ಈ ಕಾರಣಕ್ಕೆ ಅವತ್ತು ಮೋಹನ್ ಲಾಲ್ ಅವರನ್ನು ಭೇಟಿಯಾಗಿದ್ದರಾ ರಿಷಬ್ ಶೆಟ್ಟಿ...?
ಕುಂದಾಪುರದವರಾದರೂ ಬೆಂಗಳೂರಿಗೆ ಬಂದು ಕಾಲೇಜು ಮುಗಿಸಿ, ಅದರ ಜೊತೆ ಜೊತೆಗೆ ರಂಗಭೂಮಿಯ ನಂಟಿಗೆ ಬಿದ್ದವರು ರಿಷಬ್ ಶೆಟ್ಟಿ. ಕನ್ನಡದ ಸಿನಿಮಾಗಳನ್ನು ಏಕತಾನತೆಯಿಂದ ಹೊರತರಬೇಕು ಎಂಬ ಕನಸಿನೊಂದಿಗೆ ಕನ್ನಡ ಚಿತ್ರರಂಗಕ್ಕೆ ಬಂದ ರಿಷಬ್ ಇವತ್ತು ಜಗತ್ಪ್ರಸಿದ್ದಿಯನ್ನು ಪಡೆದುಕೊಂಡಿದ್ದಾರೆ. ಈ ಪ್ರಸಿದ್ಧಿಗೆ ಕಾರಣವಾದ ಕಾಂತಾರ ಚಿತ್ರದ ಕನವರಿಕೆಯಲ್ಲಿ ಇದ್ದಾರೆ. ಕಾಂತಾರ ಚಿತ್ರದ ಮೊದಲ ಭಾಗಕ್ಕೆ ತನು-ಮನವನ್ನು ಅರ್ಪಿಸಿ ಶ್ರದ್ಧೆಯಿಂದ ಕೆಲಸವನ್ನು ಮಾಡುತ್ತಿದ್ದಾರೆ. ಇದರ ನಡುವೆ ಈಗ ರಿಷಬ್ ಶೆಟ್ಟಿಯ ಕನಸು ಕಾಂತಾರದಲ್ಲಿ ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಗುಲ್ಲಾಗಿದೆ. ಕೇರಳದಿಂದ ಕರುನಾಡಿನವರೆಗೆ ಈ ಸುದ್ದಿ ಸದ್ದು ಮಾಡುತ್ತಿದೆ.
ಹೌದು, ಅಸಲಿಗೆ ಈ ವರ್ಷದ ಏಪ್ರಿಲ್‌ನಲ್ಲಿ ಮೋಹನ್ ಲಾಲ್ ಅವರನ್ನು ರಿಷಬ್ ಶೆಟ್ಟಿ ಭೇಟಿಯಾಗಿದ್ದರು. ಆಗ ವ್ಯಾಪಕ ಕುತೂಹಲ ಮತ್ತು ಕೌತುಕವನ್ನು ಈ ಭೇಟಿ ಮೂಡಿಸಿತ್ತು. ಕಾಂತಾರದ ಪ್ರಿಕ್ವೆಲ್‌ನಲ್ಲಿ ಮೋಹನ್ ಲಾಲ್ ಕಾಣಿಸಿಕೊಳ್ಳಬಹುದಾ ಎನ್ನುವ ಪ್ರಶ್ನೆಗೆ ಕೂಡ ಕಾರಣವಾಗಿತ್ತು. ಆದರೆ, ಈಗ ರಿಷಬ್ ಅವತ್ತು ಮೋಹನ್ ಲಾಲ್ ಅವರ ಜೊತೆ ಮುಖಾಮುಖಿಯಾಗಿದ್ದೇ ಕಾಂತಾರ ಚಿತ್ರದ ವಿಚಾರವನ್ನು ಮಾತನಾಡಲು ಅನ್ನುವ ಸುದ್ದಿ ಹಬ್ಬಿದೆ. ಕಾಂತಾರ ಮೊದಲ ಭಾಗದಲ್ಲಿ ಮೋಹನ್ ಲಾಲ್ ರಿಷಬ್ ಶೆಟ್ಟಿಯ ತಂದೆಯ ಪಾತ್ರವನ್ನು ನಿರ್ವಹಿಸುವುದು ಖಚಿತವೆನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.

ಆದರೂ.. ರಿಷಬ್ ಶೆಟ್ಟಿ ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ. ಮೋಹನ್ ಲಾಲ್ ಅವರನ್ನು ಭೇಟಿ ಮಾಡಿದ ಹಿಂದಿನ ಉದ್ದೇಶದ ಬಗ್ಗೆಯಾಗಲಿ, ಕಾಂತಾರದಲ್ಲಿ ಮೋಹನ್ ಲಾಲ್ ಅವರ ಉಪಸ್ಥಿತಿಯ ಬಗ್ಗೆಯಾಗಲಿ ರಿಷಬ್ ಇಲ್ಲಿಯವರೆಗೆ ಮಾತನಾಡಲು ಹೋಗಿಲ್ಲ. ಎಲ್ಲವನ್ನೂ ಗೌಪ್ಯವಾಗಿಯೇ ಇಟ್ಟಿದ್ದಾರೆ. ಯಾರಿಗೆ ಗೊತ್ತು.. ಸರಿಯಾದ ಸಮಯ ಬಂದಾಗ ರಿಷಬ್ ಶೆಟ್ಟಿ ಈ ವಿಚಾರದ ಕುರಿತು ಮಾತನಾಡಬಹುದು. ಮೋಹನ್ ಲಾಲ್ ಕಾಂತಾರದಲ್ಲಿದ್ದಾರೆ ಎನ್ನುವ ಬ್ರೇಕಿಂಗ್ ನ್ಯೂಸ್‌ನ ನೀಡಬಹುದು. ಆದರೆ, ಸದ್ಯಕ್ಕೆ ಈ ಸುದ್ದಿಯನ್ನು ಕೇಳಿ ಅನೇಕರು ಪುಳಕಿತರಾಗಿದ್ದಾರೆ. ಕಾಂತಾರದ ಪ್ರಿಕ್ವೆಲ್‌ನಲ್ಲಿ ಮೋಹನ್ ಲಾಲ್ ಆಕ್ಟ್ ಮಾಡಿದರೆ, ಚಿತ್ರ ನೋಡುವ ಮಜಾನೇ ಬೇರೆ ಎನ್ನುತ್ತಿದ್ದಾರೆ.
ಇನ್ನೂ ಕಾಂತಾರ ಚಿತ್ರದ ಪ್ರಿಕ್ವೆಲ್ ವಿಚಾರಕ್ಕೆ ಬಂದರೆ ಕಾಂತಾರದ ಚಿತ್ರದ ಕೆಲಸಗಳು ಭರದಿಂದ ನಡೆಯುತ್ತಿವೆ. ಕುಂದಾಪುರದಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ನಡೆಯುತ್ತಿದೆ. ಇನ್ನೂ 2025ರ ಮೊದಲಾರ್ಧದಲ್ಲಿ ಕಾಂತಾರ ಭಾಗ 1 ತೆರೆಗೆ ಬರುವ ನಿರೀಕ್ಷೆ ಇದ್ದು ಕುಂದಾಪುರದಲ್ಲಿ 22 ಸಾವಿರ ಚದರ ಅಡಿ ವಿಸ್ತೀರ್ಣದ ಶೂಟಿಂಗ್ ಫ್ಲೋರ್ ನಿರ್ಮಿಸಿ 'ಕಾಂತಾರ' ಚಾಪ್ಟರ್-1 ಚಿತ್ರೀಕರಣ ನಡೆಸಲಾಗುತ್ತಿದೆ. ಅದರ ಒಳಗೆ ನಾಲ್ಕೈದು ಸೆಟ್‌ಗಳನ್ನು ನಿರ್ಮಿಸಲಾಗಿದೆ.

ಇನ್ನೂ ಕಾಂತಾರ ಚಿತ್ರದ ಮೊದಲ ಭಾಗ ನಿರ್ಮಾಣವಾಗಿದ್ದು ಕೇವಲ 06-07 ಕೋಟಿಯಲ್ಲಿ ಮಾತ್ರ. ಆದರೆ ಗಳಿಸಿದ್ದು ಹತ್ ಹತ್ರ 500 ಕೋಟಿ. ಈ ಕಾರಣಕ್ಕೆ ಕಾಂತಾರದ ಪ್ರಿಕ್ವೆಲ್‌ನ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿರುವ ನಿರ್ಮಾಪಕ ವಿಜಯ್ ಕಿರಗಂದೂರ್ ಈ ಬಾರಿ ಬಾಕ್ಸಾಫೀಸ್‌ನಲ್ಲಿ 1000 ಕೋಟಿಯ ಬೇಟೆಯಾಡಲು ಸಿದ್ಧರಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಉಳಿದಂತೆ ಚಿತ್ರದ ತಾರಾಬಳಗದಲ್ಲಿ ಯಾರೆಲ್ಲ ಇದ್ದಾರೆ ಎನ್ನುವ ಮಾಹಿತಿಯನ್ನು ರಿಷಬ್ ಶೆಟ್ಟಿ ಹಂಚಿಕೊಂಡಿಲ್ಲ. ಪಾತ್ರಕ್ಕಾಗಿ ಕಳರಿ ಪಯಟ್ಟು ಸಮರಕಲೆಯನ್ನು ಕಲಿಯುತ್ತಿರುವ ವಿಚಾರವನ್ನಷ್ಟೇ ರಿಷಬ್ ಇಲ್ಲಿಯವರೆಗೆ ಹಂಚಿಕೊಂಡಿದ್ದಾರೆ
ಅಂದ್ಹಾಗೇ ಕಾಂತಾರ ಚಿತ್ರ ಬಿಡುಗಡೆಯಾಗಿ ಮೊನ್ನೆ ಸೆಪ್ಟೆಂಬರ್ 30ಕ್ಕೆ ಎರಡು ವರ್ಷಗಳಾಗಿವೆ. ಎರಡು ವರ್ಷದ ಹಿಂದೆ ತೆರೆಗೆ ಬಂದು ಚರಿತ್ರೆಯನ್ನು ಸೃಷ್ಟಿಸಿದ್ದ ಕಾಂತಾರ ಚಿತ್ರವನ್ನು ಭಾಷೆಯ ಭೇದ ಭಾವ ಇಲ್ಲದೇ ಎಲ್ಲರು ಮೆಚ್ಚಿಕೊಂಡಿದ್ದರು. ಬಾಯ್ತುಂಬ ಕೊಂಡಾಡಿದ್ದರು. ಇನ್ನೂ.. ಚಿತ್ರವನ್ನು ನಿರ್ದೇಶನ ಮಾಡುವುದಲ್ಲದೇ ಚಿತ್ರದ ನಾಯಕನ ಪಾತ್ರಕ್ಕೂ ಜೀವ ತುಂಬಿದ್ದ ರಿಷಬ್ ಶೆಟ್ಟಿ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ನಾಯಕನಾಗಿ ಹೊರ ಹೊಮ್ಮಿದ್ದರು. ಅತ್ಯುತ್ತಮ ಮನರಂಜನಾ ಚಿತ್ರ ಮತ್ತು ಅತ್ಯುತ್ತಮ ನಟ ಪ್ರಶಸ್ತಿಯನ್ನು ಕೂಡ ರಿಷಬ್ ಮುಡಿಗೇರಿಸಿಕೊಂಡಿದ್ದರು.


Click it and Unblock the Notifications











