ಹೊಂಬಾಳೆ- 'ರಿಚರ್ಡ್ ಆಂಟನಿ' ಮಧ್ಯೆ ಹುಳಿ ಹಿಂಡಿದ್ಯಾರು? ಕೊನೆಗೂ ಮೌನ ಮುರಿದ ರಕ್ಷಿತ್ ಶೆಟ್ಟಿ!
ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಲಿರುವ 'ರಿಚರ್ಡ್ ಆಂಟನಿ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸೂಪರ್ ಹಿಟ್ 'ಉಳಿದವರು ಕಂಡಂತೆ' ಪ್ರೀಕ್ವೆಲ್ ಆಗಿರುವುದರಿಂದ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಬಹಳ ಹಿಂದೆಯೇ ಸಣ್ಣ ಟೀಸರ್ ಮೂಲಕ ಚಿತ್ರವನ್ನು ಘೋಷಣೆ ಮಾಡಲಾಗಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಬೇಕಿದೆ.
'ರಿಚರ್ಡ್ ಆಂಟನಿ' ಚಿತ್ರಕ್ಕಾಗಿ ಹೊಂಬಾಳೆ- ರಕ್ಷಿತ್ ಕೈಜೋಡಿಸಿರುವುದು ಬಹಳ ಕುತೂಹಲ ಮೂಡಿಸಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುವ ಲೆಕ್ಕಾಚಾರ ನಡೀತಿದೆ. 'ಸಪ್ತಸಾಗರದಾಚೆ ಎಲ್ಲೋ' ಸರಣಿ ಬಳಿಕ ರಕ್ಷಿತ್ ಶೆಟ್ಟಿ ಈ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಈಗಾಗಲೇ ಕಥೆ, ಚಿತ್ರಕಥೆ ಕೂಡ ಸಿದ್ಧವಾಗಿದೆ. ಮುಹೂರ್ತ ಮಾಡಿ ಸಿನಿಮಾ ಆರಂಭಿಸುವುದು ಮಾತ್ರ ಬಾಕಿಯಿದೆ. ಇದೆಲ್ಲದರ ನಡುವೆ ಹೊಂಬಾಳೆ ಹಾಗೂ ರಕ್ಷಿತ್ ಶೆಟ್ಟಿ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನುವ ಚರ್ಚೆ ಶುರುವಾಗಿದೆ.

'ರಿಚರ್ಡ್ ಆಂಟನಿ' ಚಿತ್ರವನ್ನು ನಿರ್ಮಾಣ ಮಾಡದಿರಲು ಹೊಂಬಾಳೆ ಸಂಸ್ಥೆ ನಿರ್ಧರಿಸಿದೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಈ ಬಗ್ಗೆ ಅಧಿಕೃತವಾಗಿ ಯಾರು ಮಾತನಾಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಮಾತ್ರ ನಡೀತಿದೆ. ಹೊಂಬಾಳೆ ಸಂಸ್ಥೆ ಬಿಟ್ಟು ತಮ್ಮದೇ ಬ್ಯಾನರ್‌ನಲ್ಲಿ ರಕ್ಷಿತ್ ಶೆಟ್ಟಿ 'ರಿಚರ್ಡ್ ಆಂಟನಿ' ಚಿತ್ರವನ್ನು ನಿರ್ಮಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ.
ರಕ್ಷಿತ್ ಶೆಟ್ಟಿ ಅಭಿಮಾನಿಗಳಲ್ಲಿ ಕೆಲವರು ಇದನ್ನು ಸ್ವಾಗತಿಸುತ್ತಿದ್ದಾರೆ. ನಿಮ್ಮದೇ ಬ್ಯಾನರ್‌ನಲ್ಲಿ ನಿಮ್ಮಿಷ್ಟದಂತೆ ಸಿನಿಮಾ ಮಾಡಿ ಎಂದು ಸಿಂಪಲ್ ಸ್ಟಾರ್‌ಗೆ ಸಲಹೆ ನೀಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ರಿಚರ್ಡ್ ಆಂಟನಿ' ಸಿನಿಮಾ ಪ್ಲ್ಯಾನ್ ಮಾಡಿದ್ದಾರೆ ರಕ್ಷಿತ್. ಇದಕ್ಕಾಗಿ ಭಾರೀ ಬಂಡವಾಳ ಅಗತ್ಯವಿದೆ. 'ರಿಚರ್ಡ್ ಆಂಟನಿ' ಪ್ರಪಂಚವನ್ನು ದೊಡ್ಡದಾಗಿ ಕಟ್ಟಿಕೊಡಬೇಕಿದೆ. ಮೇಕಿಂಗ್, ಪ್ರಮೋಷನ್, ಮಾರ್ಕೆಟಿಂಗ್ ದೊಡ್ಡದಾಗಿ ಮಾಡಬೇಕಿದೆ. ಬರೀ ನಿರ್ದೇಶನ, ನಟನೆ ಆದರೆ ಒಳ್ಳೆ ರೀತಿಯಲ್ಲಿ ಸಿನಿಮಾ ಮಾಡಬಹುದು. ನಿರ್ಮಾಣದ ಜವಾಬ್ದಾರಿ ಹೆಗಲೇರಿದ್ದರೆ ಕಷ್ಟ. ಅದೇ ಕಾರಣಕ್ಕೆ ಹೊಂಬಾಳೆ ಸಂಸ್ಥೆ ಈ ಚಿತ್ರ ನಿರ್ಮಿಸಿದ್ದರೆ ಚೆನ್ನಾಗಿರುತ್ತದೆ ಎನ್ನಲಾಗಿತ್ತು.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ 'ರಿಚರ್ಡ್ ಆಂಟನಿ' ಸಿನಿಮಾ ಅಪ್‌ಡೇಟ್ ಸಿಗಬೇಕಿತ್ತು. ಹೊಂಬಾಳೆ ಜೊತೆಗಿನ ಭಿನ್ನಾಭಿಪ್ರಾಯಗಳಿಂದಲೇ ತಡವಾಗುತ್ತಿದೆ ಎನ್ನುವ ಚರ್ಚೆ ಶುರುವಾಗಿದೆ. ಬಜೆಟ್ ಜಾಸ್ತಿ ಎನ್ನುವ ಕಾರಣಕ್ಕೆ ಹೊಂಬಾಳೆ ಸಂಸ್ಥೆ ಈ ಸಿನಿಮಾದಿಂದ ಹಿಂದೆ ಸರಿಯುತ್ತಿದೆ ಎನ್ನುವ ವದಂತಿ ಹರಡಿದೆ.
ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ 'ರಿಚರ್ಡ್ ಆಂಟನಿ' ಸಿನಿಮಾ ಪ್ಲ್ಯಾನ್ ಮಾಡಲಾಗುತ್ತಿದೆಯಂತೆ. ಹೊಂಬಾಳೆ ಸಂಸ್ಥೆ 5 ವರ್ಷಗಳಲ್ಲಿ 3000 ಸಾವಿರ ಕೋಟಿ ರೂ. ಹಣವನ್ನು ಮನರಂಜನಾ ಕ್ಷೇತ್ರದ ಮೇಲೆ ಹೂಡಲು ಮುಂದಾಗಿದೆ. ಇದನ್ನು ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳಿದ್ದಾರೆ. ಹಾಗಾಗಿ 'ರಿಚರ್ಡ್ ಆಂಟನಿ' ಚಿತ್ರಕ್ಕೆ 100 ಕೋಟಿ ರೂ. ವ್ಯಯಿಸುವುದು ದೊಡ್ಡ ವಿಷಯ ಏನಲ್ಲ. ಸಮಸ್ಯೆ ಏನು ಅಂದ್ರೆ, ಇಷ್ಟು ದೊಡ್ಡ ಮೊತ್ತದ ಹಣ ಹಾಕಿದರೆ ಮರಳಿ ವಾಪಸ್ ಬರುತ್ತಾ? ಎನ್ನುವ ಗೊಂದಲದಲ್ಲಿ ಹೊಂಬಾಳೆ ಸಂಸ್ಥೆ ಇದೆಯಂತೆ. ಇದೇ ಕಾರಣಕ್ಕೆ ಈಗ ರಕ್ಷಿತ್ ಶೆಟ್ಟಿ ಬೇರೆ ಲೆಕ್ಕಾಚಾರದಲ್ಲಿದ್ದಾರೆ ಎನ್ನಲಾಗ್ತಿದೆ.
ರಕ್ಷಿತ್ ಶೆಟ್ಟಿ ಸಿನಿಮಾಗಳನ್ನು ಗೆದ್ದರೂ ಬಾಕ್ಸಾಫೀಸ್‌ನಲ್ಲಿ ಭಾರೀ ಕಲೆಕ್ಷನ್ ಆಗುತ್ತಿಲ್ಲ. ಈ ಹಿಂದಿನ ಸಿನಿಮಾಗಳಲ್ಲಿ ಅದು ಸಾಬೀತಾಗಿದೆ. ರಕ್ಷಿತ್ ಶೆಟ್ಟಿ ಸಿನಿಮಾಗಳಿಗಿರುವ ಪ್ರೇಕ್ಷಕರು ಬೇರೆ. ಹಾಗಾಗಿ 'ರಿಚರ್ಡ್ ಆಂಟನಿ' ಚಿತ್ರಕ್ಕೆ 100 ಕೋಟಿ ಸುರಿಯುವುದು ರಿಸ್ಕ್ ಎಂದು ಹೊಂಬಾಳೆ ಸಂಸ್ಥೆ ಅಂದುಕೊಂಡಿದೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ಇತ್ತೀಚೆಗೆ ಹೊಂಬಾಳೆ ಸಂಸ್ಥೆಯಲ್ಲಿ ಬಂದ 'ರಾಘವೇಂದ್ರ ಸ್ಟೋರ್ಸ್' ಹಾಗೂ 'ಧೂಮಂ' ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. 'ಸಲಾರ್' ಸಿನಿಮಾ ಕೂಡ ದೊಡ್ಡಮಟ್ಟದಲ್ಲಿ ಗೆಲ್ಲಲಿಲ್ಲ. ಹಾಗಾಗಿ 'ರಿಚರ್ಡ್ ಆಂಟನಿ' ಬಗ್ಗೆ ಇಂತಾದೊಂದು ಚರ್ಚೆ ನಡೀತಿದೆ ಎನ್ನುವುದು ಕೆಲವರ ವಾದ. ಹೊಂಬಾಳೆ ಸಂಸ್ಥೆ ಬಿಟ್ಟು ರಕ್ಷಿತ್ ಶೆಟ್ಟಿ ಹೊರಬಂದಿದ್ದಾರೆ ಎಂದು ಹೇಳಿರುವ ವಿಡಿಯೋವೊಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಆಗಿದೆ. ಆ ಪೋಸ್ಟ್‌ಗೆ ರಕ್ಷಿತ್ ಶೆಟ್ಟಿ ಲೈಕ್ ಮಾಡಿದ್ದಾರೆ. ಇದನ್ನು ನೋಡಿವರು ಪರೋಕ್ಷವಾಗಿ ಸಿಂಪಲ್ ಸ್ಟಾರ್ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ ಎಂದು ಹೇಳುತ್ತಿದ್ದಾರೆ.
ಕಳೆದೊಂದು ವಾರದಿಂದ ಹೊಂಬಾಳೆ ಸಂಸ್ಥೆ- ರಕ್ಷಿತ್ ನಡುವೆ ಬಿರುಕು ಮೂಡಿದೆ ಎನ್ನುವ ವದಂತಿ ಹರಡಿದೆ. ಆದರೆ ಈ ಬಗ್ಗೆ ಯಾರೊಬ್ಬರು ಪ್ರತಿಕ್ರಿಯಿಸಿಲ್ಲ. ಹಾಗಾಗಿ ಇದು ನಿಜ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.


Click it and Unblock the Notifications











