ ಕೇಳಿದಾಗ ಅಮೇರಿಕಾದಲ್ಲಿ ಇರೋದು ಅಂತ ಚೇತನ್ ಹೇಳಿದ್ದರು. ಕನ್ನಡದ ಅಭಿಮಾನ ಅವರಿಗೆ ಸಾಕಷ್ಟು ಇದೆ. ಚೇತನ್ ಮತ್ತು ಮೇಘಗೆ ಜೀವನದಲ್ಲಿ ಒಳ್ಳೆಯದಾಗಲಿ'' ಎಂದು ನವ ಜೋಡಿಗೆ ಪುನೀತ್ ರಾಜ್ ಕುಮಾರ್ ಶುಭಾಶಯ ಕೋರಿದರು.

ಚಿತ್ರರಂಗದ ಗಣ್ಯರು ಭಾಗಿ
ನಟ ಮಯೂರ್ ಪಟೇಲ್, ನಿರ್ದೇಶಕ ಪಿ.ಸಿ.ಶೇಖರ್, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಸೇರಿದಂತೆ ಚಲನಚಿತ್ರರಂಗದ ಗಣ್ಯರು ಚೇತನ್-ಮೇಘ ಆರತಕ್ಷತೆಯಲ್ಲಿ ಪಾಲ್ಗೊಂಡು ನವ ದಂಪತಿಗೆ ಆಶೀರ್ವಾದ ಮಾಡಿದರು.

ಹಾಜರ್ ಆದ ದಿನೇಶ್ ಗುಂಡೂರಾವ್
ಚೇತನ್-ಮೇಘ ಆರತಕ್ಷತೆಗೆ ರಾಜಕಾರಣಿ ದಿನೇಶ್ ಗುಂಡೂರಾವ್ ಕೂಡ ಪತ್ನಿ ಸಮೇತ ಹಾಜರ್ ಆಗಿ, ನವ ವಧು-ವರರಿಗೆ ಶುಭ ಹಾರೈಸಿದರು.

ಆರತಕ್ಷತೆಯ ವಿಶೇಷ
ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದಲ್ಲಿ ನಡೆದ ಚೇತನ್-ಮೇಘ ಆರತಕ್ಷತೆಯಲ್ಲಿ ಅಬ್ಬರ, ಆಡಂಬರ, ವೈಭೋಗ ಇರಲಿಲ್ಲ. ಸರಳ ಮತ್ತು ಸುಂದರವಾಗಿ ಸಂತೋಷ ಕೂಟದಲ್ಲಿ ವಚನ ಗಾಯನ, ಸೂಫಿ ಗಾಯನ, ಕೊರಗ ನೃತ್ಯ, ಲಂಬಾಣಿ ನೃತ್ಯ, ಸಿದ್ಧಿ ನೃತ್ಯ ಮತ್ತು ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು.

ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದ ಚೇತನ್
ಬೆಂಗಳೂರಿನ ಗಾಂಧಿನಗರದ ಸಬ್-ರಿಜಿಸ್ಟ್ರಾರ್ ಕಛೇರಿಯಲ್ಲಿ ಫೆಬ್ರವರಿ 1 ರಂದು ವಿಶೇಷ ವಿವಾಹ ಕಾಯ್ದೆಯಡಿ ನಟ ಚೇತನ್ ಮತ್ತು ಮೇಘ ವೈವಾಹಿಕ ಬದುಕಿಗೆ ಕಾಲಿಟ್ಟರು.

ಪ್ರೇಮ ವಿವಾಹ
ಅಷ್ಟಕ್ಕೂ, ಚೇತನ್ ಮತ್ತು ಮೇಘ ರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಎರಡು ವರ್ಷಗಳಿಂದ ಚೇತನ್ ಮತ್ತು ಮೇಘ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಕುಟುಂಬ ಸಮ್ಮತಿ ನೀಡಿದ್ಮೇಲೆ, ವಿವಾಹ ಬಂಧನಕ್ಕೆ ಚೇತನ್-ಮೇಘ ಒಳಗಾಗಿದ್ದಾರೆ.

ಅದ್ಧೂರಿ ಮದುವೆ ಇಷ್ಟ ಇಲ್ಲ.!
ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿರುವ ಚೇತನ್ ಗೆ ಅದ್ಧೂರಿಯಾಗಿ ಮದುವೆ ಆಗುವುದು ಇಷ್ಟವಿರಲಿಲ್ಲ. ''ಲ್ಯಾವಿಶ್ ಮದುವೆ ನೋಡಿದರೆ ನನಗೆ ದುಃಖ ಆಗುತ್ತೆ. ಲ್ಯಾವಿಶ್ ಆಗಿ ಮದುವೆ ಆದರೆ ಹೆಣ್ಣು ಮಕ್ಕಳ ಕುಟುಂಬದ ಮೇಲೆ ಪ್ರೆಶರ್ ಬೀಳುತ್ತದೆ. ಇದು ಸರಿ ಅಲ್ಲ'' ಎಂದಿದ್ದ ನಟ ಚೇತನ್ ಸರಳವಾಗಿ ವಿವಾಹ ಮಾಡಿಕೊಂಡಿದ್ದಾರೆ.

ಪತ್ನಿಗೆ ಕನ್ನಡ ಕಲಿಸುತ್ತಿರುವ ಚೇತನ್
ಚೇತನ್ ಪತ್ನಿ ಮೇಘ ಕರ್ನಾಟಕ ಮೂಲದವರಲ್ಲ. ಹೀಗಾಗಿ ಆಕೆಗೆ ಕನ್ನಡ ಬರಲ್ಲ. ಕನ್ನಡಾಭಿಮಾನಿ ಆಗಿರುವ ಚೇತನ್, ಮೇಘಗೆ ಮದುವೆಗೂ ಮುಂಚಿನಿಂದಲೂ ಕನ್ನಡ ಕಲಿಸುತ್ತಿದ್ದಾರೆ. ಮೇಘ ಕೂಡ ಖುಷಿಯಿಂದ ಕನ್ನಡ ಕಲಿಯುತ್ತಿದ್ದಾರೆ.


Click it and Unblock the Notifications











