ನಟ ದರ್ಶನ್ ತಂದೆಯವರಿಗೆ ಭಾರಿ ಅಪಮಾನ

ಕೇವಲ ನಲವತ್ತೈದು ಸೆಕೆಂಡ್ ಗಳ ಕಾಲಾವಧಿಯ ವಿಡಿಯೋ ಇದಾಗಿದೆ. ಇದರಲ್ಲಿ ನಿರ್ಮಾಪಕ ಸೂರಪ್ಪ ಬಾಬು ಹಾಗೂ ನೀಲಕಂಠ ಎಂಬುವವರ ನಡುವೆ ನಡೆದ ಸಂಭಾಷಣೆಯ ತುಣುಕುಗಳಿವೆ. ಇಬ್ಬರೂ ಪಾನಮತ್ತರಾಗಿ ತೂಗುದೀಪ ಶ್ರೀನಿವಾಸ್ ಅಭಿನಯ 'ಭಾಗ್ಯವಂತ' ಚಿತ್ರದ ಬಗ್ಗೆ ಚರ್ಚಿಸುತ್ತಿರುತ್ತಾರೆ.
'ಭಾಗ್ಯವಂತರು' ಚಿತ್ರದಲ್ಲಿನ ಕ್ಲೈಮ್ಯಾಕ್ಸ್ ಸನ್ನಿವೇಶದ ಬಗ್ಗೆ ಮಾತನಾಡುತ್ತಾ, ತೂಗುದೀಪ ಶ್ರೀನಿವಾಸ್ ಅವರನ್ನು ಸೂ**ಮಗ ಎಂದು ಸಂಭೋದಿಸುತ್ತಾರೆ ಸೂರಪ್ಪ ಬಾಬು. ಮೂರು ವರ್ಷಗಳ ಹಿಂದೆಯೇ ಈ ವಿಡಿಯೋವನ್ನು ಚಿತ್ರಿಸಲಾಗಿದೆ ಎನ್ನಲಾಗಿದೆ.
ಈ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿರುವ ದಿನಕರ್ ತೂಗುದೀಪ ಅವರು, "ಆ ವ್ಯಕ್ತಿ ನಮ್ಮ ತಂದೆಯ ಕಾಲಿನ ಧೂಳಿಗೆ ಸಮಾನ. ಬೀದಿಯಲ್ಲಿ ಬೊಗಳುವ ನಾಯಿಗಳಿಗೆಲ್ಲಾ ಪ್ರತಿಕ್ರಿಯಿಸಲ್ಲ. ಅವನಿಗೆ ಸಿನಿಮಾ ಮಾಡಲು ಯೋಗ್ಯತೆ ಇಲ್ಲ. ಇಂತಹವರನ್ನು ಇಂಡಸ್ಟ್ರಿಯಿಂದ ಕತ್ತುಹಿಡಿದು ಹೊರತಳ್ಳಬೇಕು.
ಸಿನಿಮಾ ಮಾಡಿ ಲೈಮ್ ಲೈಟ್ ಗೆ ಬರುವ ಯೋಗ್ಯತೆ ಇಲ್ಲ. ಬೇರೆಯವರ ಬಗ್ಗೆ ಮಾತನಾಡುತ್ತಾ ಲೈಮ್ ಲೈಟ್ ಗೆ ಬರಲು ಪ್ರಯತ್ನಿಸುತ್ತಾರೆ. ನಮ್ಮ ಅಣ್ಣ ದರ್ಶನ್ ಇಂತಹವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ಒಂದು ವೇಳೆ ಅವನು ಒಪ್ಪಿದರೂ ನಾನು ಕಾಲ್ ಶೀಟ್ ಕೊಡೋದಕ್ಕೆ ಬಿಡಲ್ಲ" ಎಂದು ದಿನಕರ್ ತಮ್ಮ ಆಕ್ರೋಶವನ್ನು ಟಿವಿ9 ಸುದ್ದಿ ವಾಹಿನಿಯಲ್ಲಿ ಹೊರಹಾಕಿದರು.
ಈ ಬಗ್ಗೆ ಸ್ವತಃ ಸೂರಪ್ಪ ಬಾಬು ಪ್ರತಿಕ್ರಿಯಿಸುತ್ತಾ, "ಮೂರು ವರ್ಷಗಳ ಹಿಂದಿನ ವಿಡಿಯೋವನ್ನು ಈಗ ಬೆಳಕಿಗೆ ತಂದಿರುವ ಹಿಂದಿನ ಉದ್ದೇಶವೇನು? ಈ ವಿಡಿಯೋ ಇರುವುದು ಕೇವಲ 45 ಸೆಕೆಂಡ್ ಅಲ್ಲ, ಮೂರರಿಂದ ನಾಲ್ಕು ನಿಮಿಷಗಳಷ್ಟು ವಿಸ್ತಾರವಾಗಿದೆ. ಇನ್ನೂ ಇದರಲ್ಲಿ ಯಾರ್ಯಾರು ಇದ್ದಾರೆ ಎಂಬುದೂ ಬಹಿರಂಗವಾಗಲಿ.
ನಾನು ಶಿವರಾಜ್ ಕುಮಾರ್ ವಿರುದ್ಧ ದೂರು ನೀಡಿದ ಬಳಿಕ ಈ ವಿಡಿಯೋ ಹೊರಬಿದ್ದಿದೆ. ಇದರ ಹಿಂದಿನ ಕುತಂತ್ರ ಏನು ಎಂಬುದು ಮೊದಲು ನಿರ್ಧಾರವಾಗಲಿ. ನನಗೆ ಶಿವಣ್ಣ ಅಭಿಮಾನಿಗಳು ಎಂದು ಹೇಳಿಕೊಂಡು ಹಲವಾರು ಮಂದಿ ಬೆದರಿಕೆ ಕರೆಗಳನ್ನು ಮಾಡುತ್ತಿದ್ದಾರೆ. ಅವೆಲ್ಲವನ್ನೂ ರೆಕಾರ್ಡ್ ಮಾಡಿದ್ದೇನೆ.
ಇಂಡಸ್ಟ್ರಿಯಲ್ಲಿ ತಾವು ಬೆಳೆಯದಂತೆ ಮಾಡುವ ಹಾಗೂ ತಮ್ಮ ಕೆರಿಯರ್ ಮುಗಿಸುವ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆ ಎಂದು ಸೂರಪ್ಪ ಬಾಬು ಹೇಳಿದ್ದಾರೆ. ತೂಗುದೀಪ ಶ್ರೀನಿವಾಸ್ ಬಗ್ಗೆ ತಾವು ಹಾಗೆ ಮಾತನಾಡಿರುವುದು ನಿಜ ಎಂದಿರುವ ಅವರು ಈ ಬಗ್ಗೆ ಕ್ಷಮೆಯನ್ನೂ ಯಾಚಿಸಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಸಿ ಸಾ.ರಾ.ಗೋವಿಂದು ಅವರು ಪ್ರತಿಕ್ರಿಯಿಸುತ್ತಾ, ತೂಗುದೀಪ ಶ್ರೀನಿವಾಸ್ ಅವರು ಸತ್ತು ಸ್ವರ್ಗ ಸೇರಿದ್ದಾರೆ. ಅವರ ನನ್ನ ಸಂಬಂಧ ಇಪ್ಪತ್ತು ವರ್ಷಗಳಷ್ಟು ಹಳೆಯದು. ಅವರೊಬ್ಬ ಮಹಾನ್ ನಟ. ತುಂಬಾ ಸಂಭಾವಿತರಾದ ಅವರ ಬಗ್ಗೆ ಹೀಗೆ ಮಾತನಾಡುವುದು ಸರಿಯಲ್ಲ.
ಅವರು ಚಿತ್ರರಂಗದಲ್ಲಿ ಇದ್ದಷ್ಟು ದಿನವೂ ವಿವಾದಗಳಿಂದ ದೂರ ಇದ್ದರು. ವರನಟ ರಾಜ್ ಕುಮಾರ್ ಅವರ ಜೊತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರನ್ನು ನಾನು ತುಂಬ ಹತ್ತಿರದಿಂದ ಬಲ್ಲೆ. ಅವರೊಬ್ಬ ಗೌರವಾನ್ವಿತ ನಟರು. ಅವರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ" ಎಂದಿದ್ದಾರೆ. (ಏಜೆನ್ಸೀಸ್)


Click it and Unblock the Notifications











