ಅಬ್ಬಬ್ಬಾ.. ಕಿಚ್ಚನ 'ಮ್ಯಾಕ್ಸ್' ಸಿನಿಮಾ 8 ದಿನಕ್ಕೆ 100 ಕೋಟಿ ರೂ. ಗಳಿಕೆ ಕಂಡಿದ್ದು ನಿಜಾನಾ?
ಕನ್ನಡ ಚಿತ್ರಗಳು ದೊಡ್ಡದಾಗಿ ಸದ್ದು ಮಾಡುತ್ತಿದೆ. ಹೊಸ ವರ್ಷ ಕೂಡ ಚಂದನವನಕ್ಕೆ ಹೊಸ ಹುರುಪು ತಂದಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಬಿಡುಗಡೆಯಾದ 'ಯುಐ' ಹಾಗೂ 'ಮ್ಯಾಕ್ಸ್' ಚಿತ್ರಗಳು ಗೆದ್ದಿವೆ. ಅದರಲ್ಲೂ ಕಿಚ್ಚನ ದರ್ಬಾರ್ ಜೋರಾಗಿಯೇ ಇದೆ. ಸಿನಿರಸಿಕರು, ನಿರ್ಮಾಪಕರು, ವಿತರಕರು ಎಲ್ಲರೂ ಖುಷಿಯಾಗಿದ್ದಾರೆ.
ಡಿಸೆಂಬರ್ 25ರಂದು ತೆರೆಗೆ ಬಂದ 'ಮ್ಯಾಕ್ಸ್' ಸಿನಿಮಾ ಮೊದಲ ಪ್ರದರ್ಶನದಿಂದಲೂ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ಕಿಚ್ಚನ ಖಡಕ್ ನಟನೆಗೆ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆಗಿದ್ದಾರೆ. ರಜೆಗಳು ಚಿತ್ರದ ಕಲೆಕ್ಷನ್‌ಗೆ ವರವಾಗಿದೆ. ಹೊಸ ವರ್ಷದ ಮೊದಲ ದಿನ ಕೂಡ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಕೇವಲ 8 ದಿನಕ್ಕೆ ಕಿಚ್ಚನ ಹಿಂದಿನ ಸಿನಿಮಾಗಳ ದಾಖಲೆ ಮುರಿದು 'ಮ್ಯಾಕ್ಸ್' ಮುನ್ನುಗುತ್ತಿದೆ.

'ಮ್ಯಾಕ್ಸ್' ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಭಾರೀ ಚರ್ಚೆ ನಡೀತಿದೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕಾಮೆಂಟ್ ಮಾಡಿ ಖುಷಿಪಡುತ್ತಿದ್ದಾರೆ. ಯಾವೆಲ್ಲಾ ದಾಖಲೆಗಳನ್ನು ಅರ್ಜುನ್ ಮಹಾಕ್ಷಯ್ ಮುರಿದಿದ್ದಾನೆ ಎಂದು ಖುಷಿಯಾಗಿ ಪೋಸ್ಟ್ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಕೇವಲ 8 ದಿನಕ್ಕೆ ಸಿನಿಮಾ 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಪೋಸ್ಟರ್‌ವೊಂದು ವೈರಲ್ ಆಗುತ್ತಿದೆ. ಇದನ್ನು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.
ಕನ್ನಡ ಸಿನಿಮಾ 100 ಕೋಟಿ ರೂ. ಕಲೆಕ್ಷನ್ ಮಾಡುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಇಲ್ಲಿಯವರೆಗೆ ನಾಲ್ಕೈದು ಸಿನಿಮಾ ಮಾತ್ರ ಈ ದಾಖಲೆ ಬರೆದಿದೆ. ಇದೀಗ 'ಮ್ಯಾಕ್ಸ್' ಕೂಡ ಈ ಮೈಲಿಗಲ್ಲು ದಾಟಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾದ ಮಾತು ಎಂದು ಗಾಂಧಿನಗರದಲ್ಲಿ ಕೇಳಿಬರ್ತಿದೆ. 'ಮ್ಯಾಕ್ಸ್' ಬಾಕ್ಸಾಫೀಸ್ ಶೇಕ್ ಮಾಡುತ್ತಿರುವುದು, 2024ರ ನಂಬರ್ ವನ್ ಕನ್ನಡ ಸಿನಿಮಾ ಎನ್ನುವುದು ನಿಜ. ಆದರೆ ಇಷ್ಟು ಬೇಗ 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನುವುದು ಸುಳ್ಳು ಎನ್ನಲಾಗ್ತಿದೆ.

ಚಿತ್ರತಂಡದಿಂದ 'ಮ್ಯಾಕ್ಸ್' ಕಲೆಕ್ಷನ್ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಬಾಕ್ಸಾಫೀಸ್ ಪಂಡಿತರ ಲೆಕ್ಕಾಚಾರದ ಪ್ರಕಾರ ಸಿನಿಮಾ 36 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಅಷ್ಟೇ. ಮುಂದಿನ ದಿನಗಳಲ್ಲಿ 50 ಕೋಟಿ ರೂ. ಕ್ಲಬ್ ಸೇರುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. ಸದ್ಯಕ್ಕೆ 100 ಕೋಟಿ ರೂ. ಅನ್ನುವುದು ನಿಜವಲ್ಲ, ಆ ಪೋಸ್ಟರ್ ಕೂಡ ಯಾರೋ ಅಭಿಮಾನಿಗಳು ಡಿಸೈನ್ ಮಾಡಿರುವುದು ಎಂದು ಹೇಳಲಾಗುತ್ತಿದೆ.
ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾ ಬಗ್ಗೆ ಕೊಂಡಾಡುವ ಭರದಲ್ಲಿ ಕೊಂಚ ವಿಜೃಂಭಿಸಿ ಇಂತಾದೊಂದು ಪೋಸ್ಟರ್ ವೈರಲ್ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅದನ್ನು ಪಕ್ಕಕ್ಕಿಟ್ಟರೆ 'ಮ್ಯಾಕ್ಸ್' ನಿಜಕ್ಕೂ ಬಾಕ್ಸಾಫೀಸ್ ಅಲ್ಲಾಡಿಸಿಬಿಟ್ಟಿದ್ದಾನೆ. 2ನೇ ವಾರ ಒಂದಷ್ಟು ಸ್ಕ್ರೀನ್‌ಗಳನ್ನು ಹೆಚ್ಚಿಸಲಾಗಿದೆ. ಅದು 'ಮ್ಯಾಕ್ಸ್' ಚಿತ್ರಕ್ಕಿರುವ ಕ್ರೇಜ್ ಎಂದರೆ ತಪ್ಪಾಗಲ್ಲ.
ಬರೀ ಬುಕ್‌ಮೈ ಶೋನಲ್ಲಿ ಮೊದಲ 8 ದಿನಕ್ಕೆ 6 ಲಕ್ಷದ 58 ಸಾವಿರಕ್ಕೂ ಅಧಿಕ ಟಿಕೆಟ್ ಬುಕ್ ಆಗಿದೆ. ಆ ಮೂಲಕ 'ಮ್ಯಾಕ್ಸ್' ಮತ್ತೊಂದು ದಾಖಲೆ ತನ್ನದಾಗಿಸಿಕೊಂಡಿದ್ದಾನೆ. ವಿಜಯ್ ಕಾರ್ತಿಕೇಯನ್ ಮೊದಲ ಪ್ರಯತ್ನದಲ್ಲೇ ಮ್ಯಾಜಿಕ್ ಮಾಡಿದ್ದಾರೆ. ಕೇವಲ ಒಂದು ರಾತ್ರಿಯಲ್ಲಿ ನಡೆಯುಚ ಕಥೆಯನ್ನು ಕುತೂಹಲಭರಿತವಾಗಿ ಕಟ್ಟಿಕೊಟ್ಟು ಪ್ರೇಕ್ಷಕರನ್ನು ಸೀಟಿನ ತುದಿಗೆ ಬಂದು ಕೂರುವಂತೆ ಮಾಡಿದ್ದಾರೆ.
'ಮ್ಯಾಕ್ಸ್' ಆರ್ಭಟದ ಬಳಿಕ 'ಯುವ' ಸಿನಿಮಾ ಕಲೆಕ್ಷನ್ ಡಲ್ ಆಗಿದೆ. ಅದೇ ರೀತಿ ಯಾವುದೇ ಕ್ಲ್ಯಾಶ್ ಇಲ್ಲದೇ 'ಮ್ಯಾಕ್ಸ್' ಮಾತ್ರ ಬಿಡುಗಡೆ ಆಗಿದ್ದರೆ ಮತ್ತಷ್ಟು ಪ್ಲಸ್ ಆಗುವ ಸಾಧ್ಯತೆಯಿತ್ತು. ಇನ್ನು ಕರ್ನಾಟಕ ಬಿಟ್ಟರೆ ಹೊಸ ರಾಜ್ಯಗಳಲ್ಲಿ 'ಮ್ಯಾಕ್ಸ್' ಸಿನಿಮಾ ದೊಡ್ಡದಾಗಿ ಕಲೆಕ್ಷನ್ ಮಾಡುತ್ತಿಲ್ಲ.


Click it and Unblock the Notifications











