ಹಿಂದಿಯಲ್ಲಿ ಪಠಾಣ್, ತೆಲುಗಿನಲ್ಲಿ ಆರ್‌ಆರ್‌ಆರ್ ಇಂಡಸ್ಟ್ರಿ ಹಿಟ್; ಉಳಿದ ಭಾಷೆಗಳ ಇಂಡಸ್ಟ್ರಿ ಹಿಟ್ ಚಿತ್ರಗಳಾವುವು?
ಇಂಡಸ್ಟ್ರಿ ಹಿಟ್.. ಸಿನಿಮಾ ಕ್ಷೇತ್ರದಲ್ಲಿ ಸಿನಿಮಾವೊಂದು ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರವಾಗಿ ಮಾಡಬಹುದಾದ ಅತ್ಯುನ್ನತ ಸಾಧನೆ. ಹೌದು, ಚಿತ್ರವೊಂದು ಬಿಡುಗಡೆಯಾಗಿ ಈ ಹಿಂದೆ ಬಿಡುಗಡೆಯಾದ ತನ್ನ ಚಿತ್ರರಂಗದ ಎಲ್ಲಾ ಚಿತ್ರಗಳು ಮಾಡಿದ್ದ ಕಲೆಕ್ಷನ್ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದರೆ ಆ ಚಿತ್ರವನ್ನು ಇಂಡಸ್ಟ್ರಿ ಹಿಟ್ ಎನ್ನುತ್ತಾರೆ.
ಉದಾಹರಣೆಗೆ ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲಿ ಬಂದ ಇಂಡಸ್ಟ್ರಿ ಹಿಟ್‌ಗಳು. ಹೌದು, ಈ ಹಿಂದೆ ರಾಜಕುಮಾರ ಚಿತ್ರದ ಕಲೆಕ್ಷನ್ ದಾಖಲೆಯನ್ನು ಹಿಂದಿಕ್ಕಿ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿದ್ದ ಕೆಜಿಎಫ್ ಚಾಪ್ಟರ್ 1 ದಾಖಲೆಯನ್ನು ಕಳೆದ ವರ್ಷ ತೆರೆಕಂಡಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಜೇಮ್ಸ್ ಚಿತ್ರ ಹಿಂದಿಕ್ಕಿ ನೂತನ ಇಂಡಸ್ಟ್ರಿ ಹಿಟ್ ಆಗಿ ಹೊರಹೊಮ್ಮಿತ್ತು. ಕರ್ನಾಟಕದಲ್ಲಿ ಕೆಜಿಎಫ್ ಚಾಪ್ಟರ್ 1 ಚಿತ್ರಕ್ಕಿಂತ ಹೆಚ್ಚಿನ ದಾಖಲೆಯನ್ನು ಮಾಡಿ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿತ್ತು.

ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಈ ದಾಖಲೆಯನ್ನು ಜೇಮ್ಸ್ ಚಿತ್ರ ಮಾಡಿದರೆ, ಏಪ್ರಿಲ್ ತಿಂಗಳಿನಲ್ಲಿ ಕನ್ನಡ ಚಿತ್ರರಂಗ ಮತ್ತೊಂದು ಇಂಡಸ್ಟ್ರಿ ಹಿಟ್ ಅನ್ನು ಪಡೆದುಕೊಂಡಿತು. ಹೌದು, ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಗೊಂಡ ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಕೆಜಿಎಫ್ ಚಾಪ್ಟರ್ 2 ಕನ್ನಡ ವರ್ಷನ್ ಜೇಮ್ಸ್ ಚಿತ್ರ ಮಾಡಿದ್ದ ಕಲೆಕ್ಷನ್ ಅನ್ನು ಹಿಂದಿಕ್ಕಿ ಹೊಸ ಇಂಡಸ್ಟ್ರಿ ಹಿಟ್ ಆಗಿ ಹೊರಹೊಮ್ಮಿತು.
ಇನ್ನು ಕಳೆದ ವರ್ಷ ಸಾಲು ಸಾಲು ಸೋಲುಗಳನ್ನು ಕಂಡಿದ್ದ ಬಾಲಿವುಡ್ ಚಿತ್ರರಂಗ ಈ ವರ್ಷದ ಆರಂಭದಲ್ಲಿಯೇ ಇಂಡಸ್ಟ್ರಿ ಹಿಟ್ ಅನ್ನು ಪಡೆದುಕೊಂಡಿದೆ. ಹೌದು, ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಚಿತ್ರ ಹಿಂದಿಯ ಇಂಡಸ್ಟ್ರಿ ಹಿಟ್ ಎಂದು ಕಳೆದ ಐದು ವರ್ಷಗಳಿಂದ ಕರೆಸಿಕೊಳ್ಳುತ್ತಿದ್ದ ಬಾಹುಬಲಿ 2 ಚಿತ್ರದ ಕಲೆಕ್ಷನ್ ದಾಖಲೆಯನ್ನು ಹಿಂದಿಕ್ಕಿ ನೂತನ ಇಂಡಸ್ಟ್ರಿ ಹಿಟ್ ಆಗಿದೆ. ಬಾಹುಬಲಿ 2 ಹಿಂದಿ ವರ್ಷನ್ 510 ಕೋಟಿ ಕಲೆಕ್ಷನ್ ಮಾಡಿತ್ತು ಹಾಗೂ ಇದೀಗ ಪಠಾಣ್ 516 ಕೋಟಿ ಕಲೆಕ್ಷನ್ ಮಾಡಿದ್ದು ಅತಿಹೆಚ್ಚು ಗಳಿಸಿದ ಹಿಂದಿ ಚಿತ್ರ ಎಂಬ ದಾಖಲೆ ಬರೆದಿದೆ.
ಹೀಗೆ ಪಠಾಣ್ ಬಾಲಿವುಡ್‌ನ ಇಂಡಸ್ಟ್ರಿ ಹಿಟ್ ಎನಿಸಿಕೊಂಡರೆ, ಉಳಿದ ಚಿತ್ರರಂಗಗಳ ಇಂಡಸ್ಟ್ರಿ ಹಿಟ್ ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..

* ಮೇಲೆ ಹೇಳಿದಂತೆ ಸದ್ಯ ಕನ್ನಡ ಚಿತ್ರರಂಗದ ಇಂಡಸ್ಟ್ರಿ ಹಿಟ್ ಆಗಿ ಕೆಜಿಎಫ್ ಚಾಪ್ಟರ್ 2 ಕರೆಸಿಕೊಳ್ಳುತ್ತಿದೆ. ಕಾಂತಾರ ಚಿತ್ರ ಕೆಜಿಎಫ್ ಚಾಪ್ಟರ್ 2 ದಾಖಲೆಯನ್ನು ಮುರಿಯುವ ಸನಿಹಕ್ಕೆ ಬಂದಿತ್ತಾದರೂ ಕೊನೆಯಲ್ಲಿ ಎಡವಿತು. ಆದರೆ ಕೆಲವರು ಕಾಂತಾರ ಇಂಡಸ್ಟ್ರಿ ಹಿಟ್ ಎಂದೂ ಸಹ ಸುದ್ದಿ ಹಬ್ಬಿಸಿದ್ದರು. ಸದ್ಯಕ್ಕೆ ಕೆಜಿಎಫ್ ಚಾಪ್ಟರ್ 2 ಇಂಡಸ್ಟ್ರಿ ಹಿಟ್ ಆಗಿದೆ.
* ತೆಲುಗಿನಲ್ಲಿ ಕಳೆದ ವರ್ಷ ಬಿಡುಗಡೆಗೊಂಡು ಅಬ್ಬರಿಸಿದ ಆರ್ ಆರ್ ಆರ್ ಚಿತ್ರ ನೂತನ ಇಂಡಸ್ಟ್ರಿ ಹಿಟ್ ಅಗಿದೆ.
* ಇನ್ನು ತಮಿಳಿನಲ್ಲಿಯೂ ಸಹ ಕಳೆದ ವರ್ಷ ಎರಡು ಇಂಡಸ್ಟ್ರಿ ಹಿಟ್‌ಗಳು ಬಂದಿವೆ. ಮೊದಲಿಗೆ ಕಮಲ್ ಹಾಸನ್ ನಟನೆಯ ವಿಕ್ರಮ್ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿತ್ತು. ಬಳಿಕ ಈ ಚಿತ್ರದ ಕಲೆಕ್ಷನ್ ದಾಖಲೆಯನ್ನು ಹಿಂದಿಕ್ಕಿದ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ನೂತನ ಇಂಡಸ್ಟ್ರಿ ಹಿಟ್ ಆಗಿ ಹೊರಹೊಮ್ಮಿದೆ.
* ಅತ್ತ ಕೇರಳದಲ್ಲಿ ಇಂಡಸ್ಟ್ರಿ ಹಿಟ್ ದಾಖಲಾಗಿ ವರ್ಷಗಳೇ ಕಳೆದಿವೆ. 2016ರಲ್ಲಿ ತೆರೆಗೆ ಬಂದಿದ್ದ ಮೋಹನ್‌ಲಾಲ್ ನಟನೆಯ ಪುಲಿ ಮುರುಗನ್ ಬಳಿಕ ಯಾವ ಚಿತ್ರವೂ ದೊಡ್ಡ ದಾಖಲೆ ಬರೆದಿಲ್ಲ. ಹೀಗಾಗಿ ಏಳು ವರ್ಷಗಳಿಂದಲೂ ಪುಲಿ ಮುರುಗನ್ ಮಾಲಿವುಡ್‌ನ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿದೆ.


Click it and Unblock the Notifications











