ಮಟಮಟ ಮಧ್ಯಾಹ್ನ 'ಯುವ' ಟ್ರೈಲರ್, ಐಪಿಎಲ್ ಟೈಮಲ್ಲಿ ಸಿನಿಮಾ ರಿಲೀಸ್ ಬೇಕಿತ್ತಾ?
ಯುವ ರಾಜ್‌ಕುಮಾರ್ ನಟನೆಯ ಚೊಚ್ಚಲ ಸಿನಿಮಾ ಬಿಡುಗಡೆಗೆ ಇನ್ನೊಂದೇ ವಾರ ಬಾಕಿಯಿದೆ. ಈಗಾಗಲೇ ಚಿತ್ರದ 3 ಹಾಡುಗಳು ಬಿಡುಗಡೆ ಆಗಿದೆ. ಸಂತೋಷ್ ಆನಂದ್ ರಾಮ್ ಸಿನಿಮಾ ನಿರ್ದೇಶನದ ಮಾಡಿದ್ದಾರೆ. ಸದ್ಯ ಚಿತ್ರದ ಟ್ರೈಲರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಶನಿವಾರ ಹೊಸಪೇಟೆಯಲ್ಲಿ ಪ್ರೀ ರಿಲೀಸ್ ಈವೆಂಟ್ ಪ್ಲ್ಯಾನ್ ನಡೀತಿದೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ನಿರ್ಮಾಣ ಮಾಡಿದೆ. ಅದೇ ರೀತಿಯಲ್ಲಿ ಪ್ರಮೋಷನ್ ಹಾಗೂ ರಿಲೀಸ್ ಪ್ಲ್ಯಾನ್ ನಡೀತಿದೆ. ಆದರೆ ಹೈಪ್ ಯಾಕೋ ಕಮ್ಮಿ ಆಯಿತು ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದರೂ ಸರಿಯಾದ ರೀತಿಯಲ್ಲಿ ಪ್ರಮೋಷನ್ ಮಾಡುತ್ತಿಲ್ಲ ಎನ್ನುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ.

'ಯುವ' ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಕಿಶೋರ್, ಅಚ್ಯುತ್ ಕುಮಾರ್, ಸುಧಾರಾಣಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಚಿತ್ರದಲ್ಲಿ ಇಂಜಿನಿಯರಿಂಗ್ ಕಾಲೇಜು ಹುಡುಗನ ಕಥೆ ಹೇಳಲಾಗುತ್ತಿದೆ. ಮೊದಲಾರ್ಧದಲ್ಲಿ ಕ್ಯಾಂಪಲ್ ವಿಚಾರಗಳು ಜಾಸ್ತಿ ಇದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಮಧ್ಯಮವರ್ಗದ ಯುವಕನ ಪಾತ್ರದಲ್ಲಿ ಯುವ ರಾಜ್‌ಕುಮಾರ್ ನಟಿಸಿದ್ದು ತಂದೆ-ಮಗನ ಸೆಂಟಿಮೆಂಟ್‌ಗೂ ಒತ್ತು ಕೊಡಲಾಗಿದೆ. ಈಗಾಗಲೇ 'ಅಪ್ಪುಗೆ' ಸಾಂಗ್ ಬಿಡುಗಡೆಯಾಗಿ ಗಮನ ಸೆಳೆದಿದೆ. 'ಯುವ' ಸೆಟ್ಟೇರುವ ಸಮಯದಲ್ಲೇ ಸಣ್ಣ ಟೀಸರ್ ರಿಲೀಸ್ ಆಗಿ ಹೈಪ್ ಕ್ರಿಯೇಟ್ ಆಗಿತ್ತು. "ನೀವ್ ದಾಟಿರೋದು ಬ್ಲಡ್‌ಲೈನ್.... ರಕ್ತ ಹರಿದೆ ಹರಿಯುತ್ತೆ" ಎನ್ನುವ ಮಾಸ್ ಡೈಲಾಗ್ಸ್ ಅಭಿಮಾನಿಗಳ ಗಮನ ಸೆಳೆದಿತ್ತು.

ನಿಧಾನವಾಗಿ 'ಯುವ' ಚಿತ್ರತಂಡ ಸಿನಿಮಾ ಪ್ರಮೋಷನ್ ಆರಂಭಿಸುತ್ತಿದೆ. ಹೊಂಬಾಳೆ ಸಂಸ್ಥೆಗೆ ಪ್ರಮೋಷನ್ ಹಾಗೂ ಹೈಪ್ ಕ್ರಿಯೇಟ್ ಮಾಡುವುದರ ಬಗ್ಗೆ ಹೇಳಿಕೊಡಬೇಕಿಲ್ಲ ಎನ್ನುವುದು ಕೆಲವರ ವಾದ. ಜಬರ್ದಸ್ತ್ ಟ್ರೈಲರ್ ರಿಲೀಸ್ ಮಾಡಿ ದೊಡ್ಡಮಟ್ಟದಲ್ಲಿ ಪ್ರಮೋಷನ್ ಶುರು ಮಾಡುವ ಲೆಕ್ಕಾಚಾರ ನಡೀತಿದೆ. ನಾಳೆ(ಮಾರ್ಚ್ 21) ಮಧ್ಯಾಹ್ನ 1 ಗಂಟೆ 1 ನಿಮಿಷಕ್ಕೆ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನಲ್‌ಗೆ 'ಯುವ' ಟ್ರೈಲರ್ ಅಪ್‌ಲೋಡ್ ಆಗಲಿದೆ.
ಸಾಮಾನ್ಯವಾಗಿ ದೊಡ್ಡ ಸಿನಿಮಾಗಳ ಟ್ರೈಲರ್ ಅನ್ನು ಸಂಜೆ ವೇಳೆ ಬಿಡುಗಡೆ ಮಾಡುತ್ತಾರೆ. ಅಥವಾ ಪ್ರೀ ರಿಲೀಸ್ ಈವೆಂಟ್‌ನಲ್ಲೇ ರಿವೀಲ್ ಮಾಡುತ್ತಾರೆ. ಸಂಜೆ ವೇಳೆ ಅಥವಾ ಬೆಳಗಿನ ಜಾನ ಬಿಡುಗಡೆ ಮಾಡಿದರೆ ವೀವ್ಸ್, ಲೈಕ್ಸ್ ಸಿಗುತ್ತದೆ. ಟ್ರೈಲರ್ ಹಿಟ್ ಆಗುತ್ತದೆ ಎನ್ನುವ ಲೆಕ್ಕಾಚಾರ ಕೆಲವರದ್ದು. ಆದರೆ ಮಟ ಮಟ ಮಧ್ಯಾಹ್ನ 'ಯುವ' ಟ್ರೈಲರ್ ಲಾಂಚ್ ಯಾಕೆ ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ಅದಕ್ಕೆ ಕಾರಣ ಮುಹೂರ್ತ ಎನ್ನಲಾಗುತ್ತಿದೆ.
ಹೊಂಬಾಳೆ ಸಂಸ್ಥೆಗೆ ಧಾರ್ಮಿಕ ನಂಬಿಕೆ ಹೆಚ್ಚು. ಒಳ್ಳೆ ದಿನ, ಒಳ್ಳೆ ಮುಹೂರ್ತದಲ್ಲಿ ಕೆಲಸಗಳನ್ನು ಆರಂಭಿಸಿದರೆ ಶುಭವಾಗುತ್ತದೆ ಎಂದು ವಿಜಯ್ ಕಿರಗಂದೂರು ನಂಬುತ್ತಾರೆ. ಸಿನಿಮಾ ಘೋಷಣೆ, ಟ್ರೈಲರ್, ಸಿನಿಮಾ ರಿಲೀಸ್ ವಿಚಾರದಲ್ಲಿ ಕೂಡ ಇದನ್ನೆಲ್ಲಾ ಬಹಳ ನಂಬುತ್ತಾರೆ. ಈ ಹಿಂದೆ 'ಸಲಾರ್' ಚಿತ್ರದ ಟೀಸರ್ ಅನ್ನು ಬೆಳಗಿನ ಜಾವ 5:12ಕ್ಕೆ ಬಿಡುಗಡೆ ಮಾಡಿ ಅಚ್ಚರಿ ಮೂಡಿಸಿತ್ತು. ಈ ಬಗ್ಗೆ ಕೇಳಿದಾಗ ತಮ್ಮ ನಂಬಿಕೆ ಬಗ್ಗೆ ನಿರ್ಮಾಪಕರು ಹೇಳಿದ್ದರು.
ಇನ್ನು ಐಪಿಎಲ್ ಫೀವರ್ ಶುರುವಾಗುತ್ತಿದೆ. ಇದರಿಂದ ಸಂಜೆ ಸಿನಿಮಾ ಶೋಗಳಿಗೆ ಹಿನ್ನಡೆ ಉಂಟಾಗುತ್ತದೆ. ಮಾರ್ಚ್ 22ಕ್ಕೆ ಐಪಿಎಲ್ ಸೀಸನ್ 17 ಪಂದ್ಯಗಳು ಆರಂಭವಾಗುತ್ತಿದೆ. ಇಂತಹ ಸಮಯದಲ್ಲಿ 'ಯುವ' ಸಿನಿಮಾ ಬಿಡುಗಡೆ ಮಾಡುವ ನಿರ್ಧಾರ ಸರೀನಾ? ಎಂದು ಕೆಲವರು ಕೇಳುತ್ತಿದ್ದಾರೆ. ಮಾರ್ಚ್ 29ಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದ್ದು ಅಂದು ಸಂಜೆ ಕೂಡ ಆರ್‌ಸಿಬಿ ಹಾಗೂ ಕಲ್ಕತ್ತಾ ನೈಟ್‌ರೈಡರ್ಸ್ ತಂಡಗಳ ನಡುವೆ ಪಂದ್ಯ ಇದೆ. ಇದು ಸಹಜವಾಗಿಯೇ ಅಭಿಮಾನಿಗಳಿಗೆ ಆತಂಕ ಮೂಡಿಸಿದೆ. ಇದನ್ನೆಲ್ಲಾ ಮೀರಿ 'ಯುವ' ದರ್ಬಾರ್ ಹೇಗಿರುತ್ತದೆ ಕಾದು ನೋಡಬೇಕಿದೆ.


Click it and Unblock the Notifications










