»   » ಪ್ಯಾರ್‌ ಇಷ್ಕ್‌ ಔರ್‌ ಮೊಹಬ್ಬತ್‌ ಹಿಂದಿ ಚಿತ್ರ ಹಿಟ್‌ ಆಗೋದು ಅನುಮಾನವಾದರೂ, ಇಷಾ ಕೊಪ್ಪೀಕರ್‌ ಪ್ರೇಮ ಪ್ರಕರಣವೇ ಇದೀಗ ಸೂಪರ್‌ ಹಿಟ್‌ !

ಪ್ಯಾರ್‌ ಇಷ್ಕ್‌ ಔರ್‌ ಮೊಹಬ್ಬತ್‌ ಹಿಂದಿ ಚಿತ್ರ ಹಿಟ್‌ ಆಗೋದು ಅನುಮಾನವಾದರೂ, ಇಷಾ ಕೊಪ್ಪೀಕರ್‌ ಪ್ರೇಮ ಪ್ರಕರಣವೇ ಇದೀಗ ಸೂಪರ್‌ ಹಿಟ್‌ !

Posted By:
Subscribe to Filmibeat Kannada

‘ಹೌದು, ನಾನು ಅಮ್ಮನಿಗೆ ಹೇಳಿದ್ದೇನೆ. ಅವರನ್ನೇ ಮದುವೆ ಆಗೋದೂ ಅಂತ !’

ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮುಖ- ಮೈದೋರಿದ, ಅಭಿನಯ ಅಷ್ಟಕ್ಕಷ್ಟೇ ಆದರೂ ಮಾಡೆಲ್‌ಗೆ ಬೇಕಾದ ಎಲ್ಲಾ ಗುಣವಿರುವ ಕೊಂಕಣಿ ಹುಡುಗಿ ಇಷಾ ಕೊಪ್ಪೀಕರ್‌ ತನ್ನ ಅಫೇರಿನ ಸುದ್ದಿಗೆ ನೀಡಿರುವ ಪ್ರತಿಕ್ರಿಯೆ ಇದು.

ಈಗಿನ್ನೂ ಈಕೆ ಅಭಿನಯಿಸಿರುವ ಮೊದಲ ಹಿಂದಿ ಚಿತ್ರ ‘ಪ್ಯಾರ್‌ ಇಷ್ಕ್‌ ಔರ್‌ ಮೊಹಬ್ಬತ್‌’ ತೆರೆ ಕಂಡಿದೆ. ಅದರ ಬೆನ್ನಲ್ಲೇ ಈಕೆಯ ಅಫೇರ್‌ ಸುದ್ದಿ ಹಬ್ಬಿತ್ತು. ಇಷಾ ಚಿತ್ರರಂಗಕ್ಕೆ ಕಾಲಿರಿಸಿದ ಮೊದಲ ದಿನಗಳವು. ತೆಲುಗು ನಿರ್ದೇಶಕ ಕೃಷ್ಣ ವಂಶಿ ಜೊತೆ ಈಕೆಯ ಹೆಸರು ಕೇಳಿಬಂತು. ಅದಕ್ಕೆ ಇಷಾ ನೋ, ಜಸ್ಟ್‌ ರೂಮರ್ಸ್‌ ಅಂದಿದ್ದರು. ಆದರೀಗ ತಮ್ಮ ಅಫೇರಿನ ಸುದ್ದಿ ಯೆಸ್‌ ಅನ್ನುತ್ತಿದ್ದಾರೆ.


ದಕ್ಷಿಣ ಭಾರತದ ಸಿನಿಮಾದ ಎಲ್ಲೆಡೆಗೂ ಅಲ್ಪ ಕಾಲ ಸಂದ ಇಷಾ ‘ಸೂರ್ಯವಂಶ’, ‘ಓ ನನ್ನ ನಲ್ಲೆ ’, ‘ಹ್ಞೂಂ ಅಂತೀಯಾ ಊಹ್ಞೂಂ ಅಂತೀಯಾ’ ಕನ್ನಡ ಚಿತ್ರಗಳಲ್ಲೂ ನಾಯಕಿಯಾಗಿ ಕಾಣಿಸಿಕೊಂಡರು. ಹೋದೆಡೆಯೆಲ್ಲಾ ಸೆಕ್ಸಿ ಎಂಬ ಲೇಬಲ್‌ ಪಡೆಯುವ ಇಷಾಗೆ ನಟನೆ ಅಷ್ಟೇನೂ ಒಲಿದಿಲ್ಲವಂತೆ. ಈ ಟೀಕೆಯನ್ನು ಇಷಾ ಅಲ್ಲಗಳೆಯುವುದೂ ಇಲ್ಲ . ನನ್ನ ಗುರಿಯೇನಿದ್ದರೂ ಉತ್ತಮ ಕಲಾವಿದೆಯಾಗುವುದು ಎಂದು ತಾವಿನ್ನೂ ವಿದ್ಯಾರ್ಥಿ ದೆಸೆಯಲ್ಲಿರುವುದಾಗಿ ಇಷಾ ಒಪ್ಪಿಕೊಳ್ಳುತ್ತಾರೆ.

ಇಷಾ ಬಡ್ಡಪೆಟ್ಟಿನ ಹೆಣ್ಣುಮಗಳಲ್ಲ . ಸ್ಯಾಂಡಲ್‌ವುಡ್‌ ಪ್ರವೇಶದ ಹೊತ್ತಿನಲ್ಲೇ ತನ್ನ ಗಟ್ಟಿ ಮಾತುಗಳ ಮೂಲಕ ಗಮನ ಸೆಳೆದ ದಿಟ್ಟೆ . ‘ಮಾಡೆಲ್‌ಗಳು ಅಂದರೆ ಏನೆಂದು ಕೊಂಡಿದ್ದೀರಿ. ಒಂದೆರಡು ಹಾಡುಳಲ್ಲಿ ಕುಣಿಸುವುದಕ್ಕೆ , ಮಳೆಯಲ್ಲಿ ತೋಯಿಸುವುದಕ್ಕೆ ಹಾಗೂ ಮಾದಕವಾಗಿ ನಗುವುದಕ್ಕಷ್ಟೆ ಲಾಯಕ್ಕು ಎಂದುಕೊಂಡಿದೆ ಉದ್ಯಮ. ಈವರೆಗಿನ ಮಾಡೆಲ್‌ಗಳೂ ಅಂತೆಯೇ ನಡೆದುಕೊಂಡಿದ್ದಾರೆ. ನಾನು ಎಲ್ಲರಂತಲ್ಲ ನೋಡಿ. ಗೊಂಬೆಯಂತೆ ಬಂದುಹೋಗಲಿಕ್ಕೆ ಇಲ್ಲಿ ಬಂದವಳಲ್ಲ . ರೂಪದರ್ಶಿ ಒಳ್ಳೆಯ ಕಲಾವಿದೆಯೂ ಹೌದೆನ್ನುವಂತೆ ನಟಿಸುತ್ತೇನೆ. ಇಲ್ಲಿಯೇ ನಿಲ್ಲುತ್ತೇನೆ’ ಎಂದಿದ್ದರು ಇಷಾ.

ಸೂರ್ಯವಂಶ ಸಿನಿಮಾದಲ್ಲಿ ಮಾತ್ರ ಇಷಾ ತಮ್ಮ ಮಾತುಗಳಿಗೆ ಪುರಾವೆಯಾದಗಿಸಲಿಲ್ಲ . ಆದರೆ, ಓ ನನ್ನ ನಲ್ಲೆಯ ಹೊತ್ತಿಗೆ ಇಷಾ ಸುಧಾರಿಸಿದ್ದರು. ಅದ್ಭುತವಾಗಿ ಅಲ್ಲದಿದ್ದರೂ ನೋಡುವಷ್ಟರ ಮಟ್ಟಿಗೆ ಈಕೆ ಅಭಿನಯಿಸಿದ್ದರು. ಈ ಹಿನ್ನೆಲೆಯ ಇಷಾ ಬಾಲಿವುಡ್‌ಗೂ ಸಂದರು. ಪ್ರೇಮದಲ್ಲೂ ಸೈ ಅನ್ನಿಸಿಕೊಂಡರು. ಅಂದಹಾಗೆ, ಮೊದಲ ಯತ್ನದಲ್ಲೇ ಇಷಾ ಬಲೆಬೀಸಿದ್ದು ‘ರಾಜಾ’ದಂಥ ಹಿಟ್‌ ಚಿತ್ರ ಕೊಟ್ಟ ನಿರ್ದೇಶಕ ಇಂದ್ರಕುಮಾರ್‌ಗೆ.

ಇಂದ್ರಕುಮಾರ್‌ ಇಷಾ ಬಲೆಗೆ ಬಿದ್ದಿದ್ದಾರೋ ಇಲ್ಲವೋ. ಆದರೆ ಇಷಾ ಕನಸಲ್ಲೂ ಇಂದ್ರ, ಮನಸಲ್ಲೂ ಇಂದ್ರ ಅಂತ ಅಮ್ಮನ ಹತ್ತಿರ ಹೇಳಿಕೊಂಡು, ಮದುವೆ ಮಾಡಿಸುವಂತೆ ಗೋಗರೆಯುತ್ತಿರುವುದಂತೂ ನಿಜ.

Post your opinion

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada