ದಿನಕರ್ ಪುನೀತ್‌ಗಾಗಿ ಬರೆದಿದ್ದ ಕಥೆಗೆ ಬೇರೆ ನಟನ ಆಯ್ಕೆ? ಅನುಮಾನ ಹುಟ್ಟಿಸಿತು ಫೋಟೊ!
ನಟ ಪುನೀತ್ ರಾಜ್‌ಕುಮಾರ್ ನಿಧನ ಹೊಂದಿ ವರ್ಷವೇ ಕಳೆದಿದೆ. ಪುನೀತ್ ರಾಜ್‌ಕುಮಾರ್ ನಿಧನದ ಹೊಂದಿದಾಗ ಜೇಮ್ಸ್ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿರಲಿಲ್ಲ, ಲಕ್ಕಿಮ್ಯಾನ್ ಚಿತ್ರದಲ್ಲೂ ಸಹ ಅಪ್ಪು ಧ್ವನಿ ಸಂಪೂರ್ಣವಾಗಿ ಇರಲಿಲ್ಲ. ಇನ್ನು ಪುನೀತ್ ಕಥೆ ಕೇಳಿ ಇಷ್ಟ ಪಟ್ಟು ಈ ಚಿತ್ರ ಮಾಡೋಣ ಎಂದು ಹೇಳಿ ಹಲವರಿಗೆ ಡೇಟ್ ಕೂಡ ಕೊಟ್ಟಿದ್ದರು. ಹೀಗೆ ಅಪ್ಪು ಒಪ್ಪಿಕೊಂಡಿದ್ದ ಸುಮಾರು ನಾಲ್ಕೈದು ಚಿತ್ರಗಳು ಚಿತ್ರೀಕರಣವನ್ನೂ ಆರಂಭಿಸದೇ ನಿಂತು ಹೋಗಿವೆ.
ಇನ್ನು ಈ ಚಿತ್ರಗಳ ಬಗ್ಗೆ ಯಾವ ನಿರ್ದೇಶಕನೂ ಸಹ ಅಪ್‌ಡೇಟ್ ನೀಡುವ ಕೆಲಸಕ್ಕೆ ಕೈ ಹಾಕಿಲ್ಲ. ಅದರಲ್ಲಿಯೂ ಪುನೀತ್ ರಾಜ್‌ಕುಮಾರ್ ಹಾಗೂ ಪವನ್ ಕುಮಾರ್ ಕಾಂಬಿನೇರ್ಶನ್‌ನಲ್ಲಿ ಘೋಷಣೆಯಾಗಿದ್ದ ದ್ವಿತ್ವ ಚಿತ್ರ ಮತ್ತು ಪುನೀತ್ ರಾಜ್‌ಕುಮಾರ್ ಹಾಗೂ ದಿನಕರ್ ತೂಗುದೀಪ ಕಾಂಬಿನೇಶನ್‌ನಲ್ಲಿ ಘೋಷಣೆಯಾಗಿದ್ದ ಚಿತ್ರಗಳ ಕುರಿತು ಅಪ್ಪು ಅಭಿಮಾನಿಗಳಲ್ಲಿ ಮತ್ತು ಸಿನಿ ರಸಿಕರಲ್ಲಿ ವಿಶೇಷ ಕುತೂಹಲವಿತ್ತು ಹಾಗೂ ಇಂದಿಗೂ ಸಹ ಈ ಚಿತ್ರಗಳಲ್ಲಿ ಅಪ್ಪು ನಟಿಸಲೇ ಇಲ್ಲವಲ್ಲ ಎಂಬ ಬೇಸರ ಅಭಿಮಾನಿಗಳಲ್ಲಿದೆ.
ಸದ್ಯ ದಿನಕರ್ ತೂಗುದೀಪ ನಿರ್ದೇಶನದ ಮುಂದಿನ ಚಿತ್ರ ಘೋಷಣೆಯಾಗಿದ್ದು, ಯುವ ನಟನಿಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಈ ಚಿತ್ರತಂಡ ಫೋಟೊವೊಂದನ್ನು ಹಂಚಿಕೊಂಡಿದ್ದು ಈ ಫೋಟೊ ನೋಡಿದ ಸಿನಿ ರಸಿಕರು ಇದು ಪುನೀತ್‌ಗಾಗಿ ದಿನಕರ್ ತೂಗದೀಪ ರಚಿಸಿಕೊಂಡಿದ್ದ ಕಥೆಯೇ ಇರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಿನಕರ್ ಮುಂದಿನ ಚಿತ್ರ ವಿರಾಟ್ ಜೊತೆ
ಈ ಹಿಂದಿನಿಂದಲೂ ದಿನಕರ್ ತೂಗುದೀಪ ಹಾಗೂ ಕಿಸ್ ಚಿತ್ರದ ಖ್ಯಾತಿಯ ನಟ ವಿರಾಟ್ ಕಾಂಬಿನೇಶನ್‌ನ ಚಿತ್ರ ತಯಾರಾಗಲಿದೆ ಎಂಬ ಸುದ್ದಿ ಹರಿದಾಡಿತ್ತು. ಸದ್ಯ ಈ ಸುದ್ದಿ ಅಧಿಕೃತವಾಗಿದ್ದು ಚಿತ್ರತಂಡ ಧರ್ಮಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಚಿತ್ರವನ್ನು ಆರಂಭಿಸಿದೆ. ಈ ಚಿತ್ರವನ್ನು ಚಿತ್ರತಂಡ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿ ವಿಷಯವನ್ನು ಹಂಚಿಕೊಂಡಿದೆ.

ಸಿನಿ ರಸಿಕರಲ್ಲಿ ಅನುಮಾನ ಹುಟ್ಟಲು ಕಾರಣವಿದು
ಇನ್ನು ದಿನಕರ್ ತೂಗುದೀಪ ಹಾಗೂ ವಿರಾಟ್ ಕಾಂಬಿನೇಶನ್‌ನಲ್ಲಿ ತಯಾರಾಗಲಿರುವ ಚಿತ್ರವೇ ಈ ಹಿಂದೆ ಪುನೀತ್ ರಾಜ್‌ಕುಮಾರ್‌ಗಾಗಿ ದಿನಕರ್ ಘೋಷಿಸಿದ್ದ ಚಿತ್ರ ಎಂಬ ಅನುಮಾನ ಹುಟ್ಟಿಸಿರುವುದು ಜಯಣ್ಣ ಫಿಲ್ಮ್ಸ್ ಅಡಿಯಲ್ಲಿ ಚಿತ್ರ ತಯಾರಾಗುತ್ತಿರುವ ವಿಷಯ. ಹೌದು, ಈ ಹಿಂದೆ ದಿನಕರ್ ತೂಗುದೀಪ ನಿರ್ದೇಶನದಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಲು ಮುಂದಾಗಿದ್ದ ಚಿತ್ರಕ್ಕೆ ಜಯಣ್ಣ ಫಿಲ್ಮ್ಸ್ ಬಂಡವಾಳ ಹಾಕಲು ಮುಂದಾಗಿತ್ತು. ಈಗ ಅದೇ ತಂಡ ವಿರಾಟ್ ಅನ್ನು ನಾಯಕನನ್ನಾಗಿ ಘೋಷಿಸಿ ಚಿತ್ರ ಮಾಡಲು ಮುಂದಾಗಿರುವುದು ಈ ಅನುಮಾನಕ್ಕೆ ಕಾರಣವಾಗಿದೆ. ಹಾಗೂ ಅಂದು ಪುನೀತ್ ಅಭಿನಯಿಸಲಿದ್ದಾರೆ ಎಂದು ಘೋಷಿಸಿದ್ದಾಗಲೂ ಚಿತ್ರದ ಹೆಸರನ್ನು ಬಹಿರಂಗಪಡಿಸದಿದ್ದ ತಂಡ ಈಗಲೂ ಸಹ ಹೆಸರನ್ನು ರಿವೀಲ್ ಮಾಡಿಲ್ಲ.

ಚರಣ್ ರಾಜ್ ಸಂಗೀತ, ಸಂಜನಾ ಆನಂದ್ ನಾಯಕಿ
ವಿರಾಟ್ ಹಾಗೂ ದಿನಕರ್ ತೂಗುದೀಪ ಕಾಂಬಿನೇಶನ್‌ನ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತವಿರಲಿದ್ದು, ಸಲಗ ಖ್ಯಾತಿಯ ಸಂಜನಾ ಆನಂದ್ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂಬ ವಿಷಯವನ್ನು ಸಹ ಚಿತ್ರತಂಡ ಈ ಫೋಟೊ ಮೂಲಕ ಬಿಚ್ಚಿಟ್ಟಿದೆ.


Click it and Unblock the Notifications











