ಸೀಕ್ರೆಟ್ ಆಗಿ ಫಾರಿನ್ ಹುಡುಗನ ಜೊತೆ ಎಂಗೇಜ್ ಆದ ಅರ್ಜುನ್ ಸರ್ಜಾ ಎರಡನೇ ಪುತ್ರಿ, ಅಂಜನಾ ಹೃದಯ ಗೆದ್ದ ಹುಡುಗ ಯಾರು?
ಅರ್ಜುನ್ ಸರ್ಜಾ, ಹೆಮ್ಮೆಯ ಕನ್ನಡಿಗ. ಕಳೆದ ಐದು ದಶಕಗಳಿಂದ ಭಾಷೆಯ ಭೇದ ಭಾವ ಇಲ್ಲದೇ ಕಲಾ ಸೇವೆಯನ್ನು ಮಾಡುತ್ತಿರುವ ಕಲಾ ಯೋಗಿ. ಇಲ್ಲಿಯವರೆಗೆ ಕನ್ನಡ, ತೆಲುಗು,ತಮಿಳು ಹೀಗೆ ಹಲವು ಭಾಷೆಯಲ್ಲಿ ಕಾಣಿಸಿಕೊಂಡು ಮನಸೊರೆಗೊಂಡ ಅರ್ಜುನ್ ಸರ್ಜಾ ಇಬ್ಬರು ಹೆಣ್ಣು ಮಕ್ಕಳ ತಂದೆ ಕೂಡ ಹೌದು. ಆ ಪೈಕಿ ಮನೆಯ ದೊಡ್ಡ ಮಗಳು ಐಶ್ವರ್ಯ ಸರ್ಜಾ ಈಗಾಗಲೇ ಚಿತ್ರರಂಗಕ್ಕೆ ಬಂದಿದ್ದಾರೆ.
ಕನ್ನಡದಲ್ಲಿ ಪ್ರೇಮ ಬರಹ ಎಂಬ ಚಿತ್ರವನ್ನು ಕೂಡ ಮಾಡಿದ್ದಾರೆ. ಆದರೆ ಅರ್ಜುನ್ ಸರ್ಜಾ ಅವರನ್ನು ಹರಸಿ ಹಾರೈಸಿದಂತೆ ಕನ್ನಡಿಗರು ಐಶ್ವರ್ಯ ಕೈ ಹಿಡಿಯಲಿಲ್ಲ. ಹರಸಿ ಹಾರೈಸಲಿಲ್ಲ. ಹಾಗಂಥ ಅರ್ಜುನ್ ಸರ್ಜಾ ಅಥವಾ ಐಶ್ವರ್ಯ ಬೇಸರವನ್ನು ಕೂಡ ಮಾಡಿಕೊಂಡಿಲ್ಲ. ಪಾಲಿಗೆ ಬಂದಿದ್ದು ಪಂಚಾಮೃತ ಎನ್ನುವಂತೆ ಐಶ್ವರ್ಯ ಇವತ್ತು ಕೂಡ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ.

ಹಿರಿಯ ಮಗಳು ಐಶ್ವರ್ಯಗಾಗಿ ಅರ್ಜುನ್ ಸರ್ಜಾ ಮತ್ತೊಂದು ಚಿತ್ರವನ್ನು ಕೂಡ ಮಾಡುತ್ತಿದ್ದಾರೆ. ಅದಕ್ಕೆ ಸೀತಾಪಯಣ ಎಂಬ ಶೀರ್ಷಿಕೆ ಇಟ್ಟಿದ್ದಾರೆ. ಧ್ರುವ ಸರ್ಜಾ ಕೂಡ ಈ ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ್ದಾರೆ.
ಈ ಚಿತ್ರದ ಫಲಿತಾಂಶ ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಅರ್ಜುನ್ ಸರ್ಜಾ ಅವರ ಎರಡನೇ ಮಗಳು ಅಂಜನಾ ಕುರಿತು ಹಲವರಲ್ಲಿ ಕುತೂಹಲ ಇದೆ. ಚಿತ್ರರಂಗಕ್ಕೆ ಐಶ್ವರ್ಯ ಬಂದರೂ ಕೂಡ ಅಂಜನಾ ಯಾಕೆ ಬರಲಿಲ್ಲ ಎನ್ನುವ ಪ್ರಶ್ನೆ ಇದೆ.
ಇದಕ್ಕೆ ಉತ್ತರ ಅರ್ಜುನ್ ಸರ್ಜಾ ಮತ್ತು ಅಂಜನಾ ಅವರಿಗೆ ಗೊತ್ತಾದರು ಸದ್ಯ ಅಂಜನಾ ಸದ್ದು ಗದ್ದಲ ಇಲ್ಲದೇ ಇಟಲಿಯಲ್ಲಿ ತಮ್ಮ ಬಹುಕಾಲದ ಗೆಳೆಯನ ಪ್ರೀತಿಗೆ ಸಮ್ಮತಿಯನ್ನು ಸೂಚಿಸಿದ್ದಾರೆ. ಜೀವನದೂದ್ದಕ್ಕೂ ಜೊತೆಯಾಗಿ ಬಾಳಿ ಬದುಕುವ ಭರವಸೆಯನ್ನು ಕೂಡ ನೀಡಿದ್ದಾರೆ.
ಹೌದು, ಚಿತ್ರರಂಗ-ಕ್ಯಾಮರಾ ಮತ್ತು ಇಲ್ಲಿನ ಪಾರ್ಟಿಗಳಿಂದ ತುಂಬಾನೇ ಅಂತರವನ್ನು ಕಾಪಾಡಿಕೊಂಡಿರುವ ಅರ್ಜುನ್ ಸರ್ಜಾ ಅವರ ಎರಡನೇ ಮಗಳು ಅಂಜನಾ ಫಾರಿನ್ ಹುಡುಗನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ತಮ್ಮ ಪ್ರಿಯಕರನ ಒಲವೆ ಜೀವನ ಲೆಕ್ಕಾಚಾರ, ಒಲವೆ ಮರೆಯದ ಗುಣಾಕಾರ ಎಂದು ತನ್ನ ಪ್ರಿಯಕರನ ಜೊತೆ ಫೋಟೊಗಳನ್ನು ಕ್ಲಿಕಿಸಿಕೊಂಡಿದ್ದಾರೆ. ಇದಕ್ಕೆ ಪುರಾವೆ ಎನ್ನುವಂತೆ ಅಂಜನಾ 13 ವರ್ಷಗಳ ನಂತರ ನಾನು ಹೌದು ಎನ್ನದೇ ಹೇಗೆ ಇರಲಿ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ವಿಶೇಷ ಅಂದರೆ ಇವರ ಈ ಸಂಭ್ರಮದಲ್ಲಿ ಅರ್ಜುನ್ ಸರ್ಜಾ ಮತ್ತು ಅವರ ಪತ್ನಿ ನಿವೇದಿತಾ ಕೂಡ ಭಾಗಿಯಾಗಿದ್ದಾರೆ. ಐಶ್ವರ್ಯ ಕೂಡ ತಮ್ಮ ಪತಿ ಉಮಾಪತಿ ಅವರ ಜೊತೆ ತನ್ನ ತಂಗಿಯ ಬದುಕಿನ ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗಿದ್ದಾರೆ.
ಸದ್ಯ ಅಂಜನಾ ಅವರ ಈ ಸಂಭ್ರಮದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿವೆ. ಸಹಜವಾಗಿ ಶುಭಾಶಯಗಳ ಮಹಾಪೂರ ಕೂಡ ಹರಿದು ಬರುತ್ತಿದೆ. ಇನ್ನು ಅಂಜನಾ ಅವರ ಪ್ರಿಯಕರನ ಹೆಸರು ಯೆಶಾಯ್. ಇಟಲಿ ಇವರ ಮೂಲ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಮಿಕ್ಕಂತೆ ಇವರ ಹಿನ್ನೆಲೆ ಕುಲ-ಗೋತ್ರ ಇನ್ನು ಬಹಿರಂಗವಾಗಬೇಕಾದರು ಐಶ್ವರ್ಯ ಸರ್ಜಾ ಅವರ ಮದುವೆಯ ಸಮಾರಂಭದಲ್ಲಿ ಇವರು ಕೂಡ ಭಾಗವಹಿಸಿದ್ದರು. ಆಗಲೇ ಅನೇಕರಲ್ಲಿ ಇದ್ಯಾರು ಎನ್ನುವ ಪ್ರಶ್ನೆ ಮೂಡಿತ್ತು. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಇನ್ನುಳಿದಂತೆ ಮದುವೆಯ ವಿವರಗಳು ಇನ್ನು ಬಹಿರಂಗವಾಗಬೇಕಿವೆ. ನಿಶ್ಚಿತಾರ್ಥ ಸಮಾರಂಭದ ವಿವರಗಳನ್ನು ಕೂಡ ಅರ್ಜುನ್ ಸರ್ಜಾ ಅವರು ಇನ್ನು ಹಂಚಿಕೊಳ್ಳಬೇಕಿದೆ. ಸದ್ಯದಲ್ಲಿಯೇ ಈ ಕುರಿತು ಅರ್ಜುನ್ ಸರ್ಜಾ ಮಾಹಿತಿಯನ್ನು ಹಂಚಿಕೊಳ್ಳುವ ನಿರೀಕ್ಷೆ ಇದೆ.


Click it and Unblock the Notifications











