'ಸತ್ಯಮಂಗಳ'ದ ಕಥೆ ಏನಾಯಿತು ಶಿವಣ್ಣ ? ಕಾಡಿನ ಕಥೆಯಲ್ಲಿ ಕಾಣಿಸಿಕೊಳ್ಳಬೇಕಿತ್ತು ಕರುನಾಡ ಚಕ್ರವರ್ತಿ...!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗ ಕಂಡ ಅಪರೂಪದ ನಟ. ಕ್ಲಾಸ್, ಮಾಸ್ ಸೇರಿದಂತೆ ಯಾವ ಪಾತ್ರಕ್ಕಾದರೂ ಸೈ ಅನ್ನುವಂಥಾ ಮನಸ್ಥಿತಿ ಅವರದ್ದು. ಬಹುಶಃ ರಾಜ್‌ಕುಮಾರ್ ಅವರನ್ನು ಬಿಟ್ಟರೆ ಶಿವಣ್ಣನಷ್ಟು ವೆರೈಟಿ ಪಾತ್ರಗಳನ್ನು ಮಾಡಿದ, ಹೊಸಾ ಪ್ರಯೋಗಗಳಿಗೂ ಒಗ್ಗಿಕೊಂಡ ಮತ್ತೋರ್ವ ನಟ ಶಿವರಾಜ್ ಕುಮಾರ್. ಅವರ ಈ ಕಲರ್‌ಫುಲ್ ಸಿನಿ ಜರ್ನಿಗೆ ಕಳಶಪ್ರಾಯವಾಗೋ ಎಲ್ಲ ಸಾಧ್ಯತೆಗಳನ್ನೂ ಹೊಂದಿದ್ದ ಸತ್ಯ ಮಂಗಳ ಸಿನಿಮಾ ಶಿವರಾಜ್ ಕುಮಾರ್ ನಟಿಸುತ್ತಿರೋ ಸಾಲು ಸಾಲು ಚಿತ್ರಗಳ ಗದ್ದಲದ ನಡುವೆ ಅದೇಕೋ ಮರೆಯಾಗಿದ್ದು ಮಾತ್ರ ದುರದೃಷ್ಟಕರ.
ಹೌದು, ನಿಮಗೆ ನೆನಪಿದ್ದರೆ, 2021ರಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಚಿತ್ರವೊಂದರ ಘೋಷಣೆಯಾಗಿತ್ತು. ಚಿತ್ರದ ಶೀರ್ಷಿಕೆ ಮತ್ತು ಟೈಟಲ್ ಪೋಸ್ಟರ್ ತೀವೃ ಕುತೂಹಲವನ್ನೂ ಕೆರಳಿಸಿತ್ತು. ಆ ಚಿತ್ರದ ಹೆಸರೇ ಸತ್ಯಮಂಗಳ. ತೀರಾ ಸಣ್ಣ ವಯಸ್ಸಿಗೇ ನಿರ್ದೇಶಕ ಅನ್ನಿಸಿಕೊಂಡ ಮಮ್ಮಿ ಮತ್ತು ದೇವಕಿ ಎನ್ನುವ ಎರಡು ಚಿತ್ರಗಳ ಮೂಲಕ ಎಲ್ರನ್ನೂ ನಿಬ್ಬೇರಗಾಗಿಸಿದ್ದ ಲೋಹಿತ್ ಈ ಚಿತ್ರದ ನಿರ್ದೇಶನದ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದರು. ಚುರುಕು ಸ್ವಭಾವ, ಲವಲವಿಕೆ, ಕ್ರಿಯಾಶೀಲತೆ, ಸ್ನೇಹಶೀಲ ಗುಣದಿಂದ ಸಿನಿಮಾರಂಗದ ಎಲ್ಲರಿಗೂ ಪರಿಚಯವಿರುವ ಲೋಹಿತ್ ಅವರಿಗೆ ಈ ಹಿಂದೆ ದಯವಿಟ್ಟು ಗಮನಿಸಿ ಎನ್ನುವ ಚೆಂದದ ಸಿನಿಮಾ ನಿರ್ಮಿಸಿ ಆ ನಂತರ ಶಿವಣ್ಣ ಅಭಿನಯದ ಬೈರಾಗಿ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದ ಕೃಷ್ಣ ಸಾರ್ಥಕ್ ನಿರ್ಮಾಪಕರಾಗಿ ಜೊತೆಯಾಗಿದ್ದರು.

ಇನ್ನೂ.. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಚಿತ್ರವನ್ನು ಘೋಷಿಸಿದ ಬೆನ್ನಲ್ಲಿಯೇ, ತಮ್ಮ ಖುಷಿಯನ್ನೂ ಹಂಚಿಕೊಂಡಿದ್ದ ಕೃಷ್ಣ ಸಾರ್ಥಕ್, ನಾನು ಲೋಹಿತ್ ಜೊತೆ ಕತೆಗಳ ಬಗ್ಗೆ ಸಾಕಷ್ಟು ಡಿಸ್ಕಸ್ ಮಾಡ್ತಾ ಇರ್ತೀನಿ. ಇದೊಂದು ಲೈನ್ ಹೇಳಿದ್ರು. ತುಂಬಾ ಇಂಪ್ರೆಸ್ ಆಗಿತ್ತು. ಶಿವಣ್ಣ ಅವರ ಜೊತೆ ಒಂದ್ಸಲ ಮಾತಾಡುವಾಗ, ಲೋಹಿತ್ ಹೇಳಿದ್ದ ಎಳೆಯನ್ನು ಹಾಗೇ ಹೇಳಿದ್ದೆ. ಅದನ್ನು ಕೇಳಿದ ಶಿವಣ್ಣ ತುಂಬಾನೇ ಚನ್ನಾಗಿದೆ. ನಾವೇ ಮಾಡೋಣ. ಡೈರೆಕ್ಟರನ್ನು ಕರೆಸಿ ಅಂದಿದ್ದರು. ಲೋಹಿತ್ ಬಂದು ಒಂದು ಎಳೆ ಹೇಳಿದ್ದರು. ಮತ್ತೆ ಎರಡು-ಮೂರು ತಿಂಗಳು ಸಮಯ ತೆಗೆದುಕೊಂಡು ಕಂಪ್ಲೀಟ್ ಸ್ಕ್ರಿಪ್ಟ್ ಅನ್ನು ಶಿವಣ್ಣನಿಗೆ ಹೇಳಿದ್ರು. ಈ ಸಂದರ್ಭದಲ್ಲಿ ಸ್ವತಃ ಶಿವಣ್ಣ ಈ ಸಿನಿಮಾವನ್ನು ವರಮಹಾಲಕ್ಷ್ಮಿ ಹಬ್ಬಕ್ಕೆ ಅನೌನ್ಸ್ ಮಾಡಿ ಅಂತಾ ಗ್ರೀನ್ ಸಿಗ್ನಲ್ ಕೊಟ್ಟರು.
ಪ್ರಸೆಂಟ್ ಒಂದು ಸಿನಿಮಾ ರನ್ನಿಂಗಲ್ಲಿ ಇರೋದರಿಂದ, ಇದು ಮುಗಿಯುತ್ತಿದ್ದಂತೇ ಅದನ್ನು ಶುರು ಮಾಡೋಣ ಅಂತಾ ಇದ್ದೀವಿ. ಶಿವಣ್ಣನ ನೂರಿಪ್ಪತ್ತೈದು ಸಿನಿಮಾಗಳಲ್ಲಿ ಏನಿಲ್ಲ ಅನ್ನೋದನ್ನು ಗುರುತಿಸಿ ಬೈರಾಗಿ ಮಾಡ್ತಿರೋದು. ಈಗ ಅದನ್ನೂ ಹೊರತುಪಡಿಸಿ ಮತ್ತೊಂದು ಹೊಸತನ್ನು ಸೃಷ್ಟಿ ಮಾಡಬೇಕು ಅಂತಾ ಅಂದುಕೊಂಡಾಗ ಜೀವ ಪಡೆದದ್ದು ʻಸತ್ಯಮಂಗಳʼ. ತುಂಬಾ ವೇಗವಾದ ಸ್ಕ್ರೀನ್ ಪ್ಲೇ ಈ ಸಿನಿಮಾದಲ್ಲಿ ಇದೆ. ಅತ್ಯದ್ಭುತ ಎನ್ನುವಂತಾ ಆಕ್ಷನ್, ಮನಮಿಡಿಯುವ ಸೆಂಟಿಮೆಂಟ್ ಎಲ್ಲವನ್ನೂ ಸೇರಿಸಿ ಹೆಣೆದಿರುವ ಕಥೆ ʻಸತ್ಯಮಂಗಳʼದಲ್ಲಿದೆ. ಇಂತಾ ತೂಕದ ಕತೆಯ ಸಿನಿಮಾವನ್ನು ನಿರ್ಮಿಸಲು ನಿಜಕ್ಕೂ ಖುಷಿ ಅನ್ನಿಸುತ್ತೆ ಎಂದಿದ್ದರು.

ಆದರೆ ಆ ನಂತರ ಏನಾಯಿತೋ ಗೊತ್ತಿಲ್ಲ. ಶಿವಣ್ಣ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾದರು. ಕೃಷ್ಣ ಸಾರ್ಥಕ್-ಜಗದೀಶ್ ಗೌಡ ಅವರ ಜೊತೆ ಸೇರಿ ದುನಿಯಾ ವಿಜಯ್ ಅಭಿನಯಿಸಿ ನಿರ್ದೇಶಿಸಿರುವ 'ಭೀಮ' ಚಿತ್ರವನ್ನೂ ಶುರು ಮಾಡಿದರು. ಲೋಹಿತ್ ಪ್ರಜ್ವಲ್ ದೇವರಾಜ್ ಅವರಿಗೆ 'ಮಾಫಿಯಾ' ಚಿತ್ರವನ್ನು ನಿರ್ದೇಶಿಸಿದರು. ಮೊನ್ನೆಯಷ್ಟೇ ಪ್ರಜ್ವಲ್ ದೇವರಾಜ್ ಅವರ ಹುಟ್ಟಿದ ಹಬ್ಬದ ಪ್ರಯುಕ್ತ ಅವರ ಜೊತೆಯೇ 'ರಾಕ್ಷಸ' ಚಿತ್ರವನ್ನೂ ಕೂಡ ಘೋಷಿಸಿದರು ಲೋಹಿತ್.
ಇವೆಲ್ಲ ಕಾರಣಗಳಿಂದ ದಟ್ಟ ಅಡವಿಯ ನಡುವಿನಿಂದ ನಡೆದು ಬರಲು ಅಣಿಯಾಗಿದ್ದ ಚಿರತೆ, ಹಾಗೇ ಕಣ್ಮರೆಯಾಯಿತು. ಗೊತ್ತಿಲ್ಲ.. ಮುಂದೊಂದು ದಿನ ಈ ಸತ್ಯಮಂಗಳ ಚಿತ್ರಕ್ಕೆ ಮತ್ತೆ ಮರು ಜೀವ ಸಿಕ್ಕರೂ ಸಿಗಬಹುದು. ಯಾಕೆಂದರೆ, ತಮ್ಮ ಟ್ವಿಟರ್ ಖಾತೆಯಲ್ಲಿ ಚಿತ್ರದ ನಿರ್ದೇಶಕ ಲೊಹೀತ್ 'ಸತ್ಯಮಂಗಳ' ಚಿತ್ರದ ಟೈಟಲ್ ಪೋಸ್ಟರ್‌ನ್ನ ಇನ್ನೂ ಪಿನ್ ಮಾಡಿದ್ದಾರೆ. ಇನ್ನೂ ಕಳೆದ ವರ್ಷ ಇದೇ ಸಮಯಕ್ಕೆ ಅಂದರೆ ಶಿವಣ್ಣ ಹುಟ್ಟುಹಬ್ಬದ ಪ್ರಯುಕ್ತ, ಸತ್ಯಮಂಗಳ ಚಿತ್ರದ ಇನ್ನೊಂದು ಪೋಸ್ಟರ್‌ನ್ನೂ ಬಿಡುಗಡೆ ಮಾಡುವ ಮೂಲಕ ಲೊಹೀತ್ ಮತ್ತು ಕೃಷ್ಣ ಸಾರ್ಥಕ್ ತಮ್ಮ ನೆಚ್ಚಿನ ಶಿವಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನೂ ತಿಳಿಸಿದ್ದರು. ಹೀಗಾಗಿ ಸತ್ಯ ಮಂಗಳ ಮತ್ತೆ ಶುರುವಾಗಬಹುದು ಅನ್ನುವ ಚಿಕ್ಕ ಆಸೆ ಶಿವ ಸೈನ್ಯದಲ್ಲಿ ಇದ್ದೇ ಇದೆ. ಆಸೆ- ಅನಿಸಿಕೆಗಳೆಲ್ಲಾ ಹೂ ಆಗಿ ಅರಳಿ ಸುಗಂಧ ಬೀರಲಿ ಅನ್ನುವುದೇ ಎಲ್ಲರ ಆಶಯ.


Click it and Unblock the Notifications











