ಭಾರತ ಎಂದರೆ ಬರೀ ಬಾಲಿವುಡ್, ಹಿಂದಿಯಲ್ಲ; ಹಿಂದಿ ವಿರುದ್ಧ ಕಿಡಿಕಾರಿದ ರಮ್ಯಾ!
ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಅಪಾರವಾದ ಬದಲಾವಣೆ ವಾತಾವರಣ ಹಾಗೂ ಅಲ್ಲಿನ ಜನರಲ್ಲಿ ಮತ್ತು ಅವರು ಮಾತನಾಡುವ ಭಾಷೆಗಳಲ್ಲಿ ವ್ಯತ್ಯಾಸ ಕಂಡುಬರುವ ವಿಶೇಷ ಹಾಗೂ ವಿಭಿನ್ನ ದೇಶವೆಂದರೆ ಅದು ಭಾರತ ಎನ್ನಬಹುದು. ಹೌದು, ಇಲ್ಲಿನ ಜನಗಳ ಆಚರಣೆ, ಊಟದ ವಿಧಾನ ಸೇರಿದಂತೆ ಇನ್ನೂ ಹಲವಾರು ಚಟುವಟಿಕೆಗಳಲ್ಲಿ ಭಾಗದಿಂದ ಭಾಗಕ್ಕೆ ಅಪಾರವಾದ ವ್ಯತ್ಯಾಸ ಕಂಡುಬರುತ್ತದೆ. ಇನ್ನು ಭಾಷೆಯ ವಿಷಯದಲ್ಲಂತೂ ಈ ವ್ಯತ್ಯಾಸ ತುಸು ದೊಡ್ಡದೇ. ಭಾಷೆಗಳ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸಲಾಗಿದ್ದು, ಜನರಿಗೆ ತಮ್ಮ ಭಾಷೆ ಮೇಲೆ ಅಪಾರವಾದ ಪ್ರೀತಿ ಹುಟ್ಟುಕೊಂಡಿದೆ.
ಇನ್ನು ತಮ್ಮ ಭಾಷೆ ಮೇಲಿನ ಈ ಪ್ರೀತಿ ಕೆಲವೊಮ್ಮೆ ಬೇರೆ ಭಾಷೆಯ ಮೇಲೆ ದ್ವೇಷ ಹುಟ್ಟಿಕೊಳ್ಳುವಂತೆ ಮಾಡಿರುವುದು ಸುಳ್ಳಲ್ಲ. ಹೌದು, ಪರ ರಾಜ್ಯಗಳಿಂದ ರಾಜ್ಯವೊಂದಕ್ಕೆ ಬರುವ ಜನರು ಅಲ್ಲಿನ ಭಾಷೆಗಳನ್ನು ಕಲಿಯದೇ ಅದೇ ಭಾಷೆಯ ಬಗ್ಗೆ ಕೆಟ್ಟದಾಗಿ ಮಾತನಾಡಿ, ಅಲ್ಲಿನ ಜನರ ಜತೆ ಜಗಳವಾಡಿ ವಿವಾದಗಳನ್ನು ಹುಟ್ಟುಹಾಕಿಕೊಂಡಿರುವ ಹಲವಾರು ಸಂದರ್ಭಗಳನ್ನು ನಾವು ನೀವೆಲ್ಲಾ ಕಂಡಿದ್ದೇವೆ.

ಅದರಲ್ಲಿಯೂ ಕರ್ನಾಟಕದಲ್ಲಿ ಈ ವಿಚಾರಕ್ಕಾಗಿ ಜಗಳ ನಡೆಯುವುದು ತುಸು ಹೆಚ್ಚೇ ಎಂದು ಹೇಳಬಹುದು. ಬೆಂಗಳೂರಿನಲ್ಲಿ ಕೆಲಸ ಹರಸಿ ಬರುವ ಬೇರೆ ರಾಜ್ಯದ ಜನರು ಇಲ್ಲಿ ಕೆಲಸ ಸಿಕ್ಕಮೇಲೆ ಇಲ್ಲಿಯೇ ನೆಲೆಯೂರುತ್ತಾರೆ. ಹೀಗೆ ಬೆಂಗಳೂರಿನಲ್ಲಿಯೇ ಬೀಡುಬಿಡುವ ವಲಸಿಗರು ಇಲ್ಲಿನ ಕನ್ನಡ ಭಾಷೆಯನ್ನು ಕಲಿಯದೇ ಹಿಂದಿಯಲ್ಲಿಯೇ ವ್ಯವಹರಿಸಲು ಮುಂದಾಗುವುದು ಕನ್ನಡ ನಾಡಿನ ಜನತೆಯ ಕೋಪಕ್ಕೆ ಈ ಹಿಂದಿನಿಂದಲೂ ಕಾರಣವಾಗುತ್ತಾ ಬಂದಿದೆ.
ಅದೇ ರೀತಿ ಮೊನ್ನೆಯಷ್ಟೇ ಬೆಂಗಳೂರಿನ ಆಟೋ ಡ್ರೈವರ್ ಒಬ್ಬ ಹಿಂದಿ ಯುವತಿಯ ಜತೆ ಹಿಂದಿ ಬರುವುದಿಲ್ಲ, ಕನ್ನಡದಲ್ಲಿ ಮಾತನಾಡಿ ಇದು ಕನ್ನಡ ನಾಡು ಎಂದು ಚಳಿ ಬಿಡಿಸಿದ್ದರು. ಆತನಿಗೆ ಹಿಂದಿ ಬರುವುದಿಲ್ಲ ಎಂಬ ಕಾರಣಕ್ಕೆ ಜಗಳ ಶುರುವಾಗಿದ್ದು, ಆಕೆ ಆ ಜಗಳದ ದೃಶ್ಯವನ್ನು ವಿಡಿಯೊ ಕೂಡ ಮಾಡಿಕೊಂಡಿದ್ದಳು. ಆದರೆ ಆ ವಿಡಿಯೊ ಆಕೆಯ ವಿರುದ್ಧವಾಗಿ ವೈರಲ್ ಆಗಿಬಿಟ್ಟಿದೆ. ಆಕೆ ನನಗೆ ಕನ್ನಡ ಬರುವುದಿಲ್ಲ, ನಾನು ಕನ್ನಡ ಕಲಿಯುವುದಿಲ್ಲ ಎಂದು ಧಿಮಾಕಿನ ಹೇಳಿಕೆಯನ್ನು ನೀಡಿದ್ದಳು.
ಇದರಿಂದ ಕೋಪಗೊಂಡಿದ್ದ ಆಟೋ ಚಾಲಕ ಹಿಂದಿ ಮಾತನಾಡಿ ಎಂದು ಕ್ಯಾತೆ ತೆಗೆದಿದ್ದ ಆ ಯುವತಿಯರನ್ನು ಆಟೊದಿಂದ ಕೆಳಗಿಳಿಸಿ 'ಇದು ನಮ್ಮ ನೆಲ. ಇದು ನಿಮ್ಮ ನೆಲವಲ್ಲ. ನಮ್ಮ ನೆಲದಲ್ಲಿ ನಾನ್ಯಾಕೆ ಹಿಂದಿಯಲ್ಲಿ ಮಾತನಾಡಬೇಕು, ನೀವೇ ಕನ್ನಡ ಕಲಿತು ಮಾತನಾಡಿ' ಎಂದು ಬೈದು ಬಾಯಿಮುಚ್ಚಿಸಿದ್ದರು. ಹಿಂದಿ ಮಾತನಾಡಿ ಎಂದು ದಬ್ಬಾಳಿಕೆ ನಡೆಸುವವರಿಗೆ ಇದೇ ರೀತಿ ಚಳಿ ಬಿಡಿಸಬೇಕು ಎಂದು ಈ ವಿಡಿಯೊ ನೋಡಿದ ನೆಟ್ಟಿಗರು ಕಾಮೆಂಟ್ ಮಾಡಿದ್ದರು.

ಹೀಗೆ ಆಟೊ ಚಾಲಕನ ಕನ್ನಡ ಪ್ರೇಮ ಹಾಗೂ ಕನ್ನಡ ಭಾಷೆಯ ಬಗೆಗಿನ ಕಾಳಜಿಗೆ ಫಿದಾ ಆದ ಕನ್ನಡ ಜನತೆ ಈ ವಿಡಿಯೊವನ್ನು ವೈರಲ್ ಮಾಡಿದ್ದರು. ಸದ್ಯ ಈ ವಿಡಿಯೊ ಬಗ್ಗೆ ಮೋಹಕತಾರೆ ರಮ್ಯಾ ಸಹ ಟ್ವೀಟ್ ಮಾಡಿದ್ದು, ಹಿಂದಿ ಹೇರಿಕೆ ಮಾಡುವವರ ವಿರುದ್ಧ ಕಿಡಿಕಾರಿದ್ದಾರೆ. ಹೌದು, ಸೌತ್ ಇಂಡಿಯನ್ ಸಿನಿಮಾ ಆರ್ ಆರ್ ಆರ್ ಆರ್‌ನ ನಾಟು ನಾಟು ಹಾಡಿಗೆ ಆಸ್ಕರ್ ಬಂದ ದಿನ ಅದೇ ವಿಚಾರವನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ರಮ್ಯಾ ಆ ಆಟೊ ಚಾಲಕನ ವಿಡಿಯೊಗೆ ಬರಹ ಬರೆದುಕೊಂಡಿದ್ದಾರೆ.
ಹೌದು, ಆಟೊ ಚಾಲಕ ಕನ್ನಡ ಪ್ರೇಮ ಮೆರೆದಿರುವ ವಿಡಿಯೊವನ್ನು ಶೇರ್ ಮಾಡಿರುವ ರಮ್ಯಾ "ಆಸ್ಕರ್ ವೇದಿಕೆಯಲ್ಲಿ ನಾಟು ನಾಟು ಹಾಡಿಗೆ ತೆಲುಗಿನಲ್ಲಿಯೇ ಪ್ರದರ್ಶನ ನೀಡಿದ್ದು ನನಗೆ ತುಂಬಾ ಖುಷಿ ತಂದಿತು. ಭಾರತ ಹಲವಾರು ಸಂಪ್ರದಾಯ ಹಾಗೂ ಭಾಷೆಗಳಿಂದ ಕೂಡಿರುವ ದೇಶ ಎಂಬುದು ಇಡೀ ಪ್ರಪಂಚಕ್ಕೆ ತಿಳಿದಿದೆ. ಭಾರತವೆಂದರೆ ಕೇವಲ ಹಿಂದಿಯಲ್ಲ. ಭಾರತವೆಂದರೆ ಕೇವಲ ಬಾಲಿವುಡ್ ಅಲ್ಲ" ಎಂದು ಬರೆದುಕೊಂಡಿದ್ದಾರೆ.
ನಟಿ ರಮ್ಯಾ ಮಾಡಿರುವ ಈ ಟ್ವೀಟ್ ಬಗ್ಗೆ ನಿರೀಕ್ಷಿಸಿದ ಹಾಗೆಯೇ ಕನ್ನಡ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲಾ ಕಲಾವಿದರೂ ಇದೇ ರೀತಿ ಭಾಷೆಯ ಪರ ದನಿ ಎತ್ತಬೇಕು, ಇಂತಹ ಘಟನೆಗಳು ನಡೆದಾಗ ಕನ್ನಡದ ಪರ ನಿಲ್ಲಬೇಕು ಎಂದು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











