'ಇನ್ವಿಟೇಶನ್ ರೆಡಿ ಇದೆ, ಬೇಗ ಅನೌನ್ಸ್ ಮಾಡ್ತೀವಿ': ದಿವ್ಯಾ ಉರುಡುಗ, ಅರವಿಂದ್ ಕೆಪಿ ವಿಶೇಷ ಘೋಷಣೆ!
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಹಲವು ಅಚ್ಚರಿಗಳನ್ನು ನೀಡಿದೆ. ಈಗಾಗಲೇ ಒಂಬತ್ತು ಸೀಸನ್‌ಗಳು ಒಂದು ಓಟಿಟಿ ಕಾರ್ಯಕ್ರಮ ಕೂಡ ಪ್ರಸಾರವಾಗಿದೆ. ಇದಲ್ಲದೇ, ಈ ಕಾರ್ಯಕ್ರಮದಲ್ಲಿ ಬಂದವರು ಜೋಡಿಗಳಾಗಿ ಹಿಂತಿರುಗಿದ್ದಾರೆ. ಕೆಲವರು ಹೊರ ಬಂದ ಮೇಲೂ ಸಂಬಂಧ ಮುಂದುವರೆಸಿದ್ದಾರೆ.
ಹೀಗೆ ಬಿಗ್ ಬಾಸ್‌ನಲ್ಲಿ ಜೋಡಿಯಾದವರಲ್ಲಿ ರೇಸರ್ ಅರವಿಂದ್ ಕೆಪಿ ಮತ್ತು ನಟಿ ದಿವ್ಯಾ ಉರುಡುಗ ಕೂಡ ಒಬ್ಬರು. ಈಗ ಸ್ಯಾಂಡಲ್‌ವುಡ್‌ನಲ್ಲಿ ನೆಲೆಯೂರಲು ಆರಂಭಿಸಿರುವ ಈ ಜೋಡಿಯ ಮದುವೆಯ ಮಾತುಕತೆ ಸಕತ್ ಚರ್ಚೆಯಲ್ಲಿದೆ. ಅದಕ್ಕೆ ನಟಿ ದಿವ್ಯಾ ಉರುಡುಗ ಬೇರೆ ಆಗಾಗ್ಗೆ ಹಲವು ಹಿಂಟ್ ಕೊಟ್ಟು ಮದುವೆ ಮತ್ತು ಸಿನಿಮಾ ಯಾವುದು ಎಂಬ ಗೊಂದಲಕ್ಕೆ ನೂಕುತ್ತಾರೆ.

ಫೈನಲಿ ಅನೌನ್ಸ್ ಮಾಡೇ ಮಾಡ್ತಿವಿ ಅಂದ ದಿವ್ಯಾ, ಅರವಿಂದ್!
ಬಿಗ್ ಬಾಸ್‌ನಲ್ಲಿ ಶುರುವಾದ ಪ್ರೇಮ ಕಥೆ ಮದುವೆಯಲ್ಲಿ ಮತ್ತೊಂದು ಆರಂಭ ಕಾಣಲಿದೆ ಎಂಬುದು ಹಲವು ಮಂದಿಯ ನಿರೀಕ್ಷೆ. ಇದಕ್ಕೆ ತಕ್ಕಂತೆ ಇಬ್ಬರು ತಮ್ಮದು ಜೋಡಿ ಎಂದೆ ತೋರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಟಿ ಸೀರೆ, ಒಡವೆ, ಮಲ್ಲಿಗೆ ಜೋತೆ ಫೋಟೋಶೂಟ್ ಬೇರೆ ಮಾಡಿಸಿಕೊಳ್ತಿನಿ ಅಂದಿದ್ರು. ರೇಷ್ಮೆ ಸೀರೆ, ಮಲ್ಲಿಗೆ ಹೂ ಮುಡಿದು ಮದುಮಗಳಂತೆ ಕಂಗೊಳಿಸಿದ್ದರು. ಆ ಬಳಿಕ ಅದು ಸಿನಿಮಾಗೆ ಸಂಬಂಧಿಸಿದ ವಿಡಿಯೋ ಅನ್ನೋದು ಗೊತ್ತಾಯ್ತು.
ಈಗ ಮತ್ತೆ ಹೊಸ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಈ ಮುದ್ದಾದ ಜೋಡಿ ಇನ್ವಿಟೇಷನ್ ರೆಡಿ ಆಗಿದೆ ಅಂತಿದ್ದಾರೆ. ಹೊಸ ವಿಡಿಯೋದಲ್ಲಿ ನಟಿ ದಿವ್ಯಾ ಉರುಡುಗ ಶೀಘ್ರದಲ್ಲೇ ಒಂದು ಸರ್‌ಪ್ರೈಸ್ ನೀಡ್ತಿವಿ ಎಂದಿದ್ದಾರೆ. ಇದಕ್ಕೆ ಅರವಿಂದ್ ಕೂಡ ತಲೆ ಅಲ್ಲಾಡಿಸಿದ್ದು, ಇನ್ವಿಟೇಷನ್ ಜೊತೆಗೆ ಅದನ್ನು ಅನೌನ್ಸ್ ಮಾಡ್ತಿವಿ ಎಂದು ಅಚ್ಚರಿ ಮೂಡಿಸಿದ್ದಾರೆ.
ಮದುವೆನಾ...? ಸಿನಿಮಾ ಪ್ರಚಾರದ ಗಿಮಿಕ್...?
ಬಿಗ್ ಬಾಸ್ ಜೋಡಿ ನಟನೆಯ ಸಿನಿಮಾ 'ಅರ್ದಂಬರ್ಧ ಪ್ರೇಮಕಥೆ' ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಮೊದಲ ಹಾಡೊಂದು ಬಿಡುಗಡೆಯಾಗಿದೆ. ಅಭಿಮಾನಿಗಳಿಂದಲೇ ಹಾಡನ್ನು ರಿಲೀಸ್ ಮಾಡಿರೋದು ಕೂಡ ವಿಶೇಷ. ಹೀಗಾಗಿ ಕಳೆದ ಬಾರಿಯಂತೆ ಇವರು ಈ ಬಾರಿ ಕೂಡ ಸಿನಿಮಾ ಬಗ್ಗೆ ಮಾತಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಆದರೆ, ಇದು ಸಿನಿಮಾ ಪ್ರಚಾರದ ಗಿಮಿಕ್ ಅಲ್ಲ ಇಬ್ಬರು ಮದುವೆ ಆಗುತ್ತಾರೆ ಎಂದು ಕೂಡ ಅಭಿಮಾನಿಗಳು ಆಸೆಯಿಂದ ಕಾಯುತ್ತಿದ್ದಾರೆ. ಸಿನಿಮಾ ಪ್ರಚಾರವೋ, ಮದುವೆ ಆಮಂತ್ರಣವೋ ಬೇಗ ವಿಷಯ ಘೋಷಿಸಿ ಎನ್ನುವುದು ಇಬ್ಬರ ಫ್ಯಾನ್ಸ್ ಒತ್ತಾಯ.
ವಿಡಿಯೋದಲ್ಲಿ ಅರವಿಂದ್, ದಿವ್ಯಾ ಹೇಳಿದ್ದೇನು?
ಕಾರಿನಲ್ಲಿ ಹೋಗುತ್ತಿದ್ದ ವೇಳೆ ಅರವಿಂದ್ ಬಳಿ, "ಅವಿ, ಎಲ್ಲರೂ ಕೇಳ್ತಿದ್ದಾರೆ. ಮೊನ್ನೆ ಅನೌನ್ಸ್‌ಮೆಂಟ್ ಮಾಡ್ತಿವಿ ಅಂತ ಹೇಳಿದ್ರಿ. ಏನೋ ಅನೌನ್ಸ್ ಮಾಡಲಿಲ್ಲ ಅಂತ ನಾನಿಗ ಅವರಿಗೆ ಉತ್ತರ ಕೊಡಬೇಕು. ಹೇಳು ನೀನು ಯಾಕೆ ಬರಲಿಲ್ಲ" ಎಂದು ನಟಿ ದಿವ್ಯಾ ಉರುಡುಗ ಕೇಳುತ್ತಾರೆ. ಶಾಪಿಂಗ್ ಮುಗಿಸಿ ಬರುವಾಗ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡೆ ಎಂದು ಹೇಳಿದ್ದೆ ಅಲ್ವಾ ಅಂತ ಅರವಿಂದ್ ಉತ್ತರ ನೀಡುತ್ತಾರೆ. ಇದಾದ ಬಳಿಕ ಅರವಿಂದ್ ಅವರ ಫೋನ್ ರಿಂಗ್ ಆಗುತ್ತದೆ.
ಪೋನ್‌ನಲ್ಲಿ ಮಾತಾಡಿದ ಬಳಿಕ, "ಇನ್ವಿಟೇಷನ್ ಕೂಡ ರೆಡಿಯಾಗಿದೆ ಅಂತೆ. ಈ ಅನೌನ್ಸ್‌ಮೆಂಟ್ ಅನ್ನು ಇನ್ವಿಟೇಷನ್ ಜೊತೆಗೆ ಮಾಡೋಣ ಹೇಗೆ" ಎಂದು ಅರವಿಂದ್ ಕೇಳುತ್ತಾರೆ. ಅದಕ್ಕೆ ದಿವ್ಯಾ ಕೂಡ ಸೂಪರ್..ಇನ್ವಿಟೇಷನ್ ಜೊತೆಗೆ ಅನೌನ್ಸ್ ಮಾಡೋಣ ಎನ್ನುತ್ತಾರೆ. ಹೀಗಾಗಿ ಈ ಘೋಷಣೆಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.


Click it and Unblock the Notifications











