ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಸೆಟ್ ಫೋಟೊಗಳು ಲೀಕ್ ಆಯ್ತಾ?
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಬೆಂಗಳೂರಿನಲ್ಲೇ ಸೆಟ್ ಹಾಕಿ ಚಿತ್ರೀಕರಣ ಪ್ರಾರಂಭಿಸಲು ಸಿದ್ಧತೆ ನಡೆಯುತ್ತಿದೆ. ನೂರಾರು ಕಾರ್ಮಿಕರು ಸೆಟ್ ನಿರ್ಮಾಣದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು ಏಪ್ರಿಲ್ 15 ಬಳಿಕ ಚಿತ್ರೀಕರಣ ಶುರುವಾಗುವ ಸಾಧ್ಯತೆಯಿದೆ.
ಗೋವಾ, ಶ್ರೀಲಂಕಾದಲ್ಲಿ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣ ನಡೆಯುತ್ತದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಅಚ್ಚರಿ ಎನ್ನುವಂತೆ ಬೆಂಗಳೂರಿನ ಹೆಚ್‌ಎಎಲ್ ಫ್ಯಾಕ್ಟರಿ ಆವರಣದಲ್ಲಿ ಸೆಟ್ ನಿರ್ಮಾಣ ಕೆಲಸ ನಡೀತಿದೆ. 2 ಎಕರೆ ಜಾಗದಲ್ಲಿ ಭಾರೀ ಸೆಟ್ ನಿರ್ಮಾಣ ಮಾಡಿದ್ದಾರೆ ಎನ್ನಲಾಗ್ತಿದೆ. 60, 70ರ ದಶಕದ ಪಟ್ಟಣವನ್ನು ನೆನಪಿಸುವ ಸೆಟ್ ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಅಭಿಮಾನಿಗಳಿಗೆ ಭಾರೀ ಕುತೂಹಲ ಶುರುವಾಗಿದೆ.

'ಟಾಕ್ಸಿಕ್' ಸಿನಿಮಾ ಟೈಟಲ್‌ನಿಂದಲೇ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಯಶ್ ಲುಕ್, ಗೆಟಪ್ ಎಲ್ಲದರ ಬಗ್ಗೆಯೂ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರದ ಅನೌನ್ಸ್‌ಮೆಂಟ್ ಟೀಸರ್ ನೋಡಿದವರು ಇದು ಡ್ರಗ್ಸ್ ಮಾಫಿಯಾ ಕುರಿತಾದ ಸಿನಿಮಾ ಎನ್ನುತ್ತಿದ್ದಾರೆ. ಅದಕ್ಕೆ ತಕ್ಕಂತೆ ಸೆಟ್, ಮೇಕಿಂಗ್ ಎಲ್ಲಾ ಇರಲಿದೆ. ಸೆಟ್ ಬಗ್ಗೆ ಯಾವುದೇ ಸುಳಿವು ಬಿಟ್ಟಿಲ್ಲ ಚಿತ್ರತಂಡ.
ಎತ್ತರದ ಟವರ್‌ಗಳು, ದೊಡ್ಡ ಕಟ್ಟಡಗಳು, ಜೋಕರ್ ಆಡಿಟೋರಿಯಂ ರೀತಿಯ ಸೆಟ್ ನಿರ್ಮಾಣವಾಗಿದೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ. ಆದರೆ ಚಿತ್ರತಂಡ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಇನ್ನು ಸೆಟ್ ಒಳಗಿನ ಯಾವುದೇ ಫೋಟೊ ಕೂಡ ಹೊರ ಬಂದಿಲ್ಲ. ಆದರೆ 'ಟಾಕ್ಸಿಕ್' ಸೆಟ್ ಎಂದು ಹೇಳಿ 2 ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೆಲವರು ಇದು ನಿಜ ಎಂದೇ ನಂಬಿ ಹಂಚಿಕೊಳ್ಳುತ್ತಿದ್ದಾರೆ.
ಸದ್ಯ ವೈರಲ್ ಆಗುತ್ತಿರುವ ಈ 2 ಫೋಟೊಗಳು 'ಟಾಕ್ಸಿಕ್' ಸಿನಿಮಾ ಸೆಟ್‌ನದ್ದು ಅಲ್ಲ. ಕ್ಯಾಲಿಫೋನಿಯಾದಲ್ಲಿ 1880ರ ದಶಕದ ಸಿಟಿ ಮಾದರಿಯ ಸೆಟ್ ಇದು. ಆ ಸೆಟ್‌ನಲ್ಲಿ ವೆಸ್ಟರ್ನ್ ಸಿನಿಮಾ ಹಾಗೂ ಸೀರಿಯಲ್ ಚಿತ್ರೀಕರಣ ನಡೆಯುತ್ತದೆ. ಮತ್ತೊಂದು ಫೋಟೊ ಲಾಟ್ವಿಯಾ ದೇಶದ ಜುರ್ಮಲಾ ನಗರದಲ್ಲಿರುವ ಟವರ್ ಫೋಟೊ. ಆದರೆ ಈ ಎರಡೂ ಫೋಟೊಗಳನ್ನು 'ಟಾಕ್ಸಿಕ್' ಸಿನಿಮಾ ಸೆಟ್ ಫೋಟೊ ಎಂದು ವೈರಲ್ ಮಾಡಲಾಗುತ್ತಿದೆ.
ಕೆಲವರು ಈ ಫೋಟೊಗಳ ಮೂಲ ಹುಡುಕಿದ್ದಾರೆ. ಸುಖಾ ಸುಮ್ಮನೆ ಯಾರನ್ನು ಯಾಮಾರಿಸಬೇಡಿ ಎಂದು ಫೋಟೊಗಳ ಅಸಲಿ ಸಂಗತಿ ಬಿಚ್ಚಿಟ್ಟಿದ್ದಾರೆ. ಇನ್ನು ಸೆಟ್ ಫೋಟೊಗಳ ಸಂಗತಿ ಪಟ್ಟಕ್ಕಿಟ್ಟರೆ 'ಟಾಕ್ಸಿಕ್' ಸಿನಿಮಾ ದೊಡ್ಡಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ ಜೊತೆಗೆ ಯಶ್ ಕೂಡ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಹಾಲಿವುಡ್ ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡುತ್ತಾರೆ ಎನ್ನಲಾಗ್ತಿದೆ.

ದೊಡ್ಡ ಸಿನಿಮಾಗಳ ಚಿತ್ರೀಕರಣಕ್ಕೆ ಕನ್ನಡ ಫಿಲ್ಮ್ ಮೇಕರ್ಸ್ ಬೇರೆ ರಾಜ್ಯಗಳಿಗೆ ಹೋಗುತ್ತಾರೆ. ಆದರೆ ಯಾಕೆ ನಮ್ಮ ರಾಜ್ಯದಲ್ಲೇ ಸೆಟ್ ನಿರ್ಮಾಣ ಮಾಡಿ ಸಿನಿಮಾ ಚಿತ್ರೀಕರಣ ಮಾಡಬಾರದು. ನಮ್ಮ ಜನರ ತಾಕತ್ತು ಏನು ಎನ್ನುವುದನ್ನು ಎನ್ನರಿಗೂ ತೋರಿಸಬೇಕು ಎನ್ನುವ ಕಾರಣಕ್ಕೆ ಕರ್ನಾಟಕದಲ್ಲೇ 'ಟಾಕ್ಸಿಕ್' ಚಿತ್ರೀಕರಣ ಮಾಡಲು ಚಿತ್ರತಂಡ ಮನಸ್ಸು ಮಾಡಿದೆ. ಯಶ್ ಇಂತಾದೊಂದು ಪ್ರಯತ್ನದ ಹಿಂದೆ ನಟ ಯಶ್ ಚಿತ್ರತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications











