ಹನಿಮೂನ್‌ಗೆ ಹೋದಾಗ ಪತಿ ಹತ್ಯೆಗೆ ಪತ್ನಿ ಸ್ಕೆಚ್; 'ಬಾ ನಲ್ಲೆ ಮಧುಚಂದ್ರಕೆ' ಚಿತ್ರ ನೆನಪಿಸ್ತಿದೆ ಪ್ರಕರಣ
ಸಿನಿಮೀಯ ರೀತಿಯಲ್ಲಿ ಸಾಕಷ್ಟು ಘಟನೆಗಳು ನಡೆಯುತ್ತವೆ. ನಿಜ ಜೀವನದ ಘಟನೆಗಳು ಸಿನಿಮಾ ಆಗುವುದು, ಯಾವುದೋ ಸಿನಿಮಾ ನೋಡಿ ದುಷ್ಕೃತ್ಯಕ್ಕೆ ಸಂಚು ರೂಪಿಸಿರುವುದು ಇದೆ. ಸದ್ಯ ಮಧ್ಯಪ್ರದೇಶದ ಇಂಧೋರ್‌ನ ರಾಜಾ ರಘುವಂಶಿ ಕೊಲೆ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಇದೇ ಪ್ರಕರಣ ನೆನಪಿಸುವಂತಹ ಸಿನಿಮಾ ಕನ್ನಡದಲ್ಲಿ ಹಿಟ್ ಆಗಿತ್ತು.
ಇಂಧೋರ್ ಮೂಲದ ಉದ್ಯಮಿ ರಾಜ ರಘುವಂಶಿ ಹಾಗೂ ಸೋನಂ ರಘುವಂಶಿ ಇತ್ತೀಚೆಗೆ ಮದುವೆ ಆಗಿದ್ದರು. ನವಜೋಡಿ ಮೇಘಾಲಯಕ್ಕೆ ಹನಿಮೂನ್‌ಗಾಗಿ ತೆರಳಿತ್ತು. ಈ ವೇಳೆ ಪ್ರಿಯಕರನ ಜೊತೆ ಸೇರಿ ಸೋನಂ ತನ್ನ ಪತಿ ರಾಜಾ ರಘುವಂಶಿ ಹತ್ಯೆ ಸಂಚು ರೂಪಿಸಿದ್ದರು. ಸದ್ಯ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಸೋನಂ ಸುಪಾರಿ ಕಿಲ್ಲರ್‌ಗಳ ಸಹಾಯ ಪಡೆದು ಪತಿಯ ಹತ್ಯೆ ಮಾಡಿದ್ದಾರೆ ಎಂದು ಡಿಜಿಪಿ ಇದಶಿಶಾ ನೊಂಗ್ರಾಂಗ್ ಮಾಹಿತಿ ನೀಡಿದ್ದಾರೆ.

ಈಗಾಗಲೇ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋನಂ ರಘುವಂಶಿ ತಾನಾಗಿಯೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ ಎಂದು ವರದಿಯಾಗಿದೆ. ಮೇ 11ರಂದು ಮದುವೆಯಾಗಿದ್ದ ಜೋಡಿ ಮೇ 20 ರಂದು ಹನಿಮೂನ್‌ಗೆ ತೆರಳಿತ್ತು. ಆದರೆ ಜೂನ್ 2ರಂದು ವೈಸಾವ್ಡಾಂಗ್ ಜಲಪಾತದ ಪಾರ್ಕಿಂಗ್ ಬಳಿ ಇರುವ ಕಂದಕದಲ್ಲಿ ರಾಜಾ ರಘುವಂಶಿ ಶವವಾಗಿ ಪತ್ತೆಯಾಗಿದ್ದರು. ಘಟನೆ ಬಳಿಕ ಸೋನಮ್ ರಘುವಂಶಿ ಕಾಣೆಯಾಗಿದ್ದಳು. ಆಕೆ ಕಿಡ್ನ್ಯಾಪ್ ಆಗಿರಬಹುದೆಂದು ಎಲ್ಲರೂ ಆಕೆಯ ಬಗ್ಗೆ ಕಂಗಾಲಾಗಿದ್ದರು. ಆದರೆ ಬಳಿಕ ಅಸಲಿ ವಿಚಾರ ಬಹಿರಂಗವಾಗಿ ರಾಜಾ ರಘುವಂಶಿ ಹತ್ಯೆಯಲ್ಲಿ ಪತ್ನಿ ಸೋನಂ ಕೈವಾಡವಿದೆ ಎಂದು ಗೊತ್ತಾಗಿತ್ತು.
1993ರಲ್ಲಿ 'ಬಾ ನಲ್ಲೆ ಮಧುಚಂದ್ರಕೆ' ಸಿನಿಮಾ ತೆರೆಗೆ ಬಂದು ಸೂಪರ್ ಹಿಟ್ ಆಗಿತ್ತು. ನಾಗತಿಹಳ್ಳಿ ಚಂದ್ರಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದ ಚಿತ್ರದಲ್ಲಿ ಕೆ. ಶಿವರಾಮ್ ಹಾಗೂ ನಂದಿನಿ ಸಿಂಗ್ ನಾಯಕ-ನಾಯಕಿಯಾಗಿ ನಟಿಸಿದ್ದರು. ನೈಜ ಘಟನೆಯಿಂದ ಪ್ರೇರಣೆಗೊಂಡು ಈ ಚಿತ್ರ ಕಟ್ಟಿಕೊಡಲಾಗಿತ್ತು. ಇದೇ ಹೆಸರಿನಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಕಾದಂಬರಿ ಬರೆದಿದ್ದರು. ಅದು ಜನಪ್ರಿಯವಾಗಿತ್ತು. ಬಳಿಕ ಅದನ್ನೇ ಸಿನಿಮಾ ಮಾಡಿದಾಗ ಸೂಪರ್ ಹಿಟ್ ಆಗಿತ್ತು.

ಉದ್ಯಮಿ ರಾಜಾ ರಘುವಂಶಿ ಪ್ರಕರಣಕ್ಕೂ 'ಬಾ ನಲ್ಲೆ ಮಧಚಂದ್ರಕೆ' ಚಿತ್ರದ ಕಥೆಗೂ ಕೆಲ ಸಾಮ್ಯತೆಗಳಿವೆ. ಅಂದಹಾಗೆ ಸಿನಿಮಾದಲ್ಲಿ ನಾಯಕ ವಿವೇಕ್ ಹನಿಮೂನ್‌ಗೆ ಹೋಗಿದ್ದಾಗ ಯಾರಿಗೂ ಅನುಮಾನ ಬರದಂತೆ ಪತ್ನಿ ಪ್ರೀತಿಯನ್ನು ಕೊಲ್ಲುತ್ತಾನೆ. ಆದರೆ ಈ ಪ್ರಕರಣದಲ್ಲಿ ಉಲ್ಟಾ ಆಗಿದೆ. ಪತ್ನಿಯೇ ಪತಿಯನ್ನು ಕೊಲ್ಲಲು ಮುಹೂರ್ತ ಇಟ್ಟಿದ್ದಾಳೆ. ಸಿನಿಮಾದಲ್ಲಿ ವಿವೇಕ್ ಪತ್ನಿಯ ಹತ್ಯೆ ಬಳಿಕ ನಾನೇನು ಮಾಡಿಲ್ಲ ಎನ್ನುವಂತೆ ನಾಟಕ ಮಾಡುತ್ತಾನೆ. ಈ ಪ್ರಕರಣದಲ್ಲಿ ಸೋನಂ ಕೂಡ ಅದೇ ಮಾಡಿದ್ದಳು.
'ಬಾ ನಲ್ಲೆ ಮಧಚಂದ್ರಕೆ' ಚಿತ್ರದಲ್ಲಿ ವಿವೇಕ್ ಮೊದಲೇ ಪತ್ನಿ ಹತ್ಯೆಯ ಸಂಚು ರೂಪಿಸಿರುತ್ತಾನೆ. ಹಾಗಾಗಿ ಆಕೆಯ ರಿಟರ್ನ್ ಟಿಕೆಟ್ ಬುಕ್ ಮಾಡಿರುವುದಿಲ್ಲ. ರಾಜಾ ರಘುವಂಶಿ ಪ್ರಕರಣದಲ್ಲಿ ಕೂಡ ರಿಟರ್ನ್ ಟಿಕೆಟ್ ಬುಕ್ ಮಾಡಿರಲಿಲ್ಲ, ಎಂದು ಆತನ ತಾಯಿ ಹೇಳಿಕೆ ನೀಡಿದ್ದಾರೆ. ಅಂದರೆ ಹನಿಮೂನ್‌ಗೆ ಹೋದಾಗಲೇ ಪತಿಯನ್ನು ಕೊಲ್ಲಬೇಕು ಎಂದು ಸೋನಂ ಮೊದ್ಲೆ ಸಂಚು ರೂಪಿಸಿದ್ದಳು ಎನ್ನುವುದು ಗೊತ್ತಾಗುತ್ತಿದೆ.
ಸೋನಂ ಪ್ರಿಯಕರ ರಾಜ್ ಕುಶ್ವಾಹ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾಗ್ತಿದೆ. ಆತನ ಜೊತೆ ಸೇರಿ ಪತಿ ರಾಜಾ ರಘುವಂಶಿಯನ್ನು ಸೋನಂ ಹತ್ಯೆ ಮಾಡಿಸಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ತಮ್ಮ ಮಗಳು ಏನು ತಪ್ಪು ಮಾಡಿಲ್ಲ ಎಂದು ಸೋನಂ ತಂದೆ ಹೇಳುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ರಾಜಾ ರಘುವಂಶಿ ಬೆನ್ನಿಗೆ ತೀವ್ರವಾದ ಗಾಯಗಳಾಗಿವೆ ಎಂದು ಗೊತ್ತಾಗಿದೆ. ಹತ್ಯೆಗೆ ಅಸಲಿ ಕಾರಣ ಏನು ಎನ್ನುವ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


Click it and Unblock the Notifications











