ಸ್ಯಾಂಡಲ್‌ವುಡ್‌ಗೆ ಇನ್ಮುಂದೆ ಆಶಿಕಾ ರಂಗನಾಥ್ ಮರಿಚೀಕೆ ? ರಶ್ಮಿಕಾ, ಶ್ರೀಲೀಲಾ, ರುಕ್ಮಿಣಿ ಹಾದಿಯಲ್ಲಿ ಚುಟುಚುಟು ಚೆಲುವೆ
ಕನ್ನಡ ಚಿತ್ರರಂಗದಿಂದ ಇಲ್ಲಿಯವರೆಗೆ ಅನೇಕ ನಾಯಕಿಯರು ಪರಭಾಷೆಗೆ ವಲಸೆ ಹೋಗಿದ್ದಾರೆ. ಕೆಲವರು ಅಲ್ಲಿಯೇ ಬದುಕು ಕಟ್ಟಿಕೊಂಡರೆ ಇನ್ನು ಹಲವರು ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಮರಳಿ ಬಂದಿದ್ದಾರೆ.
ಇನ್ನೂ ಹೀಗೆ ಗುಳೆ ಹೋಗುವರಲ್ಲಿ ಕೆಲವರು ಚಿತ್ರ ಮತ್ತು ಪಾತ್ರ ಚೆನ್ನಾಗಿದೆ ಎಂದು ಹೋದರೆ, ಇನ್ನು ಕೆಲವರು ಇಲ್ಲಿ ಸಿಗುವ ಸಂಭಾವನೆಗಿಂತ ಹೆಚ್ಚು ಅಲ್ಲಿ ಸಿಗುತ್ತೆ ಎಂದು ಹೋಗುತ್ತಾರೆ.
ಎಲ್ಲವೂ ಅವರವರ ನಿರ್ಧಾರ ಮತ್ತು ಬದುಕಾದರೂ ಸದ್ಯ ಹೀಗೆ ಕನ್ನಡದಿಂದ ಪರಭಾಷೆಗೆ ತೆರಳಿ ಅಲ್ಲಿ ಅದೃಷ್ಟವನ್ನು ಪರೀಕ್ಷೆ ಮಾಡಿಕೊಳ್ಳುತ್ತಿರುವ ಆಶಿಕಾ ರಂಗನಾಥ್ ಸದ್ಯ ರಶ್ಮಿಕಾ ಮಂದಣ್ಣ.. ಶ್ರೀಲೀಲಾ.. ರುಕ್ಮಿಣಿ ವಸಂತ್ ಅವರ ಹಾದಿಯಲ್ಲಿಯೇ ಸಾಗುತ್ತಿರುವ ಎಲ್ಲ ಲಕ್ಷಣ ಕಂಡು ಬರುತ್ತಿವೆ. ಕನ್ನಡ ಚಿತ್ರರಂಗದಿಂದ ಕಣ್ಮರೆಯಾಗಿ ತೆಲುಗು ಚಿತ್ರರಂಗದಲ್ಲಿಯೇ ಬಿಡಾರ ಹೂಡುವ ಸಾಧ್ಯತೆಗಳು ಕೂಡ ದಟ್ಟವಾಗುತ್ತಿವೆ.

ಹೌದು.. ''ಕ್ರೇಜಿಬಾಯ್'' ಅನ್ನೋ ಹೊಸಬರ ಸಿನಿಮಾದಿಂದ ಆರಂಭಿಸಿ, ನಂತರ ''ಮಾಸ್ ಲೀಡರ್''.. ''ಮುಗುಳು ನಗೆ''.. ''ರಾಜು ಕನ್ನಡ ಮೀಡಿಯಂ''.. ''ರಾಂಬೋ-2''.. ''ಗರುಡ''.. ''ತಾಯಿಗೆ ತಕ್ಕ ಮಗ''.. ''ಅವತಾರ ಪುರುಷ ಭಾಗ 1 ಮತ್ತು ಭಾಗ 2''.. ''ಮದಗಜ'' ''ರೆಮೋ''..''ಗತ ವೈಭವ'' ಹೀಗೆ ಹೊಸಬರ ಮತ್ತು ಹಳಬರ ಚಿತ್ರಗಳಲ್ಲಿ ಅವಕಾಶ ಪಡೆಯುತ್ತಲೇ, ಕನ್ನಡದ ಬೇಡಿಕೆಯ ನಾಯಕಿಯಾಗಿ ಹೊರ ಹೊಮ್ಮಿದವರು ಆಶಿಕಾ ರಂಗನಾಥ್.
ಇಂಥಾ ಆಶಿಕಾ ರಂಗನಾಥ್ 2022ರಲ್ಲಿ ತಮಿಳು ಚಿತ್ರರಂಗಕ್ಕೆ ವಲಸೆ ಹೋದರು.''ಪಟ್ಟತ್ತು ಅರಸನ್'' ಚಿತ್ರವನ್ನು ಮಾಡಿದರು. ಮರು ವರ್ಷ ತೆಲುಗು ಚಿತ್ರರಂಗಕ್ಕೆ ಬಂದ ಆಶಿಕಾ ರಂಗನಾಥ್ ''ಅಮಿಗೋಸ್'' ಎಂಬ ಚಿತ್ರವನ್ನು ಮಾಡಿದರು. ಈ ಚಿತ್ರದಲ್ಲಿ ನಂದಮೂರಿ ಕಲ್ಯಾಣ ರಾಮ್ ನಾಯಕನಾಗಿದ್ದರು.
ಇದಾದ ನಂತರ ನಾಗಾರ್ಜುನ ಜೊತೆ ತೆರೆ ಹಂಚಿಕೊಳ್ಳುವ ಸೌಭಾಗ್ಯ ಕೂಡ ಆಶಿಕಾಗೆ ಸಿಕ್ತು. ''ನಾ ಸಾಮಿ ರಂಗ'' ಚಿತ್ರದಲ್ಲಿ ಆಶಿಕಾ ಮಿಂಚಿದರು. ಆ ನಂತರ ಮತ್ತೆ ಕಾಲಿವುಡ್‌ಗೆ ತೆರಳಿ ಸಿದ್ಧಾರ್ಥ್ ಜೊತೆ ''ಮಿಸ್ ಯೂ'' ಚಿತ್ರವನ್ನು ಮಾಡಿದ ಆಶಿಕಾ ಈ ವರ್ಷದ ಆರಂಭದಲ್ಲಿ ಮಾಸ್ ಮಹಾರಾಜಾ ರವಿತೇಜಾ ಅಭಿನಯದ ''ಭರ್ತ ಮಹಾಶಯಲಕು ವಿಜ್ಞಪ್ತಿ'' ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಪ್ರತ್ಯಕ್ಷರಾದರು. ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾದ ಈ ಚಿತ್ರದಲ್ಲಿ ಮಾನಸಾ ಪಾತ್ರವನ್ನು ಆಶಿಕಾ ನಿರ್ವಹಿಸಿದ್ದರು.
ಸದ್ಯ ಆಶಿಕಾ ಕೈಯಲ್ಲಿ ''ವಿಶ್ವಂಭರ'' ಇದೆ. ಈ ಚಿತ್ರದ ನಾಯಕ ಬೇರೆ ಯಾರು ಅಲ್ಲ. ಬದಲಿಗೆ ಮೆಗಾ ಸ್ಟಾರ್ ಚಿರಂಜೀವಿ. ತ್ರಿಶಾ ಕೂಡ ಈ ಚಿತ್ರದ ನಾಯಕಿ. ಈ ಚಿತ್ರವನ್ನು ಹೊರತು ಪಡಿಸಿದರೆ ಕಾರ್ತಿ ಅಭಿನಯದ ತಮಿಳು ಚಿತ್ರ ''ಸರ್ದಾರ್ 2''ದಲ್ಲಿ ಕೂಡ ಆಶಿಕಾ ರಂಗನಾಥ್ ಅವರೇ ನಾಯಕಿ.

ಹೀಗೆ ಒಂದಾದ ಮೇಲೊಂದು ತಮಿಳು ಮತ್ತು ತೆಲುಗು ಚಿತ್ರವನ್ನು ಮಾಡುತ್ತಿರುವ ಆಶಿಕಾ ಸದ್ಯ ತೆಲುಗಿನಲ್ಲಿ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಸದ್ಯ ಗುಲ್ಲಾಗಿದೆ.
ಹೌದು, ''123 ತೆಲುಗು'' ವರದಿಯ ಪ್ರಕಾರ ಮುಂದಿನ ವರ್ಷದ ಸಂಕ್ರಾಂತಿಯಂದು ತೆರೆಗೆ ಬರಲಿರುವ ಶರ್ವಾನಂದ್ ನಾಯಕನಾಗಿ ಅಭಿನಯಿಸುತ್ತಿರುವ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ತೆಲುಗಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಲ್ಲಿ ಒಂದಾದ ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ಆಶಿಕಾ ರಂಗನಾಥ್ ಅವರಿಗೆ ಕೈತುಂಬಾ ಸಂಭಾವನೆ ನೀಡಲಾಗಿದೆ ಎಂದು ಈ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ''ಭರ್ತ ಮಹಾಶಯಲಕು ವಿಜ್ಞಪ್ತಿ'' ಚಿತ್ರದಲ್ಲಿನ ಆಶಿಕಾ ಅವರ ಅಭಿನಯಕ್ಕೆ ಮನ ಸೋತು ಈ ಚಿತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಕೂಡ ಹೇಳಲಾಗಿದೆ.
ಅಂದ್ಹಾಗೇ ಮೊದಲು ಆಶಿಕಾ ರಂಗನಾಥ್ ಅಭಿನಯದ 3 ಚಿತ್ರಗಳು ಕನ್ನಡದಲ್ಲಿ ಒಂದು ವರ್ಷದಲ್ಲಿ ತೆರೆಗೆ ಬರುತ್ತಿದ್ದವು. ಒಮ್ಮೆ ನಾಲ್ಕು ಚಿತ್ರಗಳು ತೆರೆ ಕಂಡ ಉದಾಹರಣೆ ಕೂಡ ಇದೆ. ಆದರೆ 2023ರಿಂದ ಇಲ್ಲಿಯವರೆಗೆ ಆಶಿಕಾ ಕೇವಲ 3 ಕನ್ನಡ ಚಿತ್ರಗಳಲ್ಲಿ ಮಾತ್ರ ಅಭಿನಯಿಸಿದ್ದಾರೆ. ಆ ಪೈಕಿ ಎರಡು ಚಿತ್ರಕ್ಕೆ ಸಿಂಪಲ್ ಸುನಿ ಅವರದ್ದೇ ನಿರ್ದೇಶನ ಇದೆ.
ಇನ್ನು ಈ ವರ್ಷ ಆಶಿಕಾ ರಂಗನಾಥ್ ಕನ್ನಡದಲ್ಲಿ ಯಾವ ಚಿತ್ರ ಒಪ್ಪಿಕೊಂಡಂತೆ ಇಲ್ಲ. ಅದರ ಬಗ್ಗೆ ಸುದ್ದಿಯೂ ಇಲ್ಲ. ಈ ಹಿನ್ನೆಲೆ ಆಗಲೇ ಹೇಳಿದಂತೆ ಕನ್ನಡ ಚಿತ್ರರಂಗಕ್ಕೆ ಮುಂಬರುವ ದಿನಗಳಲ್ಲಿ ಆಶಿಕಾ ರಂಗನಾಥ್ ಮರಿಚೀಕೆ ಆದರೆ ಅದರಲ್ಲಿ ಅಚ್ಚರಿ ಇಲ್ಲ. ಯಾರಿಗೆ ಗೊತ್ತು ಮುಂದೆ ಆಶಿಕಾ ಅವರಿಗೂ ಕೂಡ ಬಾಲಿವುಡ್ ಬಾಗಿಲು ತೆರೆದರೂ ತೆರೆಯಬಹುದು.


Click it and Unblock the Notifications











