'ಮ್ಯಾಕ್ಸ್' ಆರ್ಭಟ ನೋಡಿ ಉರ್ಕೊಂಡಿದ್ಯಾ 'ಯುಐ' ಟೀಂ? ಅಷ್ಟಕ್ಕೂ ಏನಾಯ್ತು? ಯಾಕೀ ಚರ್ಚೆ?
ವರ್ಷದ ಕೊನೆಗೆ ಸ್ಯಾಂಡಲ್‌ವುಡ್ ಬಾಕ್ಸಾಫೀಸ್ ಶೇಕ್ ಆಗಿತ್ತು. ಕ್ರಿಸ್‌ಮಸ್ ಸಂಭ್ರಮದಲ್ಲಿ ತೆರೆಗೆ ಬಂದ 'ಯುಐ' ಹಾಗೂ 'ಮ್ಯಾಕ್ಸ್' ಚಿತ್ರಗಳು ಭರ್ಜರಿ ಕಲೆಕ್ಷನ್ ಮಾಡ್ತಿವೆ. ಎರಡೂ ಸಿನಿಮಾಗಳು ಎರಡನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸಾಫೀಸ್ ಕೊಳ್ಳೆ ಹೊಡೀತಿವೆ. 'ಮ್ಯಾಕ್ಸ್' ರಿಲೀಸ್ ಬಳಿಕ 'ಯುಐ' ಆರ್ಭಟ ಕೊಂಚ ಕಮ್ಮಿ ಆಗಿದ್ದು ಸುಳ್ಳಲ್ಲ.
ವರ್ಷದ ಕೊನೆಗೆ 5 ದಿನಗಳ ಅಂತರದಲ್ಲಿ ಎರಡು ಚಿತ್ರಗಳು ಬರ್ತಾವೆ ಅಂದಾಗಲೇ ಬಾಕ್ಸಾಫೀಸ್ ಕ್ಲ್ಯಾಶ್ ಎಂಬ ಚರ್ಚೆ ಶುರುವಾಗಿತ್ತು. ಆದರೆ ಎರಡೂ ಚಿತ್ರಗಳು ಚೆನ್ನಾಗಿದ್ದರೆ ಎರಡನ್ನು ಪ್ರೇಕ್ಷಕರು ನೋಡುತ್ತಾರೆ. ಇಲ್ಲಿದೆ ಯಾವುದೇ ಪೈಪೋಟಿ ಇಲ್ಲ ಎಂದು ಎರಡೂ ತಂಡಗಳು ಹೇಳಿದ್ದವು. ಆದರೆ 'ಮ್ಯಾಕ್ಸ್' ಆರ್ಭಟ ನೋಡಿ 'ಯುಐ' ಟೀಂ ಬೇಸರಗೊಂಡಿದೆ ಎನ್ನುವ ಚರ್ಚೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ.

'ಯುಐ' ಟೀಂ ವರ್ಷದ ಕೊನೆಗೆ ಬಿಡುಗಡೆ ಮಾಡಿದ ಪೋಸ್ಟರ್‌ಗಳು ಸಖತ್ ವೈರಲ್ ಆಗುತ್ತಿದೆ. ಪೈಪೋಟಿಗೆ ಬಿದ್ದು ಈ ರೀತಿ ಪೋಸ್ಟರ್ ಬಿಟ್ರಾ? ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ಇತ್ತೀಚೆಗೆ 'ಮ್ಯಾಕ್ಸ್' ಸಿನಿಮಾ ಬಗ್ಗೆ ಉಪ್ಪಿ ಆಡಿದ್ದ ಮಾತು ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಸುದೀಪ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಅದೆಲ್ಲದರ ನಡುವೆ ಪೋಸ್ಟರ್ ವಾರ್ ಜೋರಾಗಿದೆ ಎಂದು ಕಾಮೆಂಟ್ ಹಾಕುತ್ತಿದ್ದಾರೆ.
ಉಪೇಂದ್ರ ನಿರ್ದೇಶಿಸಿ ನಟಿಸಿದ 'ಯುಐ' ಸಿನಿಮಾ ಡಿಸೆಂಬರ್ 20ರಂದು ತೆರೆಗೆ ಬಂದಿತ್ತು. ಬಳಿಕ ಡಿಸೆಂಬರ್ 25ಕ್ಕೆ ಕ್ರಿಸ್‌ಮಸ್ ಸಂಭ್ರಮದಲ್ಲಿ 'ಮ್ಯಾಕ್ಸ್' ಮ್ಯಾಕ್ಸಿಮಮ್ ಕಿಕ್ ಶುರುವಾಗಿತ್ತು. ಮಿಶ್ರಪ್ರತಿಕ್ರಿಯೆ ಸಿಕ್ಕರೂ 'ಯುಐ' ದರ್ಬಾರ್ ಜೋರಾಗಿತ್ತು. ಆದರೆ 'ಮ್ಯಾಕ್ಸ್' ರಿಲೀಸ್ ಬಳಿಕ ಪ್ರೇಕ್ಷಕರ ಗಮನ ಅತ್ತ ತಿರುಗಿತು. ಕಿಚ್ಚನ ಸಿನಿಮಾ ಬರದೇ ಇದ್ದರೆ 'ಯುಐ' ಮತ್ತಷ್ಟು ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿತ್ತು ಎಂದು ಗಾಂಧಿನಗರ ಮಾತಾಡಿಕೊಳ್ಳುತ್ತಿದೆ.

2024ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ದಾಖಲೆ 'ಮ್ಯಾಕ್ಸ್' ಚಿತ್ರದ ಪಾಲಾಗಿದೆ. ಕೇವಲ 6 ದಿನಗಳಲ್ಲಿ ಕಳೆದ ವರ್ಷದ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿದೆ. ಕಿಚ್ಚನ ಮಾಸ್ ಖದರ್ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಕ್ರಿಸ್‌ಮಸ್ ರಜೆ, ಡಿಸೆಂಬರ್ 28ರ ಸರ್ಕಾರಿ ರಜೆ, ವರ್ಷದ ಕೊನೆ ವೀಕೆಂಡ್ ಚಿತ್ರದ ಗಳಿಕೆಗೆ ಪ್ಲಸ್ ಆಗಿತ್ತು. 2024ರಲ್ಲಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ 'ಮ್ಯಾಕ್ಸ್' ಎಂದು ಚಿತ್ರತಂಡ ಪೋಸ್ಟ್ ರಿಲೀಸ್ ಮಾಡಿತ್ತು.
'ಮ್ಯಾಕ್ಸ್' ಪೋಸ್ಟರ್ ಬೆನ್ನಲ್ಲೇ 'ಯುಐ' ಚಿತ್ರತಂಡ ಎರಡ್ಮೂರು ಪೋಸ್ಟರ್ ಹಂಚಿಕೊಂಡಿತ್ತು. ಬುಕ್‌ಮೈ ಶೋನಲ್ಲಿ 3 ದಿನ 1 ಲಕ್ಷ ಟಿಕೆಟ್ ಬುಕ್ ಆಗಿದ್ದ ಏಕೈಕ ಕನ್ನಡ ಸಿನಿಮಾ 'ಯುಐ' ಎನ್ನುವ ಪೋಸ್ಟರ್ ಬಂತು. ತೆಲುಗಿಗೆ ಡಬ್ ಆಗಿ ಈ ವರ್ಷ ಹೆಚ್ಚು ಗಳಿಕೆ ಮಾಡಿದ ಸಿನಿಮಾ 'ಯುಐ' ಎನ್ನುವ ಇನ್ನೊಂದು ಪೋಸ್ಟರ್ ಕೂಡ ಪೋಸ್ಟ್ ಆಗಿತ್ತು. 2024ರಲ್ಲಿ ಬುಕ್‌ಮೈ ಶೋನಲ್ಲಿ ಅತಿ ಹೆಚ್ಚು ಟಿಕೆಟ್ ಬುಕ್ ಆಗಿದ್ದು 'ಯುಐ' ಚಿತ್ರಕ್ಕೆ ಎನ್ನುವ ಮತ್ತೊಂದು ಪೋಸ್ಟರ್ ಕೂಡ ವೈರಲ್ ಆಗುತ್ತಿದೆ.
ಕೊನೆಯದಾಗಿ ವಿಶ್ವದಾದ್ಯಂತ 2024ರಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾ 'ಯುಐ' ಎನ್ನುಚ ಪೋಸ್ಟರ್ ಅಂತೂ ಭಾರೀ ಚರ್ಚೆಗೆ ಕಾರಣವಾಗಿದೆ. ಇದನ್ನು ನೋಡಿ 'ಮ್ಯಾಕ್ಸ್' ಚಿತ್ರತಂಡಕ್ಕೆ ಟಾಂಗ್ ಕೊಡಲು 'ಯುಐ' ತಂಡ ಈ ರೀತಿ ಪೋಸ್ಟರ್ ಬಿಟ್ಟಿದೆ ಎಂದು ಸುದೀಪ್ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. 'ಮ್ಯಾಕ್ಸ್' ಯಶಸ್ಸು ಸಹಿಸಲಾಗದೇ ಈ ರೀತಿ ಮಾಡಿದ್ದಾರೆ ಅಂತೆಲ್ಲಾ ಟ್ರೋಲ್ ಮಾಡುತ್ತಿದ್ದಾರೆ.
ಎರಡೂ ಚಿತ್ರತಂಡಗಳು ವರ್ಷದ ಕೊನೆಗೆ ತಮ್ಮ ತಮ್ಮ ಸಿನಿಮಾಗಳ ಬಗ್ಗೆ ಹೆಮ್ಮೆಯಿಂದ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಇಲ್ಲಿ ಯಾರ ಯಶಸ್ಸನ್ನು ನೋಡಿ ಯಾರೂ ಬೇಸರಗೊಂಡಿಲ್ಲ ಎಂದು ಕೆಲವರು ಸ್ಪಷ್ಟನೆ ನೀಡುತ್ತಿದ್ದಾರೆ. ನಿಜ ಹೇಳಬೇಕು ಅಂದರೆ ಉಪೇಂದ್ರ ಹಾಗೂ ಸುದೀಪ್ ನಡುವೆ ಉತಮ್ಮ ಬಾಂಧವ್ಯ ಇದೆ. ಇಬ್ಬರೂ 'ಮುಕುಂದ ಮುರಾರಿ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.
ಇತ್ತೀಚೆಗೆ 'ಯುಐ' ಚಿತ್ರದ ಬಗ್ಗೆ ಸುದೀಪ್ ಸಾಕಷ್ಟು ಪೋಸ್ಟ್ ಮಾಡಿದ್ದಾರೆ. ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. 'ಯುಐ' ಚಿತ್ರದ ಮುಹೂರ್ತ ಸಮಾರಂಭಕ್ಕೆ ಹಾಜರಾಗಿದ್ದರು. ಅಷ್ಟೆಲ್ಲ ಯಾಕೆ ನೀವು ನಿರ್ದೇಶನ ಮಾಡಬೇಕು ಎಂದು ಉಪೇಂದ್ರ ಅವರನ್ನು ಕಿಚ್ಚ ಹುರಿದುಂಬಿಸಿದ್ದರು. ಇನ್ನು ಸುದೀಪ್ ಹಾಗೂ 'ಯುಐ' ನಿರ್ಮಾಪಕ ಕೆ. ಪಿ ಶ್ರೀಕಾಂತ್ ಆಪ್ತಮಿತ್ರರು ಎನ್ನುವುದು ಇಡೀ ಚಿತ್ರರಂಗಕ್ಕೆ ಗೊತ್ತು. ಹಾಗಾಗಿ 'ಮ್ಯಾಕ್ಸ್' ಗೆಲುವು 'ಯುಐ' ತಂಡಕ್ಕೆ ಇರಿಸುಮುರಿಸು ತಂದಿದೆ ಎನ್ನುವುದೆಲ್ಲಾ ಸುಳ್ಳು.
ಕನ್ನಡ ಚಿತ್ರಗಳು ಚೆನ್ನಾಗಿ ಪ್ರದರ್ಶನ ಕಾಣುವ ಚಿತ್ರಮಂದಿರಗಳನ್ನು 'ಯುಐ' ಚಿತ್ರ ಆವರಿಸಿಕೊಂಡಿದೆ. 'ಮ್ಯಾಕ್ಸ್' ಚಿತ್ರಕ್ಕೆ ಒಳ್ಳೆ ಥಿಯೇಟರ್‌ಗಳು ಸಿಗಲಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮೊದಲು ಬಂದವರಿಗೆ ಮೊದಲ ಆದ್ಯತೆ. ಒಟ್ಟೊಟ್ಟಿಗೆ ಬಂದರೆ ಇಂತಹ ಸಮಸ್ಯೆ ಸಹಜ. ಎಲ್ಲಾ ಗೊತ್ತಿತ್ತು 'ಮ್ಯಾಕ್ಸ್' ಸಿನಿಮಾ ರಿಲೀಸ್ ಮಾಡಿದ್ದರು ಅಲ್ಲವೇ? ಹಾಗಾಗಿ ಥಿಯೇಟರ್ ಸಮಸ್ಯೆ ಬಗ್ಗೆ ಮಾತನಾಡುವುದು ಸರಿಯಲ್ಲ, ವಿತರಕರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಥಿಯೇಟರ್‌ಗಳನ್ನು ಬ್ಲಾಕ್ ಮಾಡಿಕೊಂಡಿದ್ದಾರೆ.
ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ನಟನೆಯ 'ಜಿಮ್ಮಿ' ಸಿನಿಮಾ ಮುಂದಕ್ಕೆ ಹೋಗಿದೆ. ಸುದೀಪ್ ಜೊತೆ ಸೇರಿ 'ಯುಐ' ಚಿತ್ರ ನಿರ್ಮಿಸುತ್ತಿರುವ ಜಿ. ಮನೋಹರ್, ಕೆ. ಪಿ ಶ್ರೀಕಾಂತ್ ಈ ಸಿನಿಮಾ ನಿರ್ಮಾಣ ಮಾಡಬೇಕಿತ್ತು. ಮುಹೂರ್ತ ಮುಗಿದ ಬಳಿಕ ಯಾಕೆ ಸಿನಿಮಾ ತಡವಾಗುತ್ತಿದೆ? ಎಂದು ಕೆಲವರು ಹೇಳುತ್ತಿದ್ದಾರೆ. 'ಮ್ಯಾಕ್ಸ್' ಸಿನಿಮಾ ವಿತರಣೆ ಮಾಡುತ್ತಿರುವ ಕೆಆರ್‌ಜಿ ಸಂಸ್ಥೆ ಜೊತೆ ಸೇರಿ ಸುದೀಪ್ ಇದೀಗ ಸಂಚಿತ್ ಹೊಸ ಸಿನಿಮಾ ಘೋಷಿಸಿದ್ದಾರೆ. ಆದರೆ ಒಂದಕ್ಕೊಂದು ಲಿಂಕ್ ಮಾಡಿ ನೆಟ್ಟಿಗರು ಏನೇನೋ ಕಾಮೆಂಟ್ ಮಾಡುತ್ತಿದ್ದಾರೆ.
'ಸಲಗ' ಹಾಗೂ 'ಕೋಟಿಗೊಬ್ಬ-3' ಕ್ಲ್ಯಾಶ್ ವಿಚಾರವನ್ನು ಎಳೆದುತಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಆದರೆ ಅದ್ಯಾವುದೂ ನಿಜ ಅಲ್ಲ ಎನ್ನಲಾಗ್ತಿದೆ. 'ಮ್ಯಾಕ್ಸ್' ಹಾಗೂ 'ಯುಐ' ಎರಡೂ ಕನ್ನಡ ಸಿನಿಮಾಗಳೇ. ಸುದೀಪ್- ಉಪೇಂದ್ರ ಹಾಗೂ ಸುದೀಪ್ - ಕೆ. ಶ್ರೀಕಾಂತ್ ಎಲ್ಲರೂ ಆತ್ಮೀಯ ಸ್ನೇಹಿತರೇ. ಅದು ಇಡೀ ಚಿತ್ರರಂಗಕ್ಕೆ ಗೊತ್ತು. ಇಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಅದೆಲ್ಲಾ ಬರೀ ಊಹಾಪೋಹ ಅಷ್ಟೆ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಿದ್ದಾರೆ.


Click it and Unblock the Notifications











