For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಒಂದು ವಿಶಿಷ್ಟ ಕೃತಿ ಶ್ರವಣ ಸುಧಾ ಕಥನ

  |

  ವಿವಿಧ ಬಗೆಯ ಸಾಹಿತ್ಯದಿಂದ ಸಮೃದ್ಧವಾಗಿರುವ ಕನ್ನಡ ಸಾಹಿತ್ಯದಲ್ಲಿ ಚಿತ್ರಸಂಗೀತದ ಬಗ್ಗೆ ಅದರಲ್ಲೂ ಹಿಂದಿ ಚಿತ್ರಸಂಗೀತದ ಬಗೆಗೆ ಇದ್ದ ಕೊರತೆಯನ್ನು ಶ್ರೀ ಶ್ರೀಪಾದ ಪೂಜಾರ್‌ ರ ಕೃತಿ 'ಶ್ರವಣಸುಧಾ ಕಥನ' ಸಮರ್ಥವಾಗಿ ನೀಗಿಸಿದೆ ಎಂಬುದು ಅತಿಶಯೋಕ್ತಿಯಲ್ಲ.

  ಸುಮಾರು ಎಂಟು ದಶಕಗಳಿಂದ ಚಿತ್ರಸಂಗೀತ ರಸಿಕರನ್ನು ರಂಜಿಸಿ ಅವರ ದೈನಂದಿನ ಬದುಕಿನ ಕೋಟಲೆಗಳನ್ನು ಸಹ್ಯವಾಗಿಸಿದ ಹಿಂದಿ ಚಿತ್ರರಂಗದ ಅಪೂರ್ವ ಸಂಗೀತದ ಅನೇಕ ಒಳನೋಟಗಳನ್ನು ಓದುಗರ ಮನಮುಟ್ಟುವಂತೆ 302 ಪುಟಗಳಲ್ಲಿ ಅನಾವರಣಗೊಂಡಿರುವ ಸಾಹಿತ್ಯ ಸಮೃದ್ಧಿ ಬೆರಗುಗೊಳಿಸುವಂಥಹದು.

  ಕನ್ನಡ-ಸಂಸ್ಕೃತದ ಖ್ಯಾತ ವಿದ್ವಾಂಸರಾಗಿರಾದ ಪ್ರೊ.ಮಲ್ಲೆಪುರಂ ಜಿ ವೆಂಕಟೇಶ್ ಅವರು ತಮ್ಮ ಮುನ್ನುಡಿಯಲ್ಲಿ ಪ್ರಸ್ತುತ ಪಡಿಸಿರುವ ಈ ಮಾತುಗಳು ಕೃತಿಯ ಮಹತ್ವವನ್ನು ಮನಗಾಣಿಸುತ್ತವೆ, ''ಶ್ರೀಪಾದ ಪೂಜಾರರು ಭಾರತೀಯ ಚಿತ್ರಸಂಗೀತದ ಮುಖ್ಯ ಪರಂಪರೆಯ ಸಮಸ್ತ ಮುಖಗಳನ್ನು ಈ ಕೃತಿಯ ಮೂಲಕ ಅನಾವರಣಗೊಳಿಸಿದ್ದಾರೆ. ಈ ಕೃತಿಯ ಬಂಧ, ಭಾವ, ಭಾಷೆ, ವಿಂಗಡಣೆ, ಶೈಲಿ ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ. ನನಗೆ ತಿಳಿದಿರುವಂತೆ ಹಿಂದಿ ಚಿತ್ರಸಂಗೀತದ ಅಭಿಜಾತ ಯುಗವನ್ನು ಶ್ರೀಪಾದರು ನಿರುಮ್ಮಳವಾಗಿ ಈ ಕೃತಿಯ ಮೂಲಕ ನಮಗೆ ಕಟ್ಟಿಕೊಟ್ಟಿದ್ದಾರೆ. ಇಂಥಹದ್ದೊಂದು ಕೃತಿ ಯಾವ ಭಾರತೀಯ ಭಾಷೆಯಲ್ಲೂ ಪ್ರಕಟವಾಗಿಲ್ಲದಿರುವುದನ್ನು ನಾವು ಗಮನಿಸಬೇಕು''. ಅವರ ಈ ನುಡಿಗಳು ಅಭಿಮಾನದ ಉತ್ಪ್ರೇಕ್ಷೆಯಲ್ಲ ಎನ್ನುವುದನ್ನು ಅಸಂಖ್ಯ ಓದುಗರು ಈ ಕೃತಿಯ ಹೂರಣವನ್ನು ಆಸ್ವಾದಿಸಿದ್ದಾರೆಂಬುದಕ್ಕೆ ಜನೆವರಿಯಲ್ಲಿ ಪ್ರಕಟಗೊಂಡ ಈ ಕೃತಿ ಫೆಬ್ರವರಿಯಲ್ಲಿ ಅಂದರೆ ಒಂದೇ ತಿಂಗಳಿನಲ್ಲಿ ಎರಡನೇ ಮುದ್ರಣ ಕಂಡಿರುವ ಅಂಶ ಸ್ಪಷ್ಟಪಡಿಸುತ್ತದೆ.

  ಭಾರತೀಯ ಪರಂಪರೆ ಸಂಸ್ಕೃತಿ ನಿರ್ಮಾಣದಲ್ಲಿ ಗಂಗಾನದಿ ಮಹತ್ವದ ಪಾತ್ರವಹಿಸಿದೆ ಹಿಂದಿ ಚಿತ್ರಸಂಗೀತದ ಪ್ರವಾಹದ ಪ್ರಭಾವವನ್ನು 'ಗಂಗೆ'ಯ ನಡೆಗೆ ಸಂವಾದಿಯಾಗುವಂತೆ ಈ ಕೃತಿಯ ವಿವಿಧ ಅಧ್ಯಾಯಗಳು ಮೈದಳೆದಿವೆ. ನಮ್ಮ ಪುಣ್ಯನದಿಯನ್ನು ಮಲಿನಗೊಳಿಸಿದ ನಮ್ಮ ಅಸಾಂಸ್ಕೃತಿಕ ಮನೋಭೂಮಿಕೆಯೇ ಹಿಂದಿ ಚಿತ್ರಸಂಗೀತವೂ ಸೇರಿದಂತೆ ಎಲ್ಲ ಸಂಸ್ಕೃತಿ ಮಾಧ್ಯಮವನ್ನೂ ಭ್ರಷ್ಟಗೊಳಿಸಿದ ರೀತಿಯೂ ಓದುಗನ ಗಮನಕ್ಕೆ ಬರುತ್ತದೆ. ಕೇವಲ ವಸ್ತು-ವಿವರಣೆಗಳನ್ನು ನೀಡುವ ಜೊತೆಗೆ ಅನೇಕ ಹೃದ್ಯಪ್ರಸಂಗಗಳ ಒಳನೋಟಗಳನ್ನು ಗ್ರಹಿಸಿ ಅವನ್ನು ಓದುಗರ ಅನುಭವಕ್ಕೂ ಬರುವಂತೆ ಮಾಡಿರುವ ಬರೆಹದ ರೀತಿ ವಿಶಿಷ್ಟವಾಗಿದೆ.

  ಹೀಗಾಗಿ ಲೇಖಕರು ತಮ್ಮ ಅನುಭವವನ್ನು ಓದುಗರ ಅನುಭವವೂ ಆಗುವಂತೆ ಮೂಡಿಸಿರುವಲ್ಲಿ ಕೃತಿಯ ಸಾರ್ಥಕತೆ ಅಡಗಿದೆ. ಜೊತೆಗೆ ಭಾರತದ ಆಧ್ಯಾತ್ಮಿಕತೆಯ ಔನ್ನತ್ಯವಾದ "ಲೌಕಿಕವನ್ನು ಬಿಡದೆ ಆಧ್ಯಾತ್ಮಿಕತೆ"ಯನ್ನು ಸಾಧಿಸಿದ ಋಷಿ ಪರಂಪರೆಯನ್ನು ಹಿಂದಿ ಚಿತ್ರಸಂಗೀತದ ದಿಗ್ಗಜರು ಸಾರ್ಥಕವಾಗಿ ಜೀವಿಸಿದರು ಎಂಬ ವಿವರಗಳು ಕೃತಿಯನ್ನು ಸಾಮಾನ್ಯ ಸ್ತರದಿಂದ ವಿಶಿಷ್ಟತೆಗೆ ಕೊಂಡೊಯ್ಯುವಲ್ಲಿ ನೆರವಾಗಿದೆ.

  ಸುಮಧುರ ಸಂಗೀತದಿಂದ ಎಲ್ಲರ ಮನಗೆದ್ದ ಮದನ್‌ ಮೋಹನ್, ಉರ್ದು ಶ್ರೀಮಂತ ಹಿನ್ನೆಲೆಯಲ್ಲಿ ಭಾರತೀಯ ಸಂಗೀತದ ಉನ್ನತಿಯನ್ನು ಸಾಧಿಸಿದ ನೌಷಾದ್, ಲೌಕಿಕತೆಗೇ ಪ್ರಾಮುಖ್ಯತೆ ಕೊಟ್ಟರೂ ಭಾರತೀಯ ಸಂಗೀತದ ಔನ್ನತ್ಯವನ್ನು ಪಂಜಾಬಿ ಜಾನಪದೀಯ ಹಿನ್ನೆಲೆಯಲ್ಲಿ ಮನಗಾಣಿಸುವ ಸುಮಧುರ ಸಂಗೀತ ನೀಡಿದ ಓ.ಪಿ.ನಯ್ಯರ್ ಮತ್ತು ಅತ್ಯಂತ ಸಾಧಾರಣ ಶ್ರೋತೃವೂ ಸಂಗೀತದ ಮಾಧುರ್ಯವನ್ನು ಸವಿಯುವಂತೆ ಮಾಡಿದ ರವಿ, ಈ ನಾಲ್ವರ ವಿಸ್ತೃತ ಪರಿಚಯ ಮಾಡಿಕೊಡುತ್ತಾ ಈ ಎಲ್ಲರೂ ಹೇಗೆ ಸಾಧನೆಯ ತಮ್ಮ ತಪಸ್ವೀ ಜೀವನದಿಂದ ಜನಸಾಮಾನ್ಯರ ಬದುಕು ಬೆಳಗುವಂತೆ ಮಾಡಿದರು ಎಂಬ ವಿವರಗಳು ಓದುಗರ ಅಂತರಂಗ ಪ್ರವೇಶಿಸಿ ಈ ಋಷಿತುಲ್ಯ ವ್ಯಕ್ತಿಗಳು ನಾಡಿಗೆ ಮಾಡಿದ ಉಪಕಾರದ ವ್ಯಾಖ್ಯೆಯನ್ನು ಸ್ಮರಿಸುವಂತೆ ಮಾಡುತ್ತವೆ.

  ಇದರೊಂದಿಗೆ ಇನ್ನೂ ಹದಿನೈದಕ್ಕೂ ಹೆಚ್ಚಿನ ಪ್ರಮುಖ ಸಂಗೀತಗಾರರ ಕಿರುಪರಿಚಯ ಮಾಡಿಕೊಡುತ್ತ ಸಹೃದಯರು ಅದರ ಪೂರ್ಣ ವಿವರಗಳನ್ನು ತಿಳಿದುಕೊಳ್ಳಲು ಈ ಕೃತಿ ಪ್ರೇರೇಪಿಸುತ್ತದೆ. ಇಷ್ಟಾದರೂ ಈ ಕೃತಿಯ ಚಿತ್ರಸಂಗೀತವೆಂಬ ಮಹಾನ್ ಸಾಗರದ ಎಲ್ಲ ಆಯಾಮಗಳನ್ನು ಕಟ್ಟಿಕೊಡಲಾಗದೇ ಇದು ಒಂದು 'ವಿಷಯ ಸೂಚಿ' ಮಾತ್ರವೇ ಆಗಿದೆ ಎನ್ನುವ ಲೇಖಕರ ವಿನಯ ಓದುಗರನ್ನು ಆಶ್ಚರ್ಯಚಕಿತಗೊಳಿಸುತ್ತದೆ.

  ಉಚಿತ ಕೊರೊನಾ ಲಸಿಕೆ ಮತ್ತಿ ಔಷಧಿಗಳನ್ನು ಪೂರೈಸ್ತಿದ್ದಾರೆ ಮೆಗಾಸ್ಟಾರ್ | Filmibeat Kannada

  ಈ ಕೃತಿಯ ಪೂರ್ಣಪ್ರಮಾಣದ ವಿಮರ್ಶೆ ಆಗಬೇಕಾಗಿದ್ದು, ಅದು ಈ ವಿಶಿಷ್ಟ ಕೃತಿಗೆ ಸಲ್ಲಬೇಕಾದ ಗೌರವವೂ ಆಗುತ್ತದೆಂಬುದರಿಂದ ಅಂತಹ ಪ್ರಯತ್ನಕ್ಕೆ ಈ ಕಿರುಲೇಖನ ನಾಂದಿಯಾಗಲಿ ಎಂಬ ಆಶಯದಿಂದ ಈ ಪುಸ್ತಕ ಪರಿಚಯ ಮಾಡಿಕೊಡಲಾಗಿದೆ. ಜೊತೆಗೆ ಲೇಖಕರು ಬಯಸುವಂತೆ ಈ ಕೃತಿಯು ಇಂತಹ ಇನ್ನೂ ಅನೇಕ ಕೃತಿಗಳ ನಿರ್ಮಾಣಕ್ಕೆ ಕಾರಣವಾಗಿ ಹಿಂದಿ ಚಿತ್ರಸಂಗೀತ ದ ಬಗ್ಗೆ ಅಷ್ಟೇ ಅಲ್ಲ ಎಲ್ಲ ಭಾರತೀಯ ಭಾಷಾ ಚಿತ್ರಗಳ ಸಂಗೀತದ ಸಮೃದ್ಧ ಸಾಂಸ್ಕೃತಿಕತೆಯನ್ನು ಪರಿಚಯಿಸುವ ಒಂದು ಅಗತ್ಯ ಕಾರ್ಯದ ಬಗ್ಗೆ ಸಂಸ್ಕೃತಿ ಪೋಷಕರ ಆಸಕ್ತಿ ಮೂಡುವಂತೆ ಆಗಲಿ ಎಂಬುದು ಈ ಕಿರುಲೇಖನದ ಹಾರೈಕೆ.

  English summary
  'Shravana Sudha Kathana' is a Kannada book about Hindi movie music. Book is written by Sri Paada Poojar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X