ಅಭಿಷೇಕ್ ಅಂಬರೀಶ್ ಸೈಲೆಂಟ್ ಆಗಿದ್ದೇಕೆ? 'ಕಾಳಿ' ಸೆಟ್ಟೇರಲ್ಲ, 'ಅಯೋಗ್ಯ' ಮಹೇಶ್ ಸಿನಿಮಾ ಸುಳಿವಿಲ್ಲ!
ರೆಬೆಲ್‌ಸ್ಟಾರ್ ಅಂಬರೀಶ್ ಪುತ್ರ ಎರಡು ಸಿನಿಮಾಗಳಿಗೆ ಸುಸ್ತಾದ್ರಾ? ಈ ಪ್ರಶ್ನೆ ನಾವು ಕೇಳುತ್ತಿರೋದು ಅಲ್ಲ. ಸಿನಿಪ್ರೇಮಿಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಿರೋ ಪ್ರಶ್ನೆ. ಅಭಿಷೇಕ್ ಅಂಬರೀಶ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಅಂದಾಗ ರೆಬೆಲ್‌ಸ್ಟಾರ್ ಅಭಿಮಾನಿಗಳು ಕುಣಿದು ಸಂಭ್ರಮಿಸಿದ್ದರು. ಮಂಡ್ಯ, ಮೈಸೂರು ಭಾಗದ ಜನರಲ್ಲಿ ಹೊಸ ನಾಯಕ ಬಂದಷ್ಟೇ ಖುಷಿ. ಆದರೆ ಎರಡು ಸಿನಿಮಾಗೆ ಮರಿ ರೆಬೆಲ್ ಸ್ಟಾರ್ ಸೈಲೆಂಟ್ ಆಗಿದ್ದು ಸಿನಿಪ್ರಿಯರಿಗೆ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ.
ಅಪ್ಪ ಹೆಸರಿದೆ. ಅಮ್ಮನ ಪವರ್ ಇದೆ. ಚಿತ್ರರಂಗದಲ್ಲಿ ಸ್ನೇಹಿತರಿದ್ದಾರೆ, ಹಿತೈಶಿಗಳಿದ್ದಾರೆ. ಹೀಗಿದ್ದೂ ಅಭಿಷೇಕ್ ಯಾಕೆ ಸಿನಿಮಾ ಮಾಡುತ್ತಿಲ್ಲ. ಅಪ್ಪನಂತೆಯೇ ಕನ್ನಡ ಚಿತ್ರರಂಗದಲ್ಲಿ ತನ್ನದೂ ಒಂದು ಹೆಸರು ಸಂಪಾಧಿಸಬೇಕು. ಸ್ಯಾಂಡಲ್‌ವುಡ್‌ಗೆ ವರ್ಷಕ್ಕೆ ಎರಡು ಸಿನಿಮಾವನ್ನಾದರೂ ಕೊಡಬೇಕು ಅಂತ ಮನಸ್ಸು ಮಾಡುತ್ತಿಲ್ಲ ಅನ್ನೋದು ಗೊಂದಲ ಅಂಬರೀಶ್ ಅಭಿಮಾನಿಗಳನ್ನು ಕಾಡದೇ ಇರುವುದಿಲ್ಲ.

ಅಷ್ಟಕ್ಕೂ ಅಭಿಷೇಕ್ ಅಂಬರೀಶ್ ಯಾಕಿಷ್ಟು ಹೇಳುತ್ತಿದ್ದೇವೆ ಅನ್ನೋದಕ್ಕೆ ಕಾರಣವಿದೆ. ಈಗಾಗಲೇ ಅಭಿಷೇಕ್ ಅಂಬರೀಶ್ ನಟಿಸಬೇಕಿದ್ದ ಸಿನಿಮಾಗಳ ಬಗ್ಗೆ ಒಂದೇ ಒಂದು ಅಪ್‌ಡೇಟ್ ಇಲ್ಲ. ಮುಂಗಾರು ಮಳೆ ಕೃಷ್ಣ 'ಕಾಳಿ' ಅನ್ನೋ ಸಿನಿಮಾ ಅನೌನ್ಸ್ ಮಾಡಿದ್ದರು. ಇನ್ನೊಂದು ಕಡೆ 'ಅಯೋಗ್ಯ' ಮಹೇಶ್ ಐತಿಹಾಸ ಸಿನಿಮಾ ಮಾಡ್ತೀನಿ ಅಂತ ಹೇಳಿದ್ದಷ್ಟೇ ಬಂತು. ಎರಡು ಸಿನಿಮಾ ಬಗ್ಗೆ ಸುಳಿವೇ ಇಲ್ಲ.
ಇತ್ತ ಅಭಿಷೇಕ್ ಅಂಬರೀಶ್ ಕಂಪ್ಲೀಟ್ ಫ್ಯಾಮಿಲಿಮ್ಯಾನ್ ಆಗಿದ್ದಾರೆ ಅನ್ನೋ ಸುಳಿವು ಸಿಗುತ್ತಿದೆ. ಮದುವೆ, ಹೆಂಡ್ತಿ, ಮಗು ಅಂತ ಸಾಂಸಾರಿಕ ಜೀವನದಲ್ಲಿ ಮುಳುಗಿ ಹೋದಂತೆ ಕಾಣುತ್ತಿದೆ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ, ಅಭಿಷೇಕ್ ಅಂಬರೀಶ್ ಸಿನಿಮಾ ಕಡೆ ಮರಳುವ ಸೂಚನೆ ಇಲ್ಲ. ಹೊಸ ಸಿನಿಮಾ ಬಗ್ಗೆನೂ ಮಾಹಿತಿಯೇನೂ ಸಿಗುತ್ತಿಲ್ಲ. ಅಸಲಿಗೆ ಅಭಿಷೇಕ್ ಅಂಬರೀಶ್ ಮನಸ್ಸಿನಲ್ಲಿ ಏನಿದೆ ಅನ್ನೋದು ಅವರ ಅಭಿಮಾನಿಗಳಿಗೆ ತಿಳಿಯುತ್ತಿಲ್ಲ.
ಅಭಿಷೇಕ್ ಅಂಬರೀಶ್ ನಟಿಸಬೇಕಿದ್ದ 'ಕಾಳಿ' ಸಿನಿಮಾ ಇಷ್ಟೋತ್ತಿಗಾಗಲೇ ಸೆಟ್ಟೇರಿ ಸಿನಿಮಾ ಮುಗಿಯಬೇಕಿತ್ತು. ಮುಂಗಾರು ಮಳೆ ಕೃಷ್ಣ 'ಕಾಳಿ' ಅಭಿಷೇಕ್ ಅಂಬರೀಶ್ ಲುಕ್ ಟೆಸ್ಟ್ ಕೂಡ ಮಾಡಿದ್ದರು. ಇನ್ನೇನು ಮಾಸ್ ರಗಡ್ ಲುಕ್‌ನಲ್ಲಿ ಅಭಿಷೇಕ್ ಅಂಬರೀಶ್ ಎಂಟ್ರಿ ಕೊಡೋದು ಫಿಕ್ಸ್ ಅಂದುಕೊಂಡಿರುವಾಗಲೇ, ಸಿನಿಮಾ ಸೆಟ್ಟೇರಲೇ ಇಲ್ಲ. ಅಭಿಷೇಕ್ ಅಂಬರೀಶ್‌ಗೆ 'ಕಾಳಿ' ಸಿನಿಮಾ ಮಾಡುತ್ತಿಲ್ಲ ಅಂತ ಗ್ಯಾರಂಟಿ ನ್ಯೂಸ್‌ಗೆ ನಿರ್ದೇಶಕ ಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ 'ಕಾಳಿ'ಯ ಕಥೆ ಮುಗಿದೆ ಹಾಗೆಯೇ.

ಇನ್ನು ಉಳ್ಕೊಂಡಿರೋದು 'ಅಯೋಗ್ಯ' ಮಹೇಶ್ ನಿರ್ದೇಶಿಸಬೇಕಿರುವ ಇನ್ನೂ ಹೆಸರಿಡದ ಎಎ04. ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಬೇಕಿದ್ದ ಈ ಸಿನಿಮಾ ಬಗ್ಗೆನೂ ಸುಳಿವಿಲ್ಲ. ಪಕ್ಕದ ಟಾಲಿವುಡ್‌ನಿಂದ ಸ್ಟಾರ್ ನಟನನ್ನು ಕರೆಸುತ್ತೇನೆ ಎಂದಿದ್ದ ನಿರ್ದೇಶಕ ಮಹೇಶ್ ಸೈಲೆಂಟ್ ಆಗಿ ಇನ್ನೊಂದು ಪ್ರಾಜೆಕ್ಟ್‌ಗೆ ಕೈ ಹಾಕಿದ್ದಾರೆ. 'ಅಯೋಗ್ಯ 2' ಮೂಲಕ ಸೀಕ್ವೆಲ್ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಅವರೇ ಮತ್ತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಷ್ಟಕ್ಕೂ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರನ ಸಿನಿಮಾ ಯಾಕೆ ಸೆಟ್ಟೇರುತ್ತಿಲ್ಲ? ಗ್ರೀನ್ ಸಿಗ್ನಲ್ ಕೊಟ್ಟ ಎರಡೂ ಸಿನಿಮಾಗಳೂ ಯಾಕೆ ಟೇಕಾಫ್ ಆಗಿಲ್ಲ ಅನ್ನೋದಕ್ಕೆ ಇನ್ನೂ ನಿಖರವಾದ ಕಾರಣ ಗೊತ್ತಿಲ್ಲ. ಚಿತ್ರರಂಗದ ಮೂಲಗಳ ಪ್ರಕಾರ, 'ಕಾಳಿ' ಹಾಗೂ 'ಎಎ04' ಎರಡೂ ಸಿನಿಮಾಗಳು ಟೇಕಾಫ್ ಆಗೋದು ಅನುಮಾನ ಎಂದೇ ಹೇಳಾಗುತ್ತಿದೆ. ಹಾಗೇ ಹೊಸ ಪ್ರಾಜೆಕ್ಟ್‌ಗೆ ಅಭಿಷೇಕ್ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.
ಸ್ಟಾರ್ ಮಕ್ಕಳ ಸಿನಿಮಾಗಳೇ ಹೀಗೆ ನಿಂತು ಹೋದರೆ, ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬರುವ ಕಲಾವಿದರ ಕಥೆಯೇನು? ಅಂತ ಸ್ಯಾಂಡಲ್‌ವುಡ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ಪ್ರಶ್ನೆ ಮಾಡುತ್ತಾರೆ. ಅಭಿಷೇಕ್ ಅಂಬರೀಶ್ ಮನಸ್ಸು ಮಾಡಿದರೆ, ವರ್ಷಕ್ಕೆ ಎರಡು ಸಿನಿಮಾ ಮಾಡಬಹುದು. ಆದರೆ, ಎರಡು ವರ್ಷಕ್ಕೆ ಒಂದು ಸಿನಿಮಾವನ್ನೂ ಮಾಡುತ್ತಿಲ್ಲ. ಅಂತಹ ಯಾವುದೇ ಆಸೆಯೂ ಇಲ್ಲವೆಂದೇ ತೋರುತ್ತಿದೆ ಅನ್ನೋ ಅಭಿಪ್ರಾಯ ಚಿತ್ರರಂಗದಲ್ಲಿ ಇದೆ.
ಹಾಗಂತ ಅಭಿಷೇಕ್ ಅಂಬರೀಶ್ ಒಬ್ಬರೇ ಅಲ್ಲ. ಕನ್ನಡ ಚಿತ್ರಂಗಕ್ಕೆ ಎಂಟ್ರಿ ಕೊಟ್ಟ ಸ್ಯಾಂಡಲ್‌ವುಡ್‌ನ ದಿಗ್ಗಜರ ಮಕ್ಕಳ ಪರಿಸ್ಥಿತಿ ಹೀಗೆ ಆಗಿದೆ. ಕೆಲವರ ಮಕ್ಕಳು ಒಂದೇ ಸಿನಿಮಾಗೆ ಸೈಲೆಂಟ್ ಆಗಿದ್ದಾರೆ. ಮತ್ತೆ ಕೆಲವರ ಮಕ್ಕಳ ಸಿನಿಮಾಗಳು ಈಗೀಗ ಟೇಕಾಪ್ ಆಗಿವೆ. ಅವರ ಸಿನಿಮಾಗಳ ಪರಿಸ್ಥಿತಿ ಏನಾಗುತ್ತೋ ಗೊತ್ತಿಲ್ಲ. ಇದ್ದಿದ್ದರಲ್ಲಿ ಯುವರಾಜ್‌ಕುಮಾರ್ ಹೊಸ ಸಿನಿಮಾ ಬಗ್ಗೆ ಜನರು ಆಸಕ್ತಿ ಇಟ್ಟುಕೊಂಡಂತೆ ಇದೆ. ಅದು ಬಿಟ್ಟರೆ, ಮತ್ಯಾವುದೇ ಸ್ಟಾರ್ ಮಕ್ಕಳ ಸಿನಿಮಾಗಳು ಸುದ್ದಿಯಲ್ಲಿ ಇಲ್ಲ.
ಅಭಿಷೇಕ್ ಅಂಬರೀಶ್ ಫ್ಯಾಮಿಲಿ ಕಡೆ ಹೆಚ್ಚು ಗಮನ ಕೊಟ್ಟಂತೆ ಇದೆ. ಮಗನೊಂದಿಗೆ, ಪತ್ನಿಯೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದು ಒಳ್ಳೆಯದೇ. ಆದರೆ, ಇದರ ಜೊತೆ ಜೊತೆಗೆ ಸಿನಿಮಾವನ್ನು ಮಾಡಬೇಕು ಅನ್ನೋದು ಅವರ ಅಭಿಮಾನಿಗಳ ಆಸೆ. ಯಾಕಂದ್ರೆ ಕನ್ನಡದಲ್ಲಿ ಹೀರೋಗಳ ಸಂಖ್ಯೆ ಕಮ್ಮಿಯಿದೆ. ಸದ್ಯದ ಪರಿಸ್ಥಿತಿ ನೋಡಿದರೆ, ಕನ್ನಡ ಚಿತ್ರರಂಗಕ್ಕೆ ಸ್ಟಾರ್‌ಗಳು ಬೇಕಾಗಿದ್ದಾರೆ. ಇರೋ ಮೂರು ಮತ್ತೊಂದು ನಾಯಕರು ಎಷ್ಟು ಅಂತ ಸಿನಿಮಾಗಳನ್ನು ಮಾಡಬಲ್ಲರು. ತಮ್ಮ ಇಮೇಜ್‌ಗೆ ಸರಿ ಹೊಂದುವಂತಹ ಕಥೆ ಸಿಕ್ಕರೆ ಮಾತ್ರ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ವರ್ಷಕ್ಕೆ ಒಂದು ಸಿನಿಮಾ, ಎರಡು ವರ್ಷಕ್ಕೆ ಒಂದು ಸಿನಿಮಾ ಅಂತ ಲೆಕ್ಕ ಹಾಕಿ ಮಾಡುತ್ತಿದ್ದಾರೆ. ಇನ್ನು ಸೂಪರ್‌ಸ್ಟಾರ್‌ಗಳಿಂದ ವರ್ಷಕ್ಕೊಂದು ಸಿನಿಮಾ ಬರುತ್ತೆ ಅನ್ನೋದು ಕೂಡ ಕನಸಿನ ಮಾತು. ಶಿವಣ್ಣನನ್ನು ಹೊರತು ಪಡಿಸಿ.
ಆದರೆ, ಕನ್ನಡ ಚಿತ್ರರಂಗ ಯುವ ನಟರು ಬೇಕಿದೆ. ಅದಕ್ಕೆ ಈಗಾಗಲೇ ಸ್ಟಾರ್ ಕುಟುಂಬದ ಕುಡಿಗಳು ಅಭಿಷೇಕ್ ಅಂಬರೀಶ್, ಯುವರಾಜ್‌ಕುಮಾರ್, ಪ್ರಣಮ್ ದೇವರಾಜ್ ಅಂತಹ ಯುವ ನಟರು ಹೆಚ್ಚೆಚ್ಚು ಸಿನಿಮಾಗಳನ್ನು ಮಾಡಬೇಕಿದೆ. ಸಿನಿಮಾಗಳು ಸೋತರೂ ಮರಳಿ ಪ್ರಯತ್ನ ಮಾಡಬೇಕಿದೆ. ಅದು ಬಿಟ್ಟರೆ, ಕನ್ನಡ ಚಿತ್ರರಂಗಕ್ಕೆ ಬೇರೆ ದಾರಿಯಿಲ್ಲ. ಇನ್ನೊಂದು ಕಡೆ ಹೊಸ ಪ್ರತಿಭೆಗಳ ಹುಡುಕಾಟವಂತೂ ತಕ್ಷಣಕ್ಕೆ ಆಗಬೇಕಿದೆ.
ಮತ್ತೆ ಅಭಿಷೇಕ್ ವಿಷಯಕ್ಕೆ ಬರುವುದಾದರೇ, ಕನ್ನಡ ಚಿತ್ರರಂಗದಲ್ಲಿ ಸ್ವಲ್ಪ ಪ್ರಯತ್ನ ಪಟ್ಟರೂ ಕಟ್ಟಿಯಾಗಿ ನೆಲೆಯೂರಬಹುದು. ಅಭಿಷೇಕ್ ಅಂಬರೀಶ್ ಹಿಂದೆ ರೆಬೆಲ್ ಸ್ಟಾರ್ ಅಂಬರೀಶ್ ಅನ್ನೋ ಹೆಸರಿದೆ. ಜೊತೆಗೆ ತಾಯಿ ಸುಮಲತಾ ಅಂಬರೀಶ್ ಅವರ ಪವರ್ ಇದೆ. ತಂದೆಯ ಸ್ನೇಹಿತರಾದ ರಾಕ್‌ಲೈನ್ ವೆಂಕಟೇಶ್ ಅಂತಹ ಸ್ಟಾರ್ ನಿರ್ಮಾಪಕರು ಜೊತೆಯಲ್ಲಿ ಇದ್ದಾರೆ. ಹೀಗಿದ್ದೂ ಸೈಲೆಂಟ್ ಆಗಿದ್ದರೆ, ಚಿತ್ರರಂಗನೂ ಮರೆತು ಹೋಗುತ್ತೆ. ಸಿನಿಪ್ರಿಯರೂ ಮರೆತು ಹೋಗುವ ಸಾಧ್ಯತೆಗಳು ಹೆಚ್ಚಿವೆ.
ಅಂಬರೀಶ್ ಸಿನಿಮಾಗಳು ಎ ಸೆಂಟರ್‌ಗಳಿಗೆ ಅಲ್ಲದೇ ಹೋದರೂ ಬಿ, ಸಿ ಸೆಂಟರ್‌ಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದವು. ಈಗ ಇಂತಹ ಸೆಂಟರ್‌ಗಳಲ್ಲಿ ಜನರನ್ನು ಸೆಳೆಯುವ ಸ್ಟಾರ್‌ಗಳು ಇಲ್ಲ. ಆ ಸ್ಥಾನವನ್ನು ಮತ್ತೆ ಅಭಿಷೇಕ್ ಅಂಬರೀಶ್ ತುಂಬುತ್ತಾರಾ? ಮುಂದಿನ ದಿನಗಳಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಬಹುದಾ? ನಟನೆಯನ್ನು ಗಂಭೀರವಾಗಿ ಪರಿಗಣಿಸುತ್ತಾರಾ? ತಮಗಲ್ಲದಿದ್ದರೂ ತಮ್ಮ ತಂದೆಯ ಅಭಿಮಾನಿಗಳಿಗಾದರೂ ಸಿನಿಮಾ ಮಾಡುತ್ತಾರಾ? ಅಭಿಮಾನಿಗಳನ್ನು ರಂಜಿಸುತ್ತಾರಾ? ಇವರಿಂದ ಸೂಪರ್ ಹಿಟ್ ಸಿನಿಮಾ ಸಿಗುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











