Independence Day: ಸ್ವಾತಂತ್ರ ದಿನದಂದು ಹುಟ್ಟುಹಬ್ಬ ಆಚರಿಸಿಕೊಳ್ಳುವ ಕನ್ನಡದ ಕಲಾವಿದರಿವರು
ಆಗಸ್ಟ್ 15ರ ಮಂಗಳವಾರದಂದು 76ನೇ ಸ್ವಾತಂತ್ರ್ ದಿನಾಚರಣೆಯನ್ನು ಆಚರಿಸಲು ಇಡೀ ದೇಶ ಸಜ್ಜಾಗುತ್ತಿದ್ದು, ಈ ವಿಶೇಷ ದಿನದಂದು ವಿವಿಧ ಕ್ಷೇತ್ರಗಳ ಸಾಧಕರು ಸ್ವಾತಂತ್ರ ದಿನಾಚರಣೆ ಜತೆಗೆ ತಮ್ಮ ತಮ್ಮ ಹುಟ್ಟುಹಬ್ಬಗಳನ್ನೂ ಸಹ ಆಚರಿಸಿಕೊಳ್ಳಲಿದ್ದಾರೆ. ಇನ್ನು ಸಿನಿಮಾ ಕ್ಷೇತ್ರದ ಹಲವು ಕಲಾವಿದರೂ ಸಹ ಈ ವಿಶೇಷ ದಿನದಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಪೈಕಿ ಕನ್ನಡ ಸಿನಿಮಾಗಳಲ್ಲಿ ಮಿಂಚಿರುವ ಯಾವ ಕಲಾವಿದರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಸಂತೋಷ್ ಆನಂದ್‌ರಾಮ್
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ನಟನೆಯ ಚಿತ್ರ ರಾಮಾಚಾರಿ ಮೂಲಕ ಇಂಡಸ್ಟ್ರಿ ಹಿಟ್ ಬಾರಿಸಿ ಸಿನಿಮಾ ಕ್ಷೇತ್ರಕ್ಕೆ ಭರ್ಜರಿ ಎಂಟ್ರಿ ನೀಡಿ ಬಳಿಕ ರಾಜಕುಮಾರ ಮೂಲಕ ತನ್ನ ಇಂಡಸ್ಟ್ರಿ ಹಿಟ್ ದಾಖಲೆಯನ್ನು ತಾನೇ ಮುರಿದು ಇಂಡಸ್ಟ್ರಿ ಹಿಟ್ ನಿರ್ದೇಶಕ ಎನಿಸಿಕೊಂಡ ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಸ್ವಾತಂತ್ರ ದಿನಾಚರಣೆಯಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಕೊನೆಯದಾಗಿ ಜಗ್ಗೇಶ್ ಅವರಿಗೆ ರಾಘವೇಂದ್ರ ಸ್ಟೋರ್ಸ್ ಚಿತ್ರವನ್ನು ನಿರ್ದೇಶಿಸಿದ್ದ ಸಂತೋಷ್ ಆನಂದ್ ರಾಮ್ ಸದ್ಯ ಯುವ ರಾಜ್‌ಕುಮಾರ್ ನಟನೆಯ ಯುವ ಚಿತ್ರದಲ್ಲಿ ನಿರತರಾಗಿದ್ದಾರೆ.

ಭಾರತಿ ವಿಷ್ಣುವರ್ಧನ್
ಕನ್ನಡದಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳು ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನ ಹಲವಾರು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಸಾಹಸಸಿಂಹ ವಿಷ್ಣುವರ್ಧನ್ ಅವರೂ ಸಹ ಇದೇ ಸ್ವಾತಂತ್ರ ದಿನಾಚರಣೆಯಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.
ರಾಘವೇಂದ್ರ ರಾಜ್‌ಕುಮಾರ್
ದೊಡ್ಮನೆಯ ನಟ ರಾಘವೇಂದ್ರ್ ರಾಜ್‌ಕುಮಾರ್ ಸಹ ಸ್ವಾತಂತ್ರ ದಿನಾಚರಣೆಯ ದಿನದಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ತೊಂಬತ್ತರ ದಶಕದಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದ ರಾಘವೇಂದ್ರ ರಾಜ್‌ಕುಮಾರ್ ಸದ್ಯ ಕೆಲ ಚಿತ್ರಗಳಲ್ಲಿ ನಾಯಕನಾಗಿ ಹಾಗೂ ಪೋಷಕ ಪಾತ್ರದಲ್ಲಿ ನಟಿಸಿ ಸಕ್ರಿಯರಾಗಿದ್ದಾರೆ.
ಅರ್ಜುನ್ ಸರ್ಜಾ
ಸೌತ್‌ನ ಬಹುತೇಕ ಎಲ್ಲಾ ಚಿತ್ರರಂಗಗಳಲ್ಲಿಯೂ ಕೆಲಸ ಮಾಡಿ ಸೈ ಎನಿಸಿಕೊಂಡಿರುವ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಇದೇ ಸ್ವಾತಂತ್ರ ದಿನಾಚರಣೆಯಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸದ್ಯ ಅರ್ಜುನ್ ಸರ್ಜಾ ಮತ್ತೊಂದು ಚಿತ್ರವನ್ನು ನಿರ್ದೇಶಿಸಲು ಮುಂದಾಗಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ಹುಟ್ಟುಹಬ್ಬ
ಕನ್ನಡದ ಮೇಷ್ಟ್ರು ಎಂದೇ ಖ್ಯಾತಿಯನ್ನು ಪಡೆದಿರುವ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಹ ಸ್ವಾತಂತ್ರ ದಿನಾಚರಣೆಯಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಮೆರಿಕಾ ಅಮೆರಿಕಾ, ಅಮೃತಧಾರೆ, ಬಾ ನಲ್ಲೆ ಮಧುಚಂದ್ರಕೆ ರೀತಿಯ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ನಾಗತಿಹಳ್ಳಿ ಚಂದ್ರಶೇಖರ್ ಕೊನೆಯದಾಗಿ 2020ರಲ್ಲಿ ಬಿಡುಗಡೆಗೊಂಡಿದ್ದ 'ಇಂಡಿಯಾ vs ಇಂಗ್ಲೆಂಡ್' ಎಂಬ ಚಿತ್ರವನ್ನು ನಿರ್ದೇಶಿಸಿದ್ದರು.


Click it and Unblock the Notifications










