ಆಡಿಕೊಳ್ಳುವವರ ಬಾಯಿಗೆ ಬೀಗ ಹಾಕಲು ಸಾಧ್ಯವಿಲ್ಲ- ಅನುಶ್ರೀ ಹೀಗೆ ಹೇಳಿದ್ದೇಕೆ ?
ಕಾಲ ಎಷ್ಟೇ ಬದಲಾದರು ಇವತ್ತು ಕೂಡ ಅದೂ-ಇದೂ ಎಂದು ಮಾತನಾಡುವರ ಸಂಖ್ಯೆ ಕಡಿಮೆಯಾಗಿಲ್ಲ. ತಮಗೆ ಸಂಬಂಧ ಇಲ್ಲದ ವಿಚಾರದ ಕುರಿತು ಹಲವಾರು ಜನ ಇವತ್ತು ಕೂಡ ಮಾತನಾಡುತ್ತಲೇ ಇರುತ್ತಾರೆ. ತಮ್ಮ ಮಾತುಗಳಿಂದ ಇನ್ನೊಬ್ಬರಿಗೆ ನೋವಾಗಬಹುದು ಎಂಬ ಕಿಂಚಿತ್ ಯೋಚನೆ ಕೂಡ ಮಾಡದೇ ಹೀಯಾಳಿಸುವುದು..ನಿಂದಿಸುವುದೇ..ಸಾಧನೆ ಎಂಬಂತೆ ಕಾಲೆಳೆಯುತ್ತಾರೆ. ಆಕಾರ..ರೂಪ..ಒನಪು..ಒಯ್ಯಾರ.. ಖಾಸಗಿ ವಿಷಯವನ್ನು ಬಿಡದಂತೆ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
ಇನ್ನು.. ಸೆಲೆಬ್ರೆಟಿಗಳ ಪಾಡು ಹೇಳಲು ಅಸಾಧ್ಯ. ಕುಂತರು .. ನಿಂತರು .. ಬದಲಾದ ಕಾಲದಲ್ಲಿ ಅನೇಕರ ಬಾಯಿಗೆ ಇವರು ಆಹಾರವಾಗುತ್ತಲೇ ಇರುತ್ತಾರೆ. ಟ್ರೋಲ್ ಹೆಸರಿನಲ್ಲಿ ನಿಂದನೆಗೆ ಗುರಿಯಾಗುತ್ತಲೇ ಇರುತ್ತಾರೆ. ಬಹುಶಃ ಇವರೆಲ್ಲರಿಂದ ಬೇಸತ್ತೋ ಏನೋ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಆಡಿಕೊಳ್ಳುವವರ ಬಾಯಿಗೆ ಬೀಗ ಹಾಕಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಸದ್ಯ ಎಲ್ಲೆಡೆ ಅನುಶ್ರೀ ಮದುವೆಯ ಸುದ್ದಿಯೇ ಸದ್ದು ಮಾಡುತ್ತಿದೆ. ಅನುಶ್ರೀ ಮದುವೆಯಾಗುತ್ತಿರುವ ಹುಡುಗನ ಹೆಸರು..ಕುಲ..ಗೋತ್ರ..ಫೋಟೊವನ್ನು ಕೂಡ ಒಂದು ವರ್ಗ ಹೆಕ್ಕಿ ತೆಗೆದಿದೆ.
ಅನುಶ್ರೀ ಆಗಲಿ, ಅವರ ಕುಟುಂಬದವರಾಗಲಿ ಮದುವೆಯ ಕುರಿತು ಯಾವ ವಿಚಾರ ಇನ್ನೂ ಹಂಚಿಕೊಂಡಿಲ್ಲವಾದರು ಕೂಡ ಆಗಸ್ಟ್ 28ಕ್ಕೆ ಮದುವೆಯಂತೆ ಎಂದು ಕೂಡ ಮಾತನಾಡಿಕೊಳ್ಳುತ್ತಿದೆ. ಇನ್ನು, ವಿಕ್ಕಿಪೀಡಿಯಾ ಪ್ರಕಾರ ಅನುಶ್ರೀಗೆ ಈಗ 37ರ ಹರೆಯ. ಈ ವಿಚಾರವನ್ನು ಇಟ್ಕೊಂಡು ಕೂಡ ಕೆಲವರು ಅನುಶ್ರೀ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಮತ್ತೂ ಕೆಲವರು ಅಸಹ್ಯ.. ಅಶ್ಲೀಲ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ತಮ್ಮ ಮದುವೆಯ ಸುತ್ತ ಮುತ್ತ ನಡೆಯುತ್ತಿರುವ ಈ ಎಲ್ಲಾ ವಿದ್ಯಮಾನಗಳಿಂದ ಕೋಪ ಮಾಡಿಕೊಂಡಂತೆ ಇರುವ ಅನುಶ್ರೀ ಸದ್ಯ ಮಾರ್ಮಿಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಈ ಆಡಿಕೊಳ್ಳುವವರ ಬಾಯಿಗೆ ಬೀಗ ಹಾಕೋದಕ್ಕೆ ನಮ್ಮಿಂದ ಸಾಧ್ಯವಿಲ್ಲ. ಒಳ್ಳಯವರಾಗಿದ್ರೂ ಆಡ್ಕೋತಾರೆ, ಕೆಟ್ಟವರಾಗಿದ್ರೂ ಆಡ್ಕೋತಾರೆ. ಈ ಆಡ್ಕೋಳೋದು, ಅನ್ನೋದು ಮನುಷ್ಯನಿಗೆ ಒಂಥರಾ ಕಾಯಿಲೆ ಇದ್ದಹಾಗೆ. ಇದಕ್ಕೆ ಔಷಧಿನೇ ಇಲ್ಲ ಎಂಬ ಡಾ.ರಾಜ್‌ಕುಮಾರ್ ಅವರ ಹಳೆಯ ಚಿತ್ರದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಸದ್ಯ ಅನುಶ್ರೀ ಹಂಚಿಕೊಂಡ ಈ ವಿಡಿಯೋ ಚರ್ಚಿತ ವಿಷಯವಾಗಿದೆ. ಈ ಸಂಭಾಷಣೆಯನ್ನು ಹೊಂದಿರುವ ವಿಡಿಯೋವನ್ನು ಅನುಶ್ರೀ ಈಗ ಹಂಚಿಕೊಂಡಿದ್ದೇಕೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಅನುಶ್ರೀಗೆ ನೋವುಂಟು ಮಾಡಿದ್ದು ಯಾರು ಎನ್ನುವ ಪ್ರಶ್ನೆ ಕೂಡ ಹಲವರಲ್ಲಿ ಮನೆ ಮಾಡಿದೆ. 'ಆಲ್ ಓಕೆ' ಸೇರಿ ಚಿತ್ರರಂಗದ ಹಲವರು ಅನುಶ್ರೀ ಅವರ ಈ ಮೆಸೇಜ್‌ಗೆ ಲೈಕ್ ಒತ್ತಿದ್ದಾರೆ.
ಇನ್ನುಳಿದಂತೆ ಸದ್ಯ ಅನುಶ್ರೀ ಈ ಆಗಸ್ಟ್ 28ರಂದು ರೋಷನ್ ಜೊತೆ ಸಪ್ತಪದಿ ತುಳಿಯಲಿದ್ದಾರೆ ಎನ್ನುವ ಮಾತು ಅಂತೆ-ಕಂತೆಯ ಸಂತೆಯಲ್ಲಿ ಕೇಳಿ ಬರುತ್ತಿದೆ. ರೋಷನ್ ಕೂಡ ಅನುಶ್ರೀ ಅವರಂತೆಯೇ ಅಪ್ಪು ಅವರ ಅಭಿಮಾನಿಯಾಗಿದ್ದು ಪುನೀತ್ ರಾಜ್ ಕುಮಾರ್ ಅವರ ಮನೆಯಲ್ಲಿಯೇ ಇಬ್ಬರ ಪರಿಚಯವಾಗಿತ್ತು, ಪುನೀತ್ ಪರ್ವ ಕಾರ್ಯಕ್ರಮ ಇವರ ಸ್ನೇಹಕ್ಕೆ ಅಡಿಪಾಯ ಹಾಕಿತ್ತು ಎಂದು ಮಾಧ್ಯಮಗಳು ವರದಿಯನ್ನು ಮಾಡಿವೆ. ಇಬ್ಬರದ್ದು ಲವ್ ಕಮ್ ಅರೆಂಜ್ ಮ್ಯಾರೇಜ್ ಎಂದು ಕೂಡ ಹೇಳಲಾಗಿದೆ.
ತಮ್ಮ ಮದುವೆಯ ಕುರಿತು ಹಬ್ಬಿರುವ ಈ ಸುದ್ದಿಯ ಕುರಿತು ಅನುಶ್ರೀ ಇಲ್ಲಿಯವರೆಗೆ ಯಾವ ಪ್ರತಿಕ್ರಿಯೆಯನ್ನು ನೀಡಿಲ್ಲ. ಕೇಳಿ ಬರುತ್ತಿರುವ ಸುದ್ದಿ ನಿಜಾ ಎಂದು ಹೇಳಿಲ್ಲ. ಸುಳ್ಳು ಎಂದು ಕೂಡ ಹೇಳಿಲ್ಲ. ಆದರೆ .. ಸದ್ಯ ಆಡಿಕೊಳ್ಳುವವರಿಗೆ ಔಷಧಿಯಿಲ್ಲ ಎಂದು ಮಾತ್ರ ಅನುಶ್ರೀ ಹೇಳಿದ್ದಾರೆ. ಅನುಶ್ರೀ ಅವರ ಈ ಮಾತಿನ ಒಳಾರ್ಥ.. ಗೂಡಾರ್ಥವನ್ನು ಸದ್ಯ ಅನೇಕರು ಹುಡುಕಲು ಶುರು ಮಾಡಿದ್ದಾರೆ.


Click it and Unblock the Notifications










