ಪವನ್ ಒಡೆಯರ್ ಮುಂದಿನ ಸಿನಿಮಾದಲ್ಲಿ ಇಶಾನ್ ನಾಯಕ?
ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಈಗ ಮುಂದಿನ ಸಿನಿಮಾದ ತಯಾರಿಯಲ್ಲಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟಸಾರ್ವಭೌಮ' ಚಿತ್ರದ ನಂತರ ಪವನ್ ಯುವ ನಟನಿಗೆ ನಿರ್ದೇಶನ ಮಾಡುವ ಪ್ಲಾನ್ ಮಾಡಿದ್ದಾರಂತೆ.
ಹೌದು, 'ರೋಗ್' ಚಿತ್ರದ ಖ್ಯಾತಿಯ ನಟ ಇಶಾನ್ ಗೆ ಪವನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇಶಾನ್ ಅಭಿನಯದ ಮೊದಲ ಸಿನಿಮಾ 'ರೋಗ್' ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿದ್ದರು.
ಈಗ ಎರಡನೇ ಚಿತ್ರವನ್ನು ಪವನ್ ಜೊತೆ ಮಾಡುವ ತಯಾರಿಯಲ್ಲಿದ್ದಾರೆ. ಮೊದಲ ಸಿನಿಮಾ 'ರೋಗ್' ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲೂ ತೆರೆಕಂಡಿತ್ತು. ಅದ್ಧೂರಿಯಾಗಿ ತಯಾರಾಗಿದ್ದ ರೋಗ್ ಚಿತ್ರದಲ್ಲಿ ಇಶಾನ್ ಚಿತ್ರಾಭಿಮಾನಿಗಳ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

'ರೋಗ್' ಮೂಲಕ ರೋಮ್ಯಾಂಟಿಕ್ ಹೀರೋ ಆಗಿ ಮಿಂಚಿದ್ದ ಇಶಾನ್ ಪವನ್ ಒಡೆಯರ್ ಸಿನಿಮಾದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನವ ಕುತೂಹಲ ಕೂಡ ಇದೆ. ಮೊದಲ ಸಿನಿಮಾದಲ್ಲೆ ಎರಡು ಭಾಷೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದರು.
'ರೋಗ್' ಚಿತ್ರದ ನಂತರ ಸಾಕಷ್ಟು ಕತೆಗಳನ್ನು ಕೇಳಿರುವ ಇಶಾನ್ ಗೆ ಯಾವುದು ಅಷ್ಟುಇಷ್ಟವಾಗಿಲ್ಲವಂತೆ. ಸದ್ಯ ಪವನ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರಂತೆ ಇಶಾನ್. ಸದ್ಯ ಸ್ಕ್ರಿಪ್ಟ್ ಕೆಲಸದಲ್ಲಿ ಪವನ್ ಬ್ಯುಸಿಯಾಗಿದ್ದಾರೆ. ಈ ಬಗ್ಗೆ ಇನ್ನು ಅಧಿಕೃತವಾಗಿ ಪವನ್ ಆಗಲಿ ಅಥವಾ ಇಶಾನ್ ಎಲ್ಲೂ ಬಹಿರಂಗಪಡಿಸಿಲ್ಲ. ಆದ್ರೆ ಮೂಲಗಳ ಪ್ರಕಾರ ಇಬ್ಬರ ಸಿನಿಮಾ ಸದ್ಯದಲ್ಲೆ ಸೆಟ್ಟೇರಲಿದೆ.


Click it and Unblock the Notifications











