ಡಿ.1 ರಿಂದ 'ಇಂಡಿವುಡ್ ಕಿರುಚಿತ್ರೋತ್ಸವ': ಯುವಪ್ರತಿಭೆಗಳಿಗೆ ಸುವರ್ಣಾವಕಾಶ
ಭಾರತೀಯ ಯುವ ಪ್ರತಿಭೆಗಳನ್ನ ಪ್ರೋತ್ಸಾಹಿಸುತ್ತಿರುವ 'ಇಂಡಿವುಡ್ ಟ್ಯಾಲೆಂಟ್ ಹಂಟ್' ನಾಲ್ಕನೇ ಆವೃತ್ತಿ ಡಿಸೆಂಬರ್ ನಲ್ಲಿ ಆರಂಭವಾಗುತ್ತಿದೆ. ನಾಲ್ಕು ದಿನಗಳ ಈ ಕಿರುಚಿತ್ರೋತ್ಸವ ಹೈದ್ರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯಲಿದ್ದು, ಡಿಸೆಂಬರ್ 1 ರಿಂದ 4ರ ವರೆಗೂ ನಡೆಯಲಿದೆ.
ಈಗಾಗಲೇ ಆನ್ ಲೈನ್ ನೋಂದಾಣಿ ಆರಂಭವಾಗಿದ್ದು ಸಂಸ್ಥೆಗಳು ಉಚಿತವಾಗಿ ಜುಲೈ 31ರವರೆಗೂ ರಿಜಿಸ್ಟರ್ ಮಾಡಿಕೊಳ್ಳಬಹುದು. ಮತ್ತು ವೈಯಕ್ತಿಕವಾಗಿ ರಿಜಿಸ್ಟರ್ ಮಾಡಲು 500 ರೂಪಾಯಿ ಶುಲ್ಕ ಪಾವತಿಸಬೇಕಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಇಂಡಿವುಡ್ ಸಂಸ್ಥೆಯ ಸದಸ್ಯರು ಕಾರ್ಯಕ್ರಮದ ರೂಪುರೇಷೆಗಳನ್ನ ಹಂಚಿಕೊಂಡರು. ಸಿನಿಮಾ, ಪ್ಯಾಶನ್, ಮ್ಯೂಸಿಕ್, ಡ್ಯಾನ್ಸ್, ಆರ್ಟ್, ಫಿಲ್ಮ್ ಮೇಕಿಂಗ್, ಜಾಹೀರಾತು ಸೇರಿದಂತೆ ಸುಮಾರು 27 ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದೆ. ವಿಜೇತರಿಗೆ ಆಕರ್ಷಕ ಬಹುಮಾನಗಳು, ನಗದು ಮತ್ತು ಚಲನಚಿತ್ರಗಳಿಗೆ ಪ್ರವೇಶ ನೀಡಲಾಗುತ್ತದೆ ಎಂದು ವಿವರಿಸಿದರು.

ಹೈದ್ರಾಬಾದ್ ನಲ್ಲಿ ಮುಖ್ಯ ಕಛೇರಿ ಹೊಂದಿರುವ ಇಂಡಿವುಡ್ ಟ್ಯಾಲೆಂಟ್ ಹಂಟ್ ವಿವಿಧ ಕಲಾತ್ಮಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸೃಜನಶೀಲ ಪ್ರತಿಭೆಗಳನ್ನು ಹುಡುಕಲು ಪ್ರಮುಖ ರಾಷ್ಟ್ರೀಯ ಮಟ್ಟದ ವೇದಿಕೆಯಾಗಿದೆ. ಈ ವಿಶೇಷ ಸಂಸ್ಥೆಗೆ ಭಾರತದ ಎಲ್ಲ ಚಿತ್ರರಂಗಗಳು ಸಹಕಾರ ನೀಡುತ್ತಿದೆ.
ವಿಶೇಷ ಅಂದ್ರೆ, ಇಂಡಿವುಡ್ ಟ್ಯಾಲೆಂಟ್ ಹಂಟ್ 2018ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಂಪೂರ್ಣ ಬೆಂಬಲ ನೀಡಿದ್ದು, ಚಿತ್ರೋದ್ಯಮದಲ್ಲಿ ಹೆಚ್ಚು ಅವಕಾಶಗಳನ್ನ ಕಲ್ಪಿಸಲು ನೆರವಾಗಲಿದೆ ಎಂದು ಸುದ್ದಿಗೋಷ್ಠಿಯ ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾರಾ ಗೋವಿಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಸಾರಾ ಗೋವಿಂದು ''ಚಿತ್ರರಂಗದ ಬಗ್ಗೆ ಚಿತ್ರ ನಿರ್ಮಾಣದ ಬಗ್ಗೆ ಸರಿಯಾದ ತರಬೇತಿ ಇಲ್ಲದೇ ಸಿನಿಮಾ ಮಾಡ್ತಾರೆ, ಕೊನೆಗೆ ಸೋಲು ಕಾಣ್ತಾರೆ. ಆದ್ರೆ, ಇಂಡಿವುಡ್ ಅಂತಹ ಸಂಸ್ಥೆಯಿಂದ ಅತ್ಯುತ್ತಮ ತರಬೇತಿ ಸಿಗಲಿದ್ದು, ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ಯುವ ಜನತೆಗೆ, ಸಿನಿಮಾಗೆ ಬರಲು ತಯಾರಾಗುತ್ತಿರುವ ಪ್ರತಿಭೆಗಳಿಗೆ ಇದು ಹೆಚ್ಚು ಸಹಾಯವಾಗಲಿದೆ'' ಎಂದು ತಿಳಿಸಿದರು.

ಸಾರಾ ಗೋವಿಂದು ಅವರ ಜೊತೆ ಅನ್ಸನ್ ಐಜೆ, ಇಂಡಿವುಡ್ ಪ್ರಾಜೆಕ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO), ಏರೀಸ್ ಸಮೂಹ ಮಾಧ್ಯಮದ ಮುಖ್ಯಸ್ಥ ಮತ್ತು ಇಂಡಿವುಡ್ ಟಿವಿ ಕಾರ್ಯಕ್ರಮದ ಮುಖ್ಯಸ್ಥ ಮುಕೇಶ್ ಎಂ ನಾಯರ್, ರೂಪದರ್ಶಿ ಐಶ್ವರ್ಯಾ ಪ್ರಸಾದ್, ನಟಿ ರೂಪದರ್ಶಿ ಕೌಶಿಕ್ ಶೆಟ್ಟಿ, ಸ್ಟಾರ್ ಬುಕ್ಮೀಡಿಯಾ ಸಿಇಓ ಗೊಲ್ಲಕೃಷ್ಣ ಭಾಗಿಯಾಗಿದ್ದರು.
2017ರಲ್ಲಿ ಮೂರನೇ ಆವೃತ್ತಿಯ ಇಂಡಿವುಡ್ ಟ್ಯಾಲೆಂಟ್ ಹಂಟ್ ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ದೇಶದಾದ್ಯಂತ ಹತ್ತು ಸಾವಿರಕ್ಕೂ ಹೆಚ್ಚಿನ ಮಂದಿ ನೋಂದಾಯಿಸಕೊಂಡಿದ್ದು, ಅಂತಿಮವಾಗಿ ಸ್ಪರ್ಧೆಗೆ ಮೂರು ಸಾವಿರ ಆಯ್ಕೆ ಮಾಡಿಕೊಳ್ಳಲಾಗಿತ್ತು. ಇದೀಗ, ನಾಲ್ಕನೇ ಆವೃತ್ತಿಗೆ ಸಿದ್ಧವಾಗಿದ್ದು, ಯುವ ಪ್ರತಿಭೆಗಳಿಗೆ ಇದೊಂದು ಉತ್ತಮ ವೇದಿಕೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ www.indywoodtalenthunt.com ಈ ವೆಬ್ ಸೈಟ್ ನೋಡಿ


Click it and Unblock the Notifications











