ಎಂಥಾ ವಿಪರ್ಯಾಸ ! ಮಲಯಾಳಂ ಸಿನಿಮಾ ನೋಡಲು ಬೆಂಗಳೂರಿನ ಕಾಲೇಜಿಗೆ ರಜೆ ಘೋಷಣೆ..!
ಒಂದು ಕಡೆ ಕನ್ನಡದವರಾಗಿ, ಕನ್ನಡದ ಅನ್ನವನ್ನು ತಿಂದು, ಕನ್ನಡದ ವಾತಾವರಣದಲ್ಲಿ ಬೆಳೆಯುವ ಅನೇಕರು ಕನ್ನಡ ಮಾತನಾಡಲು ಹಿಂದೆ ಮುಂದೆ ನೋಡುತ್ತಾರೆ. ಕನ್ನಡ ಬರುತ್ತಿದ್ದರು ಕೂಡ ಬೇರೆ ಭಾಷೆಯ ಮೇಲೆ ತಮಗೆ ಇರುವ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
ಮತ್ತೊಂದು ಕಡೆ ಕರುನಾಡು ವಲಸಿಗರ ಬೀಡು ಆಗುತ್ತಿದೆ. ಎಲ್ಲೆಲ್ಲಿಂದನೋ ಬಂದವರು ಕನ್ನಡಿಗರ ಮೇಲೆ ಅವರ ಭಾಷೆಯನ್ನು ಹೇರುತ್ತಿದ್ದಾರೆ. ಇನ್ನು ಕೆಲವೊಮ್ಮೆ ದಬ್ಬಾಳಿಕೆಯನ್ನು ಕೂಡ ಮಾಡಿದ್ದಾರೆ. ಹೀಗಿರುವಾಗ ಬೆಂಗಳೂರಿನ ಕಾಲೇಜ್ ಒಂದು ಕನ್ನಡದ ಚಿತ್ರವಲ್ಲ ಬದಲಿಗೆ ಮಲಯಾಳಂ ಚಿತ್ರವನ್ನ ನೋಡಲು ಇಡೀ ಕಾಲೇಜ್‌ಗೆ ರಜೆ ಘೋಷಿಸಿದೆ. ಇದಕ್ಕಿಂತ ದುರಂತ ಇನ್ನೆಲ್ಲಿದೆ.?

ಹೌದು, ನಿಮಗೆ ಗೊತ್ತು.. ಕನ್ನಡಿಗರು ವಿಶಾಲ ಹೃದಯದವರು. ಕಾಲ ಕಾಲಕ್ಕೆ ಈ ಮಾತನ್ನ ಸಾಬೀತು ಮಾಡಿದ ಹೆಗ್ಗಳಿಕೆ ಕೂಡ ಕನ್ನಡಿಗರದ್ದೇ. ಕನ್ನಡ ಚಿತ್ರಗಳನ್ನ ಕಡೆಗಣಿಸಿ ಹಿಂದಿ, ತೆಲುಗು, ತಮಿಳು, ಚಿತ್ರಗಳನ್ನ ಮೊದಲ ದಿನದಂದೆ ಕಣ್ತುಂಬಿಕೊಳ್ಳುವ 'ಹವ್ಯಾಸ'ವನ್ನ ಬೆಳೆಸಿಕೊಂಡಿರುವ ನಮ್ಮಲ್ಲಿನ ಅನೇಕರು, ಇದೀಗ ಮಲಯಾಳಂ ಚಿತ್ರರಂಗದತ್ತ ಕಣ್ಣರಳಿಸಿ ನೋಡುತ್ತಿದ್ದಾರೆ. ಮಲಯಾಳಂ ಸಿನಿಮಾಗಳನ್ನ ನೋಡಲು ಸರತಿ ಸಾಲಿನಲ್ಲಿಯೂ ನಿಂತಿದ್ದಾರೆ.
ಈ ಸಾಲಿನಲ್ಲಿ ಬೆಂಗಳೂರಿನಲ್ಲಿರುವ ದಿ ಗುಡ್ ಶೆಫರ್ಡ್ ಕಾಲೇಜ್‌ನ ಆಡಳಿತ ಮಂಡಳಿ ಕೂಡ ಇದೆ. ಹೀಗಾಗಿಯೇ ತಾವು ಮಾತ್ರ ಈ ಶುಕ್ರವಾರ ಬಿಡುಗಡೆ ಆಗುತ್ತಿರುವ ಮೋಹನ್ ಲಾಲ್ ಅಭಿನಯದ 'ಎಲ್2: ಎಂಪುರಾನ್' ಚಿತ್ರವನ್ನು ನೋಡದೆ ಇಡೀ ಕಾಲೇಜ್‌ನ ವಿದ್ಯಾರ್ಥಿಗಳಲ್ಲಿ ಚಿತ್ರವನ್ನು ನೋಡುವಂತೆ ಕೇಳಿಕೊಂಡಿದೆ. ಸುತ್ತೋಲೆ ಹೊರಡಿಸಿ ರಜೆಯನ್ನು ಕೂಡ ಘೋಷಿಸಿದೆ. ಸಾಲದಕ್ಕೆ ವಿದ್ಯಾರ್ಥಿಗಳಿಕೆ ಟಿಕೆಟ್‌ನ್ನು ನೀಡಿದೆ.
ಲೈಟ್ಸ್, ಕ್ಯಾಮರಾ, ಹಾಲಿಡೇ ಹೆಸರಿನಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿರುವ ದಿ ಗುಡ್ ಶೆಫರ್ಡ್ ಕಾಲೇಜ್ ಆಡಳಿತ ಮಂಡಳಿ ಪ್ಯಾಷನ್ ಮತ್ತು ಅಭಿಮಾನ ಒಂದಾದಾಗ ಇತಿಹಾಸ ನಿರ್ಮಾಣವಾಗುತ್ತೆ ಎಂದು ಹೇಳಿದೆ. ನಮ್ಮ ಪ್ರೀತಿಯ ಎಂಡಿ ಮೋಹನ್ ಲಾಲ್ ಅವರ ಕಟ್ಟಾ ಅಭಿಮಾನಿಯಾದ ಕಾರಣ, ಮೋಹನ್ ಲಾಲ್ ಅವರ ಪ್ರತಿಭೆ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ನಿರ್ದೇಶನಕ್ಕೆ ಗೌರವ ಕೊಡಲು ಎಲ್ 2 ಎಂಪುರಾನ್ ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದಾರೆ. ಇದು ಕೇವಲ ಒಂದು ಚಲನಚಿತ್ರವಲ್ಲ ಅದಕ್ಕಿಂತ ಹೆಚ್ಚಿನದು ಎಂದು ಹೇಳಿಕೊಂಡಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ವೈಜಿಆರ್ ಮಾಲ್‌ಗೆ ಬೆಳಗ್ಗೆ ಸರಿಯಾಗಿ 7ಕ್ಕೆ ಬಂದು ಬಿಡಿ, ಆರಾಮಾಗಿ ಕುಳಿತು ಸಿನಿಮಾ ನೋಡೋಣ ಎಂದು ಕೂಡ ತಮ್ಮ ವಿದ್ಯಾರ್ಥಿಗಳಿಗೆ ಕರೆ ನೀಡಿದೆ.
ದಿ ಗುಡ್ ಶೆಫರ್ಡ್ ಕಾಲೇಜ್ ಆಡಳಿತ ಮಂಡಳಿಯ ಈ ನಿರ್ಧಾರದ ಕುರಿತು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಎಂದಿನಂತೆ ಒಂದು ವರ್ಗ ಕಾಲೇಜ್ ಆಡಳಿತ ಮಂಡಳಿಯ ಈ ನಿರ್ಧಾರವನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ. ಕಾಲೇಜ್‌ನ ವಿದ್ಯಾರ್ಥಿಗಳಿಗೆ ಮಲಯಾಳಂ ಸಿನಿಮಾ ತೋರಿಸುವುದರಲ್ಲಿ ತಪ್ಪೇನಿದೆ ಎನ್ನುತ್ತಿದೆ. ಬೆಂಗಳೂರಾದರೇನು, ದೆಹಲಿಯಾದರೇನು, ಮಲಯಾಳಂ ಚಿತ್ರರಂಗ ಈಗ ಜಾಗತಿಕವಾಗಿ ತನ್ನ ಚಾಪು ಮೂಡಿಸಿದೆ ಹೀಗಾಗಿ ಕರೆದುಕೊಂಡು ಹೋಗುವುದರಲ್ಲಿ ತಪ್ಪಿಲ್ಲ ಎನ್ನುವ ವಾದವನ್ನು ಮಾಡುತ್ತಿದೆ.
ಇನ್ನುಳಿದಂತೆ ಬೆಂಗಳೂರಿನ ಹಲವಡೆ ಈ ಚಿತ್ರದ ಪ್ರದರ್ಶನ ಬೆಳಗ್ಗೆ 6ಕ್ಕೆ ಶುರುವಾಗುತ್ತಿದೆ. ಬೆಂಗಳೂರಿನ ಕೋರಮಂಗಲದಲ್ಲಿರುವ ಪಿವಿಆರ್ ಒಂದರಲ್ಲಿಯೇ 21 ಪ್ರದರ್ಶನಗಳನ್ನು ಈ ಚಿತ್ರಕ್ಕೆ ನೀಡಲಾಗಿದೆ. ವಿಪರ್ಯಾಸ ಎಂದರೆ 21ಕ್ಕೆ 21 ಪ್ರದರ್ಶನದ ಟಿಕೆಟ್‌ಗಳು ಆಗಲೇ ಬಿಕರಿಯಾಗಿವೆ. ಕೇವಲ ಇದೊಂದೇ ಅಲ್ಲ ಬೆಂಗಳೂರಿನ ಹಲವಾರು ಮಾಲ್‌ಗಳಲ್ಲಿ ಮೋಹನ್ ಲಾಲ್ ಅವರ ಈ 'ಎಲ್2: ಎಂಪುರಾನ್' ಚಿತ್ರಕ್ಕೆ ರತ್ನಗಂಬಳಿಯನ್ನು ಹಾಸಿ ಸ್ವಾಗತ ಮಾಡಲಾಗಿದೆ. ಅಂದ್ಹಾಗೇ ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರವನ್ನು ಕರ್ನಾಟಕದಲ್ಲಿ ಕನ್ನಡಿಗರ ಹೆಮ್ಮೆಯ ಚಿತ್ರ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಬಿಡುಗಡೆ ಮಾಡುತ್ತಿದೆ.


Click it and Unblock the Notifications











