ದರ್ಶನ್ 'ಡೆವಿಲ್- ದಿ ಹೀರೊ' ಪೋಸ್ಟರ್ ಹೊರ ಬಿತ್ತಾ? ವೈರಲ್ ಫೋಟೊ ಸೀಕ್ರೆಟ್ ಏನು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿ ಕದಲಿಕೆ ಮೇಲೂ ಅಭಿಮಾನಿಗಳು ಕಣ್ಣಿಟ್ಟಿರುತ್ತಾರೆ. ದರ್ಶನ್ ಎಲ್ಲೇ ಕಾಣಿಸಿಕೊಂಡರೂ ಅಭಿಮಾನಿಗಳಿಗೆ ಹಬ್ಬ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಹ್ಯಾಷ್ ಟ್ಯಾಗ್ ಡಿಬಾಸ್ ಸದಾ ಟ್ರೆಂಡಿಗ್‌ನಲ್ಲಿ ಇರುತ್ತದೆ. ದರ್ಶನ್ ಸಿನಿಮಾ ಪೋಸ್ಟರ್, ಟೀಸರ್, ಟ್ರೈಲರ್, ಸಾಂಗ್ ಬಂದ್ರೆ ಅಭಿಮಾನಿಗಳಿಗೆ ಹಬ್ಬ.
ದರ್ಶನ್ ಎಕ್ಸ್‌ಕ್ಲೂಸಿವ್ ಫೋಟೊಗಳು ಸಿಕ್ಕರೆ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಅಭಿಮಾನಿಗಳ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ರಾರಾಜಿಸುತ್ತದೆ. ಸದ್ಯ ಅಂಥದ್ದೇ ಫೋಟೊವೊಂದು ಇದೀಗ ಸದ್ದು ಮಾಡ್ತಿದೆ. ನೀಲಿ ಬಣ್ಣದ ಐಷಾರಾಮಿ ಬೈಕ್ ಏರಿ ದರ್ಶನ್ ಕೂತಿದ್ದಾರೆ. ಡೆನಿಮ್ ಜಾಕೆಟ್ ಶರ್ಟ್ ಧರಿಸಿ, ಸನ್ ಗ್ಲಾಸ್ ತೊಟ್ಟು ಸ್ಟೈಲಿಶ್ ಲುಕ್‌ನಲ್ಲಿ ಪೋಸ್ ನೀಡಿದ್ದಾರೆ. ಮೊದಲ ನೋಟದಲ್ಲೇ ಫೋಟೊ ಅಭಿಮಾನಿಗಳ ಕಣ್ಣು ಕುಕ್ಕುತ್ತಿದೆ.

ಸದ್ಯ ಈ ಸ್ಟೈಲಿಶ್ ಲುಕ್ ಫೋಟೊ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಇತ್ತೀಚೆಗೆ ದರ್ಶನ್- ಮಿಲನಾ ಪ್ರಕಾಶ್ ಕಾಂಬಿನೇಷನ್‌ನಲ್ಲಿ 'ಡೆವಿಲ್'- ದಿ ಹೀರೊ ಸಿನಿಮಾ ಸೆಟ್ಟೇರಿತ್ತು. ಅದೇ ಚಿತ್ರಕ್ಕಾಗಿ ಹೊಸ ಫೋಟೊಶೂಟ್ ಮಾಡಿಸಿದ್ರಾ? ಎನ್ನುವ ಅನುಮಾನ ಕಾಡುತ್ತಿದೆ. ಕೆಲವರು ಇದು 'ಡೆವಿಲ್' ಸಿನಿಮಾ ಫೋಟೊ ಎಂದು ಕೊಂಡು ಶೇರ್ ಮಾಡುತ್ತಿದ್ದಾರೆ. ನವೆಂಬರ್ 2ಕ್ಕೆ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಈ ಚಿತ್ರಕ್ಕೆ ಚಾಲನೆ ಕೊಡಲಾಗಿತ್ತು.
ವೈರಲ್ ಆಗಿರುವ ಫೋಟೊ 'ಡೆವಿಲ್' ಚಿತ್ರದ್ದು ಅಲ್ಲ ಎನ್ನುವ ಮಾಹಿತಿ ಫಿಲ್ಮಿಬೀಟ್‌ಗೆ ಸಿಕ್ಕಿದೆ. ಚಿತ್ರತಂಡವೇ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಆದರೂ ಫೋಟೊ ಮಾತ್ರ ಅಭಿಮಾನಿಗಳ ಮನಗೆದ್ದಿದೆ. ಈ ವರ್ಷದ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳ ಹಿಂದೆ ದರ್ಶನ್ ಸ್ಪೆಷಲ್ ಫೋಟೊಶೂಟ್ ಮಾಡಿಸಿದ್ದರು. ವೆರೈಟಿ ಕಾಸ್ಟ್ಯೂಮ್‌ಗಳಲ್ಲಿ ಸ್ಟೈಲಿಶ್ ಲುಕ್ ಕಾಣಿಸಿಕೊಂಡಿದ್ದರು. ಅದೇ ಸಮಯದಲ್ಲಿ ಈ ಫೋಟೊ ಕೂಡ ಕ್ಲಿಕ್ಕಿಸಿರಬಹುದು. ಆದರೆ ಆ ಫೋಟೊಶೂಟ್‌ನ ಫೋಟೊಗಳು ಆಗೊಂದು ಈಗೊಂದು ಹೊರ ಬರುತ್ತಿವೆ.
ದರ್ಶನ್ ಹಾಗೂ ಪ್ರಕಾಶ್ ಕಾಂಬಿನೇಷನ್‌ನಲ್ಲಿ ಈ ಹಿಂದೆ 'ತಾರಕ್' ಸಿನಿಮಾ ಬಂದು ಗೆದ್ದಿತ್ತು. ಇವರಿಬ್ಬರು ಮತ್ತೊಂದು ಚಿತ್ರಕ್ಕೆ ಜೊತೆಯಾಗುವ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೀತಿತ್ತು. ಕೊನೆಗೂ ಆ ಸಿನಿಮಾ ಶುರುವಾಗಿದೆ. ಆದರೆ 'ಕಾಟೇರ' ಸಿನಿಮಾ ಸಂಪೂರ್ಣವಾಗಿ ಮುಗಿದ ಬಳಿಕ 'ಡೆವಿಲ್' ಚಿತ್ರೀಕರಣ ಆರಂಭವಾಗಲಿದೆ. ತೆರೆಮರೆಯಲ್ಲಿ ಸಿನಿಮಾ ಶೆಡ್ಯೂಲ್ ಪ್ಲ್ಯಾನ್ ನಡೀತಿದೆ. ಕಲಾವಿದರ ಆಯ್ಕೆಯೂ ಚಾಲ್ತಿಯಲ್ಲಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ.
ಈ ವೈರಲ್ ಫೋಟೊ ವಿಚಾರ ಪಕ್ಕಕ್ಕಿಟ್ಟರೆ ಸದ್ಯ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿರುವ 'ಗರಡಿ' ಸಿನಿಮಾ ರಿಲೀಸ್ ಆಗಿದೆ. ಚಿತ್ರದ ಪ್ರೀ ಕ್ಲೈಮ್ಯಾಕ್ಸ್‌ನಲ್ಲಿ ದರ್ಶನ್ ಎಂಟ್ರಿ ಕೊಟ್ಟು ಚಿತ್ರದ ಖದರ್ ಹೆಚ್ಚಿಸಿದ್ದಾರೆ. ಜಬರ್ದಸ್ತ್ ಆಕ್ಷನ್ ಮೂಲಕ ಅಭಿಮಾನಿಗಳಿಗೆ ಕಿಕ್ ಕೊಡ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಚಿತ್ರವನ್ನು ಸ್ವಾಗತಿಸಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಚಿತ್ರದಲ್ಲಿ ಯಶಸ್ ಸೂರ್ಯ ಹೀರೊ ಆಗಿ ಮಿಂಚಿದ್ದಾರೆ.
ಇನ್ನು ತರುಣ್ ಸುಧೀರ್ ನಿರ್ದೇಶನದಲ್ಲಿ ದರ್ಶನ್ ನಟಿಸುತ್ತಿರುವ 'ಕಾಟೇರ' ಸಿನಿಮಾ ಕೊನೆ ಹಂತದ ಚಿತ್ರೀಕರಣ ನಡೀತಿದೆ. ಇನ್ನೊಂದು ಹಾಡಿನ ಶೂಟಿಂಗ್ ಮಾತ್ರ ಬಾಕಿಯಿದೆ. ರಾಕ್‌ಲೈನ್ ವೆಂಕಟೇಶ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ಅಪ್‌ಡೇಟ್ ಸಿಗಲಿದೆ. ವಿ. ಹರಿಕೃಷ್ಣ ಸಂಗೀತ, ಮಾಸ್ತಿ ಸಂಭಾಷಣೆ, ಸುಧಾಕರ್ ರಾಜ್ ಛಾಯಾಗ್ರಹಣ 'ಕಾಟೇರ' ಚಿತ್ರಕ್ಕಿದೆ. ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











