ಉಮಾಪತಿ ಶ್ರೀನಿವಾಸ್ ಬಳಿ ಇದ್ಯಾ 'ಸಿಂಧೂರ ಲಕ್ಷ್ಮಣ' ರೈಟ್ಸ್? ಏನಿದು ಕಹಾನಿ ಮೇ ಟ್ವಿಸ್ಟ್?
ಸ್ಟಾರ್ ನಟರ ಹುಟ್ಟುಹಬ್ಬದ ಸಂಭ್ರಮದಲ್ಲಿ ಹೊಸ ಸಿನಿಮಾಗಳು ಘೋಷಣೆ ಆಗುವುದು ಸರ್ವೇ ಸಾಮಾನ್ಯ. ಸದ್ಯ ನಟ ದರ್ಶನ್ ಹುಟ್ಟುಹಬ್ಬಕ್ಕೂ 8 ಹೊಸ ಸಿನಿಮಾಗಳನ್ನು ಘೋಷಣೆ ಮಾಡಲಾಗಿದೆ. ಕಳೆದ ವರ್ಷ ಹುಟ್ಟುಹಬ್ಬದ ಸಂಭ್ರಮದಲ್ಲೂ ಇದೇ ರೀತಿ ಘೋಷಣೆ ನಡೆದಿತ್ತು. ಆದರೆ ಈ ಬಾರಿ 'ಸಿಂಧೂರ ಲಕ್ಷ್ಮಣ' ಸಿನಿಮಾ ಭಾರೀ ಚರ್ಚೆ ಹುಟ್ಟಾಕ್ಕಿದೆ.
ಕಳೆದ 3 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ 'ಸಿಂಧೂರ ಲಕ್ಷ್ಮಣ' ಸಿನಿಮಾ ಬಗ್ಗೆ ಚರ್ಚೆ ಚೆನ್ನಾಗಿದೆ. ಅದಕ್ಕೂ ಮುಂಚಿನಿಂದಲೂ ಸಿನಿಮಾ ಮಾಡುವ ಬಗ್ಗೆ ಮಾತುಗಳು ಕೇಳಿಬಂದಿತ್ತು. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೀರೊ ಆಗಿ ನಟಿಸುತ್ತಾರೆ ಎಂದಮೇಲೆ ಕುತೂಹಲ ಹೆಚ್ಚಾಗಿದ್ದು ಸುಳ್ಳಲ್ಲ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಬಹಳ ಹಿಂದೆಯೇ ಈ ಸಿನಿಮಾ ಶುರುವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗಿತ್ತು.

'ಯಜಮಾನ', 'ಕ್ರಾಂತಿ' ಸಿನಿಮಾಗಳ ನಂತರ ಶೈಲಜಾ ನಾಗ್ ನಿರ್ಮಾಣದಲ್ಲಿ 'ಸಿಂಧೂರ ಲಕ್ಷ್ಮಣ' ಘೋಷಣೆ ಆಗಿದೆ. ತರುಣ್ ಸುಧೀರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಆದರೆ ಈ ಹಿಂದೆ ಉಮಾಪತಿ ಶ್ರೀನಿವಾಸ್ 'ಸಿಂಧೂರ ಲಕ್ಷ್ಮಣ' ಸಿನಿಮಾ ಮಾಡುವುದಾಗಿ ಹೇಳಿದ್ದರು. 'ರಾಬರ್ಟ್' ಸಿನಿಮಾ ಬಿಡುಗಡೆಗೂ ಮುನ್ನವೇ ತರುಣ್ ಸುಧೀರ್ ನೇತೃತ್ವದಲ್ಲಿ ಕಥೆ, ಚಿತ್ರಕಥೆ ಸಿದ್ಧಪಡಿಸಲು ಆರಂಭಿಸಿದ್ದರು. ಆದರೆ ಇದೀಗ ದಿಢೀರನೆ ಮೀಡಿಯಾ ಹೌಸ್ ಬ್ಯಾನರ್‌ನಲ್ಲಿ ಸಿನಿಮಾ ಘೋಷಣೆ ಆಗಿರುವುದು ಅಚ್ಚರಿ ಮೂಡಿಸಿದೆ.
ಒಂದ್ಕಾಲದಲ್ಲಿ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಆತ್ಮೀಯ ಸ್ನೇಹಿತರಾಗಿದ್ದರು. 'ರಾಬರ್ಟ್' ಸಿನಿಮಾ ಬಂದು ಸೂಪರ್ ಹಿಟ್ ಆಗಿತ್ತು. ಅದೇ ಜೋಶ್‌ನಲ್ಲಿ ಇಬ್ಬರು ಮತ್ತಷ್ಟು ಸಿನಿಮಾಗಳನ್ನು ಒಟ್ಟಿಗೆ ಮಾಡಲು ತೀರ್ಮಾನಿಸಿದ್ದರು. ಆಗ ಒಂದಷ್ಟು ಕಥೆಗಳನ್ನು ಮಾಡುವ ಕೆಲಸ ಶುರುವಾಗಿತ್ತು. ಅದರಲ್ಲಿ 'ಕಾಟೇರ' ಹಾಗೂ 'ಸಿಂಧೂರ ಲಕ್ಷ್ಮಣ' ಕೂಡ ಇತ್ತು ಎನ್ನಲಾಗುತ್ತದೆ. ಲೋನ್ ಲಡಾಯಿ ಕಿರಿಕ್ ಕಾರಣ ಇಬ್ಬರು ದೂರಾಗಿದ್ದರು. ಆ ಬಳಿಕ 'ಸಿಂಧೂರ ಲಕ್ಷ್ಮಣ' ಸಿನಿಮಾ ಯಾರು ಮಾಡುತ್ತಾರೆ? ಎನ್ನುವ ಚರ್ಚೆ ಶುರುವಾಯಿತು.

ಉಮಾಪತಿ ಶ್ರೀನಿವಾಸ್ ತಾವು ಬಹಳ ಇಷ್ಟಪಟ್ಟು 'ವೀರ ಸಿಂಧೂರ ಲಕ್ಷ್ಮಣ' ಸಿನಿಮಾ ಕಥೆ ಮಾಡಿಸುತ್ತಿದ್ದೀನಿ. ಆ ಸಿನಿಮಾ ಮಾಡುವುದು ಖಚಿತ. ದರ್ಶನ್ ಅವರೊಟ್ಟಿಗೆ ಮಾಡಿದರೂ ಅಚ್ಚರಿ ಇಲ್ಲ. ಅಥವಾ ಬೇರೆ ನಟರು ಹೀರೊ ಆಗಬಹುದು ಎನ್ನುತ್ತಾ ಬರುತ್ತಿದ್ದರು. ಈ ಹಿಂದೆ ಫಿಲ್ಮಿಬೀಟ್ ಸಂದರ್ಶನದಲ್ಲೇ "ಸಿಂಧೂರ ಲಕ್ಷ್ಮಣ ಸಿನಿಮಾ ಬಗ್ಗೆ ಈಗಲೇ ಏನೂ ಹೇಳುವುದಕ್ಕೆ ಸಾಧ್ಯವಿಲ್ಲ. ನನ್ನ ಮನಸ್ಸಿನಲ್ಲಿ ಹೀರೊ ಇದ್ದಾರೆ. ಅವರೊಂದಿಗೆ ಮಾತುಕತೆ ನಡೆದು ಅಡ್ವಾನ್ಸ್ ಕೊಟ್ಟು, ಅವರು ಒಪ್ಪಿಕೊಳ್ಳುವವರೆಗೂ ಏನನ್ನೂ ಹೇಳಲಾರೆ. ಒಮ್ಮೆ ಓಕೆ ಆದ ಕೂಡಲೇ ಅವರ ಹೆಸರನ್ನು ಅನೌನ್ಸ್ ಮಾಡುತ್ತೇನೆ" ಎಂದಿದ್ದರು.
'ಕ್ರಾಂತಿ' ಬಳಿಕ ದರ್ಶನ್ ಜೊತೆ ಮತ್ತೊಂದು ಸಿನಿಮಾ ಮಾಡುವುದಾಗಿ ನಿರ್ಮಾಪಕಿ ಶೈಲಜಾ ನಾಗ್ ಹೇಳಿದ್ದರು. ಇದೀಗ 'ಸಿಂಧೂರ ಲಕ್ಷ್ಮಣ' ಸಿನಿಮಾ ಘೋಷಿಸಿದ್ದಾರೆ. ಹಾಗಾದರೆ ಉಮಾಪತಿ ಶ್ರೀನಿವಾಸ್ 'ಸಿಂಧೂರ ಲಕ್ಷ್ಮಣ' ಸಿನಿಮಾ ಮಾಡುವ ವಿಚಾರ ಏನಾಯ್ತು? ದಿಢೀರ್ ಈ ಬೆಳವಣಿಗೆಗೆ ಕಾರಣ ಏನು? ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.
ಈ ಹಿಂದೆ 'ಸಿಂಧೂರ ಲಕ್ಷ್ಮಣ'ನಾಗಿ ನಟ ಧನಂಜಯ್ ನಟಿಸುತ್ತಾರೆ ಎನ್ನುವ ಗುಸುಗುಸು ಕೂಡ ಕೇಳಿಬಂದಿತ್ತು. ಅಂದಹಾಗೆ 6 ವರ್ಷಗಳ ಹಿಂದೆ ರಾಧಕೃಷ್ಣ ಪಲ್ಲಕ್ಕಿ 'ಶೂರ ಸಿಂಧೂರ ಲಕ್ಷ್ಮಣ' ಸಿನಿಮಾ ಶುರು ಮಾಡಿದ್ದರು. ಕಿಶೋರ್ ಹೀರೊ ಆಗಿ ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಗಿತ್ತು. 15 ವರ್ಷಗಳ ಹಿಂದೆಯೇ 'ಸಿಂಧೂರ ಲಕ್ಷ್ಮಣ' ಟೈಟಲ್ ಅನ್ನು ರಾಧಕೃಷ್ಣ ಪಲ್ಲಕ್ಕಿ ರಿಜಿಸ್ಟರ್ ಮಾಡಿಸಿದ್ದಾರೆ.
ರಾಧಕೃಷ್ಣ ಪಲ್ಲಕ್ಕಿ ಹಲವು ವರ್ಷಗಳ ಕಾಲ ಸಂಶೋಧನೆ ನಡೆಸಿ ಸಿದ್ಧಪಡಿಸಿದ್ದ 'ಸಿಂಧೂರ ಲಕ್ಷ್ಮಣ' ಕಥೆಯನ್ನು ತರುಣ್ ಹಾಗೂ ಉಮಾಪತಿಗೆ ಕೊಟ್ಟಿದ್ದರು. ತಾವು ಸಂಶೋಧನೆ ನಡೆಸಿದ ದಾಖಲೆಗಳನ್ನು ನೀಡಿದ್ದರು. ಸದ್ಯ ಸಿನಿಮಾ ಹಕ್ಕು ಉಮಾಪತಿ ಶ್ರೀನಿವಾಸ್ ಬಳಿಯಿದೆ. ಹಾಗಾದರೆ ಉಮಾಪತಿ ಸಿಂಧೂರ ಲಕ್ಷ್ಮಣನ ಕುರಿತು ಬೇರೆ ಸಿನಿಮಾ ಮಾಡುತ್ತಾರಾ? ಎನ್ನುವ ಕುತೂಹಲ ಮೂಡಿದೆ. ಯಾಕಂದರೆ ಈ ಹಿಂದೆ 'ಮದಕರಿ ನಾಯಕ' ಚಿತ್ರವನ್ನು ದರ್ಶನ್- ಸುದೀಪ್ ಇಬ್ಬರೂ ಮಾಡುವುದಾಗಿ ಪಟ್ಟು ಹಿಡಿದಿದ್ದರು. ಹಾಗಾಗಿ ಮುಂದೆ ಈ ವಿಚಾರ ಯಾವ ತಿರುವು ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.
ಇನ್ನು ಸಿಂಧೂರ ಲಕ್ಷ್ಮಣ ಯಾರು ಎನ್ನುವುದನ್ನು ನೋಡುವುದಾದರೆ 19ನೇ ಶತಮಾನದ ಆರಂಭದಲ್ಲಿ ಕಾಣಿಸಿಕೊಂಡ ಒಬ್ಬ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ. ಲಕ್ಷಣನು ಹಿಂಸಾತ್ಮಕ ಮಾರ್ಗದಲ್ಲಿ ಬ್ರಿಟೀಷರ ಹೋರಾಡಿದ ವೀರ. ಸಿಂಧೂರ ಲಕ್ಷ್ಮಣನನ್ನು ಭಾರತದ ರಾಬಿನ್ ಹುಡ್ ಎಂದು ಕರೆಯುತ್ತಾರೆ. ಆದರೆ ಬ್ರಿಟೀಷರು ಈತನನ್ನು ಮೋಸದಿಂದ ಕೊಂದಿದ್ದರು.


Click it and Unblock the Notifications











