ಬೆಳ್ಳಿಪರದೆಗೆ ಚಿತ್ರದುರ್ಗದ ಸ್ಪೈಡರ್ ಮ್ಯಾನ್ ಕೋತಿರಾಜ
ಸಾಮಾನ್ಯ ಜನರ ಮಧ್ಯೆ ಇರುವಂತಹ ಅಸಾಮಾನ್ಯ ಪ್ರತಿಭೆಗಳು ಎಂದು ಹಲವರನ್ನು ನಾವು ಗುರುತಿಸಬಹುದು. ಅಂತಹ ಅಸಾಮಾನ್ಯ ಶಕ್ತಿ ಹೊಂದಿರುವ ವ್ಯಕ್ತಿಯೊಬ್ಬನ ಕಥೆಯನ್ನಾಧರಿಸಿ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಕೋತಿರಾಮ ಎಂದೇ ಹೆಸರಾದ ಚಿತ್ರದುರ್ಗದ ಕೋತಿರಾಜ ವಾಲ್ ಕ್ಲೈಂಬಿಂಗ್ ನಲ್ಲಿ ಜಗದ್ವಿಖ್ಯಾತಿ ಗಳಿಸಿದ್ದಾರೆ.
ಅವರ ಸಾಹಸದ ಜೀವನ ಕುರಿತಾಗಿ ಚಿತ್ರವೊಂದನ್ನು ವಿ.ಜಿ.ಫಿಲಂಸ್ ಲಾಂಛನದಲ್ಲಿ ಶ್ರೀಮತಿ ಶೈಲಾಡೇವಿಡ್ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಇದೇ ಜನವರಿ 23 ರಿಂದ ಪ್ರಾರಂಭವಾಗಲಿದೆ. ಈ ಕೋತಿರಾಜನ ಜೀವನದಲ್ಲಿ ನಡೆದಂತಹ ಕೆಲ ನೈಜ ಘಟನೆಗಳನ್ನು ಬಳಸಿಕೊಂಡು ಸಿನಿಮ್ಯಾಟಿಕ್ ಆಗಿ 'ಜ್ಯೋತಿ ಅಲಿಯಾಸ್ ಕೋತಿರಾಜ' ಎಂಬ ಹೆಸರಿನಿಂದ ನಿರ್ಮಾಣವಾಗುತ್ತಿದೆ.

ಚಿತ್ರಕ್ಕೆ ಮೋಹನ್ ಛಾಯಾಗ್ರಹಣ, ಸೆವೆನ್ ಸ್ಟಾರ್ ಭಾಸ್ಕರ್ ಸಂಗೀತ, ನಾಗೇಶ್.ಎನ್ ಸಂಭಾಷಣೆ ಮತ್ತು ಸಹ ನಿರ್ದೇಶನ, ಡಾ.ದೊಡ್ಡರಂಗೇಗೌಡ, ಶ್ರೀಚಂದ್ರ, ನಾಗೇಶ್ ಸಾಹಿತ್ಯ, ಸ್ವಾಮಿ ಸಂಕಲನ, ಕುಂಗ್‍ಫೂ ಬಾಬು ಸಾಹಸ, ತ್ರಿಭುವನ್, ಚಾಮರಾಜ್ ನೃತ್ಯನಿರ್ದೇಶನ, ಜಿ.ಮೂರ್ತಿ ಕಲಾನಿರ್ದೇಶನವಿದೆ.
ಜ್ಯೋತಿರಾಜ್ (ಕೋತಿರಾಜ್), ಐಶಾನಿ, ದೀಪಿಕದಾಸ್, ರಮೇಶ್ ಭಟ್, ಸಂಕೇತ್ ಕಾಶಿ, ಲಕ್ಷ್ಮೀಚಂದ್ರಶೇಖರ್, ಜಯಲಕ್ಷ್ಮೀ, ಶೋಭಲೋಲನಾಥ್ ತಾರಾಬಳಗದಲ್ಲಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











