Kaatera: ಮತ್ತೆ ಒಂದಾಗ್ತಾರಾ ದರ್ಶನ್- ತರುಣ್? 'ಕಾಟೇರ' ಸೀಕ್ವೆಲ್ ಬರುತ್ತಾ?
ಥಿಯೇಟರ್‌ಗಳಲ್ಲಿ 'ಕಾಟೇರ'ನ ಆರ್ಭಟ ಜೋರಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಬಹುಪರಾಕ್ ಹೇಳುತ್ತಿದ್ದಾರೆ. ನಮ್ಮ ಮಣ್ಣಿನ ಕಥೆಯ ಸಿನಿಮಾ ನೋಡಿ ಎನ್ನುತ್ತಿದ್ದಾರೆ. ಹಳ್ಳಿ ಹಿನ್ನೆಲೆಯಲ್ಲಿ ಒಂದು ಕಮರ್ಷಿಯಲ್ ಚಿತ್ರವನ್ನು ಕಟ್ಟಿಕೊಟ್ಟು ಚಿತ್ರತಂಡ ಗೆದ್ದಿದೆ.
ಕಥೆ ಹಳೆಯದ್ದೇ ಆದರೂ ಅದನ್ನು ಹೇಳಿರುವ ಪರಿ ಹೊಸದಾಗಿದೆ. ಜಾತಿ ವ್ಯವಸ್ಥೆ, ಮೇಲು ಕೇಳು, ಅಸ್ಪೃಶ್ಯತೆ ಎನ್ನುವ ಸಾಮಾಜಿಕ ಪಿಡುಗುಗಳ ಸುತ್ತ ಸಿನಿಮಾ ಕಥೆ ಸುತ್ತುತ್ತದೆ. 70ರ ಕಾಲಘಟ್ಟದಲ್ಲಿ ನಡೆಯುವ ಕಥೆ ಪ್ರೇಕ್ಷಕರನ್ನು ಆ ದಿನಗಳಿಗೆ ಕರೆದುಕೊಂಡ ಹೋಗುತ್ತದೆ. ತರುಣ್ ಸುಧೀರ್ ನಿರ್ದೇಶನ, ದರ್ಶನ್ ಅಭಿನಯಕ್ಕೆ ಹೆಚ್ಚಿನ ಅಂಕ ಸಿಕ್ಕಿದೆ.

ಹುಬ್ಬಳ್ಳಿಯಲ್ಲಿ ಬಹಳ ಅದ್ಧೂರಿಯಾಗಿ 'ಕಾಟೇರ' ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೆದಿತ್ತು. ಸಿಎಂ ಸಿದ್ದರಾಮಯ್ಯ ಟ್ರೈಲರ್ ಲೋಕಾರ್ಪಣೆ ಮಾಡಿದ್ದರು. ಆಕ್ಷನ್ ಪ್ಯಾಕ್ಡ್ ಟ್ರೈಲರ್ ಅಭಿಮಾನಿಗಳ ಮನಗೆದ್ದಿತ್ತು. ಡೈಲಾಗ್ಸ್, ದರ್ಶನ್ ಆರ್ಭಟ, ಬಿಜಿಎಂ ಎಲ್ಲಾ ನೋಡಿ ಅಭಿಮಾನಿಗಳು ಅಂದೇ ಸಿನಿಮಾ ನೋಡಬೇಕು ಎಂದು ಫಿಕ್ಸ್ ಆಗಿಬಿಟ್ಟಿದ್ದರು.
ಇನ್ನು 'ಕಾಟೇರ' ಟ್ರೈಲರ್ ಕೊನೆಯಲ್ಲಿ ದರ್ಶನ್ ವಯಸ್ಸಾದ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಅದು ಚಿತ್ರದ ಸ್ಪೆಷನ್ ಎಪಿಸೋಡ್ ಎಂದೇ ಎಲ್ಲರೂ ಅಂದುಕೊಂಡಿದ್ದರು. ಇದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟಾಕ್ಕಿದ್ದು ಸುಳ್ಳಲ್ಲ. ಚಿತ್ರದಲ್ಲಿ ದರ್ಶನ್ ತಂದೆ ಮಗನಾಗಿ ಡಬಲ್ ಆಕ್ಟಿಂಗ್ ಮಾಡಿದ್ದಾರಾ? ಅಥವಾ ಸಿನಿಮಾ ಸೀಕ್ವೆಲ್ ಬರುತ್ತಾ? ಎಂದು ಕೆಲವರು ಊಹಿಸಿಕೊಂಡಿದ್ದರು.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಿರ್ದೇಶಕ ತರುಣ್ ಸುಧೀರ್‌ಗೆ ಇದೇ ಪ್ರಶ್ನೆ ಎದುರಾಗಿತ್ತು. ಟ್ರೈಲರ್ ಕೊನೆಯಲ್ಲಿ ದರ್ಶನ್ ವಯಸ್ಸಾದ ವ್ಯಕ್ತಿಯಾಗಿ ಕಾಣಿಕೊಂಡಿರೋದು ಅಚ್ಚರಿ ಮೂಡಿಸುತ್ತದೆ. ಸೀಕ್ವೆಲ್‌ಗೆ ಲಿಂಕ್ ಕೊಡುವ ಸನ್ನಿವೇಶನಾ? ಎಂದು ಕೇಳಿದಾ ತರುಣ್ ಆ ಸಸ್ಪೆನ್ಸ್ ಹಾಗೆ ಇರಲಿ ಎಂದಿದ್ದರು. ಇದನ್ನು ಕೇಳಿದ ಕೆಲವರು ನಿಜಕ್ಕೂ 'ಕಾಟೇರ -2' ಬರುತ್ತಾ? ಎಂದುಕೊಂಡಿದ್ದರು. ಆ ಎಲ್ಲಾ ಪ್ರಶ್ನೆಗಳಿಗೆ ಇದೀಗ ತೆರೆಮೇಲೆ ಉತ್ತರ ಸಿಕ್ಕಿದೆ.
ಎರಡು ಕಾಲಘಟ್ಟದಲ್ಲಿ 'ಕಾಟೇರ' ಚಿತ್ರದ ಕಥೆ ಸಾಗುತ್ತದೆ. ಒಂದು 70ರ ದಶಕದ ಆರಂಭ. ಮತ್ತೊಂದು 60ರ ದಶಕದ ಕೊನೆ. ಈ 16, 17 ವರ್ಷಗಳ ನಡುವೆ ಕಾಟೇರನಿಗೆ ವಯಸ್ಸಾಗಿರುತ್ತದೆ. ಹಾಗಾಗಿ ಆ ಲುಕ್ ಇದೆ. ಕ್ಲೈಮ್ಯಾಕ್ಸ್‌ನಲ್ಲಿ ಬರುವ ಸನ್ನಿವೇಶ ಮಾತ್ರವಲ್ಲ, ಚಿತ್ರದಲ್ಲಿ ದರ್ಶನ್ ಎಂಟ್ರಿ ಆಗುವುದೇ ಈ ಲುಕ್‌ನಲ್ಲಿ.
ತರುಣ್ ಸುಧೀರ್ 3 ಗಂಟೆಗಳ ಕಾಲ 'ಕಾಟೇರ'ನ ಕಥೆ ಹೇಳಿದ್ದಾರೆ. ಕಥೆಗೆ ಸರಿಯಾದ ಆರಂಭ, ಮಧ್ಯಂತರ, ಅಂತ್ಯ ಎಲ್ಲವೂ ಇದೆ. ಕ್ಲೈಮ್ಯಾಕ್ಸ್‌ನಲ್ಲಿ ಒಂದೊಳ್ಳೆ ಸಂದೇಶ ಸಾರುವುದರೊಂದಿಗೆ ಸಿನಿಮಾ ಮುಕ್ತಾಯವಾಗುತ್ತದೆ. ಹಾಗಾಗಿ ಸೀಕ್ವೆಲ್ ಬರುತ್ತದೆ ಎನ್ನುವುದು ಸುಳ್ಳು.
ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್ 3ನೇ ಬಾರಿಯೂ ವರ್ಕೌಟ್ ಆಗಿದೆ. ಮೊದಲಿಗೆ 'ಚೌಕ' ಚಿತ್ರದಲ್ಲಿ ಕೈದಿ ರಾಬರ್ಟ್ ಆಗಿ ದರ್ಶನ್ ಅತಿಥಿ ಪಾತ್ರದಲ್ಲಿ ಅಬ್ಬರಿಸಿದ್ದರು. ಬಳಿಕ 'ರಾಬರ್ಟ್' ಟೈಟಲ್‌ನಲ್ಲೇ ಇಬ್ಬರು ಸಿನಿಮಾ ಮಾಡಿ ಗೆದ್ದಿದ್ದರು. ಇದೀಗ 'ಕಾಟೇರ' ಮೂಲಕ ಹ್ಯಾಟ್ರಿಕ್ ಹಿಟ್ ಬಾರಿಸಿದಂತಾಗಿದೆ. ಇಬ್ಬರೂ ಮತ್ತೊಂದು ಸಿನಿಮಾ ಮಾಡುವ ಸಾಧ್ಯತೆಯಿದೆ.
ಈ ಹಿಂದೆ 'ಸಿಂಧೂರ ಲಕ್ಷ್ಮಣ' ಚಿತ್ರಕ್ಕಾಗಿ ಇಬ್ಬರೂ ಕೈ ಜೋಡಿಸಿದ್ದರು. ಉಮಾಪತಿ ಶ್ರೀನಿವಾಸ್ ನಿರ್ಮಾಣದಲ್ಲಿ ಸಿನಿಮಾ ತೆರೆಗೆ ಬರಬೇಕಿತ್ತು. ಬ್ರಿಟೀಷರ ಹುಟ್ಟಡಗಿಸಿದ್ದ ಸಿಂಧೂರ ಲಕ್ಷ್ಮಣ ಜೀವನಗಾಥೆಯನ್ನು ತೆರೆಗೆ ತರುವ ಪ್ರಯತ್ನ ನಡೆದಿತ್ತು. ಚಿತ್ರದ ಸ್ಕ್ರಿಪ್ಟ್ ಪೂಜೆ ಕೂಡ ಮಾಡಿದ್ದರು. ತರುಣ್ ತಂದೆ ಖ್ಯಾತ ಖಳ ನಟ ಸುಧೀರ್ 'ಸಿಂಧೂರ ಲಕ್ಷ್ಮಣ' ನಾಟಕಗಳನ್ನು ಮಾಡಿ ಖ್ಯಾತಿ ಗಳಿಸಿದ್ದರು. ಹಾಗಾಗಿ ಆ ಸಿನಿಮಾ ಬಗ್ಗೆ ಅವರಿಗೆ ಹೆಚ್ಚಿನ ಒಲವಿದೆ. ಆದರೆ ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಗಿದೆ.
ಸದ್ಯ ದರ್ಶನ್ 'ಡೆವಿಲ್' ಸಿನಿಮಾ ಒಪ್ಪಿಕೊಂಡಿದ್ದಾರೆ. ಮಿಲನಾ ಪ್ರಕಾಶ್ ನಿರ್ದೇಶನದ ಈ ಸಿನಿಮಾ ಮುಹೂರ್ತ ಕೂಡ ನೆರವೇರಿದೆ. ಬಳಿಕ ಜೋಗಿ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ನಟಿಸಬೇಕಿದೆ. ದರ್ಶನ್ ಆಪ್ತ ಸಚ್ಚಿದಾನಂದ ಒಂದು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಿಸಿ ದರ್ಶನ್ ನಟಿಸೋ ಸಾಧ್ಯತೆಯಿದೆ.


Click it and Unblock the Notifications











