ಕಾನೂನು ಎಲ್ಲರಿಗೂ ಒಂದೇ ಅಂತ ನಂಬಿದ್ದೆ; ಪೊಲೀಸರ ನಿರ್ಲಕ್ಷ್ಯ? ಗರಂ ಆದ ವಿಜಯಲಕ್ಷ್ಮಿ
ಸಾಮಾಜಿಕ ಜಾಲತಾಣ ತುಂಬಾ ಬಲಿಷ್ಠವಾದ ಅಸ್ತ್ರ. ಬದಲಾದ ಈ ಕಾಲಘಟ್ಟದಲ್ಲಿ ಈ ಸಾಮಾಜಿಕ ಜಾಲತಾಣ, ಮನುಷ್ಯನನ್ನ ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ.ಇಲ್ಲಿ ಒಳ್ಳೇಯವರು ಇದ್ದಾರೆ. ಕೆಟ್ಟವರು ಇದ್ದಾರೆ. ಆದರೆ ಈಗೀಗ ಈ ಸಾಮಾಜಿಕ ಜಾಲತಾಣವನ್ನು ತಮ್ಮ ವ್ಯೆಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಲು ಅನೇಕರು ಬಳಸುತ್ತಿಲ್ಲ. ತಮ್ಮ ಏಳಿಗೆಗಾಗಿ...
ಈ ಸೋಶಿಯಲ್ ಮೀಡಿಯಾವನ್ನು ಉಪಯೋಗ ಮಾಡುತ್ತಿಲ್ಲ. ಬದಲಿಗೆ ಹಲವರು ಈ ಸಾಮಾಜಿಕ ಜಾಲತಾಣವನ್ನು ಅವಾಚ್ಯ ಶಬ್ದಗಳಿಂದ ಮತ್ತೊಬ್ಬರನ್ನು ನಿಂದಿಸಲು .. ದ್ವೇಷ - ಅಸೂಯೆಯನ್ನು ಬಿತ್ತಲು .. ಬಳಸುತ್ತಿದ್ದಾರೆ.

ಇನ್ನು ಇವರ ನಡುವೆ ಇಲ್ಲಿ ಮತ್ತೊಂದು ವರ್ಗ ಇದೆ. ಈ ವರ್ಗ ಹೆಣ್ಣು ಮಕ್ಕಳಿಗೆ.. ಚಿತ್ರರಂಗದಲ್ಲಿನ ಮಹಿಳೆಯರಿಗೆ.. ನಾಯಕಿಯರಿಗೆ.. ಲೈಂಗಿಕ ಶೋಷಣೆ.. ಕಿರುಕುಳು ಕೊಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದೆ. ಸ್ತ್ರೀಯರ ಪಾಲಿಗೆ ಕಗ್ಗಂಟಾಗಿ ಉಳಿದಿದೆ. ಇಂತಹ ಗುಂಪಿನ ವಿರುದ್ಧ ವಿಜಯಲಕ್ಷ್ಮಿ ಸಮರ ಸಾರಿದ್ದಾರೆ.
ಆದರೆ, ವಿಜಯಲಕ್ಷ್ಮಿ ಅವರಿಗೆ ಪೊಲೀಸರ ಸಹಕಾರ-ಸಹಯೋಗ-ಸಹಾಯ ಸಿಗುತ್ತಿಲ್ಲ. ಈ ಮಾತನ್ನು ಖುದ್ದು ವಿಜಯಲಕ್ಷ್ಮಿ ಅವರೇ ಹೇಳಿದ್ದಾರೆ. ಪೊಲೀಸರ ವಿರುದ್ಧ ತಮ್ಮ ಅಸಮಾಧಾನವನ್ನು ಕೂಡ ಹೊರ ಹಾಕಿದ್ದಾರೆ.
ಹೌದು, ಕೆಲ ದಿನಗಳ ಹಿಂದೆ ವಿಜಯಲಕ್ಷ್ಮೀ ತಮಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದವರ ವಿರುದ್ಧ ಕಿಡಿ ಕಾರಿದ್ದರು. ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ಆದರೆ.. ದೂರು ದಾಖಲಿಸಿದ ನಂತರವೂ ಕೂಡ ಇದುವರೆಗೆ ಯಾರ ಬಂಧನವೂ ಆಗಿಲ್ಲ.
ಈ ಹಿನ್ನೆಲೆ ಖುದ್ದು ವಿಜಯಲಕ್ಷ್ಮಿ ಇಂದು ತಮ್ಮ ವಕೀಲರ ಜೊತೆ ಕಮಿಷನರ್ ಕಚೇರಿಗೆ ಬಂದಿದ್ದರು. ತಾವು ನೀಡಿದ ದೂರಿನ ಕುರಿತು ಪ್ರಶ್ನಿಸಿದರು. ಇಲ್ಲಿ ವಿಜಯಲಕ್ಷ್ಮಿ ಅವರಿಗೆ ಸಿಕ್ಕ ಉತ್ತರದಿಂದ ಬಹುಶಃ ಸಮಾಧಾನ ಆದಂತೆ ಇಲ್ಲ. ಹೀಗಾಗಿಯೇ ಪೊಲೀಸ್ ಆಯುಕ್ತರ ಕಚೇರಿಯಿಂದ ಮರಳಿದ ನಂತರ ವಿಜಯಲಕ್ಷ್ಮಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸುದಿರ್ಘ ಲೇಖನ ಹಂಚಿಕೊಂಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತು ಬರೆದುಕೊಂಡಿರುವ ವಿಜಯಲಕ್ಷ್ಮಿ, ನಮ್ಮ ದೇಶದ ಕಾನೂನು ಮತ್ತು ವ್ಯವಸ್ಥೆ ಎಲ್ಲರಿಗೂ ಒಂದೇ ಎಂದು ನಾನು ಯಾವಾಗಲೂ ನಂಬಿದ್ದೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈಗಿನ ಅನುಭವವು ಆ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ ಎಂದು ಹೇಳಿದ್ದಾರೆ. ನಾನು ನೀಡಿದ ದೂರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಆದರೆ ಮತ್ತೊಬ್ಬ ಮಹಿಳೆ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿ ಕೇವಲ ಒಂದೇ ದಿನದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿರುವ ವಿಜಯಲಕ್ಷ್ಮಿ, ನನ್ನ ದೂರು ಅಷ್ಟು ಮುಖ್ಯವಾದುದಲ್ಲವೇ ಅಥವಾ ಅದಕ್ಕೆ ಪ್ರಾಮುಖ್ಯತೆ ಇಲ್ಲವೇ..? ಎಂದು ಪ್ರಶ್ನೆ ಮಾಡಿದ್ದಾರೆ.
ನನ್ನ ವಕೀಲರು ಈ ವಿಚಾರಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ಪ್ರಶ್ನೆ ಕೇಳಿದ ನಂತರವೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿರುವ ವಿಜಯಲಕ್ಷ್ಮಿ, ಈ ಹಿನ್ನೆಲೆ ನಾನೇ ವ್ಯೆಯಕ್ತಿಕವಾಗಿ ಹೋಗಿ ಅವರಿಗೆ ನೆನಪಿಸಬೇಕಾಯ್ತು ಎಂದು ಹೇಳಿದ್ದಾರೆ. ಯಾವುದೇ ಬಾಹ್ಯ ಒತ್ತಡ ಅಥವಾ ಪ್ರಭಾವ ಈ ವಿಳಂಬದ ಹಿಂದಿನ ಕಾರಣವಲ್ಲ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ ಎಂದು ಕೂಡ ಹೇಳಿರುವ ವಿಜಯಲಕ್ಷ್ಮಿ, ಯಾರು ಭಾಗಿಯಾಗಿದ್ದಾರೆ ಎಂಬುದರ ಮೇಲೆ ನ್ಯಾಯವು ಅವಲಂಬಿತವಾಗಿರಬಾರದು ಎಂದು ಹೇಳಿದ್ದಾರೆ. ನಾನು ಇನ್ನೂ ಕಾಯುತ್ತಿದ್ದೇನೆ. ನಾನು ಇದನ್ನು ಸುಮ್ಮನೆ ಬಿಡುವುದಿಲ್ಲ ಎಂದು ತಮ್ಮ ಆಕ್ರೋಶ -ಅಸಮಾಧಾಮನವನ್ನು ಹೊರ ಹಾಕಿದ್ದಾರೆ. ತಮ್ಮ ಈ ಪೋಸ್ಟ್‌ನ್ನು ಬೆಂಗಳೂರು ಸಿಟಿ ಪೊಲೀಸ್, ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ಕರ್ನಾಟಕ ಸರ್ಕಾರಕ್ಕೂ ವಿಜಯಲಕ್ಷ್ಮಿ ದರ್ಶನ್ ಟ್ಯಾಗ್ ಮಾಡಿದ್ದಾರೆ.



Click it and Unblock the Notifications











