ಟಾಕ್ಸಿಕ್ ಚಿತ್ರದಲ್ಲಿ ನಿಜಕ್ಕೂ ನಯನತಾರಾ ಇದ್ದಾರಾ ? ಬಾಯ್ತಪ್ಪಿ ನಟ ಹೇಳಿದ ಸತ್ಯ ಏನು ?
ಕೆಲ ಸಿನಿಮಾಗಳೇ ಹಾಗೆ. ಆರಂಭದಿಂದ್ಲೇ ಕುತೂಹಲ ಹುಟ್ಟಿಸಿ ಬಿಡುತ್ತವೆ. ಯಶ್ ಅಭಿನಯದ ಟಾಕ್ಸಿಕ್ ಇದೇ ಸಾಲಿಗೆ ಸೇರುವಂತಹ ಸಿನಿಮಾ. ಕಳೆದ ಡಿಸೆಂಬರ್‌ನಲ್ಲಿ ಅಧಿಕೃತವಾಗಿ ಘೋಷಿಸಲಾದ ಈ ಸಿನಿಮಾ ಕೆ.ಜಿ.ಎಫ್ ಚಿತ್ರವನ್ನೂ ಮೀರಿಸುತ್ತೆ ಅನ್ನುವುದು ಅನೇಕರ ನಂಬಿಕೆ. ಇದಕ್ಕೆ ಪೂರಕವಾಗಿ ಯಶ್ ತಮ್ಮ ತಂಡದ ಜೊತೆ ಹಗಲಿರುಳು ಕೆಲಸ ಮಾಡುತ್ತಿದ್ದಾರೆ ಕೂಡ.
ಇಂಥಾ ಟಾಕ್ಸಿಕ್ ಚಿತ್ರದಲ್ಲಿ ನಾಯಕಿಯರ ದೊಡ್ಡ ದಂಡೇ ಇದೆ ಎನ್ನುವ ಮಾತು ಮೊದಲಿಂದ ಕೇಳಿ ಬರುತ್ತಿದೆ. ನಿಜಾ.. ಚಿತ್ರತಂಡವಾಗಲಿ ಯಶ್ ಆಗಲಿ ಈ ಸುದ್ದಿಯ ಮೇಲೆ ಅಧಿಕೃತ ಮುದ್ರೆ ಇನ್ನೂ ಒತ್ತಿಲ್ಲವಾದರೂ ಚಿತ್ರಸಂತೆಯಲ್ಲಿ ಕಿಯಾರಾ ಅಡ್ವಾಣಿ, ಹುಮಾ ಖುರೇಶಿ, ಹೆಸರುಗಳು ಚಾಲ್ತಿಯಲ್ಲಿವೆ. ಲೇಡಿ ಸೂಪರ್ ಸ್ಟಾರ್ ನಯನತಾರ ಕೂಡ ಚಿತ್ರದಲ್ಲಿದ್ದಾರೆ ಎನ್ನುವ ಸುದ್ದಿ ಇದೆ. ಈ ಸುದ್ದಿಯನ್ನು ಈಗ ಅಕ್ಷಯ್ ಓಬೆರಾಯ್ ಖಚಿತಪಡಿಸಿದ್ದಾರೆ.

ಹೌದು, ಲಾಲ್ ರಂಗ್, ಜಂಗ್ಲಿ, ಚೋಟೆ ನವಾಬ್, ಲವ್ ಹಾಸ್ಟೇಲ್, ಗ್ಯಾಸ್ ಲೈಟ್, ಫೈಟರ್ ಹೀಗೆ ಹಲವು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿರುವ ಅಕ್ಷಯ್ ಓಬೆರಾಯ್, ಯಶ್ ಜೊತೆ ಟಾಕ್ಸಿಕ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇವರ ಇರುವಿಕೆಯ ಬಗ್ಗೆ ಕೂಡ ಚಿತ್ರತಂಡ ಎಲ್ಲಿಯೂ ಬಾಯಿ ಬಿಡದಿದ್ದರೂ ಅಕ್ಷಯ್ ಓಬೆರಾಯ್ ಖುದ್ದು ತಾವೇ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಡಿಜಿಟಲ್ ಕಾಮೆಂಟರಿಗೆ ನೀಡಿದ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿರುವ ಅಕ್ಷಯ್ ಓಬೆರಾಯ್ ಸದ್ಯ ನಾನು ಯಶ್ ಅವರ ಜೊತೆ ಟಾಕ್ಸಿಕ್ ಚಿತ್ರದ ಚಿತ್ರೀಕರಣವನ್ನು ಮಾಡುತ್ತಿದ್ದೇನೆ ಚಿತ್ರದಲ್ಲಿ ನಯನತಾರ ಕೂಡ ಇದ್ದಾರೆ ಎಂದು ಹೇಳಿದ್ದಾರೆ. ಚಿತ್ರದ ತಾರಾಬಳಗದ ಕುರಿತು ಹೆಚ್ಚು ನಾನು ಮಾತನಾಡಿದರೆ ಚಿತ್ರತಂಡಕ್ಕೆ ಅದು ಇಷ್ಟವಾಗಲಿಕ್ಕಿಲ್ಲ ಎಂದಿರುವ ಅಕ್ಷಯ್ ನಾನು ಗೀತು ಮೋಹನ್ ದಾಸ್ ಅವರ ಅಭಿಮಾನಿ ಕೂಡ ಹೌದು ಹಾಗಾಗಿ ಹೆಚ್ಚಿನ ವಿವರ ಹೇಳುವುದಿಲ್ಲ ಎಂದಿದ್ದಾರೆ. ಈ ಮೂಲಕ ಟಾಕ್ಸಿಕ್ ಚಿತ್ರದಲ್ಲಿ ನಯನತಾರ ಇದ್ದಾರೆ ಎಂದು ಇಷ್ಟು ದಿನದಿಂದ ಹರಿದಾಡುತ್ತಿದ್ದ ಸುದ್ದಿಯ ಮೇಲೆ ಅಧಿಕೃತವಾದ ಮುದ್ರೆಯನ್ನು ಅಕ್ಷಯ್ ಓಬೆರಾಯ್ ಒತ್ತಿದ್ದಾರೆ.
ಇನ್ನು ನಯನತಾರಾ ಈ ಚಿತ್ರದಲ್ಲಿ ಯಶ್ ಅವರ ಅಕ್ಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎನ್ನುವ ಮಾತು ಇದೆ. ಈ ಗುಟ್ಟನ್ನೂ ರಟ್ಟು ಮಾಡದ ಅಕ್ಷಯ್ ಓಬೆರಾಯ್ ಈ ಸಂದರ್ಶನದಲ್ಲಿ ತಾವು ಈ ಚಿತ್ರಕ್ಕೆ ಆಯ್ಕೆಯಾಗಿದ್ದು ಹೇಗೆ ಎನ್ನುವುದನ್ನು ಹೇಳಿದ್ದಾರೆ. ಫೈಟರ್ ಚಿತ್ರದಲ್ಲಿ ನನ್ನ ಅಭಿನಯವನ್ನು ನೋಡಿ ನನಗೆ ಗೀತು ಮೋಹನ್ ದಾಸ್ ಕರೆ ಮಾಡಿದರು, ಕಥೆ ಕೇಳಿ ನಾನು ಕೂಡಲೇ ಒಪ್ಪಿಕೊಂಡೆ ಎಂದು ಹೇಳಿರುವ ಅಕ್ಷಯ್ ಓಬೆರಾಯ್ ಇದು ನನ್ನ ಮೊದಲ ದಕ್ಷಿಣ ಭಾರತದ ಚಿತ್ರ ಎಂದಿರುವ ಅಕ್ಷಯ್ ಓಬೆರಾಯ್ ಟಾಕ್ಸಿಕ್ ಚಿತ್ರ ನಾವು ನೀವು ಅಂದುಕೊಂಡತೆ ಅಲ್ಲ ತುಂಬಾ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ ಎಂದು ಹೇಳಿದ್ದಾರೆ.
ಒಟ್ನಲ್ಲಿ ಸದ್ಯ ಯಶ್ ಅವರ ಜೊತೆ ಟಾಕ್ಸಿಕ್ ಚಿತ್ರದಲ್ಲಿ ತಾವು ಇರುವುದಾಗಿ ಅಕ್ಷಯ್ ಓಬೆರಾಯ್ ಖಚಿತಪಡಿಸಿದ್ದಾರೆ. ನಯನತಾರ ಕೂಡ ಚಿತ್ರದಲ್ಲಿದ್ದಾರೆ ಎಂದು ಹೇಳಿದ್ದಾರೆ. ಈ ಮೂವರನ್ನು ಹೊರತು ಪಡಿಸಿದರೆ ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಅನಿಲ್ ಕಪೂರ್ ಕೂಡ ಇದ್ದಾರೆ ಎನ್ನುವ ಸುದ್ದಿ ಇದೆ. 41 ವರ್ಷದ ನಂತರ ಕನ್ನಡ ಚಿತ್ರರಂಗಕ್ಕೆ ಅನಿಲ್ ಕಪೂರ್ ಈ ಚಿತ್ರದ ಮೂಲಕ ಮರಳುವ ಸಾಧ್ಯತೆ ಇದೆ.


Click it and Unblock the Notifications











